Advertisement

ವೀಲ್‌ಚೇರ್‌ನಲ್ಲಿ ಹೊಸ ಪ್ರೇಮ ಪುರಾಣ: ವಿಭಿನ್ನ ಕಾನ್ಸೆಪ್ಟ್ ನ ಸಿನಿಮಾವಿದು..

10:58 AM May 27, 2022 | Team Udayavani |

ಆತ ಕೈಕಾಲು ಚಲನೆಯಿಲ್ಲದ ವಿಕಲಚೇತನ (ರೋಮಿಯೋ) ಪ್ರೇಮಿ, ಈಕೆ ದೃಷ್ಟಿಯಿಲ್ಲ ಅಂಧ (ಜ್ಯೂಲಿಯೆಟ್‌) ಚೆಲುವೆ. ಇವರಿಬ್ಬರನ್ನು ಭಾವನಾತ್ಮಕವಾಗಿ ಸೆಳೆಯುವುದು ಪ್ರೀತಿ. ನಿಷ್ಕಲ್ಮಶ ಪ್ರೀತಿಗೆ ಸೌಂದರ್ಯ, ಅಂತಸ್ತು, ವೃತ್ತಿ, ಸಾಮಾಜಿಕ ಕಟ್ಟಳೆಗಳು ಯಾವುದೂ ಅಡ್ಡಿಯಾಗ ಲಾರದು. ಇದನ್ನೇ ತೆರೆಮೇಲೆ ಹೇಳಲು ಹೊರಟಿರುವ ಸಿನಿಮಾ “ವೀಲ್‌ಚೇರ್‌ ರೋಮಿಯೋ’.

Advertisement

ಸಿನಿಮಾದಲ್ಲಿ ಹೀರೋ ಅಂದ್ರೆ ಸಿಕ್ಸ್‌ ಪ್ಯಾಕ್‌ ಇರಬೇಕು, ಆತನಿಗೆ ಖಡಕ್‌ ಡೈಲಾಗ್ಸ್‌, ಭರ್ಜರಿ ಆ್ಯಕ್ಷನ್ಸ್‌ ಇರಬೇಕು, ಇನ್ನು ಹೀರೋಯಿನ್‌ಗೆ ಗ್ಲಾಮರಸ್‌ ಲುಕ್‌, ಸಿನಿಮಾದಲ್ಲಿ ಒಂದಾದ್ರೂ ಐಟಂ ಸಾಂಗ್‌, ಫಾರೀನ್‌ ಲೊಕೇಶನ್‌ ಇರಬೇಕು ಅನ್ನೋ ಸಿದ್ಧಸೂತ್ರಗಳನ್ನು ಬದಿಗಿಟ್ಟು ಮನರಂಜಿಸಲು ಬರುತ್ತಿರುವ “ವೀಲ್‌ಚೇರ್‌ ರೋಮಿಯೋ’ ಹೊಡಿ-ಬಡಿ ಸಿನಿಮಾಗಳ ಹಾವಳಿ ನಡುವೆ ನವಿರಾಗಿ ಸಿನಿಪ್ರೇಮಿಗಳ ಮನಮುಟ್ಟುವ ಸಿನಿಮಾ ಎಂಬುದು ಚಿತ್ರತಂಡದ ಮಾತು.

ಈಗಾಗಲೇ ಬಿಡುಗಡೆಯಾಗಿರುವ “ವೀಲ್‌ ಚೇರ್‌ ರೋಮಿಯೋ’ ಸಿನಿಮಾದ ಪೋಸ್ಟರ್‌, ಟೀಸರ್‌, ಟ್ರೇಲರ್‌ ಮತ್ತು ಹಾಡುಗಳಲ್ಲಿ ಸಿನಿಮಾದಲ್ಲಿ ಹೇಳಲು ಹೊರಟಿರುವ ವಿಷಯದ ಸಣ್ಣ ಎಳೆಯನ್ನು ಬಿಟ್ಟುಕೊಟ್ಟಿರುವ ಚಿತ್ರತಂಡ, ಅದಕ್ಕೆ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ:24 ಗಂಟೆಯಲ್ಲಿ ನಟಿಯ ಹತ್ಯೆ ಪ್ರಕರಣ ಭೇದಿಸಿದ ಭದ್ರತಾ ಪಡೆ: ನಾಲ್ವರು ಲಷ್ಕರ್ ಉಗ್ರರ ಹತ್ಯೆ

