ಹುಬ್ಬಳ್ಳಿ: ಬಿಜೆಪಿ ನೇತೃತ್ವದ ಸರ್ಕಾರ ಲೋಕಾಯುಕ್ತ ವ್ಯವಸ್ಥೆ ಬಲಗೊಳಿಸಿದ್ದರ ಪರಿಣಾಮ ಇಂದು ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಿದೆ. ಯಾರೇ ತಪ್ಪು ಮಾಡಿದರೂ ದಾಳಿ ನಡೆಸಿ ತನಿಖೆ ಕೈಗೊಳ್ಳುತ್ತಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರು ಲೋಕಾಯುಕ್ತ ವ್ಯವಸ್ಥೆಯನ್ನೇ ಹಾಳು ಮಾಡಿ ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಎಸಿಬಿ ರಚಿಸಿದ್ದರು. ತಪ್ಪು ಮಾಡಿದವರು ಯಾವುದೇ ಪಕ್ಷದವರಾಗಿದ್ದರೂ ಅವರ ಮೇಲೆ ಕ್ರಮವಾಗುತ್ತದೆ. ಅವರ ಸಮರ್ಥನೆ ಅಥವಾ ತನಿಖೆಯಲ್ಲಿ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ರಾಜ್ಯಕ್ಕೆ ಬಂದರೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರಿಗೆ ಭಯ ಹೆಚ್ಚುತ್ತದೆ. ಯಾರೇ ಬಂದರೂ ಏನೂ ಆಗುವುದಿಲ್ಲ ಎಂದು ತಮ್ಮಷ್ಟಕ್ಕೆ ತಾವು ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರ ರಾಜಕಾರಣಕ್ಕೆ ಮೋದಿ ಪ್ರವೇಶಿಸಿದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಜಯ ಗಳಿಸಿದ ಉದಾಹರಣೆಯಿಲ್ಲ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸೋಲುಂಡರು. ಇಷ್ಟೊಂದು ಸೋಲು ಕಂಡಿರುವಾಗ ಅವರು ರಾಜಕಾರಣದಿಂದ ದೂರ ಸರಿಯಬೇಕಾಗಿತ್ತು ಎಂದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಪಕ್ಷದ ಪರವಾಗಿ ಮತ ಚಲಾಯಿಸಿದ್ದರು. ಪಕ್ಷದ ಇತರೆ ಕಾರ್ಯಗಳಿಗೆ ಬೆಂಬಲ ಕೂಡ ನೀಡಿದ್ದರು. ಅವರಿಗೆ ಪಕ್ಷದ ಪರವಾಗಿ ಒಲವಿದೆ. ಆದರೆ ಪಕ್ಷಕ್ಕೆ ಸೇರ್ಪಡೆ ವಿಚಾರ ಗೊತ್ತಿಲ್ಲ. ವಿ.ಸೋಮಣ್ಣ ಪಕ್ಷದ ಇತ್ತೀಚಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಮುಂದೆಯೂ ಇರುತ್ತಾರೆ. ಪಕ್ಷ ಬಿಡುವ ಮಾತಿಲ್ಲ ಎಂದರು.
Related Articles
ಮಂಡ್ಯ ರಾಜಕೀಯ ಇತಿಹಾಸದಲ್ಲಿ ದೊಡ್ಡ ಸಮಾವೇಶ ನಡೆಯಲಿದೆ. ಮಾ.12ರಂದು ಪ್ರಧಾನಿ ಮೋದಿ ಆಗಮಿಸಲಿದ್ದು, ಮದ್ದೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿಗಿಂತ ದೊಡ್ಡಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಅಲ್ಲಿನ ನಾಯಕರು ಸಿದ್ಧತೆ ನಡೆಸಿದ್ದಾರೆ. ಅಂದು ಮಧ್ಯಾಹ್ನ 2 ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೋದಿ, 2:10ಕ್ಕೆ ಧಾರವಾಡ ಐಐಟಿ ಉದ್ಘಾಟಿಸುವರು. ನಂತರ ಸಾರ್ವಜನಿಕರ ಸಮಾವೇಶದಲ್ಲಿ ಮಾತನಾಡಲಿದ್ದಾರೆ.
– ಪ್ರಹ್ಲಾದ ಜೋಶಿ, ಕೇಂದ್ರ ಸಚಿವ