Advertisement

ಬೆಂಗಳೂರು:  ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷಾಚರಣೆಗೆ ಒಂದೆಡೆ ಸಿದ್ಧತೆ ನಡೆದಿರುವ ಬೆನ್ನಲ್ಲೇ ಅದಕ್ಕೆ ಪೂರಕವಾಗಿ “ಸಿರಿಧಾನ್ಯಗಳ ಕಣಜ’ ಕರ್ನಾಟಕದಲ್ಲಿ ಆ ಬೆಳೆಗಳನ್ನು ಬೆಳೆಯಲು ಕೃಷಿ ವಿಜ್ಞಾನಿಗಳು ಶಿಷ್ಟಾಚಾರ ರೂಪಿಸಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ.

Advertisement

ಹೆಬ್ಟಾಳದ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಿರಿಧಾನ್ಯಗಳನ್ನು ಬೆಳೆಯುವ ಸಂಬಂಧ ಶಿಷ್ಟಾಚಾರವನ್ನು ರೂಪಿಸಿದ್ದಾರೆ. ಅದರಂತೆ “ಪ್ಯಾಕೇಜ್‌ ಆಫ್ ಪ್ರ್ಯಾಕ್ಟೀಸ್‌’ ಸಿದ್ಧಪಡಿಸಲಾಗಿದ್ದು, ವಲಯ ವಿಸ್ತರಣೆ ಮತ್ತು ಸಂಶೋಧನಾ ಕಾರ್ಯಾ­ಗಾರದಲ್ಲಿ ಅನುಮೋದನೆಗೊಂಡು ಬರುವ ಮಾರ್ಚ್‌- ಏಪ್ರಿಲ್‌ನಲ್ಲಿ ವಿಶ್ವವಿದ್ಯಾಲಯ­ದಿಂದ ಬಿಡುಗಡೆಗೊಳ್ಳಲಿದೆ.

ಈ ವ್ಯವಸ್ಥೆಯಿಂದ ಸಿರಿಧಾನ್ಯಗಳನ್ನು ಬೆಳೆಯುವ ಸಂಬಂಧ ಅಧಿಕೃತವಾಗಿ ಕ್ರಮಬದ್ಧತೆ ಬರಲಿದೆ. ಒಂದು ಸಾಲಿನಿಂದ ಮತ್ತೂಂದು ಸಾಲಿಗೆ ಎಷ್ಟು ಅಂತರ ಇರಬೇಕು? ಎಷ್ಟು ನೀರುಣಿಸಬೇಕು? ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಕಾರಗಳ ಸಿರಿಧಾನ್ಯಗಳ ಬೀಜಗಳು ಬರುತ್ತಿವೆ. ಅದರಲ್ಲಿ ಯಾವುದು ಸೂಕ್ತ? ರಾಸಾಯನಿಕ ಸಿಂಪಡಣೆ ಅಗತ್ಯವಿದೆಯೇ? ಇದ್ದರೂ ಎಷ್ಟು ಪ್ರಮಾಣದಲ್ಲಿ ಹಾಗೂ ಯಾವ ಹಂತದಲ್ಲಿ ಸಿಂಪಡಿಸಬೇಕು? ಇಂತಹ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಹೀಗೆ ವ್ಯವಸ್ಥಿತವಾಗಿ ಬೆಳೆಯುವುದರಿಂದ ರೈತರಿಗೆ ಲಾಭವೂ ಆಗಲಿದೆ.

ಏಪ್ರಿಲ್‌ನಲ್ಲಿ ಬಿಡುಗಡೆ

“ಇದುವರೆಗೆ ಸಿರಿಧಾನ್ಯಗಳನ್ನು ಬೆಳೆಯಲು ಯಾವುದೇ ಅಧಿಕೃತವಾದ ಶಿಷ್ಟಾಚಾರಗಳಿಲ್ಲ. ಮಳೆಯಾಶ್ರಿತ ಪ್ರದೇಶ ಅದರಲ್ಲೂ ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ನೀರಿನ ಲಭ್ಯತೆ ಕಡಿಮೆ ಇರುವಲ್ಲಿ ಸಾಮಾನ್ಯವಾಗಿ ರೈತರು ಈ ಬೆಳೆಗಳ ಮೊರೆಹೋಗು­ತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ­ಗಳಲ್ಲಿರುವ ಪೌಷ್ಟಿಕಾಂಶಗಳಿಂದ ಮತ್ತು ಆರೋಗ್ಯದ ಬಗ್ಗೆ ಸಮಾಜದಲ್ಲಿ ಹೆಚ್ಚಿರುವ ಜಾಗೃತಿಯಿಂದ ಬೇಡಿಕೆ ಬಂದಿದೆ. ಇದಕ್ಕೆ ಪೂರಕವಾಗಿ 2023 ಅನ್ನು “ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ವಾಗಿಯೂ ಆಚರಿಸಲಾಗುತ್ತಿದೆ. ಇದಕ್ಕೆ ಅನುಗುಣವಾಗಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು “ಪ್ಯಾಕೇಜ್‌ ಆಫ್ ಪ್ರ್ಯಾಕ್ಟೀಸ್‌’ (ಪಿಒಪಿ) ಬಿಡುಗಡೆ ಮಾಡುತ್ತಿದೆ. ಬರುವ ಏಪ್ರಿಲ್‌ನಲ್ಲಿ ಇದು ಬಿಡುಗಡೆಗೊಳ್ಳುವ ಸಾಧ್ಯತೆ ಇದೆ’ ಎಂದು ವಿಶ್ವವಿದ್ಯಾಲಯದ ಸಿರಿಧಾನ್ಯಗಳ ವಿಭಾಗದ ಸಂಶೋಧಕ ಡಾ.ಟಿ.ಇ. ನಾಗರಾಜ್‌ ತಿಳಿಸುತ್ತಾರೆ.

