ಬೆಂಗಳೂರು: ಬಿಬಿಸಿ ಸಾಕ್ಷ್ಯಚಿತ್ರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೇ ಬಿಜೆಪಿ ನಾಯಕರು ದೇಶಾದ್ಯಂತ ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ? ಎಂದು ಸರಣಿ ಟ್ವೀಟ್ ಗಳ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಯವರ ಕುರಿತು ಬಿಬಿಸಿ ತಯಾರಿಸಿದ್ದ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದೇ ರೀತಿ ಪ್ರತಿಪಕ್ಷದ ನಾಯಕರ ಚಾರಿತ್ರ್ಯಹನನ ಮಾಡದಂತೆಯೂ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬೇಕಲ್ಲವೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಬಿಜೆಪಿ ನಾಯಕರು ನನ್ನ ವಿರುದ್ಧ ಸುಳ್ಳಿನ ಕಂತೆಗಳ ಅಪಪ್ರಚಾರ ಮಾಡಿದ್ದಾರೆ, ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ, ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ.ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ? ಎಂದು ಟ್ವೀಟ್ ಗಳಲ್ಲಿ ಪ್ರಶ್ನಿಸಿದ್ದಾರೆ.
”ನನ್ನ ವಿರುದ್ಧ ಯಾರೋ ಅನಾಮಧೇಯರು ಸುಳ್ಳಿನ ಕಂತೆಗಳ ಪುಸ್ತಕ ಬರೆಯುತ್ತಾರೆ, ಆ ಪುಸ್ತಕವನ್ನು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಬಿಡುಗಡೆ ಗೊಳಿಸಲು ಸಮಾರಂಭ ಆಯೋಜಿಸುತ್ತಾರೆ. ಇಂತಹ ಕುಚೇಷ್ಠೆ-ಕುಚೋದ್ಯಗಳನ್ನು ಬೆಂಬಲಿಸುವವರಿಗೆ ವಿಶ್ವಾಸಾರ್ಹ ಹಿನ್ನೆಲೆಯ ಬಿಬಿಸಿ ಮಾಧ್ಯಮ ಸಂಸ್ಥೆಯನ್ನು ವಿರೋಧಿಸುವ ಯಾವ ನೈತಿಕತೆ ಇದೆ ಬಿಜೆಪಿಗೆ ಎಂದು ಪ್ರಶ್ನಿಸಿದ್ದಾರೆ.