Advertisement

ಮುಂಚೂಣಿ ನಾಯಕರ ತರತರ ಗರ್ಜನೆ

11:34 PM Sep 16, 2022 | Team Udayavani |

75 ವರ್ಷಗಳ ಹಿಂದೆ ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲರ ಪೌರುಷದ ಸಿಂಹ ಗರ್ಜನೆಯ ಸೇನಾ ಕಾರ್ಯಾಚರಣೆಯಿಂದ ಹೈದರಾಬಾದ್‌ ಪ್ರಾಂತ ಭಾರತದೊಂದಿಗೆ ವಿಲೀನಗೊಂಡಿತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 50ನೇ ಜನ್ಮವರ್ಷದ ಅಂಗವಾಗಿ 1973ರಲ್ಲಿ  ಹುಲಿ ಸಂರಕ್ಷಣೆ ಯೋಜನೆ ಆರಂಭಿಸಿದರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆ. 17ರ ಶನಿವಾರದಂದು ಚೀತಾ ಸಂರಕ್ಷಣೆ ಯೋಜನೆಯನ್ನು ಆರಂಭಿಸುತ್ತಿದ್ದಾರೆ.

Advertisement

75 ವರ್ಷ ಹಿಂದಿನ ದಕ್ಷಿಣದ ಜಲಿಯನ್‌ವಾಲಾಬಾಗ್‌ 
1947ರ ಆಗಸ್ಟ್‌ 15ರಂದು ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದರೂ ಈಗಿನ ಕಲ್ಯಾಣ ಕರ್ನಾಟಕದ ಭಾಗವನ್ನು ಒಳಗೊಂಡ ಹೈದರಾಬಾದ್‌ ಪ್ರಾಂತ ಭಾರತದೊಂದಿಗೆ ವಿಲೀನಗೊಂಡದ್ದು 1948ರ ಸೆಪ್ಟಂಬರ್‌ 17ರಂದು. ಇತರೆಡೆ ಇತ್ತೀಚೆಗಷ್ಟೆ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಡೆದರೆ, ಈ ಭಾಗ ಇಂದು (ಸೆ.17) ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಕ್ಕೆ ಅಡಿ ಇರಿಸಿದೆ.

1947ರ ಆ. 15ರಂದು ಇಡೀ ದೇಶ ಸ್ವಾತಂತ್ರ್ಯ ಸಂಭ್ರಮದಲ್ಲಿದ್ದರೆ ತನ್ನದೇ ಆದ “ಡೆಕ್ಕನ್‌ ರೇಡಿಯೋ’ (ನಿಜಾಮ್‌ ರೇಡಿಯೋ) ಮೂಲಕ ನಿಜಾಮ ಉಸ್ಮಾನ್‌ ಅಲಿ ಖಾನ್‌ ಹೈದರಾಬಾದ್‌ ಪ್ರಾಂತವನ್ನು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿದ. ತನ್ನ ಸೇನೆಗೆ ಮತ್ತು ರಜಾಕಾರರಿಗೆ (ಕೊಲೆ, ಸುಲಿಗೆ, ಅತ್ಯಾಚಾರದಲ್ಲಿ ನಿರತ ಗುಂಪು) ಬ್ರಿಟಿಷ್‌ ಸೇನಾಧಿಕಾರಿಗಳಿಂದ ತರಬೇತಿಯನ್ನೂ ನೀಡಿದ್ದ. ಹೈದರಾಬಾದ್‌ನ್ನು ಪಾಕಿಸ್ಥಾನದೊಂದಿಗೆ ಸೇರಿಸುವ ಸೇರಿಸುವ ಇರಾದೆ ನಿಜಾಮನಿಗೆ ಇತ್ತು.

ಇಡೀ ಪ್ರಾಂತದಲ್ಲಿ ಜನರಿಂದ ಭಾರತದೊಂದಿಗೆ ವಿಲೀನಗೊಳಿಸಲು ಅಹಿಂಸಾತ್ಮಕ ಹೋರಾಟ ಪ್ರಬಲವಾಗಿ ನಡೆಯಿತು. ಇದೇ ವೇಳೆ ಲಾತೂರು ಮೂಲದ ವಕೀಲ ಖಾಸಿಂ ರಜ್ವಿ ನೇತೃತ್ವದ ರಜಾಕಾರರು ನಿರ್ದಯವಾಗಿ ಕೊಲೆ, ಸುಲಿಗೆ, ಲೂಟಿಗಳಲ್ಲಿ ತೊಡಗಿದರು. ಹೋರಾಟ ನಡೆಸಿದವರಲ್ಲಿ ಸಂಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸ್ವಾಮಿ ರಮಾನಂದತೀರ್ಥರು, ಮುಖಂಡರಾದ ಭೀಮಣ್ಣ ಖಂಡ್ರೆ, ರಾಮಚಂದ್ರ ವೀರಪ್ಪ ಮೊದಲಾದವರಿದ್ದರು.

