ಚಿತ್ರದುರ್ಗ: ಕೋಟೆ ನಗರಿ, ಜಿಲ್ಲಾ ಕೇಂದ್ರ ಚಿತ್ರದುರ್ಗ ನಗರದಲ್ಲಿ ರಾಜಕಾಲುವೆಗಳ ಒತ್ತುವರಿಯೇ ದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಬಹುತೇಕ ರಾಜಕಾಲುವೆಗಳು ಒತ್ತುವರಿ ಆಗಿರುವುದರಿಂದ ಮಳೆಗಾಲದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಮಸ್ಯೆ ತಂದೊಡ್ಡುತ್ತಿದೆ.
ರಾಜಕಾಲುವೆಗಳ ಎಡ ಮತ್ತು ಬಲ ಭಾಗದಲ್ಲಿ ಕೊಳಚೆಪ್ರದೇಶಗಳು ಸೃಷ್ಟಿಯಾಗಿವೆ. ರಾಜಕಾಲುವೆ 20 ಅಡಿಗಿಂತ ಹೆಚ್ಚು ಅಗಲ ಇರಬೇಕಾಗಿತ್ತು. ಆದರೆ ಒಂದೊಂದು ಜಾಗದಲ್ಲಿ 3-4 ಅಡಿಗಳಾಗಿವೆ. ಜಿಲ್ಲೆಯ 14,164 ಕುಟುಂಬಗಳು ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, 15,918 ಪರಿಶಿಷ್ಟ ಜಾತಿ, 9242 ಪಪಂ ಹಾಗೂ 45,659 ಇತರೆ ಹಿಂದುಳಿದ ಜಾತಿಯವರು ವಾಸಿಸುತ್ತಿದ್ದಾರೆ. 70,819 ಜನರು ಯಾವುದೇ ಮೂಲ ಸೌಕರ್ಯಗಳಿಲ್ಲದೇ ಬದುಕುತ್ತಿದ್ದಾರೆ. ಜೋರು ಮಳೆ ಬಂದಾಗ ಇವರ ಪರಿಸ್ಥಿತಿ ಆ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಸ್ಟೇಡಿಯಂ ರಸ್ತೆಯ ಬುದ್ಧ ನಗರ, ಕೆಳಗೋಟೆ, ಚನ್ನಕ್ಕಿ ಹೊಂಡ, ಜಟ್ಪಟ್ ನಗರ, ಮಾರುತಿ ನಗರ, ಮಹಾತ್ಮ ಗಾಂಧಿ ನಗರ, ರಾಜೇಂದ್ರ ನಗರ, ಸ್ವಾಮಿ ವಿವೇಕಾನಂದ ನಗರ, ವೆಂಕಟೇಶ್ವರ ಬಡಾವಣೆ ಸೇರಿ ಮತ್ತಿತರ ಕೊಳಚೆಪ್ರದೇಶಗಳ ನಿವಾಸಿಗಳು ಮಳೆಗಾಲದಲ್ಲಿ ಪಡುವ ಪರಿಪಾಟಲು ಯಾರಿಗೂ ಬೇಡ. ಇದು ರಾಜಕಾಲುವೆಗಳ ಒತ್ತುವರಿ ಸಮಸ್ಯೆಯಾದರೆ, ರಸ್ತೆ ಒತ್ತುವರಿ, ಚರಂಡಿಗಳ ಒತ್ತುವರಿಯಿಂದಾಗಿ ಅಶುದ್ಧ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಮಳೆಗಾಲದಲ್ಲಂತೂ ಮಳೆ ನೀರು ಸಿಕ್ಕ ಸಿಕ್ಕ ಕಡೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ.
ರಸ್ತೆ ಮತ್ತು ಚರಂಡಿಗಳನ್ನು ಒತ್ತುವರಿ ಮಾಡಿರುವುದರಿಂದ ಚರಂಡಿಯಲ್ಲಿ ಕಸ ತೆಗೆದು ಸ್ವಚ್ಛಗೊಳಿಸುವುದು ಅಸಾಧ್ಯವಾಗಿದೆ. ಇದರ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಜತೆಗೆ ಪಕ್ಕದಲ್ಲಿನ ಮಣ್ಣು ಸಹ ರಸ್ತೆಗೆ ಜರುಗಿ ಬಂದು ಜನರು ತೊಂದರೆ ಅನುಭವಿಸುವಂತಾಗಿದೆ.
