Advertisement

ಬೆಳಗಾದರೆ ನಿತ್ಯ ನೀರಿಗೆ ಪರದಾಟ

04:43 PM Mar 25, 2019 | Team Udayavani |

ಭಾಲ್ಕಿ: ಪ್ರಸ್ತುತ ಸಾಲಿನಲ್ಲಿ ಮುಂಗಾರು-ಹಿಂಗಾರು ಮಳೆ ಕೈ ಕೊಟ್ಟಿರುವುದರಿಂದ ಅಂತರ್ಜಲ ಮಟ್ಟ ಕುಸಿದಿದ್ದು, ಪಟ್ಟಣ ಸೇರಿದಂತೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ನಿತ್ಯ ಬೆಳಗಾದರೆ ನೀರಿಗಾಗಿ ಜನರು ಪರದಾಡುವಂತಾಗಿದೆ.

Advertisement

ಮಹಿಳೆಯರಿಗಂತೂ ಬೆಳಗಾದರೆ ಇವತ್ತು ಎಷ್ಟು ನೀರು ಸಿಗುವುದು ಎನ್ನುವುದೇ ಚಿಂತೆ ಯಾಗಿದೆ. ಹಳೆ
ಪಟ್ಟಣ ಸೇರಿದಂತೆ ಗಂಜ್‌ ಏರಿಯಾದಲ್ಲೂ ಯಾವ ಕೊಳವೆಬಾವಿಗಳಲ್ಲಿಯೂ ಹನಿ ನೀರು ಸಿಗುತ್ತಿಲ್ಲ. ಪಟ್ಟಣದಲ್ಲಿ ಇತ್ತಿಚೆಗಷ್ಟೆ “ವಾಕ್‌ ವೇ’ ನಿರ್ಮಿಸಿದ್ದ ಕೆರೆಯೂ ಬತ್ತಿದೆ. ಇದರಿಂದ ಅಂತರ್ಜಲ ಕುಸಿದಿದ್ದು ಸಾರ್ವಜನಿಕರು ತಮ್ಮ ಸ್ವಂತಕ್ಕಾಗಿ ತಮ್ಮ ತಮ್ಮ ಮನೆಯಲ್ಲಿ ತೋಡಿಸಿದ್ದ ಎಲ್ಲಾ ಕೊಳವೆಬಾವಿಗಳು ಬತ್ತಿ ಹೋಗಿವೆ. ಇದರಿಂದ ಪಟ್ಟಣದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು, ಕೊಡ ನೀರಿಗಾಗಿ ಎಲ್ಲರೂ ಪರದಾಡುವಂತಾಗಿದೆ.

ಹಳೆ ಪಟ್ಟಣದಲ್ಲಿ ಕೆಲವು ಕಡೆ ಪುರಸಭೆ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ನೀರು ಯಾರಿಗೂ ಸಾಕಾಗುತ್ತಿಲ್ಲ ಎನ್ನುತ್ತಾರೆ ಅಲ್ಲಿಯ ನಾಗರಿಕರು. ಇನ್ನು ಪಟ್ಟಣದ ಕುಂಬಾರ ಗಲ್ಲಿಯಲ್ಲಿ ಒಂದು ಹಳೆಯ ಬಾವಿಯಿದೆ. ಅದರಲ್ಲಿ ಅಲ್ಪ ಸ್ವಲ್ಪ ನೀರಿದ್ದು, ಆ ನೀರು ಸೇದಿಕೊಂಡು ಹೋಗಲು ಗಂಟೆಗಟ್ಟಲೆ ಹರ ಸಾಹಸ ಪಡಬೇಕಾಗತ್ತಿದೆ ಎನ್ನುತ್ತಾರೆ ಅಲ್ಲಿಯ ನಿವಾಸಿಗರು.

ನಮ್ಮ ಏರಿಯಾದಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ನಸುಕಿನ ಜಾವ 5 ಗಂಟೆಯಿಂದಲೇ ಸಣ್ಣ ನೀರಿನ ಟ್ಯಾಂಕ್‌ ಮುಂದೆ ಕೊಡಗಳ ಉದ್ದ ಸಾಲು ಇರುತ್ತದೆ. ನಾಲ್ಕೈದು ಕೊಡ ನೀರಿಗಾಗಿ ಎರಡೂಮೂರು ಗಂಟೆ ಕಾಯಬೇಕಿದೆ. ಮಧ್ಯದಲ್ಲಿ ಕೊಳವೆ ಬಾವಿ ನೀರಿಲ್ಲದೇ ಸ್ಥಗಿತಗೊಂಡರೆ
ಸಂಜೆಯ ವರೆಗೆ ನೀರಿಗಾಗಿ ಪರಿತಪಿಸಬೇಕಾಗುತ್ತದೆ.

