Advertisement

ನೀರಾವರಿ ಸಲಹಾ ಸಮಿತಿ ಸಭೆ ಯಾವಾಗ?

12:25 PM Nov 16, 2021 | Team Udayavani |

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಹಿಂಗಾರು ಹಂಗಾಮಿನ ಭತ್ತ ಬೆಳೆಯಲು ನೀರಿನ ಚಿಂತೆ ಆರಂಭಿಸಿದರೆ, ಅತ್ತ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ಹಿಂಗಾರು ಹಂಗಾಮಿಗೆ ನೀರು ಹರಿಸುವುದು ಬಹುತೇಕ ಅನುಮಾನ ಎನ್ನಲಾಗಿದೆ.

Advertisement

ಕಳೆದ ವರ್ಷ ಆಲಮಟ್ಟಿ ಜಲಾಶಯದಿಂದ ನವೆಂಬರ್‌ ತಿಂಗಳವರೆಗೂ ಒಳ ಹರಿವಿತ್ತು. ಆದರೆ, 2021 ಅಕ್ಟೋಬರ್‌ ಮೊದಲ ವಾರದಲ್ಲಿಯೇ ಆಲಮಟ್ಟಿ ಜಲಾಶಯದಿಂದ ಒಳ ಹರಿವು ಸ್ಥಗಿತಗೊಂಡಿದೆ. ಹೀಗಾಗಿ ನೀರಿನ ಸಂಗ್ರಹ ಲಭ್ಯತೆ ಇಲ್ಲ. ಎಲ್ಲದಕ್ಕೂ ಸಲಹಾ ಸಮಿತಿ ಕೈಗೊಳ್ಳುವ ನಿರ್ಣಯವೇ ಅಂತಿಮ ಎಂದು ಕೆಬಿಜೆಎನ್ನೆಲ್‌ ಮೂಲಗಳಿಂದ ತಿಳಿದು ಬಂದಿದೆ.

ಈಗಾಗಲೇ ಬಸವಸಾಗರ ಹಾಗೂ ಆಲಮಟ್ಟಿ ಜಲಾಶಯ ಸೇರಿ 80 ಟಿಎಂಸಿ ಅಡಿ ನೀರಿನ ಸಂಗ್ರಹ ಇದೆ. ಇದರಲ್ಲಿ 20 ಟಿಎಂಸಿ ಅಡಿ ಕುಡಿವ ನೀರಿಗೆ ಹಾಗೂ ಉಳಿದ 40 ಟಿಎಂಸಿ ಅಡಿ ನೀರಿನಲ್ಲಿ ಜಲಚರ ಬೆಡ್‌ ಸ್ಟೋರೇಜ್‌ 20 ಟಿಎಂಸಿ ಅಡಿ ನೀರು ಸಂಗ್ರಹ ಬೇಕು. ಇದೆಲ್ಲವೂ ಲೆಕ್ಕಿಸಿದಾಗ ವಾರಾಬಂಧಿ ಪದ್ಧತಿ ಅನುಸರಿಸಿದರೆ ಮಾ.15ರವರೆಗೆ ನೀರು ಹರಿಸಬಹುದು ಎನ್ನುತ್ತಾರೆ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ಶಂಕರ ನಾಡಿ.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ, ಕಬ್ಬು ನಿಷೇಧಿತ ಬೆಳೆಯಾಗಿವೆ. ಹೀಗಾಗಿ ಕಡಿಮೆ ಅವಧಿಯಲ್ಲಿ ಅಂದರೆ ಮೂರು ತಿಂಗಳಲ್ಲಿಯೇ ಕೈಗೆ ಬರುವ ಬೆಳೆ ಬೆಳೆಯಲು ಈಗಾಗಲೇ ರೈತರಿಗೆ ಮಾಹಿತಿ ನೀಡಲಾಗಿದೆ. ಪ್ರತಿ ವರ್ಷ ರೈತರಿಗೆ ಇದೇ ರೀತಿ ಹೇಳಿಕೊಂಡು ಬರಲಾಗಿದೆ ಎಂಬುದು ಅಧಿಕಾರಿಗಳ ಮಾತು.

