ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯಗೆ ಚುನಾವಣೆ ಬಂದಾಗ ಮಾತ್ರ ಅಹಿಂದ ಸಮುದಾಯ ನೆನಪಾಗುತ್ತವೆ. ಅವರಿಗೆ ಅಹಿಂದ ನಾಯಕರೆಂದು ಕರೆಸಿಕೊಳ್ಳುವ ಅರ್ಹತೆಯೇ ಇಲ್ಲ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮಹಾ ಸುಳ್ಳುಗಾರ. ಸುಳ್ಳೇ ಅವರ ಮನೆ ದೇವರು. ಅವರು ಕೊಟ್ಟ ಯಾವ ಮಾತನ್ನು ಯಾವತ್ತೂ ಉಳಿಸಿಕೊಂಡಿಲ್ಲ. ರಾಜ್ಯದ ಹಿಂದುಳಿದ ಜಾತಿಗಳು ಸಿದ್ದರಾಮಯ್ಯ ಅವರಿಂದ ಬೇಸತ್ತು ಹೋಗಿದ್ದಾರೆ.
ಸಿದ್ದರಾಮಯ್ಯ ಸರ್ಕಾರದಲ್ಲೇ ಪ್ರಧಾನ ಕಾರ್ಯದರ್ಶಿ ಅರವಿಂದ ಜಾಧವ ಮೀಸಲಾತಿ ನೀಡುವ ಕುರಿತು ವರದಿ ನೀಡಿದ್ದರು. ಆಗ ಏಕೆ ಮೀಸಲಾತಿ ಸಮಿತಿ ರಚಿಸಲಿಲ್ಲ, ಎಸ್‌ಸಿ, ಎಸ್‌ಟಿಗೆ ಸಿದ್ದರಾಮಯ್ಯ ಅವರಿಂದ ನ್ಯಾಯ ಕಲ್ಪಿಸಲು ಆಗಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಸಿಎಂ ಆದ ಮೇಲೆ ಮೀಸಲಾತಿ ಹೆಚ್ಚಿಸಲಾಗಿದೆ.
ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಹಿಂದುಳಿದ ವರ್ಗಗಳ ನಾಯಕ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿದ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸಲು ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದರು.