Advertisement

ಪಾಕ್ ವಿರುದ್ಧ ಟೀಂ ಇಂಡಿಯಾ ಸೋಲಲು ಕಾರಣವೇನು? ತಂಡದ ಆಯ್ಕೆಯಲ್ಲಿ ಎಡವಿದರೆ ವಿರಾಟ್?

11:33 AM Oct 25, 2021 | Team Udayavani |

ದುಬೈ: ಐಸಿಸಿ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲೇ ಭಾರತ ತಂಡ ಮುಗ್ಗರಿಸಿದೆ. ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ ದುಬೈ ನಲ್ಲಿ ನಡೆದ ಪಂದ್ಯದಲ್ಲಿ 10 ವಿಕೆಟ್ ಅಂತರದಲ್ಲಿ ಸೋಲನುಭವಿಸಿದೆ.

Advertisement

ಟಾಸ್ ಗೆದ್ದ ಬಾಬರ್ ಅಜಂ ಪಡೆ ಆರಂಭದಿಂದಲೇ ವಿರಾಟ್ ಪಡೆಯ ಮೇಲೆ ಸವಾರಿ ಮಾಡಿತು. ಸಂಘಟಿತ ಹೋರಾಟ ನಡೆಸಿದ ಪಾಕ್ ಸುಲಭ ಜಯ ಸಾಧಿಸಿತು. ಭಾರತ ತಂಡ 7 ವಿಕೆಟಿಗೆ 151 ರನ್‌ ಗಳಿಸಿದರೆ, ಪಾಕಿಸ್ಥಾನ 17.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 152 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು.

ಸೋಲಿಗೆ ಕಾರಣವೇನು?

ಕಪ್ ಗೆಲ್ಲುವ ಫೇವರೆಟ್ ಆಗಿ ಕಣಕ್ಕಿಳಿದ ಭಾರತ ತಂಡ ಮೊದಲ ಪಂದ್ಯದಲ್ಲೇ ಸೋಲನುಭವಿಸಲು ಕಾರಣಗಳು ಹಲವು. ಅವುಗಳೇನೆಂದರೆ..

ತಂಡದ ಆಯ್ಕೆ: ಕೂಟದ ಪ್ರಮುಖ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ತಂಡದ ಆಯ್ಕೆಯಲ್ಲಿ ಎಡವಿದಂತೆ ಕಾಣಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ಫಾರ್ಮ್ ನಲ್ಲಿರದ, ಅಭ್ಯಾಸ ಪಂದ್ಯದಲ್ಲೂ ದುಬಾರಿಯಾಗಿದ್ದ ವೇಗಿ ಭುವನೇಶ್ವರ್ ಕುಮಾರ್ ಅವರನ್ನೇ ಮತ್ತೆ ನೆಚ್ಚಿಕೊಂಡಿದ್ದು ಫಲ ನೀಡಿಲ್ಲ. ಭುವಿ ಅವರ ಮೊದಲ ಓವರ್ ನಿಂದಲೇ ಪಾಕ್ ಆಟಗಾರರು ಬ್ಯಾಟಿಂಗ್ ಅಬ್ಬರ ಆರಂಭಿಸಿದರು.

Advertisement

ಇದನ್ನೂ ಓದಿ:ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಆಲ್ ರೌಂಡರ್ ಕೋಟಾದಲ್ಲಿ ಕೂಟಕ್ಕೆ ಆಯ್ಕೆಯಾದ ಹಾರ್ದಿಕ್ ಪಾಂಡ್ಯ ಇನ್ನೂ ಚೇತರಿಸಿಲ್ಲ. ಬೌಲಿಂಗ್ ಮಾಡಲು ಸಾಧ್ಯವಿಲ್ಲ, ಬ್ಯಾಟಿಂಗ್ ನಲ್ಲೂ ಫಾರ್ಮ್ ನಲ್ಲಿಲ್ಲ. ಅವರ ಬದಲಿಗೆ ಪೂರ್ಣ ಪ್ರಮಾಣದ ಬ್ಯಾಟ್ಸಮನ್ ಅಥವಾ ಆಲ್ ರೌಂಡರ್ ಶಾರ್ದೂಲ್ ಠಾಕೂರ್ ಆಡಿಸಬಹುದಿತ್ತು.

ನಿರ್ಣಾಯಕ ಟಾಸ್: ದುಬೈ ಅಂಗಳದಲ್ಲಿ ಟಾಸ್ ನಿರ್ಣಾಯಕವಾಗಿತ್ತು. ಹೀಗಾಗಿ ಟಾಸ್ ಗೆದ್ದ ಬಾಬರ್ ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಭಾರತದ ಬೌಲಿಂಗ್ ವೇಳೆ ಇಬ್ಬನಿ ಬೀಳುತ್ತಿದ್ದರಿಂದ ಸ್ಪಿನ್ನರ್ ಗಳು ಪರದಾಡುವಂತಾಯಿತು.

ಸತತ ವಿಕೆಟ್ ಪತನ: ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕರಿಬ್ಬರು ಬೇಗನೇ ಔಟಾದರು. ನಂತರ ಬಂದ ಸೂರ್ಯಕುಮಾರ್ ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಸೆಟ್ ಆದ ರಿಷಭ್ ಪಂತ್ ಕೂಡಾ ಔಟಾದರು. ದೊಡ್ಡ ಮೊತ್ತದ ಅಂದಾಜಿನಲ್ಲಿದ್ದ ವಿರಾಟ್ ಗೆ ಸತತ ವಿಕೆಟ್ ಪತನ ಸಂಕಷ್ಟ ತಂದಿಟ್ಟಿತು.

ಮೊನಚು ಕಳೆದುಕೊಂಡ ಬೌಲಿಂಗ್: 152 ರನ್ ಗುರಿ ಪಡೆದ ಪಾಕ್ ಪಡೆ ವಿಕೆಟ್ ನಷ್ಟವಿಲ್ಲದೆ ಜಯ ಸಾಧಿಸಿತು. ಭಾರತೀಯ ಬೌಲರ್ ಗಳು ಯಾವ ಹಂತದಲ್ಲೂ ಪ್ರತಿರೋಧ ಒಡ್ಡಲಿಲ್ಲ. ವಿಕೆಟ್ ಗಳು ಉರುಳಿದ್ದರೆ ಪಂದ್ಯದ ಫಲಿತಾಂಶ ಬದಲಿಸುವ ಅವಕಾಶವಿತ್ತು. ಆದರೆ ಹಾಗಾಗಲಿಲ್ಲ.

ವಿಶ್ವಕಪ್ ನಲ್ಲಿ ಪಾಕಿಸ್ಥಾನ ವಿರುದ್ಧದ ಭಾರತದ ಸತತ ಗೆಲುವಿನ ಸರಪಣಿ ಈ ಸೋಲಿನ ಮೂಲಕ ತುಂಡರಿಸಿತು. ಮಹಾ ಕೂಟದಲ್ಲಿ ಮೊದಲ ಬಾರಿಗೆ ಪಾಕಿಸ್ಥಾನ ಭಾರತದ ವಿರುದ್ಧ ಗೆಲುವಿನ ನಗೆ ಬೀರಿತು.

Advertisement

Udayavani is now on Telegram. Click here to join our channel and stay updated with the latest news.

Next