Advertisement

ಶಾಸಕರೇ ತ್ಯಾಜ್ಯ ಘಟಕ,ಭವನ,ಗ್ರಂಥಾಲಯಗಳಿಗೆ ಉದ್ಘಾಟನೆ ಭಾಗ್ಯ ಯಾವಾಗ?

02:41 PM Aug 04, 2022 | Team Udayavani |

ಕುರುಗೋಡು: ಗ್ರಾಪಂಗೆ ಸೇರಿದ ಮಣ್ಣೂರು ಗ್ರಾಮದ ಹೊರವಲಯದ ಹಳೆ ಊರಿನಲ್ಲಿ ಇರುವ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಗೊಳ್ಳದೆ ಅಗತ್ಯವಾದ ನಿರ್ವಹಣೆ ಕಾಣದೆ ಪಾಳು ಬಿದ್ದು ಹೋಗಿದೆ.

Advertisement

ಸುಮಾರು ತಿಂಗಳ ಹಿಂದೆ ಸ್ಥಳವನ್ನು ನಿಗದಿಪಡಿಸಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. 2021-22 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸುಮಾರು 20 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಕಸ ಸಂಸ್ಕರಣಾ ಘಟಕ ಪ್ರಾರಂಭಿಸಿದರೂ ಸಂಸ್ಕರಣೆ ಕಾರ್ಯ ಒಮ್ಮೆಯೂ ಮಾಡಿಲ್ಲ. ಗೊಬ್ಬರವನ್ನು ತಯಾರಿಸುತ್ತಿಲ್ಲ. ಈ ಎಲ್ಲ ನಿರ್ವಹಣೆ ಕೊರತೆಯಿಂದ ಸಂಪೂರ್ಣ ವಾಗಿ ಪಾಳು ಬಿದ್ದಿವೆ.ಇಂತಹ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಗ್ರಾಮದಲ್ಲಿ ಸಂಗ್ರಹಿಸಲಾದ ಕಸವನ್ನು ತೆಗೆದುಕೊಂಡು ಹೋಗಿ ಎಲ್ಲೆಂದರಲ್ಲಿ ಅಲ್ಲಿ ರಾಶಿ ಹಾಕಲಾಗಿದೆ.

ಇದರಿಂದ ತ್ಯಾಜ್ಯ ವಸ್ತುಗಳು ಕೊಳೆತು ಸುತ್ತಮುತ್ತ ದುರ್ವಾಸನೆ ಹರಡಿದೆ. ಯಾರು ಕೂಡ ಈ ತ್ಯಾಜ್ಯ ವಿಲೇವಾರಿ ಘಟಕದೊಳಗೆ ಹೋಗದಷ್ಟು ಪ್ರಮಾಣದಲ್ಲಿ ಕೆಟ್ಟ ವಾಸನೆಯಿದೆ. ಅಕ್ಕ ಪಕ್ಕದ ಲ್ಲಿರುವ ಹೊಲಗಳಲ್ಲಿ ಕೆಲಸ ಮಾಡುವ ರೈತರು ಇದರಿಂದ ರೋಸಿ ಹೋಗಿದ್ದಾರೆ.ಇದರ ಜೊತೆಗೆ ದೊಡ್ಡ ದೊಡ್ಡ ನೊಣಗಳ ಕಾಟ ಮಿತಿ ಮೀರಿದೆ.

ಈಗಾಗಲೇ ಸಿರುಗುಪ್ಪ ಶಾಸಕ ಎಂ. ಎಸ್. ಸೋಮಲಿಂಗಪ್ಪ ಎರಡು ತಿಂಗಳ ಹಿಂದೆಯೇ ಘಟಕವನ್ನು ಉದ್ಘಾಟನೆ ಮಾಡಲು ಬರುತ್ತಾರೆ ಎಂದು ಗ್ರಾಪಂ ಸದಸ್ಯರು ಹಾಗೂ ಅಧಿಕಾರಿಗಳು ಘಟಕಕ್ಕೆ ಹೂ ಗಳಿಂದ ಅಲಂಕಾರ ಮಾಡಿ ಶಾಮಿಯಾನ ಹಾಕಲಾಗಿತ್ತು. ಇದ್ದಕ್ಕಿದ್ದಂತೆ ಶಾಸಕರು ಬಾರದೇ ಇರುವುದರಿಂದ ಘಟಕ ಹಾಗೇ ಪಾಳು ಬಿದ್ದು ತುಕ್ಕು ಹಿಡಿದು ಹೋಗುತ್ತಿದೆ.