Advertisement

ಕ್ರಮಬದ್ಧತೆ ಲಭ್ಯ:

“ಪಿಒಪಿ ಬಿಡುಗಡೆ ಮಾಡುವುದರಿಂದ ಸಿರಿಧಾನ್ಯಗಳ ಕೃಷಿಗೆ ಒಂದು ಕ್ರಮಬದ್ಧತೆ ಬರುತ್ತದೆ. ಉದಾಹರಣೆಗೆ ಕೊರಲೆ ಬೆಳೆಗೆ ಸಾಲುಗಳ ನಡುವೆ 40-45 ಸೆಂ.ಮೀ. ಅಂತರ ಇರಬೇಕು ಎಂದು ಹೇಳುವುದು, ಕೆಲವೊಮ್ಮೆ ಬೆಳೆಗಳಿಗೆ ತುಕ್ಕುರೋಗ ಬರುತ್ತದೆ. ಆಗ ಸಿಂಪಡಣೆ ಮಾಡಬೇಕಾದ ಔಷಧಿ ಯಾವುದು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಪಿಒಪಿಯಲ್ಲಿ ಶಿಫಾರಸು ಮಾಡಲಾಗುತ್ತದೆ. ಅದರಿಂದ ಬೆಳೆಗಳ ಇಳುವರಿ ಹೆಚ್ಚುವುದರ ಜತೆಗೆ ರೈತರಿಗೂ ಅಧಿಕ ಆದಾಯ ಬರುತ್ತದೆ. ಬಿಡುಗಡೆಯಾದ ನಂತರ ಇದನ್ನು ರೈತರಿಗೆ ತಲುಪಿಸುವ ಕೆಲಸ ಮಾಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ಆರು ರಾಜ್ಯಗಳಲ್ಲಿ ಹೆಚ್ಚು :

ಸಿರಿಧಾನ್ಯಗಳಲ್ಲಿ ರಾಗಿ, ಜೋಳ, ಸಜ್ಜೆ ಸೇರಿ ಒಂಬತ್ತು ಪ್ರಕಾರಗಳು ಬರುತ್ತವೆ. ಪ್ರಮುಖವಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಛತ್ತೀಸ್‌ಗಡ ಒಳಗೊಂಡಂತೆ ಆರು ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಇದರಲ್ಲಿ ಕರ್ನಾಟಕದಲ್ಲೇ ಅತಿಹೆಚ್ಚು ಅದರಲ್ಲೂ ಚಿತ್ರದುರ್ಗ, ಕೊಪ್ಪಳ, ಬಳ್ಳಾರಿ, ಹಾವೇರಿ, ವಿಜಯಪುರ, ಬೆಳಗಾವಿಯಲ್ಲಿ ಬೆಳೆಯಲಾಗುತ್ತದೆ. ಇದರ ಸಂಸ್ಕರಣೆ ತುಂಬಾ ಕ್ಲಿಷ್ಟಕರವಾಗಿದ್ದು, ಇತ್ತೀಚೆಗೆ ರೈತ ಉತ್ಪಾದಕ ಸಂಘಗಳಿಂದ ಯಂತ್ರಗಳನ್ನು ಅಳವಡಿಸಿಕೊಂಡು ಸಂಸ್ಕರಣೆ ಜತೆಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ಮಾಡಿ ಮಾರುಕಟ್ಟೆಗೆ ಪರಿಚಯಿಸುತ್ತಿರುವುದು ಹೆಚ್ಚಾಗಿದೆ. ರಾಜ್ಯದಲ್ಲಿ ಇದರ ಮೌಲ್ಯವರ್ಧಿತ ಉತ್ಪನ್ನಗಳ ವಹಿವಾಟು ವಾರ್ಷಿಕ 250 ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ.

 

ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next