ಕಲಬುರಗಿ ಜಿಲ್ಲೆಯಲ್ಲಿ 87 ಗ್ರಾಮಗಳ ಮೇಲೆ ದಾಳಿ, 42 ಕೊಲೆ, 36 ದರೋಡೆ, 34 ಮಹಿಳೆಯರ ಮೇಲೆ ದೌರ್ಜನ್ಯ, ಬೀದರಿನಲ್ಲಿ 176 ಗ್ರಾಮಗಳು, 120 ಕೊಲೆ, 23 ಮಹಿಳೆಯರ ಮೇಲೆ ದೌರ್ಜನ್ಯ, ರಾಯಚೂರು ಜಿಲ್ಲೆಯಲ್ಲಿ 94 ಗ್ರಾಮ, 25 ಕೊಲೆ, 63 ದೌರ್ಜನ್ಯಗಳು ನಡೆದಿದ್ದವು. ಹುಮ್ನಾಬಾದಿನ ಬಸವೇಶ್ವರ ಗುಡಿಯಿಂದ ಬರುವಾಗ ಮಹಿಳೆಯೊಬ್ಬಳ ಮೇಲೆ ಮಾನಹರಣಕ್ಕೆ ರಜಾಕಾರರು ಮುಂದಾದಾಗ ತರುಣ ರಾಮಚಂದ್ರ ವೀರಪ್ಪ ರಕ್ಷಿಸಿದ್ದರು. ಮಾರಣಾಂತಿಕ ಹಲ್ಲೆ ನಡೆದರೂ ಬದುಕುಳಿದ ಇವರು ಬದುಕಿನ ಕೊನೆಯವರೆಗೂ ಬೀದರ್‌ನಿಂದ ಲೋಕಸಭೆಗೆ ಆಯ್ಕೆಯಾಗುತ್ತಿದ್ದರು ಎನ್ನುವುದು ಉಲ್ಲೇಖನೀಯ. 1946ರ ಕಾರಹುಣ್ಣಿಮೆಯಂದು ಕಲಬುರಗಿ ಜಿಲ್ಲೆಯ ಮಹಾಗಾಂವ್‌ ಗ್ರಾಮಸ್ಥರು ಹಬ್ಬ ಆಚರಿಸುತ್ತಿದ್ದಾಗ ರಜಾಕಾರರು ದಾಳಿ ನಡೆಸಿದರು. ಆಗ ತಪ್ಪಿಸಿಕೊಳ್ಳಲು ಮಹಿಳೆಯರು ಕಾದ ಎಣ್ಣೆಯನ್ನು ಸುರಿಯುವ ಧೈರ್ಯ ತೋರಬೇಕಾಯಿತು. ಮಹಿಳೆಯರು ಸಾರ್ವಜನಿಕವಾಗಿ ಗಾಂಧೀ ಟೋಪಿಯನ್ನು ಧರಿಸಲು ಆರಂಭಿಸಿದ್ದರು. ಬೀದರ್‌ ಜಿಲ್ಲೆಯ ಗೊರ್ಟಾ ಗ್ರಾಮದಲ್ಲಿ 1948ರ ಮೇ ಮೊದಲ ವಾರದಲ್ಲಿ ನಡೆದ ರಜಾಕಾರರ ಹಿಂಸೆಯನ್ನು ದಕ್ಷಿಣ ಭಾರತದ ಜಲಿಯನ್‌ವಾಲಾಬಾಗ್‌ ಹತ್ಯಾಕಾಂಡವೆಂದು ಬಣ್ಣಿಸಲಾಗಿದೆ. ಆಗ ರಜಾಕಾರರು 200 ಹಿಂದೂಗಳನ್ನು ಒಟ್ಟುಗೂಡಿಸಿ ಸುಟ್ಟುಹಾಕಿದ್ದರು.

