ಭಾರತ ಸೇರಿದಂತೆ ವಿಶ್ವದಾದ್ಯಂತ ಇಂದು ವಾಟ್ಸಾಪ್ ಎಂಬುದು ಬಹಳ ಜನಪ್ರಿಯ ಅಪ್ಲಿಕೇಶನ್. 2009 ರಲ್ಲಿ ಅಮೆರಿಕದ ಬ್ರಯಾನ್ ಆ್ಯಕ್ಟನ್ ಮತ್ತು ಜಾನ್ ಕೌಮ್ ಎಂಬಿಬ್ಬರು ಈ ಅದ್ಬುತ ಮೆಸೆಂಜಿಂಗ್ ಆ್ಯಪ್ ಅನ್ನು ಅನ್ವೇಶಿಸಿದರು. ನಂತರದ ವರ್ಷಗಳಲ್ಲಿ ಈ ಆ್ಯಪ್ ಕಂಡ ಅಭಿವೃದ್ಧಿ ಊಹೆಗೂ ನಿಲುಕದ್ದು.
ಈ ಅಭೂತಪೂರ್ವ ಬೆಳವಣಿಗೆಯನ್ನು ಕಂಡು ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ 2014ರಲ್ಲಿ 19.3 ಬಿಲಿಯನ್ ಅಮೆರಿಕ ಡಾಲರ್ ನೀಡಿ ವಾಟ್ಸಾಪ್ ಅನ್ನು ಕೊಂಡುಕೊಂಡರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೇ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಫೇಸ್ ಬುಕ್ ಇಂಕ್ ಒಡೆತನದ ವಾಟ್ಸಾಪ್ 2020ರಲ್ಲಿ ಬಹಳ ಕೆಟ್ಟ ಕಾರಣಗಳಿಗಾಗಿ ಸುದ್ದಿಯಾಗುತ್ತಿದೆ.
ಹೌದು ! ಕಳೆದೊಂದು ತಿಂಗಳಿಂದ ‘ವಾಟ್ಸಾಪ್ ಓಟಿಪಿ ಸ್ಕ್ಯಾಮ್’ ಭಾರತ ಸೇರಿದಂತೆ ವಿಶ್ವದೆಲ್ಲೆಡೆ ಸುದ್ದಿಮಾಡುತ್ತಿದೆ. ಬಳಕೆದಾರರ ಡೇಟಾ ಸುರಕ್ಷತೆಗಾಗಿ ಅತೀ ಹೆಚ್ಚು ಮಹತ್ವ ನೀಡಿದರೂ ಅದೇಗೆ ಹ್ಯಾಕರ್ ಗಳು ಸುಲಭವಾಗಿ ವಾಟ್ಸಾಪ್ ಪ್ರವೇಶಿಸುವಂತಾಯಿತು ? ಮೆಸೇಂಜಿಂಗ್ ಆ್ಯಪ್ ಮೇಲೆಯೇ ಅವರ ದೃಷ್ಟಿ ಬಿದ್ದಿದ್ದೇಕೆ ? ಇದರಿಂದ ವಾಟ್ಸಪ್ ಬಳಸುವವರು ಎದುರಿಸುವ ಸಮಸ್ಯೆಗಳಾವುವು ? ಹ್ಯಾಕ್ ನಿಂದ ಪಾರಾಗುವುದು ಹೇಗೆ ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ವಾಟ್ಸಾಪ್ ಪ್ರೈವಸಿ: ವಾಟ್ಸಾಪ್ ಸಂಸ್ಥೆ ಬಳಕೆದಾರರ ಪ್ರೈವೆಸಿ ಅಥವಾ ಖಾಸಗಿತನದ ಸುರಕ್ಷತೆಗೆ ಬಹಳ ಮಹತ್ವ ನೀಡಿದೆ. ಈ ಸಂಸ್ಥೆಯ ಧ್ಯೇಯವೇ ಸುಲಭವಾಗಿ ಮತ್ತು ಸುರಕ್ಷಿತವಾಗಿ ಜಗತ್ತನ್ನು