Advertisement

ವಾಟ್ಸ್‌ಆ್ಯಪ್‌ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚನೆ

12:37 AM Nov 09, 2021 | Team Udayavani |

ಮಂಗಳೂರು: ವಾಟ್ಸ್‌ಆ್ಯಪ್‌ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚನೆ ಮಾಡುವವರ ಬಗ್ಗೆ ಸೈಬರ್‌ ಭದ್ರತಾ ತಜ್ಞರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

ವಾಟ್ಸ್‌ಆ್ಯಪ್‌ ನಕಲಿ ಪ್ರೊಫೈಲ್‌ ಮೂಲಕ ನಗರದ ಓರ್ವರಿಗೆ ತುರ್ತು ಹಣಕ್ಕಾಗಿ ಕೋರಿಕೆ ಬಂದಿದ್ದು ಸಂದೇಹಗೊಂಡ ಅವರು ಸೈಬರ್‌ ತಜ್ಞರ ಮೂಲಕ ಪರಿಶೀಲಿಸಿದಾಗ ಅದು ವಂಚನೆ ಪ್ರಯತ್ನ ಎಂಬುದು ದೃಢಪಟ್ಟಿದೆ.

ನಮ್ಮ ಗೆಳೆಯರು ಅಥವಾ ಕುಟುಂಬ ಸದಸ್ಯರ ಫೋಟೋ (ಡಿಪಿ) ಸಂಗ್ರಹಿಸಿ ಅದನ್ನು ಹೊಸದೊಂದು ನಂಬರ್‌ಗೆ ಅಳವಡಿಸುತ್ತಾರೆ. ಅನಂತರ ಆ ನಕಲಿ ಪ್ರೊಫೈಲ್‌ನಲ್ಲಿ ನಮಗೆ, ನಮ್ಮ ಗೆಳೆಯರು, ಕುಟುಂಬಿಕರಿಗೆ ಸಂದೇಶ ಕಳುಹಿಸಿ “ನಾನು ನಿಮ್ಮ ಗೆಳೆಯ… ಇದು ನನ್ನ ಹೊಸ ವಾಟ್ಸ್‌ಆ್ಯಪ್‌ ನಂಬರ್‌’ ಎಂದು ನಂಬಿಸುತ್ತಾರೆ.

ಪ್ರೊಫೈಲ್‌ನಲ್ಲಿ ಗೆಳೆಯನ ಫೋಟೋ ಇರುವುದರಿಂದ ನಂಬುವ ಸಾಧ್ಯತೆ ಹೆಚ್ಚು. ಕೆಲವು ಸಮಯದ ಬಳಿಕ ನಮ್ಮ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಸಂದೇಶ ಮಾಡಿ, “ತುರ್ತಾಗಿ ಹಣದ ಅವಶ್ಯಕತೆ ಇದ್ದು ಕೂಡಲೇ ಕಳುಹಿಸಿಕೊಡಿ’ ಎಂದು ಮನವಿ ಮಾಡುತ್ತಾನೆ. ಇದನ್ನು ನಂಬಿ ಸಂಖ್ಯೆಗೆ ಕರೆ ಮಾಡಿ ವಿಚಾರಿಸದೆ ಹಣ ಕಳುಹಿಸಿದರೆ ವಂಚನೆಗೆ ಒಳಗಾಗುತ್ತೇವೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು.

