Advertisement

ಸಂದರ್ಶನ ಒಳಗುಟ್ಟೇನು?

06:00 AM Aug 21, 2018 | |

ಸಂದರ್ಶನವೆಂಬುದು ಕೇವಲ ಅಂಕಗಳ ಆಧಾರದಿಂದ ಗೆಲ್ಲಬಹುದಾದ ಯುದ್ಧವಲ್ಲ. “ಸಾರ್‌, ನಾನು ಶೇಕಡ 85ರಷ್ಟು ಅಂಕ ಗಳಿಸಿದ್ದೇನೆ. ಆದರೂ ಉದ್ಯೋಗ ಸಂದರ್ಶನದಲ್ಲಿ ನಾನು ಆಯ್ಕೆಯಾಗಲಿಲ್ಲ’ ಎಂದು ಕಣ್ಣೀರು ಹಾಕಿದವರಿದ್ದಾರೆ. ಅಂಕವಿಲ್ಲದಿದ್ದರೂ ಉದ್ಯೋಗ ಪಡೆದು ಬೀಗಿದವರನ್ನೂ ಕಂಡಿದ್ದೇನೆ. ಹಾಗಾದರೆ ಸಂದರ್ಶನದಲ್ಲಿ ಗೆಲ್ಲಲು ಮಾಪಕಗಳೇನು? 

Advertisement

ಬಾಯಿಪಾಠ ಬೇಡ
ಏನು ಓದಿದರೂ ವಿಷಯ ಅರ್ಥ ಮಾಡಿಕೊಳ್ಳಿ. ವಿಷಯದ ಅರಿವಿಲ್ಲದವರನ್ನು ಯಾವ ಕಂಪನಿಯೂ ಬಯಸುವುದಿಲ್ಲ. ಹೀಗಾಗಿ ಅಂಕಗಳಿಗಿಂತ ಹೆಚ್ಚಾಗಿ ಅಭ್ಯರ್ಥಿ ಎಷ್ಟು ವಿಷಯ ಜ್ಞಾನವನ್ನು ಹೊಂದಿದ್ದಾರೆ ಎಂಬುದನ್ನು ಕಂಪನಿಯವರು ನೋಡುತ್ತಾರೆ. ಹೀಗಾಗಿಯೇ ಇತ್ತೀಚೆಗೆ ಅನೇಕ ಸಂಸ್ಥೆಗಳು ಆಯ್ಕೆಗೆ ಮುನ್ನ ತಮ್ಮದೇ ಮಾದರಿಯ ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ. ಇದರಲ್ಲಿ ವಿಷಯದ ಅರಿವಿನ ಜೊತೆಗೆ ವ್ಯಕ್ತಿತ್ವದ ವಿವಿಧ ಆಯಾಮಗಳ ಅಳತೆಗೂ ಪ್ರಶ್ನೆಗಳಿರುತ್ತವೆ. ಈ ಪ್ರವೇಶ ಪರೀಕ್ಷೆಯ ಬಳಿಕ ನಡೆಯುವುದೇ ಸಂದರ್ಶನ. 

ಗಡಿಬಿಡಿ ಮಾಡಿಕೊಳ್ಳದಿರಿ
ಸಂದರ್ಶನಗಳಲ್ಲಿ ಅಭ್ಯರ್ಥಿಯ ಇಡೀ ವ್ಯಕ್ತಿತ್ವದ ಮೌಲ್ಯಮಾಪನ ನಡೆಯುತ್ತದೆ. ಅದುದರಿಂದ ಇಲ್ಲಿ ಪಾಸಾಗುವುದೇ ಬಹಳ ಮುಖ್ಯ. ಅಭ್ಯರ್ಥಿಯ ಪ್ರತಿಯೊಂದು ನಡೆ ನುಡಿ, ಹಾವಭಾವ, ಮಾತಿನ ಶೈಲಿ, ಅವನು ಹಾಕಿಕೊಂಡ ದಿರಿಸು- ಎಲ್ಲವೂ ಮಾಪನಕ್ಕೆ ಒಳಪಡುತ್ತವೆ. ಸಂದರ್ಶನದ ದಿನದಂದು ವಹಿಸಬೇಕಾದ ಎಚ್ಚರಿಕೆ, ಸಂದರ್ಶನದ ಸಮಯದಲ್ಲಿನ ನಡವಳಿಕೆ ಎಲ್ಲವನ್ನೂ ಪರಾಮರ್ಶಿಸುತ್ತಾರೆ. ಹೀಗಾಗಿ ಸಂದರ್ಶನದ ದಿನ ಗಡಿಬಿಡಿಯಾಗದಂತೆ ಪೂರ್ವ ತಯಾರಿ ಮಾಡಿಕೊಂಡಿರಬೇಕು. 

