Advertisement

ಪೊಲೀಸ್‌ ದೂರು ಪ್ರಾಧಿಕಾರಕ್ಕೆ ನೇಮಕಾತಿ ಯಾವಾಗ?

01:21 AM Aug 05, 2019 | Lakshmi GovindaRaj |

ಬೆಂಗಳೂರು: “ಅಭಿವೃದ್ಧಿ ಪರ್ವ’ ಮಂತ್ರ ಜಪಿಸಿ ವಿಶ್ವಾಸಮತ ಗೆದ್ದಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕರ್ನಾಟಕ ಲೋಕಸೇವಾ ಆಯೋಗ, ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರ ಹಾಗೂ ಕಾನೂನು ಆಯೋಗಕ್ಕೆ “ಅಧ್ಯಕ್ಷ ಭಾಗ್ಯ’ ಸಿಗಲಿದೆಯೇ? ಅದೇ ರೀತಿ, 2018ರ ಮಾ.1ರಂದು ನ್ಯಾ.ಸುಭಾಷ್‌ ಬಿ.ಅಡಿಯವರು ನಿವೃತ್ತಿಯಾದ ಬಳಿಕ ಕಳೆದ 17 ತಿಂಗಳಿಂದ ಖಾಲಿಯಿರುವ ಒಂದು ಉಪಲೋಕಾಯುಕ್ತ ಹುದ್ದೆ ತಕ್ಷಣ ಭರ್ತಿ ಆಗುತ್ತದೆಯೇ ಎಂದು ನೋಡಬೇಕಾಗಿದೆ.

Advertisement

ಕಾಂಗ್ರೆಸ್‌ ಸರ್ಕಾರದ ಅವಧಿಯ ಕೊನೆಯ ವರ್ಷದಲ್ಲಿ ಹಾಗೂ ನಂತರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಈ ಬಗ್ಗೆ ಅಷ್ಟೊಂದು ಕಾಳಜಿ ವಹಿಸಲಾಗಿಲ್ಲ. ಬಿಜೆಪಿ ಸರ್ಕಾರದಲ್ಲಾದರೂ ಕಾಲಮಿತಿಯೊಳಗೆ ಇದಕ್ಕೊಂದು ಮುಕ್ತಿ ಸಿಗಲಿದೆಯಾ ಎಂಬ ಜಿಜ್ಞಾಸೆ ಮೂಡಿದೆ. ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳೆದ ಏಳೆಂಟು ತಿಂಗಳಿಂದ ಪೂರ್ಣಾವಧಿ ಅಧ್ಯಕ್ಷರಿಲ್ಲ. 2018ರ ಡಿಸೆಂಬರ್‌ನಲ್ಲಿ ಶ್ಯಾಂಭಟ್‌ ಅವಧಿ ಮುಗಿದ ಬಳಿಕ ಸದಸ್ಯರಾಗಿರುವ ಎಸ್‌.ಪಿ.ಷಡಕ್ಷರಿ ಸ್ವಾಮಿ ಹಂಗಾಮಿ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ. ಇದರ ಜತೆಗೆ ಸದ್ಯ ನಾಲ್ಕು ಸದಸ್ಯ ಸ್ಥಾನಗಳು ಖಾಲಿಯಾಗಿವೆ.

ಪ್ರಾಧಿಕಾರದ ಅಧ್ಯಕ್ಷ ಹುದ್ದೆ 23 ತಿಂಗಳಿಂದ ಖಾಲಿ: ರಾಜ್ಯ ಪೊಲೀಸ್‌ ದೂರು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನ್ಯಾ.ಎ.ಎಸ್‌. ಪಾಚ್ಚಾಪೂರೆ 2017ರ ಆ.7ರಂದು ರಾಜೀನಾಮೆ ಸಲ್ಲಿಸಿದ ಬಳಿಕ ಕಳೆದ 23 ತಿಂಗಳಿಂದ ಆ ಹುದ್ದೆ ಖಾಲಿ ಇದೆ. ಜತೆಗೆ, ರಾಜ್ಯ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ನ್ಯಾ.ಎಸ್‌.ಆರ್‌.ನಾಯಕ್‌ ಅವರ ಅವಧಿ ಕಳೆದ ತಿಂಗಳು ಕೊನೆಗೊಂಡಿದೆ. ತಿಂಗಳಿಂದೀಚೆಗೆ ಈ ಹುದ್ದೆಯೂ ಖಾಲಿಯಾಗಿದೆ.

ಸಾರ್ವಜನಿಕ ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಾಗೂ ಪೊಲೀಸ್‌ ವ್ಯವಸ್ಥೆಯ ಬಗ್ಗೆ ಬರುವ ದೂರುಗಳ ಪರಿಹಾರಕ್ಕೆ ರಾಜ್ಯದಲ್ಲಿ ಲೋಕಾಯುಕ್ತ, ಲೋಕಸೇವಾ ಆಯೋಗ ಹಾಗೂ ಪೊಲೀಸ್‌ ದೂರು ಪ್ರಾಧಿಕಾರ ರಚನೆ ಮಾಡಲಾಗಿದೆ. ಈ ಮೂರು ಸಂಸ್ಥೆಗಳು ಕಾಯ್ದೆಯಡಿ ರಚಿಸಲ್ಪಟ್ಟ ಶಾಸನಬದ್ಧ ಸಂಸ್ಥೆಗಳಾಗಿವೆ.

