Advertisement

ಕೆಂಪು ನೀರು ಪೂರೈಕೆ ವಿರುದ್ಧ  ವಾಟ್ಸ್‌ ಆ್ಯಪ್‌ ವಾರ್‌!

06:00 AM Jun 03, 2018 | Team Udayavani |

ಕೋಟ: ಸಾಲಿಗ್ರಾಮ ಪ.ಪಂ. ವ್ಯಾಪ್ತಿಯ ಗುಂಡ್ಮಿ 14ನೇ ವಾರ್ಡ್‌ನ ಬಡಾ ಆಲಿತೋಟದಲ್ಲಿ ಉಪ್ಪು ನೀರಿನ ಸಮಸ್ಯೆಯಿಂದಾಗಿ ಇಲ್ಲಿನ ನಿವಾಸಿಗಳು ಪ.ಪಂ. ನಳ್ಳಿಯನ್ನೇ ಆಶ್ರಯಿಸಿದ್ದಾರೆ. ಆದರೆ ಮೇ 29ರಿಂದ ಇಲ್ಲಿ ಕೆಂಪು ನೀರು ಪೂರೈಕೆಯಾಗುತ್ತಿದ್ದು ಸಮಸ್ಯೆಗೆ ಕಾರಣವಾಗಿವೆ. ಈ ಬಗ್ಗೆ ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಶೇರ್‌ ಮಾಡಿದ್ದು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. 
 
ಸರಬರಾಜಾಗುತ್ತಿದೆ ಕೆಂಪು ನೀರು 
ನೀರು  ಕೆಂಪು ಬಣ್ಣ, ವಾಸನೆಯಿಂದ ಕೂಡಿದೆ. ಈ ಕುರಿತು ಸ್ಥಳೀಯ ವಾರ್ಡ್‌ ಸದಸ್ಯರಿಗೆ ದೂರು ನೀಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಬೇರೆ ನೀರು ಬೇಕಾದರೆ ಮೂರ್ನಾಲ್ಕು ಕಿ.ಮೀ. ದೂರ ಸಾಗಬೇಕು. ಪರಿಣಾಮ ಇದೇ ನೀರನ್ನು ಉಪಯೋಗಿಸಿದ್ದಾರೆ. 
 
ಹಿಂದೊಮ್ಮೆ ಕಾಲರಾ ಕಾಣಿಸಿಕೊಂಡಿತ್ತು
ಸುಮಾರು ಎಳು ವರ್ಷದ ಹಿಂದೆ ಇದೇ ರೀತಿ  ಕಲುಷಿತ ನೀರು ಸರಬರಾಜಾಗಿ ಅದನ್ನು ಕುಡಿದ 50ಕ್ಕೂ ಹೆಚ್ಚು ಮಂದಿಗೆ ಕಾಲರಾ ರೋಗ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಮತ್ತೆ ಅದೇ ರೀತಿಯ ಆತಂಕ ಎದುರಾಗಿದೆ.

Advertisement

ನಾಲ್ಕೈದು ದಿನದಿಂದ ಕೆಸರು ನೀರು ಸರಬರಾಜಾಗುತ್ತಿರುವ ಕುರಿತು ಸ್ಥಳೀಯ ವಾರ್ಡ್‌ ಸದಸ್ಯರ ಗಮನಕ್ಕೆ ತಂದಿದ್ದೇವೆ. ಆದರೆ ಯಾರೂ ಕ್ರಮಕೈಗೊಂಡಿಲ್ಲ. ಹೀಗಾಗಿ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ಸಮಸ್ಯೆಯ ಕುರಿತು ಧ್ವನಿ ಎತ್ತುತ್ತಿದ್ದಂತೆ ಪರಿಶೀಲನೆಗಾಗಿ ಎಲ್ಲರೂ ಓಡಿ ಬಂದಿದ್ದಾರೆ ಎನ್ನುತ್ತಿದ್ದಾರೆ ಸ್ಥಳೀಯ ನಿವಾಸಿ ಅನೀಲ್‌ ಗುಂಡ್ಮಿ.

ಸಾಮಾಜಿಕ ಜಾಲತಾಣದಲ್ಲಿ  ಬಿಸಿ ಮುಟ್ಟಿಸಿದ್ರು
ಅಧಿಕಾರಿಗಳು ಸ್ಪಂದಿಸದ ಕಾರಣ ಸ್ಥಳೀಯರು “ಮತ್ತೆ ಹೋರಾಟ’ ಹೆಸರಿನ ವಾಟ್ಸ್‌ಆ್ಯಪ್‌ ಗ್ರೂಪ್‌ ತೆರೆದು ಪ.ಪಂ. ಮುಖ್ಯಾಧಿಕಾರಿಗಳನ್ನು ಸೇರಿಸಿದ್ದಾರೆ. ಅಲ್ಲದೇ ಅದರಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ. 

