Advertisement
ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮನ ಪರಮಭಕ್ತ ಆಂಜನೇಯ ಮತ್ತು ಅವನ ವಾನರಸೇನೆ ಭಾರತದಿಂದ ಲಂಕೆಗೆ ಹೋಗಲು ಕಟ್ಟಿದ ಸೇತುವೆ ಇವತ್ತಿಗೂ ಮುರಿದು ಬಿದ್ದಿಲ್ಲ. ತ್ರೇತಾಯುಗದ ಅನಂತರ ದ್ವಾಪರ ಯುಗ ಬಂತು, ಅನಂತರ ಕಲಿಯುಗ ಬಂತು. ಪ್ರತೀ ಯುಗ ಬದಲಾಗುವಾಗ ಪ್ರಪಂಚ ಪ್ರಳಯವೂ ಆಯಿತು. ಈಗಲೂ ಆ ಸೇತುವೆ ಹಿಂದೂ ಮಹಾಸಾಗರದೊಳಗೆ ದೃಢವಾಗಿ ನಿಂತಿದೆ. ಸಾವಿರಾರು ವರ್ಷಗಳಾದರೂ, ಪ್ರಕೃತಿಯ ಹಲವು ವಿಕೋಪಗಳಿಗೆ ಎದುರಾದರೂ, ಯುಗ ಯುಗಗಳು ಕಳೆದರೂ ಭೂಮಿಯ ಮಟ್ಟದಿಂದ ಕುಸಿದು ನೀರಿನ ತಳ ಸೇರಿದೆಯೇ ಹೊರತು ಸೇತುವೆ ಮುರಿದು ಬಿದ್ದಿಲ್ಲ. ಏಕೆಂದರೆ ಅದು ತಳಪಾಯದ ತಾಕತ್ತು!
Related Articles
Advertisement
ಒಬ್ಬ ವ್ಯಕ್ತಿಯ ವಿಕಸನಕ್ಕೆ ಅವನ ತಂದೆ-ತಾಯಿ ಜತೆಗೆ ಅವನು ಬೆಳೆದು ಬಂದ ವಾತಾವರಣವೇ ತಳಪಾಯವಾಗಿರುತ್ತದೆ. ಯಾವುದೇ ಶಾಲೆಯಲ್ಲಿ ಓದಿದರೂ, ಯಾವುದೇ ಊರಿನಲ್ಲಿ ಬೆಳೆದರೂ, ಯಾವುದು ಮಾತೃಭಾಷೆಯಾಗಿದ್ದರೂ ಒಂದು ವ್ಯಕ್ತಿತ್ವ ರೂಪುಗೊಳ್ಳುವುದು ಆ ವ್ಯಕ್ತಿಯ ಮೂಲಭೂತ ಸಂಸ್ಕಾರದಿಂದ. ಕೆಲವು ಮಕ್ಕಳು ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೂ, ಉನ್ನತ ವಿದ್ಯಾಭ್ಯಾಸ ಪಡೆದಿಲ್ಲವಾದರೂ, ತಮ್ಮ ವ್ಯಕ್ತಿತ್ವಕ್ಕೆ ಕುಂದು-ಕೊರತೆ ಬಾರದಂತೆ ತಮ್ಮತನವನ್ನು ಗಟ್ಟಿ ಮಾಡಿಕೊಂಡಿರುತ್ತಾರೆ. ಜೀವನದಲ್ಲಿ ಯಾವುದೇ ಅಡಚಣೆಗಳು ಎದುರಾದರೂ, ಅತಿಯಾಗಿ ಆಕರ್ಷಣೆಗಳಿಗೆ ಒಳಗಾದರೂ ಯಾವುದಕ್ಕೂ ಬಗ್ಗದೆ, ಕೆಟ್ಟದಾರಿಗಳಲ್ಲಿ ಸಾಗದೆ ಸಕಾರಾತ್ಮಕ ನಂಬಿಕೆಗಳಿಂದ ಮುನ್ನಡೆಯುತ್ತಾರೆ. ಕೆಲವರು ಪ್ರೌಢ ವಯಸ್ಕರಾದ ಬಳಿಕ ತಮ್ಮ ತಂದೆ ತಾಯಿಯನ್ನು ದೂಷಿಸುತ್ತಾರೆ. ಅಪ್ಪ ಅಮ್ಮ ತಮ್ಮನ್ನು ಸರಿಯಾಗಿ ಬೆಳೆಸಲಿಲ್ಲ, ಸರಿಯಾಗಿ ಏನನ್ನೂ ಕಲಿಸಿಕೊಟ್ಟಿಲ್ಲ, ಸರಿಯಾದ ವಿಚಾರಗಳನ್ನು ತಮ್ಮ ತಲೆಗೆ ಹಾಕಿಲ್ಲ ಅಂತೆಲ್ಲ ಗೊಣಗುತ್ತಾರೆ. ಅಪ್ಪ-ಅಮ್ಮ ನಮ್ಮನ್ನು ಕಷ್ಟಪಟ್ಟು ವಿದ್ಯಾವಂತರನ್ನಾಗಿ ಮಾಡುವುದಕ್ಕೆ ಪ್ರಯತ್ನ ಪಟ್ಟಿರುತ್ತಾರೆ, ನಾವು ಪ್ರೌಢಾವಸ್ಥೆಗೆ ಬಂದ ಅನಂತರ ನಮ್ಮ ಬುದ್ಧಿಯನ್ನು ಬೆಳೆಸಿಕೊಳ್ಳುವುದು ನಮ್ಮ ಜವಾಬ್ದಾರಿ. ಅಪ್ಪ-ಅಮ್ಮ ಮಾಡಬೇಕಿತ್ತು, ಸಮಾಜ ಮಾಡಬೇಕಿತ್ತು, ಶಾಲಾ ಕಾಲೇಜು ಮಾಡಬೇಕಿತ್ತು ಅಂತ ಬೇರೆಯವರ ತಲೆಯ ಮೇಲೆ ತಪ್ಪನ್ನು ಹೇರುವುದು ಸರಿಯಲ್ಲ. ನಾವು ಸರಿಯಾಗಿ ಬೆಳೆದಿಲ್ಲ ಅಂದರೆ ಅದಕ್ಕೆ ನಾವೇ ಜವಾಬ್ದಾರರು. ಅಪ್ಪ- ಅಮ್ಮ ನಮ್ಮನ್ನು ಸಾವಿರ ಸಲ ತಿದ್ದಿದರೂ ನಾವು ಅವರ ಮಾತಿಗೆ ಗಮನವನ್ನೇ ಕೊಟ್ಟಿರುವುದಿಲ್ಲ. ಒಂದು ವಯಸ್ಸಿಗೆ ಬಂದ ಮೇಲೆ ನಮ್ಮ ಸುತ್ತಮುತ್ತಲಿರುವುದನ್ನು ನೋಡಿ ನಾವೇ ಕಲಿಯಬೇಕು. ಸರಿ-ತಪ್ಪು; ಸತ್ಯ-ಧರ್ಮಗಳ ಸ್ವಲ್ಪ ಜ್ಞಾನವಿದ್ದರೂ ಸಾಕು, ನಮ್ಮ ಸದೆºಳವಣಿಗೆಯ ತಳಪಾಯವನ್ನು ನಾವೇ ಹಾಕಿಕೊಳ್ಳಬಹುದು.