ಇದರ ಜತೆಗೆ, ಕಾಯ್ದೆ-ಕಾನೂನುಗಳ ವಿಚಾರದಲ್ಲಿ ಉಂಟಾಗುವ ಕ್ಲಿಷ್ಟತೆಗಳ ಬಗ್ಗೆ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲು ಕರ್ನಾಟಕ ರಾಜ್ಯ ಕಾನೂನು ಆಯೋಗ ರಚಿಸಲಾಗಿದೆ. ಇದು ಯಾವುದೇ ಕಾಯ್ದೆಯಡಿ ರಚಿಸಲ್ಪಟ್ಟ ಶಾಸನಬದ್ಧ ಸಂಸ್ಥೆ ಅಲ್ಲದಿದ್ದರೂ, ಅಷ್ಟೇ ಪ್ರಾಮುಖ್ಯತೆ ಪಡೆದಿರುವ ರಾಜ್ಯ ಸರ್ಕಾರದ “ಕಾರ್ಯಕಾರಿ ಆದೇಶ’ದ (ಎಕ್ಸಿಕ್ಯೂಟಿವ್‌ ಆರ್ಡರ್‌) ಮೂಲಕ ಅಸ್ತಿತ್ವಕ್ಕೆ ಬಂದ ಸಂಸ್ಥೆಯಾಗಿದೆ. ಈ ಸಂಸ್ಥೆಗಳಿಗೆ ಕಾಯಕಲ್ಪ ಕೊಡುವ ನಿಟ್ಟಿನಲ್ಲಿ ಹಿಂದಿನ ಸರ್ಕಾರಗಳಲ್ಲಿ ಯಾವುದೇ ಗಂಭೀರ ಪ್ರಯತ್ನಗಳು ನಡೆದಿಲ್ಲ.

Advertisement

51 ವರದಿಗಳ ಸಲ್ಲಿಕೆ: ರಾಜ್ಯ ಕಾನೂನು ಆಯೋಗ ಅಸ್ತಿತ್ವಕ್ಕೆ ಬಂದ 2009ರಿಂದ ಇಲ್ಲಿವರೆಗೆ ವಿವಿಧ ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ 51 ವರದಿಗಳು ಹಾಗೂ ನೂರಕ್ಕೂ ಹೆಚ್ಚು ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ನ್ಯಾ.ಎಸ್‌.ಆರ್‌.ನಾಯಕ್‌ ಅವರ ಅವಧಿ ಈ ವರ್ಷದ ಜೂನ್‌ ತಿಂಗಳಿಗೆ ಮುಗಿದಿದೆ. ಇಂತಿಷ್ಟೇ ಅವಧಿಯಲ್ಲಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ಕಾಲಮಿತಿಯಿಲ್ಲ.

ಮೇಲಾಗಿ, ಯಾವುದೇ ಕಾಯ್ದೆಯಡಿ ಆಯೋಗ ರಚನೆಯಾಗದ ಕಾರಣ, ಸರ್ಕಾರ ಆದೇಶ ಹೊರಡಿಸಿದ ಬಳಿಕವಷ್ಟೇ ಮತ್ತೆ ಹೊಸ ಅಧ್ಯಕ್ಷರು ಬರುತ್ತಾರೆ. ಆದಷ್ಟು ಬೇಗ ಬಂದರೆ, ಮುಂದಿನ ಕೆಲಸಗಳಿಗೆ ಅನುಕೂಲವಾಗುತ್ತದೆ ಎಂದು ಕಾನೂನು ಆಯೋಗದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ನೇಮಕಾತಿ ಪ್ರಯತ್ನವೇ ನಡೆದಿಲ್ಲ: ಲೋಕಾಯುಕ್ತ ಹಾಗೂ ಪೊಲೀಸ್‌ ದೂರು ಪ್ರಾಧಿಕಾರ ನಿರ್ದಿಷ್ಟ ಕಾಯ್ದೆಯಡಿ ರಚನೆಯಾಗಿರುವ ಶಾಸನಾತ್ಮಕ ಸಂಸ್ಥೆಗಳು. ಇದರ ಹುದ್ದೆಗಳನ್ನು ದೀರ್ಘಾವಧಿವರೆಗೆ ಖಾಲಿ ಬಿಡಲು ಆಗುವುದಿಲ್ಲ. ಹುದ್ದೆಗಳು ತೆರವುಗೊಳ್ಳುವ ಮೂರು ತಿಂಗಳ ಹಿಂದೆಯೇ ಭರ್ತಿ ಪ್ರಕ್ರಿಯೆ ಆರಂಭಿಸಬೇಕಾತ್ತದೆ. ಆದರೆ, ಒಂದು ಉಪಲೋಕಾಯುಕ್ತ, ಪೊಲೀಸ್‌ ದೂರು ಪ್ರಾಧಿಕಾರದ ಅಧ್ಯಕ್ಷರ ನೇಮಕಾತಿಗೆ ಸರ್ಕಾರದಿಂದ ಪ್ರಯತ್ನಗಳೇ ನಡೆದಿಲ್ಲ ಎಂಬುದು ಈ ಎರಡೂ ಹುದ್ದೆಗಳ ಭರ್ತಿಗೆ ಕಾನೂನು ಹೋರಾಟ ನಡೆಸುತ್ತಿರುವ ವಕೀಲ ಎಸ್‌. ಉಮಾಪತಿಯವರ ವಾದವಾಗಿದೆ.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next