ಇದನ್ನೂ ಓದಿ:ಹಲವು ವಿಶೇಷತೆಗಳನ್ನು ಹೊಂದಿದೆ ಇಂದು ಉದ್ಘಾಟನೆಯಾಗಲಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ

Advertisement

ಈಗಾಗಲೇ ಮುಂಗಾರು ಭತ್ತ ಕಟಾವು ನಡೆದಿವೆ. ಹಿಂದಿನ ವರ್ಷದಂತೆ ನೀರು ಹರಿಸುತ್ತಾರೆಂಬ ನಂಬಿಕೆಯಿಂದ ಕೆಲ ರೈತರು ಹಿಂಗಾರು ಭತ್ತ ನಾಟಿಗಾಗಿ ಸಸಿ ಹಾಕಿದ್ದಾರೆ. ಜಲಾಶಯದಲ್ಲಿ ರೈತರಿಗೆ ಬೇಕಾದಷ್ಟು ನೀರು ಸಂಗ್ರಹ ಇದ್ದಾಗಲೂ ಕೃಷ್ಣಾ ನದಿಗೆ ಅನಗತ್ಯ ನೀರು ಹರಿಸಲಾಗಿದೆ ಎನ್ನುವುದು ರೈತರ ಆಕ್ರೋಶ.

ಅ.28, 2016ರಂದು ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ಕರೆದು ಮಾಹಿತಿ ನೀಡಿತ್ತು. ಕಳೆದ ವರ್ಷವೂ ನ.18, 2019ರಂದು ಸಭೆ ನಡೆಸಿತ್ತು. ಆದರೆ ಇದೆಲ್ಲವೂ ನೋಡಿದಾಗ ವರ್ಷ ಗತಿಸಿದಂತೆ ಸಲಹಾ ಸಮಿತಿ ಸಭೆ ಮುಂದೂಡಿಕೊಂಡು ಬರುತ್ತಿರುವುದು ಆಶ್ಚರ್ಯ ಮೂಡಿಸಿದೆ. ಆದಾಗ್ಯೂ ಮುಂಚಿತವಾಗಿಯೇ ಪ್ರತಿ ವರ್ಷ ಅಕ್ಟೋಬರ್‌ ತಿಂಗಳಲ್ಲಿಯೇ ನೀರು ಹರಿಸುವ ಮಾಹಿತಿ ರೈತರಿಗೆ ನೀಡಬೇಕಿತ್ತು. ಆದರೂ ರೈತರ ದುರ್ದೈವವೋ ಏನೋ? ಸಭೆ ನಡೆಸಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಹೀಗಾಗಿ ಈ ಬಾರಿ ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ನಡೆಸುವ ಸಲಹಾ ಸಮಿತಿ ಸಭೆ ರೈತರಿಗೆ ವರವಾಗಲಿದೆಯೋ? ಇಲ್ಲವೋ ಶಾಪವಾಗಲಿದೆಯೋ? ಎನ್ನುವುದನ್ನು ಕಾದುನೋಡಬೇಕು.

ಸಾಕಷ್ಟು ನೀರಿದ್ದಾಗ ರೈತರಿಗೆ ತಪ್ಪು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿದ್ದಾರೆ. ಜಲಾಶಯ ಭರ್ತಿಗೊಂಡಾಗ ನದಿಗೆ ಹರಿಸಿದ್ದು ಏಕೆ?. ಇದೊಂದು ಹುನ್ನಾರ. ರೈತರಿಗೆ ಸಮರ್ಪಕ ನೀರು ಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಭಾರೀ ನಷ್ಟ ಅನುಭವಿಸಬೇಕಾಗುತ್ತದೆ. -ಮಲ್ಲಿಕಾರ್ಜುನ ಸತ್ಯಂಪೇಟಿ, ಕ.ರಾ.ರೈ. ಸಂಘ, ರಾಜ್ಯ ಉಪಾಧ್ಯಕ್ಷ

ಈ ಬಾರಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಕಳೆದ ವರ್ಷ ಒಳಹರಿವು ಇತ್ತು. ಅಕ್ಟೋಬರ್‌ ತಿಂಗಳಿಂದ ಈವರೆಗೂ ಸ್ಥಗಿತಗೊಂಡಿದೆ. ಕಡಿಮೆ ಅವಧಿ ಬೆಳೆ ಬೆಳೆದರೆ ಮಾತ್ರ ರೈತರಿಗೆ ವರದಾನ ಆಗಲಿದೆ. ನ.15ರಿಂದ 22ರೊಳಗಾಗಿ ಸಲಹಾ ಸಮಿತಿ ಸಭೆ ನಡೆಸಬಹುದು. -ಶಂಕರ ನಾಯ್ಕೋಡಿ, ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್‌, ನಾರಾಯಣಪುರ

-ಬಾಲಪ್ಪ.ಎಂ. ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next