ಉಡುಪಿನ ಮೇಲೆ ನಿಗಾ ವಹಿಸಿ
ಸಂದರ್ಶನಕ್ಕಾಗಿಯೇ ಒಂದು ಜೊತೆ ಬಟ್ಟೆ, ಕಾಲುಚೀಲ, ಶೂಗಳನ್ನು ಪ್ರತ್ಯೇಕವಾಗಿ ಎತ್ತಿಟ್ಟಿರಿ. ಇಸ್ತ್ರಿ ಇಲ್ಲದೇ ಹೋದರೆ ಇತರರು ಗಮನಿಸದೇ ಹೋದರೂ ನಿಮ್ಮ ಮನಸ್ಸೆಲ್ಲಾ ಅದರ ಕಡೆಯೇ ಇರುವ ಸಾಧ್ಯತೆ ಇರುತ್ತದೆ. ಅಲ್ಲದೆ ಸಂದರ್ಶನಕ್ಕೆ ಠಾಕುಠೀಕಾಗಿ ತಯಾರಾಗಿ ಬಂದ ಇತರೆ ಅಭ್ಯರ್ಥಿಗಳನ್ನು ನೋಡಿದಾಗ ನಿಮ್ಮ ಆತ್ಮವಿಶ್ವಾಸ ಕುಂದಬಹುದು. ದಿರಿಸು, ಹೊಸತೇ ಆಗಬೇಕೆಂದಿಲ್ಲ. ಇದ್ದುದರಲ್ಲೇ ಉತ್ತಮವಾದುದನ್ನು ಆರಿಸಿ ಧರಿಸಿ. 

ಕ್ಷೌರ
ಹುಡುಗರಾದರೆ ಮುಖ ಕ್ಷೌರ ಕಡ್ಡಾಯ. ಗಡ್ಡ ಬಿಟ್ಟಿದ್ದರೂ ಅದು ಟ್ರಿಮ್‌ ಆಗಿರಲಿ. ಹೆಣ್ಣು ಮಕ್ಕಳಿಗೆ ಗಾಢವಾದ ಮೇಕಪ್‌ ಬೇಡ. ಪೂರ್ತಿ ತೋಳಿನ ಶರಟು ಧರಿಸಿದ್ದರೆ ತೋಳನ್ನು ಮಡಚಬೇಡಿ. ಏಕೆಂದರೆ ಅದು ಆಕ್ರಮಶೀಲತೆಯ ದ್ಯೋತಕ ಎಂದು ಪರಿಗಣಿಸಲ್ಪಡುತ್ತದೆ. ಟೈ ಧರಿಸುವುದಿದ್ದರೆ ಅದು ಉದ್ದವೂ ಆಗದಂತೆ, ತುಂಡವೂ ಆಗದಂತೆ ಬೆಲ್ಟಿನ ಪಟ್ಟಿಗೆ ಅದರ ತುದಿ ಸಾಗುವಷ್ಟು ಉದ್ದವಿರಲಿ. ಧರಿಸುವ ಬಟ್ಟೆಯ ಬಣ್ಣ ಕಣ್ಣಿಗೆ ರಾಚುವಂತಿರಬಾರದು. ತಿಳಿ ಬಣ್ಣದ ಪ್ಲೇನ್‌ ಅಥವಾ ಸ್ಟ್ರೈಪ್ಸ್‌ ವಿನ್ಯಾಸದ ಶರ್ಟುಗಳನ್ನು ಧರಿಸಬಹುದು. 