Advertisement

ಅಲ್ಲದೆ ಘಟಕ ಗ್ರಾಮದ ಆರಾಧ್ಯ ದೈವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣ ಗೊಂಡಿದ್ದು, ಪ್ರತಿ ಶನಿವಾರ ಅತಿ ಹೆಚ್ಚು ಸಂಖ್ಯೆ ಯಲ್ಲಿ ಜನರು ದರ್ಶನ ಪಡೆಯಲು ಹೋಗುತ್ತಿದ್ದು, ಇದರಿಂದ ಜನರಿಗೆ ಕೂಡ ತುಂಬಾ ಸಮಸ್ಯೆ ಉಂಟಾಗುತ್ತಿದೆ.

ಎಂ. ಸೂಗೂರು ಗ್ರಾಪಂ ವ್ಯಾಪ್ತಿಯ ಮಣ್ಣೂರು ಗ್ರಾಮದಲ್ಲಿ ನಿರ್ಮಿಸಿರುವ ಸಮುದಾಯ ಭವನ ಹಾಗೂ ಗ್ರಂಥಾಲಯ ಉದ್ಘಾಟನೆ ಭಾಗ್ಯ ಕಾಣದೇ ನಿರುಪಯುಕ್ತವಾಗಿದೆ.

2021 -22 ನೇ ಸಾಲಿನ ಗ್ರಾಮ ವಿಕಾಸ್ ಯೋಜನೆ ಅಡಿಯಲ್ಲಿ ಭವನ ಅಂದಾಜು ಲಕ್ಷ ಗಟ್ಟಲೆ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ ಎರಡು – ಮೂರು ತಿಂಗಳ ಹಿಂದೆ ಕಾಮಗಾರಿ ಪೂರ್ಣಗೊಂಡಿದ್ದರೂ ಅಧಿಕಾರಿಗಳ ಮತ್ತು ಜನಪ್ರತಿನಿದಿಗಳ ದೀರ್ಘ ಮೌನದಿಂದ ಕಟ್ಟಡ ಉದ್ಘಾಟನೆಗೊಳ್ಳುತ್ತಿಲ್ಲ.

ಇನ್ನೂ ಸರಕಾರ ಮಕ್ಕಳ ವಿದ್ಯಾಭ್ಯಾಸ ಕ್ಕೆ ಎಂದು ಪ್ರತಿ ಗ್ರಾಪಂ ಗೆ ಗ್ರಂಥಾಲಯ ನಿರ್ಮಿಸುತ್ತಿದ್ದು, ಇದರಿಂದ ಮಕ್ಕಳಿಗೆ ಉತ್ತಮ ತಿಳುವಳಿಕೆ ಹಾಗೂ ಹವ್ಯಾಸ, ವಿವಿಧ ವಿಚಾರಗಳು ತಿಳಿದುಕೊಳ್ಳಲು ಸಹಕರಿಯಾಗಲಿದೆ. ಇದಕ್ಕೆ ಸರಕಾರ ಹೆಚ್ಚಿನ ಆಸಕ್ತಿ ತೋರಿ ಕೂಡಲೇ ಅನುದಾನ ಮಂಜೂರು ಮಾಡಲು ಮುಂದಾದರು ಇಲ್ಲಿ ಮಾತ್ರ ಕಟ್ಟಡ ನಿರ್ಮಾಣ ವಾದರೂ ಉದ್ಘಾಟನೆ ಭಾಗ್ಯ ಸಿಗದೇ ಅನಾಥ ವಾಗಿದೆ ಇದರಿಂದ ಮಕ್ಕಳು ಪುಸ್ತಕ ಓದಲು, ಪತ್ರಿಕೆಗಳು ಓದಲು, ವಿಚಾರ ಗಳು ತಿಳಿದುಕೊಳ್ಳಲು ಪಕ್ಕದ ಊರಿಗೆ ಹೋಗಬೇಕಾಗಿದೆ.

