Advertisement

ಪರೀಕ್ಷಾ ಅಕ್ರಮದ ಆರೋಪಿ ಆರ್‌.ಡಿ.ಪಾಟೀಲ್‌ ಸೆರೆ ಯಾವಾಗ?

11:00 PM Nov 09, 2023 | Team Udayavani |

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಆರೋಪ ಹೊತ್ತಿರುವ ಆರ್‌.ಡಿ. ಪಾಟೀಲ್‌ ತಪ್ಪಿಸಿಕೊಂಡಿದ್ದು, ಪೊಲೀಸರು ಈತನಿಗಾಗಿ ಬಲೆ ಬೀಸಿರುವುದು ಗೊತ್ತೇ ಇದೆ. ಈ ಹಿಂದೆಯೂ ಬಿಜೆಪಿ ಸರಕಾರವಿದ್ದ ಅವಧಿಯಲ್ಲಿ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌(ಪಿಎಸ್‌ಐ) ಪರೀಕ್ಷಾ ಅಕ್ರಮದಲ್ಲಿಯೂ ಈತ ಪ್ರಮುಖ ಆರೋಪಿಯಾಗಿದ್ದ. ಆಗಲೂ ಜೈಲಿಗೆ ಹೋಗಿದ್ದ ಈತ ಜಾಮೀನಿನಿಂದ ಹೊರಬಂದು, ಇತ್ತೀಚೆಗಷ್ಟೇ ನಡೆಸಿದ ಕೆಇಎ ಪರೀಕ್ಷೆ ಅಕ್ರಮದ ಕಿಂಗ್‌ಪಿನ್‌ ಆಗಿದ್ದಾನೆ.

Advertisement

ಆರ್‌.ಡಿ.ಪಾಟೀಲ್‌ ಬಂಧನದ ವಿಚಾರವಾಗಿ ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ದೊಡ್ಡ ವಾಕ್ಸಮರವೇ ನಡೆದಿದೆ. ಬಿಜೆಪಿ ಅವಧಿಯಲ್ಲಿ ಈತನನ್ನು ಚೆನ್ನಾಗಿ ನಡೆಸಿಕೊಳ್ಳಲಾಗಿತ್ತು, ಈತನ ಮೇಲೆ ಕೆಲವು ನಾಯಕರ ಕೃಪಾಕಟಾಕ್ಷವಿತ್ತು ಎಂದು ಕಾಂಗ್ರೆಸ್‌ ಆರೋಪಿಸಿದರೆ, ಈಗ ಕಾಂಗ್ರೆಸ್‌ನ ನಾಯಕರೇ ಆರ್‌.ಡಿ.ಪಾಟೀಲ್‌ ಬೆನ್ನಿಗೆ ನಿಂತಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದೆ. ಈ ಪ್ರಕರಣ ರಾಜಕೀಯವಾಗಿ ದೊಡ್ಡ ಸದ್ದು ಮಾಡುತ್ತಿದೆಯಷ್ಟೇ. ಆದರೆ ವರ್ಷವಿಡೀ ಇಂಥ ಪರೀಕ್ಷೆಗಳಿಗಾಗಿ ಓದಿ, ಆರ್‌.ಡಿ.ಪಾಟೀಲ್‌ನಂಥ ಅಕ್ರಮ ಎಸಗುವವರಿಂದಾಗಿ ತಮಗೆ ಅನ್ಯಾಯವಾಗುತ್ತಿದೆ ಎಂಬ ಪರೀಕ್ಷಾರ್ಥಿಗಳ ನೋವನ್ನು ಕೇಳುವವರಿಲ್ಲದಂತಾಗಿದೆ.

