Advertisement

ಪಾದಚಾರಿ ಮಾರ್ಗ ದುರಸ್ತಿ ಎಂದು?

03:09 PM Aug 13, 2019 | Team Udayavani |

ಹಿರಿಯೂರು: ಚಿತ್ರದುರ್ಗ ಹಾಗೂ ಬಳ್ಳಾರಿ ಕಡೆಯಿಂದ ಹಿರಿಯೂರು ನಗರ ಪ್ರವೇಶ ಮಾಡುವಂತಹ ಸುಮಾರು 200 ಮೀಟರ್‌ ದೂರ ಇರುವ ವೇದಾವತಿ ಸೇತುವೆ ನಿರ್ಮಾಣವಾಗಿ 20 ವರ್ಷಗಳು ಕಳೆದಿವೆ. ಸೇತುವೆಯನ್ನು ನೋಡಲು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಇದೀಗ ಸೇತುವೆ ಮೇಲಿನ ಎರಡು ಬದಿಗಳಲ್ಲಿ ಸಿಮೆಂಟ್ ಸ್ಲ್ಯಾಬ್‌ ಕಿತ್ತು ಹೋಗಿ ಸಂಚಾರಕ್ಕೆ ತೊಂದರೆಯಾಗುತ್ತಿದೆ.

Advertisement

ಈ ಸೇತುವೆ ಮೇಲೆ ಪ್ರತಿ ದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಹಲವಾರು ಜನರು ತಾಲೂಕು ಕಚೇರಿ, ತಾಲೂಕು ಪಂಚಾಯತ್‌, ಖಜಾನೆ, ಬ್ಯಾಂಕ್‌, ಪ್ರಥಮ ದರ್ಜೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಾರೆ. ಆದರೆ ಸೇತುವೆಯ ಎರಡೂ ಬದಿಗಳಲ್ಲಿ ಸ್ಥಿತಿ ಕಂಡು ಸೇತುವೆ ಮೇಲೆ ನಡೆದಾಡಲು ಭಯಪಡುತ್ತಿದ್ದಾರೆ. ಏಕೆಂದರೆ ಸೇತುವೆಯುದ್ದಕ್ಕೂ ಅಲ್ಲಲ್ಲಿ ಕಲ್ಲುಗಳು ಕಿತ್ತು ಹೋಗಿ ಹಾಳಾಗಿವೆ.

ವಾಹನಗಳು ಅತಿ ವೇಗವಾಗಿ ಚಲಿಸುತ್ತವೆ. ಆದ್ದರಿಂದ ಸಾರ್ವಜನಿಕರು ಭೀತಿಯಲ್ಲೇ ಸೇತುವೆ ಮೇಲೆ ನಡೆದಾಡಬೇಕಾಗಿದೆ. ಭಯದಲ್ಲೇ ಸೇತುವೆಯನ್ನು ದಾಟಬೇಕಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು, ನಗರಸಭೆಯವರು ಹಾಗೂ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಹಾಳಾಗಿರುವ ಕಲ್ಲಿನ ಸ್ಲ್ಯಾಬ್‌ಗಳನ್ನು ಹೊಸದಾಗಿ ಹಾಕಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕಿದೆ.

ಸೇತುವೆ ಮೇಲೆ ವಿದ್ಯುತ್‌ ದೀಪ ಇಲ್ಲದ್ದರಿಂದ ರಾತ್ರಿ ಕತ್ತಲೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ. ವಿದ್ಯುತ್‌ ಕಂಬಗಳು ಹಾಳಾಗಿ ವರ್ಷಗಳೇ ಕಳೆದಿವೆ. ಹಾಗಾಗಿ ನೋಡಲು ಅಂದವಾಗಿರುವ ಸೇತುವೆಗೆ ಮೊದಲು ವಿದ್ಯುತ್‌ ದೀಪಗಳನ್ನು ಅಳವಡಿಸಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿ ಕೂಡಲೆ ಸೇತುವೆಗೆ ದೀಪಗಳನ್ನು ಹಾಕಿಸಬೇಕು ಮತ್ತು ರಸ್ತೆ ದುರಸ್ತಿ ಮಾಡಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

Advertisement

Udayavani is now on Telegram. Click here to join our channel and stay updated with the latest news.

Next