Advertisement

ರಾಜ್ಯಪಾಲರ ಪತ್ರದಲ್ಲೇನಿದೆ?

02:59 AM Jul 19, 2019 | Sriram |

ಮಾನ್ಯ ಕುಮಾರಸ್ವಾಮಿಯವರೇ,

Advertisement

ನೀವು ಅಖೀಲ ಭಾರತ ಕಾಂಗ್ರೆಸ್‌ನ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದೀರಿ. ರಾಜ್ಯದ ವಿಧಾನಸಭೆಯ ಒಟ್ಟಾರೆ ಸಂಖ್ಯಾಬಲ 224 (ಜತೆಗೆ ಓರ್ವ ನಾಮನಿರ್ದೇಶನ ಸದಸ್ಯ ) ಪೈಕಿ ಕಾಂಗ್ರೆಸ್‌ -79, ಜೆಡಿಎಸ್‌ -37, ಕೆಪಿಜೆಪಿ -1, ಬಿಎಸ್‌ಪಿ-1 ಹಾಗೂ ಓರ್ವ ಪಕ್ಷೇತರ ಸದಸ್ಯನ ಬೆಂಬಲ ಪಡೆದಿದ್ದೀರಿ. ಬಿಜೆಪಿಯು 105 ಸದಸ್ಯರನ್ನು ಹೊಂದಿತ್ತು.

ಕಳೆದ ಹಲವು ದಿನಗಳ ಹಿಂದೆ ಕೆಲವು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಸದಸ್ಯರು ನನ್ನನ್ನು ಭೇಟಿ ಮಾಡಿ ನಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇವೆ ಎಂದು ಹೇಳಿದ್ದರು. ಅವರಲ್ಲಿ ಆನಂದ್‌ ಸಿಂಗ್‌, ರಮೇಶ್‌ ಜಾರಕಿಹೊಳಿ, ಎಸ್‌.ಟಿ.ಸೋಮಶೇಖರ್‌, ಗೋಪಾಲಯ್ಯ, ವಿಶ್ವನಾಥ್‌, ನಾರಾಯಣಗೌಡ, ಬೈರತಿ ಬಸವರಾಜ್‌, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಟಾರ್‌, ಮುನಿರತ್ನ, ರೋಷನ್‌ಬೇಗ್‌, ಡಾ.ಕೆ.ಸುಧಾಕರ್‌, ಎಂಟಿಬಿ ನಾಗರಾಜ್‌, ಪ್ರತಾಪ್‌ಗೌಡ ಪಾಟೀಲ್, ಮಹೇಶ್‌ ಕುಮಟಳ್ಳಿ ಸೇರಿದ್ದರು.

ಅದಾದ ನಂತರ ಪಕ್ಷೇತರ ಸದಸ್ಯರಾದ ಎಚ್.ನಾಗೇಶ್‌, ಆರ್‌.ಶಂಕರ್‌ ಸಹ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದು, ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಸ್‌ ಪಡೆದಿರುವುದಾಗಿ ತಿಳಿಸಿದರು. ಬಿಜೆಪಿಗೆ ತಮ್ಮ ಬೆಂಬಲ ವ್ಯಕ್ತಪಡಿಸುವುದಾಗಿಯೂ ಪತ್ರ ನೀಡಿದರು. ಈ ಎಲ್ಲ ರಾಜೀನಾಮೆ ಪತ್ರಗಳು ಸ್ಪೀಕರ್‌ ಅವರ ಮುಂದೆಯೂ ಇವೆ. ರಾಜಭವನದಿಂದಲೂ ಸ್ಪೀಕರ್‌ ಕಚೇರಿಗೆ ಮಾಹಿತಿ ನೀಡಲಾಗಿದೆ.

ಇದರಿಂದಾಗಿ ಸಮ್ಮಿಶ್ರ ಸರ್ಕಾರದ 117 ಸಂಖ್ಯಾಬಲದಲ್ಲಿ ಮೇಲ್ಕಂಡವರು ರಾಜೀನಾಮೆ ನೀಡಿ ಆಡಳಿತಾರೂಢ ಸಮ್ಮಿಶ್ರ ಸರ್ಕಾರದಿಂದ ದೂರ ಸರಿದಿರುವುದರಿಂದ ನಿಮ್ಮ ನೇತೃತ್ವದ ಸರ್ಕಾರಕ್ಕೆ ಬಹುಮತ ಇರುವ ಬಗ್ಗೆ ತೀವ್ರ ಅನುಮಾನ ಇದೆ.