Advertisement

ಹಿರಿಯ ಮುತ್ಸದ್ದಿ ಕೆ.ಎಂ.ಮುನ್ಶಿಯವರು ಗುಪ್ತವಾಗಿ ಆಗಮಿಸಿ ವರದಿಯನ್ನು ಕೇಂದ್ರ ಗೃಹ ಸಚಿವ ಸರ್ದಾರ್‌ ವಲ್ಲಭಭಾಯಿ ಪಟೇಲರಿಗೆ ಸಲ್ಲಿಸಿದ್ದರು. 1948ರ ಸೆ. 12ರಂದು ಪ್ರಧಾನಿ ಜವಾಹರಲಾಲ್‌ ನೆಹರೂ ಅವರು ನಿರ್ಣಾಯಕ ಸಭೆ ಕರೆದರು. ಸೇನೆಯ ಜನರಲ್‌ ಆಗಿದ್ದ ಬುಕರ್‌ ಸಶಸ್ತ್ರ  ಕ್ರಮ ತೆಗೆದುಕೊಳ್ಳಲು ನಿರಾಕರಿಸಿದ ಕೂಡಲೇ ಪಟೇಲರು “ರಾಜೀನಾಮೆ ಕೊಡಿ’ ಎಂದು ಸೂಚನೆ ಇತ್ತರು. ಕಾನೂನು ಸಚಿವರಾಗಿದ್ದ ಡಾ| ಬಿ.ಆರ್‌.ಅಂಬೇಡ್ಕರ್‌ ಇದನ್ನು ಪೊಲೀಸ್‌ ಕಾರ್ಯಾಚರಣೆ ಎಂದು ಹೆಸರಿಸಲು ಸಲಹೆ ನೀಡಿದರು. ಜ| ಚೌಧರಿ ನೇತೃತ್ವದಲ್ಲಿ ಸೇನೆ ಸೆ. 13ರಂದು ಹೈದರಾಬಾದ್‌ ಮೇಲೆ ಆಕ್ರಮಣ ನಡೆಸಿತು. ಸ್ವತಃ ಪಟೇಲರು ಆಗಮಿಸಿದ್ದರು. ಸೆ. 17ರಂದು ಪಟೇಲರೆದುರು ನಿಜಾಮ  ಶರಣಾಗಬೇಕಾಯಿತು. ಜ| ಚೌಧರಿ ಕೆಲವು ಕಾಲ ಸೇನಾಡಳಿತವನ್ನೂ ನಡೆಸಿದರು. ರಜಾಕಾರರ ನಾಯಕ ರಜ್ವಿಗೆ ಹತ್ತು ವರ್ಷಗಳ ಜೈಲುವಾಸದ ಶಿಕ್ಷೆ ವಿಧಿಸಲಾಯಿತು. ವಿಧಿಯ ಚೋದ್ಯವೆಂದರೆ ಇಡೀ ಕರ್ಮಕಾಂಡಕ್ಕೆ ಉತ್ತರದಾಯಿತ್ವ ಹೊಂದಿದ್ದ ನಿಜಾಮ ಭಾರತದಲ್ಲಿ ಉಳಿದ, ಇವನನ್ನೇ 1952ರಿಂದ 56ರ ವರೆಗೆ ಪ್ರಾಂತದ ರಾಜಪ್ರಮುಖ (ರಾಜ್ಯಪಾಲ) ಎಂದು ಕೇಂದ್ರ ಸರಕಾರ ನೇಮಿಸಿತು. ವಿನೋಬಾ ಬಾವೆಯವರ ಭೂದಾನ ಚಳವಳಿಗೂ ಭೂದಾನ ನೀಡಿದ್ದ. ಕರ್ಮಕಾಂಡಕ್ಕೆ ನಾಯಕತ್ವ ನೀಡಿದ ರಜ್ವಿ ಪಾಕಿಸ್ಥಾನಕ್ಕೆ ಹೋದ, ರಜಾಕಾರರ ಸಂಘಟನೆ ನಿಷೇಧಿತವಾದರೂ ಸಂತತಿ ಬೇರೆ ಹೆಸರಿನಲ್ಲಿ ಇಂದಿಗೂ ಹೈದರಾಬಾದ್‌ನಲ್ಲಿದೆಯಂತೆ.