Advertisement

ವರ್ತನೆ ಹೀಗಿರಲಿ
ಸಂದರ್ಶಿಸುವ ಕಂಪೆನಿಯ ಬಗ್ಗೆ ಪೂರ್ವ ಮಾಹಿತಿ ಪಡೆದುಕೊಳ್ಳಿ. ಅದರಿಂದ, ಅವರೇನು ಬಯಸುತ್ತಾರೆ ಎಂಬ ಅಂಶ ನಿಮಗೆ ಮೊದಲೇ ತಿಳಿಯುತ್ತದೆ. ಸಂದರ್ಶನಕ್ಕೆ ನಿಗದಿತ ಸಮಯದಲ್ಲಿ ಹಾಜರಾಗಿ. ಉದ್ಯೋಗದಾತರೊಡನೆ ಮಾತನಾಡುವಾಗ ದೃಷ್ಟಿ ಸಂಧಿಸುತ್ತಿರಲಿ. ಆದರೆ ಬಹಳ ಹೊತ್ತು ನೇರ ನೋಟ ಬೇಡ. ನಿಮ್ಮ ಹಸ್ತಲಾಘವ ದೃಢವಾಗಿರಲಿ, ಅದು ಆತ್ಮವಿಶ್ವಾಸದ ಸೂಚಕ. ಕಾಲು ಕುಣಿಸುವುದು, ಮೇಜಿನ ಮೇಲೆ ಬೆರಳುಗಳಿಂದ ಬಡಿಯುವುದು ಇತ್ಯಾದಿ ಅಂಗಚೇಷ್ಟೆಗಳನ್ನು ಸಂದರ್ಶನ ನಡೆಯುವ ಸ್ಥಳದಲ್ಲಿ ಮಾಡಬೇಡಿ. ಧ್ವನಿ ತೀರ ಎತ್ತರಿಸದೆ ಅಥವಾ ಕುಗ್ಗಿಸದೆ ಸರಿಯಾದ ಏರಿಳಿತಗಳೊಂದಿಗೆ ಗಟ್ಟಿಯಾಗಿ, ಸ್ಪಷ್ಟವಾಗಿ ಉತ್ತರಗಳನ್ನು ನೀಡಿ. ಯಾವುದೇ ಕಾರಣಕ್ಕೂ ಯಾವ ವಿಚಾರದಲ್ಲೂ ತಪ್ಪು ಮಾಹಿತಿ ಅಥವಾ ಸುಳ್ಳು ಉತ್ತರ ನೀಡಬೇಡಿ. ಉದ್ಯೋಗದಾತರು ಎಲ್ಲಕ್ಕಿಂತ ಮುಖ್ಯವಾಗಿ ಬಯಸುವುದು ಪ್ರಾಮಾಣಿಕತೆಯನ್ನು. ನಿಮ್ಮ ದನಿಯಲ್ಲಿ ನಯವಿರಲಿ, ಆದರೆ ದೈನ್ಯತೆ ಬೇಡ. 

ಸಂದರ್ಶನದ ನಂತರ
 ಸಂದರ್ಶನದಲ್ಲಿ ಆಯ್ಕೆಯಾದ ಬಳಿಕ ಸೂಕ್ಷ್ಮವಾಗಿ ಕೆಲಸ, ಜವಾಬ್ದಾರಿ ಮತ್ತಿತರ ವಿಚಾರಗಳ ಕುರಿತು ನೀವಾಗಿಯೇ ಕೇಳಬಹುದು. ಹೆಚ್ಚಾಗಿ ಅವರೇ ಸೂಕ್ತ ಸಲಹೆ, ಸೂಚನೆ ನೀಡಿ ಕಳಿಸುತ್ತಾರೆ. ಎಷ್ಟೆಲ್ಲ ತರಬೇತಿ, ಎಚ್ಚರಿಕೆ ವಹಿಸಿದರೂ ನಮ್ಮೊಳಗಣ ಮೌಲ್ಯದ ನಿಜಸ್ವರೂಪ ನಮಗೆ ಕಾಣಿಸಿಕೊಳ್ಳುವುದು ಸಂದರ್ಶನಗಳನ್ನು ಎದುರಿಸಿದಾಗಲೇ, ಸೋಲುಗಳನ್ನು ಸಹಿಸಿದಾಗಲೇ, ಯಶಸ್ಸುಗಳನ್ನು ಸಮಚಿತ್ತದಿಂದ ಸ್ವೀಕರಿಸಿದಾಗಲೇ! ಉದ್ಯೋಗ ಕ್ಷೇತ್ರದಲ್ಲಿ ಇಂದು ವಿಪುಲ ಅವಕಾಶಗಳಿವೆ. ಒಂದು ಕಡೆ ಉದ್ಯೋಗ ತಪ್ಪಿದರೂ ಮತ್ತೂಂದೆಡೆ ಕೆಲಸ ಖಂಡಿತ ದೊರೆಯುತ್ತದೆ. ಆಲ್‌ ದ ಬೆಸ್ಟ್‌!

ರಘು, ಪ್ರಾಂಶುಪಾಲರು, 

Advertisement

Udayavani is now on Telegram. Click here to join our channel and stay updated with the latest news.

Next