ಬೆಸೆಯುವುದು. ನೀವು ವಾಟ್ಸಾಪ್ ಮೂಲಕ ಸ್ನೇಹಿತರಿಗೆ, ಬಂಧುಗಳಿಗೆ, ವಾಣಿಜ್ಯ ಉದ್ದೇಶಗಳಿಗಾಗಿ ಕಳಿಸುವ ಸಂದೇಶ, ವಿಡಿಯೋ, ಚಿತ್ರ ಸೇರಿದಂತೆ ಪ್ರತಿಯೊಂದು ಕೂಡ ಬಹಳ ಭದ್ರತೆಗೆ ಒಳಪಟ್ಟಿರುತ್ತದೆ. ಸ್ವತಃ ವಾಟ್ಸಾಪ್ ಸಂಸ್ಥೆಗೂ ಕೂಡ ನೀವೇನು ಸಂದೇಶ ಕಳುಹಿಸಿದ್ದೀರಿ ಎಂಬುದನ್ನು ಗಮನಿಸಲು ಅನುಮತಿಯಿರುವುದಿಲ್ಲ. ಅಂದರೇ ವಾಟ್ಸಾಪ್ ಮೂಲಕ ಕಳುಹಿಸುವ ಎಲ್ಲಾ ವಿಚಾರಗಳು “ ಎಂಡ್ ಟು ಎಂಡ್ ಎನ್ ಕ್ರಿಪ್ಟೆಡ್” ಗೆ ( End to End Encrypted – ಯಾವುದೇ ಕೋಡ್ ಗಳನ್ನು ಡಿಕೋಡ್ ಮಾಡಲಾಗುವುದಿಲ್ಲ) ಒಳಪಟ್ಟಿರುತ್ತದೆ. ಹೀಗಾಗಿ ನೀವು ಮಾಡುವ ಎಲ್ಲಾ ವಿಡಿಯೋ ಕರೆಗಳು, ಚಾಟ್ ಗಳು ನಿಮ್ಮಲ್ಲೆ ಇರುವುದು.
ಗಮನಿಸಬೇಕಾದ ಅಂಶವೆಂದರೇ ನಿಮ್ಮ ವಾಟ್ಸಾಪ್ ನಲ್ಲಿರುವ ಪ್ರತಿಯೊದು ಡೇಟಾಗಳು ಕೂಡ ನಿಮ್ಮ ಮೊಬೈಲ್ ಸ್ಟೋರೇಜ್ ನಲ್ಲಿಯೇ ಶೇಖರಣೆಯಾಗಿರುತ್ತದೆ. ಡೇಟಾ ಸುರಕ್ಷತೆಗಾಗಿಯೇ ವಾಟ್ಸಾಪ್ ನಲ್ಲಿ ಇದುವರೆಗೂ ಜಾಹೀರಾತು ಕಾಣಿಸಿಕೊಂಡಿಲ್ಲ. ಒಂದು ವೇಳೆ ವಾಟ್ಸಾಪ್ ನಲ್ಲಿ ಆ್ಯಡ್ ಗಳು ಇರುತ್ತಿದ್ದರೇ ನಿಮ್ಮ ಕೆಲವೊಂದು ಮಾಹಿತಿಗಳನ್ನು ಜಾಹೀರಾತು ಸಂಸ್ಥೆಗಳಿಗೆ ನೀಡುವ ಅನಿವಾರ್ಯತೆ ಗೆ ವಾಟ್ಸಾಪ್ ಸಂಸ್ಥೆ ಸಿಲುಕುತ್ತಿತ್ತು.
ಪ್ರೈವಸಿಗೆ ಆದ್ಯತೆ ನೀಡಿರುವ ವಾಟ್ಸಾಪ್ ಈಗಾಗಲೇ ಗ್ರೂಪ್ ಪ್ರೈವೆಸಿ ಸೆಟ್ಟಿಂಗ್ಸ್, ಟು ಸ್ಟೆಪ್ ವೇರಿಫಿಕೇಶನ್, ಲಾಕ್ ಯುವರ್ ವಾಟ್ಸಾಪ್, ರೀಡ್ ರಿಸಿಪ್ಟ್ ( ಬ್ಲೂ-ಟಿಕ್), ಲಾಸ್ಟ್ ಸೀನ್, ಪ್ರೊಫೈಲ್ ಫೋಟೋ ಪ್ರೈವೆಸಿ, ಸ್ಟೇಟಸ್ ಪ್ರೈವಸಿ ಮುಂತಾದವನ್ನು ಜಾರಿಗೆ ತಂದಿದೆ. ಇಷ್ಟೆಲ್ಲಾ ಭದ್ರತೆಗಳಿದ್ದರೂ ವಾಟ್ಸಾಪ್ ಓಟಿಪಿ ಸ್ಕ್ಯಾಮ್ ಎಂಬುದು ಹೇಗೆ ಆರಂಭವಾಯಿತು. ?
