Advertisement

ವಾಟ್ಸಾಪ್‌ ಕತೆ : ಪರಿಸರದ ಪ್ರಭಾವ

06:46 PM Nov 09, 2019 | mahesh |

ರೈತನೊಬ್ಬ ನಾಯಿಯನ್ನು ಮುದ್ದಿನಿಂದ ಸಾಕಿದ್ದ. ನಾಯಿಯಾದರೋ ತುಂಬ ದುಬಾರಿ ಜಾತಿಯದ್ದು. ಅದಕ್ಕೆ ನಯ-ವಿನಯ ಕಲಿಸಿದ್ದ. ಮನೆಗೆ ಬಂದ ಅತಿಥಿಗಳಿಗೆ ಪರಿಚಯಿಸುತ್ತಿದ್ದ. ನಾಯಿ ಪ್ರೀತಿಯಿಂದ ಬಾಲ ಅಲ್ಲಾಡಿಸಿ ತನ್ನ ಭಾಷೆಯಲ್ಲೇ ಎಲ್ಲರ ಕ್ಷೇಮ ವಿಚಾರಿಸುತ್ತಿತ್ತು.

Advertisement

ರೈತನಿಗೆ ಆರ್ಥಿಕ ಸವಾಲು ಎದುರಾಯಿತು. ಬಿತ್ತಿದ ಬೆಳೆ ಫ‌ಲ ಕೊಡಲಿಲ್ಲ. ತನ್ನ ಹೊಟ್ಟೆ ಹೊರೆಯುವುದೇ ಕಷ್ಟವಿರುವಾಗ ನಾಯಿಯನ್ನು ಸಾಕುವುದು ಹೇಗೆ? ಉತ್ತಮ ಜಾತಿಯ ತಳಿ ಬೇರೆ.

ರೈತ ಒಲ್ಲದ ಮನಸ್ಸಿನಿಂದ ಶ್ರೀಮಂತನೊಬ್ಬನಿಗೆ ನಾಯಿಯನ್ನು ಕೊಟ್ಟ. ಶ್ರೀಮಂತ ಅದೇನೋ ಸ್ವಲ್ಪ ದುಡ್ಡು ಕೊಟ್ಟಿರಬಹುದು. ನಾಯಿಗೆ ತಾನು ತನ್ನ ಯಜಮಾನನನ್ನು ಬಿಟ್ಟುಹೋಗುತ್ತಿರುವೆ ಎಂದು ಅರಿವು ಇರಲಿಲ್ಲ. ಶ್ರೀಮಂತ ಆಹಾರ ಕೊಟ್ಟಿದ್ದರಿಂದ ಅವನನ್ನು ಅನುಸರಿಸಿತು.

ಇದಾಗಿ ಕೆಲವು ದಿನಗಳ ಬಳಿಕ ರೈತನಿಗೆ ನಾಯಿಯನ್ನು ನೋಡುವ ಆಸೆಯಾಯಿತು. ಅವನು ಶ್ರೀಮಂತನ ಮನೆಯ ಕಡೆಗೆ ಹೋದ. ಗೇಟಿನ ಬಳಿ ನಿಂತು ವಾಚ್‌ಮನ್‌ನ್ನು ವಿಚಾರಿಸಿದ. ವಾಚ್‌ಮನ್‌ ಗೇಟಿನ ಮುಂದೆ ತೂಗುಹಾಕಿರುವ ಫ‌ಲಕವನ್ನು ತೋರಿಸಿದ.

ಓದಲು ಬಾರದ ರೈತ ಅದೇನೆಂದು ವಾಚ್‌ಮನ್‌ನನ್ನೇ ಕೇಳಿದ. ವಾಚ್‌ಮನ್‌ ಫ‌ಲಕದ ಮೇಲೆ ಕೋಲನ್ನು ತೋರಿಸುತ್ತ ಹೇಳಿದ, “ನಾಯಿ ಇದೆ, ಎಚ್ಚರಿಕೆ’

