Advertisement

ಹೊಸಂಗಡಿ-ಮುತ್ತಿನಕಟ್ಟೆ ರಸ್ತೆ ಅಭಿವೃದ್ಧಿ ಎಂದು?

10:24 AM May 13, 2022 | Team Udayavani |

ಹೊಸಂಗಡಿ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಹೊಸಂಗಡಿ ಪೇಟೆ ಬಳಿಯಿಂದ ಮುತ್ತಿನಕಟ್ಟೆ ಕಡೆಗೆ ಸಂಚರಿಸುವ 2 ಕಿ.ಮೀ. ದೂರದ ರಸ್ತೆಯು ದುರ್ಗಮವಾಗಿದ್ದು, ಇನ್ನೂ ಅಭಿವೃದ್ಧಿಗೆ ಮಾತ್ರ ಕಾಲವೇ ಕೂಡಿ ಬಂದಿಲ್ಲ.

Advertisement

ಹೊಸಂಗಡಿ ಪೇಟೆ ಬಳಿಯಿಂದ ಮುತ್ತಿನಕಟ್ಟೆ ಕಡೆಗೆ 2 ಕಿ.ಮೀ. ದೂರವಿದ್ದು, ಈ ಪೈಕಿ ಆರಂಭದಲ್ಲಿ ಸುಮಾರು 500 ಮೀ.ವರೆಗೆ ಡಾಮರು ಮಾಡಲಾಗಿತ್ತು. ಈಗ ಆ ಡಾಮರೆಲ್ಲ ಕಿತ್ತು ಬರೀ ಜಲ್ಲಿ ಕಲ್ಲಿನ ರಸ್ತೆಯಾಗಿ ಮಾತ್ರ ಉಳಿದಿದೆ. ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಸಂಕಷ್ಟ ಎದುರಾಗಿದೆ.

10 ವರ್ಷದ ಹಿಂದೆ ಡಾಮರು

ಮುತ್ತಿನಕಟ್ಟೆ ಕಡೆಗೆ ಸಂಚರಿಸುವ ಮಾರ್ಗಕ್ಕೆ ಅರ್ಧ ಕಿ.ಮೀ.ವರೆಗೆ ಸುಮಾರು 10 ವರ್ಷಗಳ ಹಿಂದೆ ಒಮ್ಮೆ ಜಿ.ಪಂ. ಅನುದಾನದಿಂದ ಡಾಮರು ನಡೆಸಲಾಗಿತ್ತು. ಅದಾದ ಬಳಿಕ ಈವರೆಗೆ ಅಲ್ಲಿಂದ ಮುಂದಕ್ಕೆ ರಸ್ತೆ ಅಭಿವೃದ್ಧಿಪಡಿಸಿಲ್ಲ. ಆಗ ಹಾಕಿದ ಡಾಮರೆಲ್ಲ ಕಿತ್ತು ಹೋಗಿದ್ದರೂ, ಮರು ಡಾಮರು ಆಗಿಲ್ಲ. ಹೊಂಡಮಯ, ಜಲ್ಲಿಕಲ್ಲಿನ ರಸ್ತೆಯಲ್ಲಿ ಸಂಚರಿಸುವುದೇ ಅಪಾಯಕಾರಿಯಾಗಿದೆ.

ಬೀದಿ ದೀಪವೂ ಇಲ್ಲ

Advertisement

ಈ ಮಾರ್ಗಕ್ಕೆ ವರ್ಷದ ಹಿಂದೆ ಪಂಚಾಯತ್‌ ಅನುದಾನವನ್ನು ಬೀದಿದೀಪದ ಅಳವಡಿಕೆಗೆ ಮೀಸಲಿಟ್ಟರೂ, ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಬೀದಿದೀಪವಿಲ್ಲದೆ ಕತ್ತಲಿನಲ್ಲಿ ಈ ಮಾರ್ಗದಲ್ಲಿ ನಡೆದುಕೊಂಡು ಹೋಗುವುದು ಸಹ ಕಷ್ಟ. ಸುಮಾರು 80 ಸಾವಿರ ರೂ. ಅನುದಾನವಿದ್ದು, ಇನ್ನು ಅನುದಾನ ಬರಲಿದ್ದು, ಒಟ್ಟಿಗೆ ಕಾಮಗಾರಿ ನಡೆಸುವ ಯೋಜನೆ ಪಂಚಾಯತ್‌ನದ್ದು. ಆದರೆ ಈಗ ಇದ್ದಷ್ಟು ಅನುದಾನದಲ್ಲಿ ಒಂದಷ್ಟಾದರೂ ದೀಪ ಅಳವಡಿಸಿದರೆ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಅನುಕೂಲವಾಗಬಹುದು ಎನ್ನುವುದು ಜನರ ಒತ್ತಾಯವಾಗಿದೆ.