ಪರೀಕ್ಷಾ ಅಕ್ರಮದ ಆರೋಪಿ ಆರ್‌.ಡಿ.ಪಾಟೀಲ್‌ ದೊಡ್ಡ ಮಟ್ಟದ ಪ್ರಭಾವ ಹೊಂದಿರಬಹುದು ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಗಳೂ ಸಾಕ್ಷಿಯಾಗಿವೆ. ಈತನಿರುವ ಸ್ಥಳದ ಬಗ್ಗೆ ಖಚಿತ ಮಾಹಿತಿ ಪಡೆದು ಹೋಗುವ ವೇಳೆಗೆ, ಅಲ್ಲಿಂದ ಗೋಡೆ ಹಾರಿ ತಪ್ಪಿಸಿಕೊಂಡು ಹೋಗುವ ಫೋಟೋಗಳೂ ವೈರಲ್‌ ಆಗಿವೆ. ಇದು ಆತನಿಗಿರುವ ಪ್ರಭಾವವನ್ನು ತಿಳಿಸುತ್ತದೆ. ಅಲ್ಲದೆ ಈತನ ಬಂಧನ ವಿಚಾರದಲ್ಲಿ ಪೊಲೀಸ್‌ ಇಲಾಖೆಯೂ ಯಾಮಾರಿರುವ ಸಂದೇಹವೂ ಹುಟ್ಟುತ್ತದೆ.

ಈಗ ಮೂರು ಪೊಲೀಸ್‌ ತಂಡಗಳು ಈತನ ಪತ್ತೆಗಾಗಿ ಹುಡುಕಾಟ ನಡೆಸಿವೆ. ಒಂದು ತಂಡ ಮಹಾರಾಷ್ಟ್ರ, ಮತ್ತೂಂದು ತಂಡ ಆಂಧ್ರ, ಇನ್ನೊಂದು ತಂಡ ಗುಪ್ತ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿವೆ. ಕಲಬುರಗಿಯಲ್ಲೇ ಇದ್ದರೂ, ಉತ್ತರ ಪ್ರದೇಶದಲ್ಲಿ ಇರುವುದಾಗಿ ಮೊಬೈಲ್‌ ಲೋಕೇಶನ್‌ ಬರುವಂತೆ ಮಾಡಿ ಪೊಲೀಸರಿಗೇ ಯಾಮಾರಿಸಿದ್ದಾನೆ. ಇದರ ಮಧ್ಯೆ ಆರ್‌.ಡಿ.ಪಾಟೀಲ್‌ ತಪ್ಪಿಸಿಕೊಂಡು ಹೋದ ಮೇಲೆ, ಆತನ ಬಂಧನ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿ ಅಫ‌ಜಲಪುರ ಸಿಪಿಐಗೆ ಕಲಬುರಗಿ ಎಸ್‌ಪಿ ನೋಟಿಸ್‌ ನೀಡಿದ್ದಾರೆ. ಜತೆಗೆ ಪ್ರಕರಣ ನಡೆದು ಎರಡು ವಾರಗಳಾದರೂ ಈತನನ್ನು ಬಂಧಿಸಿಲ್ಲವೇಕೆ ಎಂದೂ ಪ್ರಶ್ನಿಸಿದ್ದಾರೆ. ಸಾರ್ವಜನಿಕ ವಿಚಾರದಲ್ಲಿ ಇದು ಕಣ್ಣೊರೆಸುವ ತಂತ್ರ ಎಂದೇ ಹೇಳಲಾಗುತ್ತಿದೆ.

ಏನೇ ಆಗಲಿ ಇದುವರೆಗೆ ಆರ್‌.ಡಿ.ಪಾಟೀಲ್‌ನನ್ನು ಬಂಧಿಸದೇ ಇರುವುದು ಅಕ್ಷಮ್ಯ ಅಪರಾಧ. ಪ್ರಕರಣ ನಡೆದು ಎರಡು ವಾರವಾದರೂ ಪೊಲೀಸರು ಎಚ್ಚೆತ್ತಿಲ್ಲವೇಕೆ ಎಂಬುದು ಜನರ ಪ್ರಶ್ನೆ. ಈತನನ್ನು ಬಂಧಿಸದಂತೆ ಯಾವುದಾದರೂ ಪ್ರಭಾವಿ ಶಕ್ತಿ ತಡೆದಿದೆಯೇ ಎಂಬುದರ ಬಗ್ಗೆಯೂ ತನಿಖೆಯಾಗಬೇಕಿದೆ. ಜತೆಗೆ ಈತನನ್ನು ಬಂಧಿಸಿ, ಮುಂದಿನ ದಿನಗಳಲ್ಲಿ ಯಾವುದೇ ಪರೀಕ್ಷೆಯಲ್ಲೂ ಅಕ್ರಮ ಎಸಗದಂತೆ ನೋಡಿಕೊಳ್ಳಬೇಕಾದ ಹೊಣೆಯೂ ಸರಕಾರಕ್ಕಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next