ಬೆಂಗಳೂರು:ಆದಾಯ ತೆರಿಗೆ ದಾಳಿ ವೇಳೆ ಮನೆಯಲ್ಲಿ 8.59 ಕೋಟಿ ರೂ.ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ತೀವ್ರ ವಿಚಾರಣೆಗೆ ಒಳಪಡಿಸಿದೆ. ಏತನ್ಮಧ್ಯೆ ಕೇಂದ್ರ ಸರಕಾರ ಡಿಕೆಶಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ಪರಿಷತ್ ಸದಸ್ಯ ಲಿಂಗಪ್ಪ ಆರೋಪಿಸಿದ್ದಾರೆ.
ಡಿಕೆ ಶಿವಕುಮಾರ್ ಗೆ ಖುದ್ದು ಅಮಿತ್ ಶಾ ಕರೆ ಮಾಡಿ ಹೇಳಿದ್ದೇನು?
ಅಂದು ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅವರು ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕರೆ ತಂದು ರೆಸಾರ್ಟ್ ನಲ್ಲಿ ಇರಿಸಿದ್ದರು. ಈ ರಾಜಕೀಯ ಹೈಡ್ರಾಮಾ ಕೆಲವು ದಿನಗಳ ಕಾಲ ನಡೆದಿತ್ತು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮತ್ ಶಾ ಅವರೇ ಖುದ್ದಾಗಿ ಡಿಕೆ ಶಿವಕುಮಾರ್ ಗೆ ಕರೆ ಮಾಡಿ ಮೂವರು ಶಾಸಕರನ್ನು ಗುಜರಾತ್ ಗೆ ಕಳುಹಿಸುವಂತೆ ಹೇಳಿರುವುದಾಗಿ ಶನಿವಾರ ವಿಧಾನಪರಿಷತ್ ಸದಸ್ಯ ಲಿಂಗಪ್ಪ ರಾಮನಗರದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ಆದರೆ ಡಿಕೆ ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಶಾಸಕರನ್ನು ಗುಜರಾತ್ ಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಅಂದಿನಿಂದ ಅಮಿತ್ ಮತ್ತು ಕೇಂದ್ರ ಸರಕಾರ ಡಿಕೆ ಶಿವಕುಮಾರ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.