ಉದ್ದೇಶ: ಸಮುದಾಯ ಭವನ
ಜನರ ಸಾಂಸ್ಕೃತಿಕ ಮತ್ತು ಸಮಾಜದ ಕೆಲವೊಂದು ಕಾರ್ಯಕ್ರಮಗಳು ಏರ್ಪಡಿಸಲು ಆಯಾ ಪ್ರತಿಯೊಂದು ಸಮುದಾಯದವರಿಗೆ ಅನುಕೂಲವಾಗಲಿ ಎಂದು ನಿರ್ಮಾಣ ಮಾಡಲಾಗಿದ್ದರೂ ಸರಿಯಾದ ನಿರ್ವಹಣೆ ಮತ್ತು ಕೆಲ ಜನಪ್ರ ತಿನಿಧಿಗಳ ನಿರ್ಲಕ್ಷ್ಯದಿಂದ ಸಮುದಾಯ ಭವನ ಹಾಗೂ ಗ್ರಂಥಾಲಯ ಪಾಳು ಬೀಳುತ್ತಿವೆ.

ಮೀನಮೇಷ
ಸರಕಾರಿ ವೆಚ್ಚದಲ್ಲಿ ಕಟ್ಟಡವೆಲ್ಲ ಪೂರ್ಣಗೊಳಿಸಲಾಗಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿದಿನಗಳು ಬಂದು ರಿಬ್ಬನ್ ಕಟ್ ಮಾಡಿದರೆ ಸಾಕು. ಅಂತಹ ಮುಹೂರ್ತ ಇನ್ನೂ ಕೂಡಿ ಬರುತ್ತಿಲ್ಲ. ಹೀಗಿದ್ದಾಗ ಎಷ್ಟು ಖರ್ಚು ಮಾಡಿ ಯಾವ ಕಟ್ಟಡ ನಿರ್ಮಿಸಿದರೆ ಏನು ಪ್ರಯೋಜನ ಎಂಬುದು ಸಮುದಾಯದ ಜನರ ಮಾತು.

ಉತ್ತಮ ವಾತಾವರಣ
ಸಮು ದಾಯ ಭವನ ಹಾಗೂ ಗ್ರಂಥಾಲಯ ಹತ್ತಿರ ದೇವಸ್ಥಾನ ಇದ್ದು, ಸ್ವಚ್ಛಂದ ಮತ್ತು ಶಾಂತತೆಯಿಂದ ಕೂಡಿದೆ. ಉದ್ಘಾಟನೆ ಗೊಂಡರೆ ಸಮುದಾಯದ ಜನರಿಗೆ ಉಪಯೋಗವಾಗಲಿದೆ.ಆದ್ದರಿಂದ ಕೂಡಲೇ ಉದ್ಘಾಟನೆ ಮಾಡಿ ಸಮುದಾಯದ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ.

ಸಮುದಾಯ ಭವನ ಹಾಗೂ ಗ್ರಂಥಾಲಯ ಮತ್ತು ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಪೂರ್ಣಗೊಂಡು ತಿಂಗಳು ಗಳೆ ಕಳೆದಿದೆ. ಆದರೆ ಉದ್ಘಾಟನೆಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಿಂದೆ – ಮುಂದೆ ನೋಡುತ್ತಿದ್ದು, ಗ್ರಾಪಂ ಸದಸ್ಯರುಗಳು ಸೇರಿ ನಾವು ಕೂಡ ಶಾಸಕರಿಗೆ ತಿಳಿಸಿದ್ದೇವೆ ಶೀಘ್ರದಲ್ಲೇ ಬಂದು ಉದ್ಘಾಟನೆ ಮಾಡಲಿದ್ದಾರೆ.

ವೀರನಗೌಡ ಪಿಡಿಒ ಎಂ. ಸೂಗೂರು ಗ್ರಾಪಂ

ಘಟಕ, ಭವನ, ಗ್ರಂಥಾಲಯ ಉದ್ಘಾಟನೆ ಮಾಡಬೇಡಿ ಅಂತ ನಾನು ಯಾರಿಗೂ ಹೇಳಿಲ್ಲ. ಈ ವಿಷಯ ಕೂಡ ನನಗೆ ಯಾರು ತಿಳಿಸಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಒಂದು ಸಮಯ ತೆಗೆದುಕೊಂಡು ಉದ್ಘಾಟನೆ ಮಾಡುತ್ತೇವೆ.

ಎಂ. ಎಸ್. ಸೋಮಲಿಂಗಪ್ಪ ಶಾಸಕರು ಸಿರುಗುಪ್ಪ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next