ಈ ಮಾರ್ಗದಲ್ಲಿ ಸುಮಾರು 50 ಕ್ಕೂ ಮಿಕ್ಕಿ ಮನೆಗಳಿದ್ದು, ಇವರೆಲ್ಲ ಎಲ್ಲದಕ್ಕೂ ಹೊಸಂಗಡಿ ಪೇಟೆಯನ್ನೇ ಆಶ್ರಯಿಸಿದ್ದಾರೆ. ಆದರೆ ಹೊಸಂಗಡಿ ಪೇಟೆಗೆ ಬರುವುದೇ ಕಷ್ಟ. ಏನಾದರೂ ಪಡಿತರ, ದಿನಸಿ ತೆಗೆದುಕೊಂಡು ಹೋಗಲು ಈ ರಸ್ತೆಯ ಅವ್ಯವಸ್ಥೆ ನೋಡಿ ವಾಹನ ಬಾಡಿಗೆಗೆ ಕರೆದರೂ ಹೆಚ್ಚಿನವರು ಹಿಂದೇಟು ಹಾಕುತ್ತಾರೆ. ಇದರಿಂದ ನಿತ್ಯ ಇಲ್ಲಿನ ಜನ ಸಂಕಷ್ಟ ಪಡುವಂತಾಗಿದೆ.

ಎಲ್ಲರಿಗೂ ಸಂಕಷ್ಟ

ಹೊಸಂಗಡಿ – ಮುತ್ತಿನಕಟ್ಟೆ ರಸ್ತೆ ಹಲವು ವರ್ಷಗಳಿಂದ ಹಾಳಾಗಿದೆ. ಈ ಮಾರ್ಗದಲ್ಲಿ ಸಂಚರಿಸುವುದೇ ಸವಾಲಾಗಿದೆ. ಎಲ್ಲರಿಗೂ ಈ ಮಾರ್ಗದ ಸಂಚಾರ ಕಷ್ಟ. ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಇಲ್ಲಿನ ಜನಪಡುವ ಕಷ್ಟ ಅವರಿಗೆ ಗೊತ್ತು. ಆದಷ್ಟು ಬೇಗ ಈ ಮಾರ್ಗವನ್ನು ಅಭಿವೃದ್ಧಿಪಡಿಸಲಿ. -ಆನಂದ ಕಾರೂರು, ಸ್ಥಳೀಯರು

ಮನವಿ ಸಲ್ಲಿಕೆ

ಪಂಚಾಯತ್‌ ಅನುದಾನದಲ್ಲಿ ಈ ರಸ್ತೆಯ ಅಭಿವೃದ್ಧಿ ಕಷ್ಟ. ಹಿಂದೆ ಜಿ.ಪಂ. ಅನುದಾನದಿಂದ ರಸ್ತೆ ಡಾಮರು ಕಾಮಗಾರಿ ಮಾಡಲಾಗಿತ್ತು. ಈ ಮುತ್ತಿನಕಟ್ಟೆ ರಸ್ತೆ ಅಭಿವೃದ್ಧಿಪಡಿಸುವ ಸಲುವಾಗಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ. ಈ ಬಾರಿಯಾದರೂ ಆಗಬಹುದು ಅನ್ನುವ ನಿರೀಕ್ಷೆಯಿದೆ. -ಸಂತೋಷ್‌ ಶೆಟ್ಟಿ, ಸ್ಥಳೀಯ ಗ್ರಾ.ಪಂ. ಸದಸ್ಯರು

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next