ಒಟಿಪಿ ಕದಿಯುತ್ತಾರೆ
ಇನ್ನೊಂದು ರೀತಿಯ ವಂಚನೆ ಜಾಲವೂ ಸಕ್ರಿಯವಾಗಿದ್ದು ಅದು ನಮ್ಮ ಮೊಬೈಲ್‌ನಿಂದ ಒಟಿಪಿಯನ್ನೇ ಕದ್ದು ಆ ಮೂಲಕ ನಮ್ಮ ವಾಟ್ಸ್‌ಆ್ಯಪ್‌ ಅನ್ನೇ ಅವರ ಮೊಬೈಲ್‌ಗೆ ವರ್ಗಾಯಿಸಿಕೊಳ್ಳುತ್ತದೆ. ನಮ್ಮ ವಾಟ್ಸ್‌ಆ್ಯಪ್‌ ಸಂಖ್ಯೆ ಗೊತ್ತಿರುವವರ ಬಳಿ ನಮ್ಮ ಮೊಬೈಲನ್ನು ಇಟ್ಟಿದ್ದರೆ ಇದು ಸಾಧ್ಯವಾಗುತ್ತದೆ. ಸೈಬರ್‌ ಭದ್ರತಾ ತಜ್ಞರ ಪ್ರಕಾರ ವಂಚನೆಯ ವಿಧಾನ ಹೀಗಿದೆ: ನಮ್ಮ ಪಕ್ಕದಲ್ಲಿ ಇರಬಹುದಾದ ವ್ಯಕ್ತಿ ಆತನ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಅನ್ನು ಹೊಸದಾಗಿ ಇನ್‌ಸ್ಟಾಲ್‌ ಮಾಡುವಾಗ ನಮ್ಮ ವಾಟ್ಸ್‌ಆ್ಯಪ್‌ ಸಂಖ್ಯೆ ನೀಡುತ್ತಾನೆ. ಇನ್‌ಸ್ಟಾಲ್‌ ಆಗುವ ಮೊದಲು ಒಟಿಪಿಯನ್ನು ಕೇಳಲಾಗುತ್ತದೆ. ಆ ಒಟಿಪಿ ನಮ್ಮ ಮೊಬೈಲ್‌ಗೆ ಬಂದಿರುತ್ತದೆ. ನಮ್ಮ ಮೊಬೈಲ್‌ ಆತನ ಎದುರು ಇದ್ದರೆ ಒಟಿಪಿ ಬರುವಾಗ ಅದು ಅವನಿಗೆ ಕಾಣಿಸುತ್ತದೆ (ಮೊಬೈಲ್‌ ಲಾಕ್‌ ತೆಗೆಯದಿದ್ದರೂ ಒಟಿಪಿ ಕಾಣಿಸುತ್ತದೆ). ಆ ಒಟಿಪಿ ಆಧಾರದಲ್ಲಿ ನಮ್ಮ ಮೊಬೈಲ್‌ನ ಸಂಖ್ಯೆಯ ವಾಟ್ಸ್‌ಆ್ಯಪ್‌ ಅವನ ಮೊಬೈಲ್‌ನಲ್ಲಿ ಕಾರ್ಯಾಚರಿಸುತ್ತದೆ!

Advertisement

ಇದನ್ನೂ ಓದಿ:ನ.29ರಿಂದ ಡಿ.23ರವರೆಗೆ ಸಂಸತ್‌ನ ಚಳಿಗಾಲದ ಅಧಿವೇಶನ?

ಆ್ಯಪ್‌ ಡೌನ್‌ಲೋಡ್‌ನಿಂದಲೂ ಕನ್ನ
ನಮ್ಮ ಮೊಬೈಲ್‌ಗೆ ಬರುವ ಟೆಕ್ಸ್ಟ್ ಮೆಸೇಜ್‌ನ ಒಂದು ಪ್ರತಿ ಇನ್ನೊಬ್ಬರ ಮೊಬೈಲ್‌ಗ‌ೂ ಬರುವಂತಹ ಆ್ಯಪ್‌ ಇದ್ದು ಅದರ ಮೂಲಕವೂ ಭಾರೀ ವಂಚನೆ ನಡೆಯುತ್ತದೆ ಎನ್ನುತ್ತಾರೆ ಸೈಬರ್‌ ಭದ್ರತಾ ತಜ್ಞರು. ಮೊಬೈಲ್‌ಗೆ ಬರುವ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿದರೆ ನಮ್ಮ ಮೊಬೈಲ್‌ಗೆ ಬರುವ ಪ್ರತಿ ಟೆಕ್ಸ್ಟ್ ಮೆಸೇಜ್‌ ಸೈಬರ್‌ ಖದೀಮರ ಮೊಬೈಲ್‌ಗ‌ೂ ರವಾನೆಯಾಗುತ್ತದೆ. ಇದೇ ರೀತಿ ಎಲ್ಲ ರೀತಿಯ ಒಟಿಪಿ ಕೂಡ ಖದೀಮರ ಮೊಬೈಲ್‌ಗೆ ಸಿಗುತ್ತದೆ.

ಆದಷ್ಟು ಎಚ್ಚರ ವಹಿಸಿ
ಫೇಸ್‌ಬುಕ್‌ನಲ್ಲಿ ನಕಲಿ ಪ್ರೊಫೈಲ್‌ ಸೃಷ್ಟಿಸಿ ವಂಚಿಸುತ್ತಿರುವ ಪ್ರಕರಣಗಳು ಹಲವಾರು ನಡೆದಿವೆ. ಇದೀಗ ನಕಲಿ ವಾಟ್ಸ್‌ ಆ್ಯಪ್‌ ಪ್ರೊಫೈಲ್‌ ಸೃಷ್ಟಿಸಿ ವಂಚಿಸಲು ಯತ್ನಿಸಿರುವ ಎರಡು ಪ್ರಕರಣಗಳೂ ಗಮನಕ್ಕೆ ಬಂದಿವೆ. ಎಚ್ಚರಿಕೆಯ ನಡೆಯಿಂದಾಗಿ ಯಾರಿಗೂ ತೊಂದರೆಯಾಗಿಲ್ಲ. ವಂಚಕರ ಬಗ್ಗೆ ಎಚ್ಚರ ವಹಿಸಬೇಕು.
– ಡಾ| ಅನಂತ ಪ್ರಭು ಜಿ.
ಸೈಬರ್‌ ಭದ್ರತಾ ತಜ್ಞ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next