ಸ್ವಾಮೀಜಿಗೂ ಬೇಕು ತಳಪಾಯ: ಒಬ್ಬ ಸ್ವಾಮೀಜಿ ಯಾಗಬೇಕಾದರೂ ಅವನಿಗೆ ಅಧ್ಯಾತ್ಮದ ಆಳವಾದ ಜ್ಞಾನ, ಶರಣಾಗತಿಯ ಪರಿಪಕ್ವತೆ, ನಿಸ್ವಾರ್ಥತೆಯ ಯೋಗ್ಯತೆ ಇವೆಲ್ಲ ತಳಪಾಯವಾಗಿರಬೇಕು. ವಿಜ್ಞಾನಿಯಾಗುವವನು ಹೇಗೆ ಸಂಶೋಧನೆಯಲ್ಲಿ ನೂರು ಸಲ ಸೋತರೂ ಸತತ ಸಂಶೋಧನೆಯಿಂದ ತನ್ನ ವೈಜ್ಞಾನಿಕ ಜ್ಞಾನದ ತಳಪಾಯ ಭದ್ರಪಡಿಸಿಕೊಳ್ಳುತ್ತಾನೋ ಹಾಗೆಯೇ ಧರ್ಮಗುರುಗಳೂ. ಒಬ್ಬ ವ್ಯಕ್ತಿಯ ಫೌಂಡೇಷನ್ ಸರಿಯಾಗಿದ್ದರೆ, ಅವನು ಸಮಾಜದಲ್ಲಿ ಆಗುವ ಅವಮಾನ, ಸೋಲು, ಏರಿಳಿತ, ನಷ್ಟ ಇವುಗಳಿಗೆ ತಲೆಕೆಡಿಸಿಕೊಳ್ಳದೆ ತನ್ನತನದಲ್ಲಿ ದೃಢನಂಬಿಕೆಯಿಟ್ಟು ಎಲ್ಲವನ್ನೂ ಕಳೆದುಕೊಂಡು ರಸಾತಳದಲ್ಲಿ ಬಿದ್ದಾಗಲೂ ಕೂಡ ಮೇಲೆದ್ದು ಬರುತ್ತಾನೆ. ನಾವು ಬದುಕುವುದಕ್ಕೆ ಹೊರಗಿನಿಂದ ಗಟ್ಟಿಯಾಗಿ ಕಟ್ಟಿದ ಮನೆ ಸಾಕಾಗುವುದಿಲ್ಲ. ಮನಸ್ಸಿನೊಳಗೆ ಆತ್ಮವಿಶ್ವಾಸವನ್ನೂ ಗಟ್ಟಿಯಾಗಿ ಕಟ್ಟಿಕೊಳ್ಳಬೇಕು. ಮೊದಮೊದಲು ನಮ್ಮ ಫೌಂಡೇಷನ್ ಸಡಿಲವಾಗಿದ್ದರೂ ಅವರಿವರ ಮಾತಿಗೆ ಓಗೊಟ್ಟು ಅಡ್ಡದಾರಿ ಹಿಡಿದರೂ, ನಮ್ಮ ತಪ್ಪಿನ ಅರಿವಾದ ತತ್‌ಕ್ಷಣ ವಾಪಾಸ್ ಬಂದು ನಮ್ಮ ತಳಪಾಯವನ್ನು ದೃಢಪಡಿಸಬೇಕು. ಕೆಲವು ಕಡುಬಡವರು ವಿದ್ಯಾಪೀಠದಲ್ಲಿ ಓದುತ್ತಿದ್ದಾರೆ, ಹಾಗೆ ಕೆಲವು ಕಡುಬಡವರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದಾರೆ. ಎರಡೂ ಕಡೆ ಇರುವವರೂ ಮಕ್ಕಳೇ. ಆದರೆ ವಿದ್ಯಾಪೀಠದಲ್ಲಿ ಓದುತ್ತಿರುವ ಮಕ್ಕಳು ಶಾಲೆ ಮುಗಿದ ಅನಂತರ ಕೆಲಸ ಮಾಡಿ ಸ್ವಲ್ಪ ಹಣವನ್ನು ದುಡಿಯುತ್ತಾರೆ. ಸಾಲಾಗಿ ನಿಂತು ಊಟಕ್ಕಾಗಿ ಸಹನೆಯಿಂದ ಕಾಯುತ್ತಿದ್ದು, ಉಣ್ಣುತ್ತಾರೆ. ಆದರೆ ಬೀದಿಯಲ್ಲಿರುವ ಕೆಲ ಮಕ್ಕಳು ಕಳ್ಳತನದ ಪ್ರವೃತ್ತಿಯನ್ನು ಬೆಳೆಸಿಕೊಂಡಿರುತ್ತಾರೆ. ಅವರನ್ನು ಕರೆದು ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದರೂ ಅಲ್ಲಿಂದ ಮತ್ತೆ ಓಡಿ ಹೋಗಿ ಕಳ್ಳತನದಲ್ಲಿಯೇ ತೊಡಗುತ್ತಾರೆ. ಕಳವಿನ ಮಾರ್ಗ ಸುಲಭ, ಬೇಗನೆ ಹಣಗಳಿಕೆ ಸಾಧ್ಯ ಅಂದುಕೊಳ್ಳುತ್ತಾರೆ. ತಳಪಾಯ ಗಟ್ಟಿಯಿಲ್ಲದ್ದರಿಂದ ಹುಟ್ಟಿಕೊಳ್ಳುವ ಸಮಸ್ಯೆ ಇಂಥದು.
– ರೂಪಾ ಅಯ್ಯರ್roopaiyer.ica@gmail.com