Advertisement

ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಹಲವರು ನನ್ನ ಗಮನಕ್ಕೆ ತಂದಿದ್ದಾರೆ. ಪ್ರತಿಪಕ್ಷ ನಾಯಕರ ನೇತೃತ್ವದ ಬಿಜೆಪಿ ನಿಯೋಗವು ಜುಲೈ 10 ರಂದು ಭೇಟಿ ಮಾಡಿ ಸ್ಪೀಕರ್‌ ವಿರುದ್ಧವೂ ಆರೋಪ ಮಾಡಿದೆ. ಹಲವು ವಕೀಲರು ಸಹ ನನಗೆ ಪತ್ರ ಬರೆದು ಸರ್ಕಾರ ಬಹುಮತ ಕಳೆದುಕೊಂಡಿದ್ದು ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

ಜುಲೈ 18 ರಂದು ಬಿಜೆಪಿ ನಿಯೋಗವು ಮನವಿ ಸಲ್ಲಿಸಿದ್ದು, ರಾಜ್ಯ ಸರ್ಕಾರವು ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ಅನಗತ್ಯವಾಗಿ ಎಳೆಯುತ್ತಾ ವಿಳಂಬ ಮಾಡುತ್ತಿರುವುದಾಗಿ ತಿಳಿಸಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಗುರುವಾರದ ಘಟನಾವಳಿಗಳೂ ಸೇರಿದಂತೆ ಇತ್ತೀಚೆಗಿನ ಬೆಳವಣಿಗೆಗಳ ಪರಿಗಣಿಸಿ ಹದಿನೈದು ಶಾಸಕರು ರಾಜೀನಾಮೆ ನೀಡಿರುವುದು, ಇಬ್ಬರು ಶಾಸಕರು ಬೆಂಬಲ ವಾಪಸ್‌ ತೆಗೆದುಕೊಂಡಿರುವ ಈ ಸಂದರ್ಭದಲ್ಲಿ ನಿಮ್ಮ ಸರ್ಕಾರವು ಬಹುಮತ ಕಳೆದುಕೊಂಡಿದೆ ಎಂದು ಭಾಸವಾಗುತ್ತಿದೆ.

ರಾಜ್ಯದ ಮುಖ್ಯಸ್ಥನಾಗಿ ನಾನು ಗುರುವಾರದ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲೂ ಮಧ್ಯಪ್ರವೇಶಿಸಿರಲಿಲ್ಲ. ಆದರೆ, ಗುರುವಾರದ ಕಲಾಪದಲ್ಲಿ ಕಾರ್ಯಸೂಚಿಯ ವಿಚಾರದಲ್ಲಿ ಯಾವುದೇ ಅಂತ್ಯಕ್ಕೆ ಬರದೆ ಮುಂದೂಡಿರುವುದು ಭಾರತದ ಸಂವಿಧಾನದ ಪ್ರಜಾಪ್ರಭುತ್ವ ವ್ಯವಸ್ಥೆಯ ಆಡಳಿತದಲ್ಲಿ ನಡೆಯುವಂತದ್ದಲ್ಲ.

ಹೀಗಾಗಿ, 175 (2) ರ ಪ್ರಕಾರ ಸ್ಪೀಕರ್‌ಗೆ ಸಂದೇಶ ಕಳುಹಿಸಿದ್ದೆ. ಆದರೆ, ಸದನ ಮುಂದೂಡಿಕೆಯಾಯಿತು ಎಂಬ ಮಾಹಿತಿ ನನಗೆ ಬಂದಿತು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ನೀವು ನಿಮಗೆ ಸದನದಲ್ಲಿ ಇರುವ ಬಹುಮತವನ್ನು ನಾಳೆ (ಶುಕ್ರವಾರ) ಮಧ್ಯಾಹ್ನ 1.30 ರೊಳಗೆ ಸಾಬೀತುಪಡಿಸಬೇಕು.

ಸ್ಪೀಕರ್‌ಗೂ ಪ್ರತಿ: ಬಹುಮತ ಸಾಬೀತು ಮಾಡುವಂತೆ ರಾಜ್ಯಪಾಲರು ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದ ಪ್ರತಿಯನ್ನು ಸ್ಪೀಕರ್‌ ರಮೇಶ್‌ಕುಮಾರ್‌ ಅವರಿಗೂ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next