Advertisement

ಮೈಲಾರಪ್ಪ ಬೂದಿಹಾಳ

ಟಿಫಿನ್‌ ಬಾಕ್ಸ್‌
ಆಗಲೇ ಸ್ಕೂಲ್‌ ಪ್ರಾರಂಭವಾಗಿ ಕೆಲವು ದಿನಗಳು ಉರುಳಿ ಹೋಗಿದ್ದವು. ಆರೋಗ್ಯ ಚೆನ್ನಾಗಿರದ ಕಾರಣ ಅಶ್ವಿ‌ನ್‌ ಸ್ಕೂಲಿಗೆ ಹೋಗಿರಲಿಲ್ಲ. ಅಂದು ಸ್ಕೂಲಿಗೆ ಬಂದಾಗ ಎಲ್ಲ ಹೊಸ ಮುಖಗಳು. ಅವನಿಗೆ ಸ್ವಲ್ಪ ಗಾಬರಿಯೂ ಆಯಿತು. ಮಧ್ಯಾಹ್ನ ಟಿಫಿನ್‌ ತಿನ್ನಲೆಂದು ಕುಳಿತುಕೊಳ್ಳುವಷ್ಟರಲ್ಲಿ ಅವನದೇ ಕ್ಲಾಸಿನ ಹುಡುಗನೊಬ್ಬ ಬಂದು ಟಿಫಿನ್‌ ಕಸಿದುಕೊಂಡು ತಿನ್ನತೊಡಗಿದ.

ಇದನ್ನು ಕಂಡು ಇತರ ವಿದ್ಯಾರ್ಥಿಗಳಿಗೂ ಬೇಸರವಾಯಿತು. ದೂರು ಕೊಡಬಹುದೆಂದು ತಿಳಿಯದ ಅವರು ಮುಖ ಮುಖ ನೋಡಿ ಸುಮ್ಮನೆ ಕುಳಿತುಕೊಂಡರು. ಒಂದೆರಡು ದಿನ ಇದರ ಪುನರಾವರ್ತನೆಯಾದಾಗ, ಮಕ್ಕಳು ತಾವೇನು ಮಾಡಬಹುದೆಂದು ತಲೆಕೆಡಿಸಿಕೊಂಡರು.

ಆ ದಿನವೂ ಆ ವಿದ್ಯಾರ್ಥಿ ಟಿಫಿನ್‌ ಕಸಿದುಕೊಳ್ಳುವಷ್ಟರಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಟಿಫಿನ್‌ಗಳನ್ನು ತೆಗೆದುಕೊಂಡು ಆ ವಿದ್ಯಾರ್ಥಿಯ ಎದುರು ಇಟ್ಟು ತಾವು ಸುಮ್ಮನೆ ಕುಳಿತು ಕೊಂಡರು. ಅವನಿಗೆ ತನ್ನ ತಪ್ಪಿನ ಅರಿವಾಗಿ ಅವರು ಅಶ್ವಿ‌ನ್‌ಗೆ ಟಿಫಿನ್‌ ಹಿಂತಿರುಗಿಸಿದ.

ಕೆ. ಎನ್‌. ಶೆಟ್ಟಿ

ತುಲಸೀಕಟ್ಟೆ
ಹಬ್ಬದ ದಿನ ಮನೆಮಂದಿ ಎಲ್ಲ ತುಲಸೀಕಟ್ಟೆಯಲ್ಲಿ ದೀಪದ ಹಣತೆ ಯನ್ನು ಹಚ್ಚಿ ನಮಸ್ಕರಿಸಿ ಹೊರಟು ಹೋದ ಮೇಲೆ ಜಗಲಿಯ ಮೂಲೆಯಲ್ಲಿದ್ದ ನಕ್ಷತ್ರಕಡ್ಡಿಗೆ ಹಣತೆಯ ಮೇಲೆ ಯಾಕೋ ಸ್ವಲ್ಪ ಮತ್ಸರ ಉಂಟಾಯಿತು. ಅಲ್ಲಿಂದಲೇ ಅದು ಕೂಗಿ ಹೇಳಿತು, “”ಜಂಭ ಪಡಬೇಡ, ಸ್ವಲ್ಪ ತಡಿ, ಕತ್ತಲಾಗಲಿ. ಮಕ್ಕಳು ಬರಲಿ, ತೋರಿಸುತ್ತೇನೆ ನನ್ನ ಕರಾಮತ್ತನ್ನು!”

ಹಣತೆ ಮಾತನಾಡಲಿಲ್ಲ. ಕೆಲವು ಕ್ಷಣಗಳಲ್ಲಿ ನಕ್ಷತ್ರ ಕಡ್ಡಿ ಸಂಪೂರ್ಣ ಉರಿದು ಹೋಯಿತು. ಕೆಂಡವಾಗಿ ಕರಕಲಾಯಿತು. ಮೂಲೆ ಸೇರಿತು. ಹಣತೆ ಮಾತನಾಡಲಿಲ್ಲ.
ತನ್ನ ಪಾಡಿಗೆ ತಾನು ಸಣ್ಣನೆ ಉರಿಯುತ್ತಲೇ ಮನೆ-ಮನಗಳನ್ನು ಬೆಳಗುವ ಕಾಯಕವನ್ನು ಮುಂದುವರಿಸಿತು.

ಉದಯಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next