ಫೇಸ್‌ಬುಕ್‌ನಲ್ಲೂ ಈ ಬಗ್ಗೆ ಚರ್ಚಿಸಿದ್ದಾರೆ. ಕೊನೆಗೆ ಎಚ್ಚೆತ್ತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು  ಸಮಸ್ಯೆಯ ಅವಲೋಕನಕ್ಕಾಗಿ ಓಡಿ ಬಂದಿದ್ದಾರೆ. ಈ ಹಿಂದೆ ವಿದ್ಯುತ್‌ ವೋಲ್ಟೆàಜ್‌ ಸಮಸ್ಯೆ ಇದ್ದಾಗ ಇದೇ ರೀತಿ ಗಮನ ಸೆಳೆದು ಯಶಸ್ವಿಯಾಗಿದ್ದೆವು ಎಂದು ಸ್ಥಳೀಯರು ಹೇಳಿದ್ದಾರೆ.  

ಸಮಸ್ಯೆ ಪರಿಹರಿಸಲಾಗುವುದು
ನಾಲ್ಕೈದು ದಿನದಿಂದ ಸಮಸ್ಯೆ ಇರುವ ಕುರಿತು ತಿಳಿದಿರಲಿಲ್ಲ. ಶನಿವಾರ ನನ್ನ ಗಮನಕ್ಕೆ ಬಂದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.  ಟ್ಯಾಂಕ್‌ನ  ಸಮಸ್ಯೆಯಿಂದ ಈ ರೀತಿ ಆಗಿಲ್ಲ. ಗದ್ದೆಯ ಅಡಿ ಪೈಪ್‌ ಒಡೆದು ಕೆಸರು  ನೀರು ಮಿಶ್ರಣಗೊಂಡಿರುವುದರಿಂದ ಹೀಗಾಗಿರಬಹುದು. ಸ್ಥಳಕ್ಕೆ ಭೇಟಿ ನೀಡಿದ್ದೇನೆ ಹಾಗೂ ಸಮಸ್ಯೆ ಮೂಲ ತಿಳಿದು ದುರಸ್ತಿಗೊಳಿಸುವಂತೆ ಕಾರ್ಮಿಕರಿಗೆ ತಿಳಿಸಿದ್ದೇನೆ.
– ಶ್ರೀಪಾದ್‌ ಪುರೋಹಿತ್‌,
 ಮುಖ್ಯಾಧಿಕಾರಿಗಳು ಸಾಲಿಗ್ರಾಮ

Advertisement

ದುರಸ್ತಿ ನಡೆಯುತ್ತಿದೆ
ಎರಡು ದಿನದ ಹಿಂದೆ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ತತ್‌ಕ್ಷಣ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ ಹಾಗೂ ಪೈಪ್‌ ಎಲ್ಲಿಯಾದರು ಸೊರಿಕೆ ಇದೆಯೇ ಎಂದು ಪರಿಶೀಲಿಸಿದ್ದೇನೆ. ಈ ಹಿಂದೆ ಹಲವು ಬಾರಿ ಸಮಸ್ಯೆಯಾದಾಗ ನನ್ನ ಸ್ವಂತ ಹಣದಲ್ಲಿ ಪೈಪ್‌ಲೈನ್‌ ದುರಸ್ತಿ ಮಾಡಿಸಿದ್ದೆ. ಹೀಗಾಗಿ ಈ ಬಗ್ಗೆ ನಿರ್ಲಕ್ಷé ತೋರಿಲ್ಲ. ಕಾರ್ಯದೊತ್ತಡದಿಂದ ಪರಿಶೀಲನೆ  ತಡವಾಗಿರಬಹುದು. ಶನಿವಾರ ಮತ್ತೆ ಪರಿಶೀಲಿಸಿದ್ದು, ದುರಸ್ತಿ ನಡೆಯುತ್ತಿದೆ.
– ಕುಸುಮಾ ಬಿ.ಪೂಜಾರಿ,
ಸ್ಥಳೀಯ ವಾರ್ಡ್‌ ಸದಸ್ಯರು

– ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next