ಇನ್ನು ಸಿನಿಮಾದ ಕಂಟೆಂಟ್‌ ಬಗ್ಗೆ ಕೂಡ ಸಿನಿರಂಗದ ಅನೇಕರು ಪ್ರಶಂಸೆಯ ಮಾತುಗಳನ್ನಾಡುತ್ತಿದ್ದಾರೆ. ಹೀಗಾಗಿ “ವೀಲ್‌ಚೇರ್‌ ರೋಮಿಯೋ’ ಥಿಯೇಟರ್‌ನಲ್ಲೂ ಪ್ರೇಕ್ಷಕರ ಗಮನ ಸೆಳೆದು, ಮನ ಮುಟ್ಟಲಿದೆ ಎಂಬುದು ಚಿತ್ರತಂಡದ ವಿಶ್ವಾಸದ ಮಾತು.

Advertisement

“ನಮ್ಮ ನಡುವೆಯೇ ನಡೆಯುವ ಸೂಕ್ಷ್ಮ ಮತ್ತು ಗಂಭೀರ ವಿಷಯ ವನ್ನು ಇಟ್ಟುಕೊಂಡು ಅದನ್ನು ಹ್ಯೂಮರಸ್ಸಾಗಿ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದೇವೆ. ಕಣ್ಣು ಕಾಣದ ವೇಶ್ಯೆ ಮತ್ತು ಸದಾ ವೀಲ್‌ ಚೇರ್‌ ಮೇಲೆ ಕುಳಿತಿರುವ ಹುಡುಗನ ನಡುವಿನ ಪ್ರೀತಿಯ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಜೊತೆಗೆ ತಂದೆ-ಮಗನ ಬಾಂಧವ್ಯದ ಭಾವನಾತ್ಮಕ ಎಳೆ ಸಿನಿಮಾದಲ್ಲಿದೆ. ಇದೊಂದು ಅಪ್ಪಟ ಲವ್‌ಸ್ಟೋರಿ ಸಿನಿಮಾ. ಹಾಗಂತ ಲವ್‌ಸ್ಟೋರಿ ಹೆಸರಿನಲ್ಲಿ ಬೇರೇನನ್ನೂ ಸಿನಿಮಾದಲ್ಲಿ ತೋರಿಸಿಲ್ಲ. ಇಡೀ ಕುಟುಂಬ ಕುಳಿತು ನೋಡುವಂತಹ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ನಟರಾಜ್‌.

ಇನ್ನು “ವೀಲ್‌ಚೇರ್‌ ರೋಮಿಯೋ’ ಸಿನಿಮಾದಲ್ಲಿ ನಾಯಕನಾಗಿ ರಾಮ್‌ ಚೇತನ್‌, ನಾಯಕಿಯಾಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ರಂಗಾಯಣ ರಘು, ತಬಲ ನಾಣಿ, ಗಿರೀಶ್‌ ಶಿವಣ್ಣ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಅಗಸ್ತ್ಯ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ವೆಂಕಟಾಚಲಯ್ಯ ನಿರ್ಮಿಸಿರುವ “ವೀಲ್‌ಚೇರ್‌ ರೋಮಿಯೋ’ ಸಿನಿಮಾದ ಹಾಡುಗಳಿಗೆ ಬಿ. ಜೆ ಭರತ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್‌, ಜಯಂತ್‌ ಕಾಯ್ಕಿಣಿ ಸಾಹಿತ್ಯವಿದ್ದು, ಗುರುಕಶ್ಯಪ್‌ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next