Advertisement

ಒಳಗಡೆ ಬಂದದ್ದೆಷ್ಟು ಹೊರ ಹೋದದ್ದೆಷ್ಟು?

01:05 PM Dec 03, 2017 | |

ಬೆಂಗಳೂರು: ಬ್ಲ್ಯಾಕ್‌ ಆ್ಯಂಡ್‌ ವೈಟ್‌ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕಡೆಯಿಂದ ಇದುವರೆಗೂ ಆಗಿರುವ ದಾಳಿಗಳೆಷ್ಟು? ಎಷ್ಟು ಮೊತ್ತದ ಹಳೇ ಮತ್ತು ಹೊಸ ನೋಟುಗಳು ಪತ್ತೆಯಾಗಿವೆ ಎಂಬು ಬಗ್ಗೆ ಎರಡು ದಿನಗಳಲ್ಲಿ ವರದಿ ನೀಡುವಂತೆ ನಗರ ಜಂಟಿ ಪೊಲೀಸ್‌ ಆಯುಕ್ತ ಸತೀಶ್‌ ಅವರು ಸಿಸಿಬಿ ಡಿಸಿಪಿಗಳಿಗೆ ಸೂಚಿಸಿದ್ದಾರೆ.

Advertisement

ಪ್ರಾಥಮಿಕ ಮಾಹಿತಿ ಪ್ರಕಾರ ಸಿಸಿಬಿಯಲ್ಲಿ 15 ಕೋಟಿ ರೂ. ಪೈಕಿ 3 ಕೋಟಿ ರೂ. ನಾಪತ್ತೆಯಾಗಿದೆ ಎನ್ನಲಾಗಿದೆ. ಆದರೆ, ಸ್ಪಷ್ಟವಾದ ಚಿತ್ರಣ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಸಿಬಿ ಎಲ್ಲ ವಿಭಾಗಗಳ ಅಧಿಕಾರಿಗಳು ತಮ್ಮ ವಿಭಾಗಗಳಿಗೆ ಸಂಬಂಧಿಸಿದಂತೆ ಪ್ರತಿಯೊಂದು ವಿವರಗಳನ್ನೊಂಡ ವರದಿ ನೀಡಲು ನಿರ್ದೇಶನ ನೀಡಿದ್ದಾರೆ.

ಸಿಸಿಬಿಯಲ್ಲಿ ಕೋಟ್ಯಂತರ ರೂಪಾಯಿ ಹಣ ನಾಪತ್ತೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಪ್ರಕರಣಗಳ ತನಿಖಾಧಿಕಾರಿಗಳು ದಾಳಿಗಳ ಮಾಹಿತಿ ನೀಡಲು ಸ್ವತಃ ಮುಂದೆ  ಬಂದಿದ್ದಾರೆ. ಪ್ರತಿ ಪ್ರಕರಣದ ಲೆಕ್ಕ ಸಿಕ್ಕ ಬಳಿಕ ಸಿಬ್ಬಂದಿ ಯಾವ ಹಣ ಬಳಕೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬರಲಿದೆ ಎಂದು ಸಿಸಿಬಿಯ ಮೂಲಗಳು ತಿಳಿಸಿವೆ.

ಸದ್ಯ ಹಣ ದುರ್ಬಳಕೆ ಆರೋಪ ಕೇಳಿಬಂದಿರುವ ಎಸಿಪಿ ಮರಿಯಪ್ಪ ಅವರು ನಾಲ್ಕೈದು ತಿಂಗಳ ಹಿಂದಷ್ಟೇ ಸಿಸಿಬಿಗೆ ವರ್ಗಾವಣೆಯಾಗಿದ್ದಾರೆ. ಆದರೆ, ನಾಪತ್ತೆಯಾಗಿರುವ ಮೂವರು ಒಂದೂವರೆ ವರ್ಷಗಳಿಂದ ಇಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಹೀಗಾಗಿ ಒಂದು ವೇಳೆ ಎಸಿಪಿ ಮರಿಯಪ್ಪ ಅವರ ಗಮನಕ್ಕೆ ಬಾರದೆಯೇ ಮೂವರು ದಾಳಿ ನಡೆಸಿರುವ ಸಾಧ್ಯತೆಗಳಿವೆ. ಜತೆಗೆ ಕಚೇರಿಯಲ್ಲಿದ್ದ ಹಣವನ್ನು ದುರುಪಯೋಗ ಮಾಡಿರಬಹುದು. ಸದ್ಯದ ಮಾಹಿತಿ ಪ್ರಕಾರ ಮರಿಯಪ್ಪ ಅವರು ಭಾಗಿಯಾಗಿರುವ ಬಗ್ಗೆ ಸಮರ್ಪಕ ಸಾಕ್ಷ್ಯಗಳಿಲ್ಲ ಎನ್ನಲಾಗಿದೆ.

Advertisement

ಐಎಎಸ್‌ ಅಧಿಕಾರಿಯ ಹಣ?: ಕೆಲ ತಿಂಗಳ ಹಿಂದೆ ಪೂರ್ವ ವಲಯದಲ್ಲಿ ಇದೇ ತಂಡ ಮೂರು ಕೋಟಿ ರೂ. ಹಣ ಬದಲಾವಣೆಗೆ ಬಂದಿದ್ದ ತಮಿಳುನಾಡು ಮೂಲದ ಕೆಲ ವ್ಯಕ್ತಿಗಳಿಂದ ಅಷ್ಟೂ ಹಣ ವಶಕ್ಕೆ ಪಡೆದುಕೊಂಡಿತ್ತು. ಈ ಹಣ ತಮಿಳುನಾಡಿನ ಐಎಎಸ್‌ ಅಧಿಕಾರಿಗೆ ಸೇರಿದ್ದು ಎಂದು ಹೇಳಲಾಗಿದೆ.

ಆದರೆ, ಖಚಿತವಾಗಿಲ್ಲ. ಈ ಮಧ್ಯೆ ಆ ಐಎಎಸ್‌ ಅಧಿಕಾರಿ ದಾಳಿ ನಡೆಸಿದ ಸಿಬ್ಬಂದಿಯನ್ನು ಸಂಪರ್ಕಿಸಿ ವಶಕ್ಕೆ ಪಡೆದುಕೊಂಡ ಹಣದ ಬಗ್ಗೆ ಎಲ್ಲಿಯೂ ದೂರು ನೀಡಿಲ್ಲ. ಹೀಗಾಗಿ ಈ ಹಣವನ್ನು ಕೂಡಲೇ ವಾಪಸ್‌ ಕೊಡುವಂತೆ ಒತ್ತಾಯಿಸಿದ್ದರು. ಈ ಸಂಬಂಧವೂ ಸೂಕ್ಷ್ಮವಾಗಿ ತನಿಖೆ ನಡೆಯುತ್ತಿದೆ.

ಹಿಂದೊಮ್ಮೆ ಬ್ಲಾಕ್‌ ಆ್ಯಂಡ್‌ ವೈಟ್‌ ದಂಧೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಯೊಬ್ಬರನ್ನು ಜಾರಿ ನಿರ್ದೇಶನಾಲಯ ಬಂಧಿಸಿದಾಗಲೂ ಹಣ ಬದಲಾವಣೆ ವಿಚಾರದಲ್ಲಿ ತಮಿಳುನಾಡಿನ ಸಂಪರ್ಕದ ಬಗ್ಗೆ ಮಾಹಿತಿ ದೊರೆತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next