ಇದರಿಂದ ಮಕ್ಕಳ ವಿದ್ಯಾಭ್ಯಾಸದ ಮೇಲೂ ಪರಿಣಾಮ ಬೀರುತ್ತಲಿದೆ ಎನ್ನುತ್ತಾರೆ ಹಳೆ ಪಟ್ಟಣದ ವೀರಭದ್ರೇಶ್ವರ ದೇವಾಲಯ ಹತ್ತಿರದ ನಿವಾಸಿ ರೂಪಾ ಪನಶೆಟ್ಟೆ. ಪಟ್ಟಣದ ಕೆಲವು ಕೊಳವೆ ಬಾವಿಗಳಲ್ಲಿ ಅಲ್ಪ ಸ್ವಲ್ಪ ನೀರಿವೆ. ಆದರೆ ಅವುಗಳ ನಿರ್ವಹಣೆಯ ಕೊರತೆಯಿಂದ ಆ ಎಲ್ಲಾ ಕೊಳವೆಬಾವಿಗಳು ನಿರುಪಯುಕ್ತವಾಗಿವೆ.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಹತ್ತಿರದ ನೂತನ ಟೌನ್‌ ಹಾಲ್‌ ಹತ್ತಿರದ ಕೊಳವೆ ಬಾವಿಯಲ್ಲಿ ನೀರಿದ್ದರೂ, ಪುರಸಭೆಯವರು ಅದಕ್ಕೆ ಮೋಟಾರ್‌ ಪಂಪ್‌ಸೆಟ್‌ ಅಳವಡಿಸದೇ ಇರುವುದರಿಂದ ಆ ಕೊಳವೆ ಬಾವಿ ನಿರುಪಯುಕ್ತವಾಗಿದೆ. ಅದಕ್ಕೆ ಪಂಪ್‌ಸೆಟ್‌ ಅಳವಡಿಸಿದರೆ ಪಕ್ಕದ ಹತ್ತಾರು ಮನೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಬಹುದು ಎನ್ನುತ್ತಾರೆ ಅಲ್ಲಿಯ ನಿವಾಸಿ ಶಾಲಿವಾನ ಕನಕಟ್ಟೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಲಿದ್ದು, ಸುಡು ಬಿಸಿಲಿನಲ್ಲಿ ಮಕ್ಕಳು, ಮಹಿಳೆಯರು ಕೊಡ ಹಿಡಿದುಕೊಂಡು ಪಕ್ಕದ ಹೊಲಗಳಿಗೆ ನೀರು ತರಲು ಪರದಾಡುತ್ತಿರುವುದರಿಂದ ಅವರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಲಿದೆ ಎನ್ನುತ್ತಾರೆ ಪಟ್ಟಣದ ನಿವಾಸಿ ವಸಂತ ಹುಣಸನಾಳೆ.

ಪಟ್ಟಣಕ್ಕೆ ಕುಡಿಯುವ ನೀರಿನ ಮೂಲವಾದ ಮಾಂಜ್ರಾ ನದಿ ಸಂಪೂರ್ಣ ಬತ್ತಿದ್ದು, ಕಾರಂಜಾ ಜಲಾಶಯದಿಂದ ನೀರು ಬಿಟ್ಟರೆ ಮಾತ್ರ ದಾಡಗಿ ಹತ್ತಿರ ನದಿಗೆ ಕಟ್ಟಿರುವ ಸೇತುವೆ ಮೂಲಕ ಪಟ್ಟಣಕ್ಕೆ ನೀರು ಸರಬರಾಜು ಮಾಡಬಹುದು. ಇದಕ್ಕೆ ಜಲಾಶಯದಿಂದ ನೀರು ಹರಿಸಲು ಮನವಿ ಸಲ್ಲಿಸಲಾಗಿದೆ. ಕೆಲವು ದಿನಗಳಲ್ಲಿ ನೀರು ಬಿಡುವ ಭರವಸೆ ಇದೆ. ಏಪ್ರಿಲ್‌ ತಿಂಗಳಿನಿಂದ ನೀರಿನ ತೀವ್ರ ಸಮಸ್ಯೆ ಎದುರಿಸುವ ಓಣಿಗಳಿಗೆ ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ 20ರಿಂದ 40 ಸಾವಿರ ಲೀಟರ್‌ ಟ್ಯಾಂಕರ್‌ ನೀರು ಪೂರೈಸಲಾಗುವುದು.
ಶಿವಕುಮಾರ, ಪುರಸಭೆ ಮುಖ್ಯಾಧಿಕಾರಿ

ಸರ್ಕಾರದಲ್ಲಿ ನೀರಿಗಾಗಿ ಹಣದ ಕೊರತೆ ಇಲ್ಲ, ಟ್ಯಾಂಕರ್‌ ಮೂಲಕ ಎಲ್ಲಾ ಕಡೆಯೂ ನೀರು ಸರಬರಾಜು ಮಾಡುತ್ತೇವೆ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿ ಗಳು ಹೇಳಿಕೆ ಕೊಡುತ್ತಿದ್ದಾರೆಯೇ ಹೊರತು ನಾಗರಿಕರಿಗೆ ನೀರು ಸರಬರಾಜು ಮಾಡುವಲ್ಲಿ ವಿಫಲರಾಗಿದ್ದಾರೆ.
ಓಂಪ್ರಕಾಶ ರೊಟ್ಟೆ, ಚಿಂತಕ

„ಜಯರಾಜ ದಾಬಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next