ಲಕ್ನೋ : ಬಿಜೆಪಿ ತೊರೆದು ಸಮಾಜವಾದಿ ಪಕ್ಷಕ್ಕೆ ಜಿಗಿದಿದ್ದ ಮಾಜಿ ಸಚಿವ ಉತ್ತರ ಪ್ರದೇಶದ ಪ್ರಭಾವಿ ರಾಜಕಾರಣಿ ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಬಿಜೆಪಿ ಮಾತ್ರವಲ್ಲದೆ ಸಾಮಾಜವಾದಿ ಪಕ್ಷವೂ ಶಾಕ್ ನೀಡಿದೆ.
ಮೌರ್ಯ ಪ್ರತಿನಿಧಿಸುತ್ತಿದ್ದ ಪದ್ರೌನಾ ಕ್ಷೇತ್ರಕ್ಕೆ ಬಿಜೆಪಿ ರಣ ತಂತ್ರ ಹೂಡಿ ಕಾಂಗ್ರೆಸ್ ನಲ್ಲಿದ್ದ ರಾಜಮನೆತನದ ಹಿನ್ನಲೆಯ ಪ್ರಭಾವಿ ಆರ್‌ಪಿಎನ್ ಸಿಂಗ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ ಬೆನ್ನಲ್ಲೇ ಎಸ್ ಪಿ ಹೊಸ ಲೆಕ್ಕಾಚಾರ ಮಾಡಿದೆ. ಮೌರ್ಯ ಅವರನ್ನು ಪದ್ರೌನಾ ಬದಲಿಗೆ ಫಾಜಿಲ್‌ನಗರದಿಂದ ಸ್ಪರ್ಧಿಸುವಂತೆ ಹೇಳಿದೆ.
ಈ ಬಗ್ಗೆ ಎಎನ್ ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ ಮೌರ್ಯ, ನನಗೆ ಸವಾಲು ಇಲ್ಲ. ಬಿಜೆಪಿ ಆರ್‌ಪಿಎನ್ ಸಿಂಗ್ ಅವರನ್ನು ಕಣಕ್ಕಿಳಿಸಿದರೆ ಬಹುಶಃ ಅವರಿಗಿಂತ ದುರ್ಬಲ ಅಭ್ಯರ್ಥಿ ಇರುವುದಿಲ್ಲ ಎಂದಿದ್ದಾರೆ.
ನಾನು ಪದ್ರೌನಾ ದಲ್ಲಿ ಜನರಿ ಸೇವೆ ಸಲ್ಲಿಸಿ 3 ಬಾರಿ ಶಾಸಕನಾಗಿದ್ದೇನೆ. ನನ್ನ ಹೃದಯದಲ್ಲಿ ನಾನು ಯಾವಾಗಲೂ ಅವರಿಗೆ ಸ್ಥಾನವನ್ನು ಹೊಂದಿದ್ದೇನೆ. ನನ್ನನ್ನು ಫಾಜಿಲ್‌ನಗರದ ಅಭ್ಯರ್ಥಿ ಎಂದು ಹೆಸರಿಸಿದ್ದು, ಇಲ್ಲಿನ ಜನರ ಸೇವೆ ಮಾಡಲು ಅವಕಾಶ ನೀಡಿದ ಅಖಿಲೇಶ್ ಯಾದವ್ ಅವರಿಗೆ ಧನ್ಯವಾದ ಎಂದಿದ್ದಾರೆ.
ಸವಾಲು ಎಷ್ಟು ಕಷ್ಟಕರವಾಗಿದೆಯೋ, ಅಲ್ಲಿಂದ ನಾನು ಸ್ಪರ್ಧಿಸುವುದು ಉತ್ತಮವಾಗಿದೆ. ಯಾವ ವಿಧಾನಸಭಾ ಕ್ಷೇತ್ರವೂ ನನಗೆ ಕಷ್ಟವಲ್ಲ ಎಂದು ಹೇಳಿದ್ದೆ. ಕಾರ್ಯಕರ್ತರು ಎಲ್ಲೆಡೆ ನನ್ನ ಜನಪ್ರಿಯತೆಯನ್ನು ಸ್ವೀಕರಿಸುತ್ತಾರೆ, ಹಾಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ನನ್ನ ಬಗ್ಗೆ ಏನು ನಿರ್ಧರಿಸಿದರೂ ನಾನು ಸ್ವಾಗತಿಸುತ್ತೇನೆ ಎಂದು ಸ್ವಾಮಿ ಪ್ರಸಾದ್ ಮೌರ್ಯ ಉತ್ಸಾಹದ ಮಾತುಗಳನ್ನಾಡಿದ್ದಾರೆ.
ಫಾಜಿಲ್‌ನಗರ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.