Advertisement
ರಾಜಕಾಲುವೆಗಳ ಒತ್ತುವರಿಯಿಂದಾಗಿ ಹಲವು ಸಮಸ್ಯೆಗಳು ತಲೆ ಎತ್ತಲಿವೆ. ಗುಡ್ಡ, ಬೆಟ್ಟ, ಚಂದ್ರವಳ್ಳಿ ಕೆರೆ ಭರ್ತಿಯಾದ ನಂತರ ಬರುವ ಮಳೆ ನೀರು ಸರಾಗವಾಗಿ ಹೋಗಲು ಆಗುತ್ತಿಲ್ಲ. ರಾಜಕಾಲುವೆಯನ್ನು ಕಿರಿದು ಮಾಡಿರುವುದರಿಂದ ತಗ್ಗು ಪ್ರದೇಶಗಳಿಗೆ, ರಸ್ತೆಗೆ ನೀರು ನುಗ್ಗಲಿದೆ. ಇದರಿಂದ ಕೆಸರು, ಕಡ್ಡಿ, ಕಸ, ಪ್ಲಾಸ್ಟಿಕ್, ಹಳೆ ಚಪ್ಪಲಿ ಮತ್ತಿತರ ಕಲ್ಮಶಗಳು ತಗ್ಗು ಪ್ರದೇಶದ ಮನೆಗಳಿಗೆ ಹರಿದು ಬರುತ್ತಿವೆ.
Related Articles
Advertisement
ಇದ್ದೂ ಇಲ್ಲದಂತಿರುವ ಬಾಕ್ಸ್ ಚರಂಡಿ: ತಗ್ಗು, ಗುಂಡಿಗಳಿಂದ ತುಂಬಿರುವ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಲು ಪ್ರಯಾಸಪಡಬೇಕಾಗಿದೆ. ನಗರದ ಬಹುತೇಕ ತಗ್ಗು ಪ್ರದೇಶಗಳ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಓಡಾಟಕ್ಕೆ ಸಮಸ್ಯೆ ಉಂಟಾಗಿದೆ. ನಗರದ ಹೊರ ವಲಯದ ವಿದ್ಯಾನಗರ, ತುರುವನೂರು ರಸ್ತೆ ಸಮೀಪದ ಕೆಇಬಿ ಎಂಯುಎಸ್‌ಎಸ್ ಸ್ಟೇಷನ್ ಸಮೀಪದ ಬಡಾವಣೆಗಳಿಗೆ ಸಣ್ಣ ಪ್ರಮಾಣದ ಮಳೆ ಬಿದ್ದರೂ ಮಳೆ ನೀರು ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ತುರುವನೂರು ರಸ್ತೆ ಸಮೀಪದ ರಾಷ್ಟ್ರೀಯ ಹೆದ್ದಾರಿ-4ರ ಸರ್ವೀಸ್ ರಸ್ತೆ ಪಕ್ಕದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗಿದ್ದರೂ ಮಳೆ ನೀರು ಚರಂಡಿ ಸೇರುತ್ತಿಲ್ಲ. ಏಕೆಂದರೆ ಬಾಕ್ಸ್ ಚರಂಡಿ ಸಂಪೂರ್ಣ ಕಸ, ಕಡ್ಡಿ, ಮರಳು, ಘನ ತ್ಯಾಜ್ಯದಿಂದ ಮುಚ್ಚಿ ಹೋಗಿದೆ.
ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬರುವ ಮಳೆ ನೀರು ಹೊರ ಹೋಗಲು ಎಲ್ಲೂ ಸ್ಥಳಾವಕಾಶ ಇಲ್ಲದೆ ಇರುವುದರಿಂದ ತಗ್ಗುಪ್ರದೇಶಕ್ಕೆ ನುಗ್ಗಿ ಸಾಕಷ್ಟು ನಷ್ಟ ಉಂಟು ಮಾಡುತ್ತಿದೆ. ಇಲ್ಲಿನ ಬಹುತೇಕ ಚರಂಡಿಗಳು ಮುಚ್ಚಿ ಹೋಗಿ ರಸ್ತೆಯ ಮೇಲೆ ಮಳೆ ನೀರು ತುಂಬಿರುತ್ತದೆ. ನಗರದ ಮುಖ್ಯ ರಸ್ತೆಯಲ್ಲೂ (ಬಿ.ಡಿ. ರಸ್ತೆ) ಮಳೆ ನೀರು ಸರಾಗವಾಗಿ ಹರಿಯದೆ ರಸ್ತೆ ತುಂಬೆಲ್ಲ ನೀರು ನಿಲ್ಲುತ್ತದೆ. ಚಳ್ಳಕೆರೆ ವೃತ್ತದಲ್ಲಿ ಹಾದು ಹೋಗುವ ರಾಜಕಾಲುವೆಯನ್ನು ಬಲಿಷ್ಠರು ಒತ್ತುವರಿ ಮಾಡಿದ್ದು ಐಯುಡಿಯುಪಿ ಲೇಔಟ್, ಕೆಎಚ್ಬಿ ಲೇಔಟ್ ಕಡೆಗಳಿಂದ ಬರುವ ಮಳೆ ನೀರು ಇಲ್ಲಿ ನಿಲ್ಲುತ್ತದೆ. ಚಂದ್ರವಳ್ಳಿಯಿಂದ ಬರುವ ರಾಜಕಾಲುವೆ, ಚಳ್ಳಕೆರೆ ಟೋಲ್ಗೇಟ್ ಸಮೀಪ ರಾಜಕಾಲುವೆ, ಕೆಎಸ್‌ಆರ್‌ಟಿಸಿ ಡಿಪೋ ಸಮೀಪದ ರಾಜಕಾಲುವೆಗಳನ್ನೂ ಒತ್ತುವರಿ ಮಾಡಲಾಗಿದೆ. ಆ ರಾಜಕಾಲುವೆಗಳ ತೆರವಿಗೆ ಜಿಲ್ಲಾಡಳಿತ ಮುಂದಾಗಬೇಕಿದೆ.
ಕೊಟ್ಟಿಗೆ ಬಿದ್ದು ಎಮ್ಮೆಗೆ ಗಾಯ:
ಜಿಲ್ಲೆಯ ವಿವಿಧೆಡೆ ಮಂಗಳವಾರ ರಾತ್ರಿ ಗುಡುಗು-ಬಿರುಗಾಳಿ ಸಹಿತ ಮಳೆಯಾಗಿದೆ. ಚಳ್ಳಕೆರೆ ತಾಲೂಕಿನ ಚಿಕ್ಕಉಳ್ಳಾರ್ತಿ ಗ್ರಾಮದಲ್ಲಿ ಎಮ್ಮೆ ಮೇಲೆ ಕೊಟ್ಟಿಗೆ ಬಿದ್ದಿದ್ದರಿಂದ ಎಮ್ಮೆ ಗಾಯಗೊಂಡಿದೆ. ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಲಕ್ಷ್ಮಕ್ಕ ತಿಪ್ಪೇಸ್ವಾಮಿ, ಬೊಮ್ಮಕ್ಕ ಓಬಯ್ಯ, ಮಂಜಣ್ಣ, ವೀರಣ್ಣ ಎಂಉವವರಿಗೆ ಸೇರಿದ ನಾಲ್ಕು ಮನೆಗಳಿಗೆ ಭಾಗಶಃ ಹಾನಿಯಾಗಿ ಸುಮಾರು 40 ಸಾವಿರ ರೂ. ನಷ್ಟವಾಗಿದೆ. ಚಿಕ್ಕಉಳ್ಳಾರ್ತಿ ಗ್ರಾಮದ ಬೋರಮ್ಮ ಎನ್ನುವವರಿಗೆ ಸೇರಿದ ಎಮ್ಮೆ ಮೇಲೆ ಕೊಟ್ಟಿಗೆ ಬಿದ್ದು ಸುಮಾರು 20 ಸಾವಿರ ರೂ. ನಷ್ಟವಾಗಿದೆ. ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ 9 ಅಡಿಕೆ ಮರಗಳು ಬಿರುಗಾಳಿಯಿಂದ ನೆಲಕ್ಕುರುಳಿ ಸುಮಾರು 85 ಸಾವಿರ ರೂ. ಹಾನಿಯಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಮೇ 21 ರಂದು ಆದ ಮಳೆಯ ಪ್ರಮಾಣ ಇಂತಿದೆ. ಚಳ್ಳಕೆರೆ 8, ಚಿತ್ರದುರ್ಗ 1 ರಲ್ಲಿ 4.6, ಚಿತ್ರದುರ್ಗ 2 ರಲ್ಲಿ 9, ಹಿರೇಗುಂಟನೂರು 4, ಐನಹಳ್ಳಿ 1.4, ಸಿರಿಗೆರೆ 9, ಹೊಳಲ್ಕೆರೆ 13.4, ರಾಮಗಿರಿ 4.2, ಮೊಳಕಾಲ್ಮೂರು 10.2, ಬಿ.ಜಿ. ಕೆರೆ 2, ರಾಯಾಪುರ 21.1 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
•ಹರಿಯಬ್ಬೆ ಹೆಂಜಾರಪ್ಪ