ಇಲ್ಲಿದೆ ಉತ್ತರ – ಈ ಸ್ಕ್ಯಾಮ್ ಅನ್ನು ತಂತ್ರಜ್ಞಾನ ತಿಳಿದಿರುವ ಪ್ರತಿಯೊಬ್ಬರು ಮಾಡಬಹುದು. ಪ್ರಮುಖವಾಗಿ ಹ್ಯಾಕರ್ ಗಳು ಇತರರ ಅಕೌಂಟ್ ಗಳನ್ನು ಅನಧಿಕೃತವಾಗಿ ಪ್ರವೇಶಿಸಲು OTP (one time password) ಯನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಮೊದಲಿಗೆ ಅಪರಿಚಿತ ನಂಬರ್ ಅಥವಾ ಪರಿಚಿತ ನಂಬರ್ (ನಿಮ್ಮ ಸ್ನೇಹಿತರ ವಾಟ್ಸಾಪ್ ಅಕೌಂಟ್ ಅನ್ನು ಹ್ಯಾಕ್ ಮಾಡಿರುವ ಸಾಧ್ಯತೆಯಿದೆ) ಮೂಲಕವೇ ಸಂದೇಶ ಕಳುಹಿಸುವ ಹ್ಯಾಕರ್ ಗಳು, ವೇರಿಫಿಕೇಶನ್ ಸಂದರ್ಭದಲ್ಲಿ ಅಚಾನಕ್ಕಾಗಿ ನಿಮ್ಮ ನಂಬರ್ ಟೈಪಿಸಿದ್ದರಿಂದ ಓಟಿಪಿ ಕೂಡ ನಿಮ್ಮ ನಂಬರ್ ಗೆ ಬಂದಿದೆ. ತುರ್ತಾಗಿ ಅದನ್ನು ಕಳುಹಿಸಿಕೊಡುವಂತೆ ಭಿನ್ನವಿಸಿಕೊಳ್ಳುತ್ತಾರೆ.
ಅರೆಕ್ಷಣವೂ ಅಲೋಚಿಸದೇ ನೀವೇನಾದರೂ ಓಟಿಪಿ ಕಳುಹಿಸಿದರೆ ನಿಮ್ಮ ವಾಟ್ಸಾಪ್ ಖಾತೆ ಅವರ ಸ್ವಾಧಿನಕ್ಕೆ ಹೋಗುತ್ತದೆ. ಮಾತ್ರವಲ್ಲದೆ ಅಕೌಂಟ್ ಲಾಕ್ ಆಗುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಓಟಿಪಿಯು ಸಿಕ್ಕಿದ ಕೂಡಲೇ ಹ್ಯಾಕರ್ ಅದನ್ನು ದುರ್ಬಳಕೆ ಮಾಡಿಕೊಂಡು ನಿಮ್ಮೆಲ್ಲಾ ಖಾಸಗಿ ಮಾಹಿತಿಯನ್ನು ಡೌನ್ ಲೋಡ್ ಮಾಡಿಕೊಳ್ಳುತ್ತಾನೆ. ಮಾತ್ರವಲ್ಲದೆ ಓಟಿಪಿ ಟ್ರಿಕ್ ಬಳಸಿಕೊಂಡು ನಿಮ್ಮ ನಂಬರ್ ನಿಂದ, ನಿಮ್ಮ ಸ್ನೇಹಿತರಿಗೂ ಮೆಸೇಜ್ ಕಳುಹಿಸಿ ಸ್ಕ್ಯಾಮ್ ಮಾಡಲು ಆರಂಭಿಸುತ್ತಾರೆ. ಹಣ ವರ್ಗಾವಣೆ ಮಾಡುವಂತೆ ಕೋರಿಕೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮಾತ್ರವಲ್ಲದೆ ಪೋಟೋಗಳು, ವಿಡಿಯೋಗಳು, ಕಾಂಟ್ಯಾಕ್ಟ್ ಗಳು , ಪಿನ್ ನಂಬರ್ ಗಳು ಎಲ್ಲವೂ ಸ್ಕ್ಯಾಮರ್ ಗಳ ಪಾಲಾಗುತ್ತದೆ.
