ಬೆಂಗಳೂರು: ಈ ಡಿಕೆಗೆ ಏನಾಗಿದೆ ? ಕಲ್ಲುಗುಂಡಿನ ಹಾಗೆ ಇದ್ದಾನೆ. ಅವನಿಗೂ ಕೋವಿಡ್ ಪಾಸಿಟಿವ್ ಸರ್ಟಿಫಿಕೇಟ್ ಕೊಡುವುದಕ್ಕೆ ಬಂದಿದ್ದರು` ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮೂರನೇ ದಿನದ ಪಾದಯಾತ್ರೆ ಆರಂಭಕ್ಕೂ ಮುನ್ನ ಕನಕಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಪ್ರಕರಣ ದಾಖಲಿಸಿ ನಮ್ಮನ್ನು ಬೆದರಿಸಬಹುದು ಎಂದುಕೊಂಡರೆ ಬಿಜೆಪಿಯವರಷ್ಟು ಮೂರ್ಖರು ಯಾರೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾವು ಹತ್ತು ದಿನಗಳ ಕಾಲ ಪಾದಯಾತ್ರೆ ನಡೆಸುತ್ತೇವೆ. ನಿಮ್ಮ ಗೊಡ್ಡು ಬೆದರಿಕೆಗೆಲ್ಲ ಜಗ್ಗುವುದಿಲ್ಲ. ಪಾದಯಾತ್ರೆ ನಿಲ್ಲಿಸುವುದಕ್ಕೆ ಬಿಜೆಪಿಯವರು ಏನೆಲ್ಲ ಸಂಚು ನಡೆಸುತ್ತಿದ್ದಾರೆ. ಆರೋಗ್ಯ ತಪಾಸಣೆ ನೆಪದಲ್ಲಿ ಶಿವಕುಮಾರ್‌ಗೆ ಪಾಸಿಟಿವ್ ಸರ್ಟಿಫಿಕೇಟ್ ಕೊಡಲು ಬಂದಿದ್ದರು. ಡಿಕೆಗೆ ಏನಾಗಿದೆ ? ಕಲ್ಲುಗುಂಡು ಇದ್ದ ಹಾಗೆ ಇದ್ದಾನೆ. ಎರಡು ದಿನ ನಡೆದರು ಏನೂ ಆಗಿಲ್ಲ, ಅಲ್ವೇನಯ್ಯಾ ? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಪಾದಯಾತ್ರೆಯಿಂದ ಸೋಂಕು ಹರಡುತ್ತಿಲ್ಲ. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಹೇರುವ ಪರಿಸ್ಥಿತಿ ಬಂದರೆ ಅದಕ್ಕೆ ಬಿಜೆಪಿಯೇ ಕಾರಣ. ಸುಭಾಷ್ ಗುತ್ತೇದಾರ್ ಹಾಗೂ ರೇಣುಕಾಚಾರ್ಯ ವಿರುದ್ಧ ಏಕೆ ಪ್ರಕರಣ ದಾಖಲಿಸಿಲ್ಲ. ತೀರ್ಥಹಳ್ಳಿಯಲ್ಲಿ ಜಾತ್ರೆ ನಡೆಸಿದರೂ ಏಕೆ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು.
ಮೇಕೆದಾಟು ವಿಚಾರದಲ್ಲಿ ಬಿಜೆಪಿ ಏನನ್ನೂ ಮಾಡಿಲ್ಲ. ನಾವು ಅಧಿಕಾರದಲ್ಲಿದ್ದಾಗ ಕಾನೂನು ತಜ್ಞ ಪಾಲಿ ನಾರಿಮನ್ ಅವರನ್ನು ಸಂಪರ್ಕಿಸಿ ಅವರ ಸಲಹೆ ಮೇರೆಗೆ ಡಿಪಿಆರ್ ಮಾಡಿದ್ದೆವು. ಆದರೆ ಬಿಜೆಪಿಯವರು ತಮಿಳುನಾಡಿನಲ್ಲಿ ಮತ ಹೆಚ್ಚಿಸಿಕೊಳ್ಳುವುದಕ್ಕಾಗಿ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.