50 ವರ್ಷಗಳ ಹಿಂದೆ ಹುಲಿ ಸಂರಕ್ಷಣೆ, ಈಗ ಚೀತಾ ಸರದಿ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 50ನೇ ಜನ್ಮವರ್ಷದ ಅಂಗವಾಗಿ 1973ರ ಎ. 1ರಂದು ಹುಲಿ ಸಂರಕ್ಷಣೆ ಯೋಜನೆ ಆರಂಭಿಸಿದರು. ಇದಕ್ಕೆ ಎರಡು ವರ್ಷ ಮುಂಚೆಯೇ ಇಂದಿರಾ ಅವರು ಹುಲಿಯಂತೆ ಗರ್ಜಿಸಿ ಪಾಕಿಸ್ಥಾನದ ಯುದ್ಧದಲ್ಲಿ ಜಯ ಸಾಧಿಸಿ ಹೊಸದಾಗಿ ಬಾಂಗ್ಲಾದೇಶ ಉದಯಿಸುವಂತೆ ಮಾಡಿದ್ದರು. ಹುಲಿ ಸಂರಕ್ಷಣೆ ಯೋಜನೆಯಿಂದ 50 ವರ್ಷಗಳಲ್ಲಿ ಹುಲಿ ಸಂತತಿ 3,000 ದಾಟಿದೆ. ತಜ್ಞರು ಹೇಳುವ ಪ್ರಕಾರ ಎಷ್ಟೋ ಮೀಸಲು ಅರಣ್ಯ ಪ್ರದೇಶದಲ್ಲಿ ವೈಜ್ಞಾನಿಕವಾಗಿ ಹುಲಿಗಳ ಸಂಖ್ಯೆಯ ಗಣತಿ ನಡೆದಿಲ್ಲ. ಇಂದಿರಾ ಗಾಂಧಿ ಅವರು ಹುಲಿ ಯೋಜನೆ ಆರಂಭಿಸುವ ಹಿಂದೆ ದಟ್ಟ ಅರಣ್ಯ ಪ್ರದೇಶಗಳ ಸಂರಕ್ಷಣೆ ಗುರಿಯೂ ಇತ್ತು ಎನ್ನಲಾಗಿದೆ. ಭಾರತಕ್ಕೆ ಸ್ವಾತಂತ್ರ್ಯ ಬರುವ ಮೊದಲು ಮತ್ತು ಅನಂತರ ಬೇಟೆಯಾಡುವುದು, ಕಾಡುಗಳನ್ನು ನಾಶಪಡಿಸುವುದು ಎಗ್ಗಿಲ್ಲದೆ ನಡೆಯುತ್ತಿದ್ದ ಕಾರಣ ಹುಲಿ ಸಂರಕ್ಷಣೆಯ ಹೆಸರಿನಲ್ಲಿ ಅರಣ್ಯ ಸಂರಕ್ಷಣೆಯ ಗುರಿ ಸಾಧಿಸಲಾಯಿತು.

ಈಗ ಪ್ರಧಾನಿ ನರೇಂದ್ರ ಮೋದಿ ಅವರು 71ನೇ ವಯಸ್ಸಿನಲ್ಲಿ ತಮ್ಮ ಜನ್ಮದಿನವಾದ ಸೆ. 17ರಂದು ಚೀತಾ ಸಂರಕ್ಷಣೆ ಯೋಜನೆಯನ್ನು ಆರಂಭಿಸುತ್ತಿದ್ದಾರೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೆ ಅದೇ ವರ್ಷ ಚೀತಾದ ಕೊನೆಯ ಸಂತತಿ ನಾಶವಾಯಿತು. ಚೀತಾ ಸಾಮಾನ್ಯವಾಗಿ ಚಿರತೆ ರೀತಿಯಲ್ಲಿ ಕಂಡುಬರುತ್ತದೆಯಾದರೂ ಇದರ ಓಟ ಇತರ ಪ್ರಾಣಿಗಳಿಗೆ ಅಸಾಧ್ಯ. ಚಿರತೆ ರಾತ್ರಿ ವೇಳೆ ಹೊಂಚು ಹಾಕಿ ಬೇಟೆಯಾಡಿದರೆ ಚೀತಾ ಹಗಲಿನಲ್ಲಿ ಬೇಟೆಯಾಡುತ್ತದೆ. ಚಿರತೆ ದಟ್ಟಾರಣ್ಯದಲ್ಲಿ ಬದುಕಿದರೆ, ಚೀತಾಗಳಿಗೆ ದಟ್ಟಾರಣ್ಯದಲ್ಲಿ ಓಡಲು ಕಷ್ಟಸಾಧ್ಯವಾಗಿರುವುದರಿಂದ ಹುಲ್ಲುಗಾವಲು ಅಗತ್ಯ. ಇಂತಹ ಹುಲ್ಲುಗಾವಲಿನ ವಾತಾವರಣ ಭಾರತದಲ್ಲಿ ಕಡಿಮೆ ಇದೆ. ಇಂತಹ ವಾತಾವರಣ ಸೃಷ್ಟಿಸಬೇಕಾಗಿದೆ ಎನ್ನುವ ಅಭಿಪ್ರಾಯ ವನ್ಯಜೀವಿ ವಿಜ್ಞಾನಿಗಳದು.

-ಮಟಪಾಡಿ ಕುಮಾರಸ್ವಾಮಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next