ಎಚ್ಚರ ವಹಿಸಿ: ಪ್ರಸ್ತುತ ವಾಟ್ಸಾಪ್ ನಿಯಮದ ಪ್ರಕಾರ ಒಂದು ವಾಟ್ಸಾಪ್ ನಂಬರ್ ನಿಂದ, ಒಂದೇ ಡಿವೈಸ್ ನಲ್ಲಿ ಮಾತ್ರ ಲಾಗಿನ್ ಆಗಬಹುದು. (ವೆಬ್ ಹೊರತುಪಡಿಸಿ) ಹೀಗಾಗಿ ಸ್ಕ್ಯಾಮರ್ ಗಳಿಗೆ ಓಟಿಪಿ ಕಳುಹಿಸಿದ ತಕ್ಷಣ ನಿಮ್ಮ ಡಿವೈಸ್ ಮೊದಲು ಲಾಕ್ ಆಗುತ್ತದೆ.
ಇದರಿಂದ ಪಾರಾಗುವ ಬಗೆ ಹೇಗೆ: ಪ್ರಮುಖವಾಗಿ ನೀವೇ ಸ್ವತಃ ವೇರಿಫಿಕೇಶನ್ ಮಾಡದ ಹೊರತು, ವಾಟ್ಸಾಪ್ ನಿಮಗೆ ಓಟಿಪಿ ಕಳುಹಿಸುವುದಿಲ್ಲ ಎಂಬ ಅಂಶವನ್ನು ನೆನಪಿನಲ್ಲಿಡಬೇಕು. ಒಂದು ವೇಳೆ ಹ್ಯಾಕರ್ ಗಳು ಅಥವಾ ನಿಮ್ಮ ಸ್ನೇಹಿತರೇ ಓಟಿಪಿ ಸಂಖ್ಯೆಯನ್ನು ಕೇಳಿದರೂ, ಅದನ್ನು ನಿರ್ಲಕ್ಷಿಸಿ, ಅದಕ್ಕೆ ಪ್ರತಿಕ್ರಿಯೆ ನೀಡದಿರುವುದು ಸೂಕ್ತ. ಒಟಿಪಿ ಎನ್ನುವಂಥದ್ದು ಅತ್ಯಂತ ಗೌಪ್ಯವಾದ ಮಾಹಿತಿ. ಇನ್ನೊಬ್ಬರಿಗೆ ಅದನ್ನು ಹಂಚದಿರುವುದೇ, ಅತ್ಯಮೂಲ್ಯ ಮಾಹಿತಿಯ ಸೋರಿಕೆಯಾಗದಂತೆ ನಾವು ಮಾಡಬಹುದಾದ ಪ್ರಮುಖ ಕಾರ್ಯ.
ಇದರ ಹೊರತಾಗಿ ವಾಟ್ಸಾಪ್ ನಲ್ಲಿ ‘To step verification’ ಎಂಬ ಫೀಚರ್ ಅನ್ನು ಕಾಣಬಹುದು. ಅಕೌಂಟ್ ಸೆಟ್ಟಿಂಗ್ಸ್ ನಲ್ಲಿ ಈ ಆಯ್ಕೆಯಿದ್ದು ಪಿನ್ ನಂಬರ್ ಹಾಗೂ ಇಮೇಲ್ ವಿಳಾಸವನ್ನು ನಮೂದಿಸಿ, ಆ ಮೂಲಕ ಹ್ಯಾಕರ್ ಗಳು OTP ಪಡೆದರೂ ಲಾಗಿನ್ ಆಗಲು ಅವಕಾಶವಿರದಂತೆ ಮಾಡಬಹುದು.
-ಮಿಥುನ್ ಮೊಗೇರ