Advertisement

ಹಾಲು “ಗಡ್ಡೆ’!

12:30 AM Jan 16, 2019 | |

ಮಗುವಿಗೆ ಜನ್ಮ ನೀಡಿದ ತಾಯಿ ಆರೋಗ್ಯವಂತಳಾಗಿದ್ದರೂ ಕೆಲವೊಮ್ಮೆ ಮಗುವಿಗೆ ಎದೆಹಾಲು ಉಣಿಸಲಾರದ ಸ್ಥಿತಿ ಉಂಟಾಗುತ್ತದೆ. ಅದಕ್ಕೆ ಕಾರಣ, ಎದೆಹಾಲಿನ ಗಂಟುಗಳಾಗುವುದು. ಹೆರಿಗೆಯಾಗಿ, ಸುಮಾರು ಒಂದು ತಿಂಗಳಾದ ನಂತರ ತಾಯಿಗೆ ಎದೆಯ/ ಮೊಲೆಯ ಮೇಲಿನ ಭಾಗದಲ್ಲಿ ಅಥವಾ ಕಂಕುಳಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಇದು ಸರ್ವೇಸಾಮಾನ್ಯ ಕೂಡ. ಇದಕ್ಕೆ ತೀರಾ ಭಯಪಡುವ ಅಗತ್ಯವಿಲ್ಲ. ಇದು ಸಾಮಾನ್ಯ ಸಂಗತಿಯಾದರೂ, ಹಿರಿಯರ ಮಾರ್ಗದರ್ಶನದ ಕೊರತೆಯಿಂದ ನವತಾಯಂದಿರಿಗೆ ದುಃಸ್ವಪ್ನವಾಗಿ ಕಾಡಬಹುದು. ಹೀಗಾಗಿ ಇದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 

Advertisement

ಗಂಟುಗಳು ಹೇಗಿರುತ್ತವೆ?
*ಮೊದಲನೇ ದಿನ ಸಣ್ಣ ಗಂಟು ಕಾಣಿಸಿಕೊಳ್ಳುತ್ತದೆ. 
*ಹಾಲುಣಿಸಿದಾಗ ಗಂಟು ಸಣ್ಣದಾಗುತ್ತದೆ.
*ಒತ್ತಿದರೆ ಸಣ್ಣದಾಗಿ ನೋವು ಕಂಡು ಬರುತ್ತದೆ. 
*ಕಂಕುಳಲ್ಲಿ ಗಂಟು ಎದ್ದರೆ, ಕೈ ಎತ್ತಿದಾಗ, ಸಣ್ಣ ಕೆಲಸ ಮಾಡುವಾಗ ನೋವಾಗುತ್ತದೆ.
*2-3 ದಿನ ಬಿಟ್ಟರೆ ಗಂಟಿನ ಸುತ್ತ ಕೆಂಪಾಗುತ್ತದೆ ಹಾಗೂ ಕೀವು ತುಂಬಲು ಶುರುವಾಗುತ್ತದೆ. 
*ತಾಯಿಯಲ್ಲಿ ಸಣ್ಣದಾಗಿ ಜ್ವರ ಕಾಣಿಸಿಕೊಳ್ಳಬಹುದು.

ಗಂಟುಗಳಾಗಲು ಕಾರಣ
*ಮಗುವಿನ ಅಗತ್ಯಕ್ಕಿಂತ ಹೆಚ್ಚಾದ ಎದೆಹಾಲಿನ ಉತ್ಪಾದನೆ 
*ಮಗುವು ಮೊಲೆಯನ್ನು ಸರಿಯಾಗಿ ಕಚ್ಚಿಕೊಳ್ಳದಿದ್ದರೆ(poor latching) ಸಾಕಷ್ಟು ಹಾಲು ಹೊರಗೆ ಬರದೆ, ಅಲ್ಲೇ ಉಳಿದು ಗಂಟುಗಳಾಗುವ ಸಾಧ್ಯತೆ. 
*ಮೊಲೆಯ ತೊಟ್ಟು ಸರಿಯಾಗಿಲ್ಲದಿದ್ದರೆ ಅಂದರೆ ಚಪ್ಪಟೆಯಾಗಿದ್ದು (flat nipple) ಇದ್ದಲ್ಲಿ ಮಗುವಿಗೆ ಹಾಲು ಹೀರಲು ಸಾಧ್ಯವಾಗದೆ ಹೋದಾಗ. 
*ಮೊಲೆಯ ತೊಟ್ಟು, ಸತ್ತ ಚರ್ಮದಿಂದಾಗಿ ಮುಚ್ಚಿಕೊಂಡರೆ, ಹಾಲು ಸರಾಗವಾಗಿ ಹೊರಗೆ ಬರುವುದಿಲ್ಲ. 
*ಎದೆಹಾಲು ಉಣಿಸುವಿಕೆಯ ಭಂಗಿ (position) ಸರಿಯಾಗಿರದಿದ್ದರೆ ಮಗುವಿಗೆ ಸಾಕಷ್ಟು ಹಾಲು ಕುಡಿಯಲು ಅಸಾಧ್ಯವಾಗುತ್ತದೆ.

ಪರಿಹಾರ ಏನು?
*ಹಾಲುಣಿಸುವ ಭಂಗಿ (position) ಸರಿಯಾಗಿರಬೇಕು. 
*ಮಗುವು ಸಾಕಷ್ಟು ಹಾಲು ಕುಡಿಯದೇ ಇದ್ದಾಗ, ಅಧಿಕವಾದ ಹಾಲನ್ನು ಕೈಯಿಂದ ಹಿಂಡಿ ತೆಗೆಯಬೇಕು. 
*ಗಂಟು ಕಾಣಿಸಿದ ಕೂಡಲೇ ಕೈಯಿಂದ ಗಂಟಿನ ಮೇಲೆ ನಿಧಾನವಾಗಿ ಮಸಾಜ್‌ ಮಾಡುತ್ತಾ, ಮಗುವಿಗೆ ಹಾಲುಣಿಸಬೇಕು. ಆಗ ಗಂಟು ಕರಗಿ ಹೋಗುತ್ತದೆ. 
*ಎದೆಹಾಲು ಹೆಚ್ಚಿಸುವಂಥ ಆಹಾರವನ್ನು ನಿಯಂತ್ರಿಸಬೇಕು. 
*ಬಿಗಿಯಾದ ಉಡುಪನ್ನು ತ್ಯಜಿಸಿ. 
*ಮೇಲಿನ ಎಲ್ಲ ಮುಂಜಾಗ್ರತೆ ವಹಿಸಿದರೂ ಗಂಟು ಕಂಡುಬಂದಲ್ಲಿ, ಅದರ ಬೆಳವಣಿಗೆಯನ್ನು ಗಮನಿಸುತ್ತಿರಬೇಕು. ನಂತರವೂ ಕೆಂಪಾಗಿದ್ದು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. 

ಅನುಪಮಾ ಬೆಣಚಿನಮರ್ಡಿ 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next