Advertisement

2023ರ ಏಕದಿನ ವಿಶ್ವಕಪ್ ಗೆ ಭಾರತ ತಂಡ ಹೇಗಿರಬೇಕು? ಇಲ್ಲಿದೆ ಒಂದು ಅವಲೋಕನ

04:51 PM Dec 15, 2022 | ಕೀರ್ತನ್ ಶೆಟ್ಟಿ ಬೋಳ |

ಎರಡು ವರ್ಷಗಳಲ್ಲಿ ಎರಡು ಟಿ20 ವಿಶ್ವಕಪ್ ಗಳು, ಒಂದು ಏಷ್ಯಾಕಪ್ ನ ನಿರೀಕ್ಷಿತ ಮಟ್ಟದಲ್ಲಿರದ ಪ್ರದರ್ಶನಗಳು, ನಾಯಕತ್ವ ಬದಲಾವಣೆ ಪ್ರಹಸನಗಳು, ಎ ಟೀಮ್, ಬಿ ಟೀಮ್ ಪ್ರಯೋಗಗಳು, ಹಲವಾರು ಹೊಸಮುಖಗಳ ಪದಾರ್ಪಣೆ.. ಹೀಗೆ 2019ರ ಏಕದಿನ ವಿಶ್ವಕಪ್ ಬಳಿಕ ಭಾರತೀಯ ಪುರುಷರ ಕ್ರಿಕೆಟ್ ತಂಡದಲ್ಲಿ ಹಲವಾರು ಬದಲಾವಣೆಗಳು ನಡೆದಿದೆ. ಇದರ ನಡುವೆಯೇ ಮತ್ತೊಂದು ಏಕದಿನ ವಿಶ್ವಕಪ್ ಸಮೀಪಿಸುತ್ತಿದೆ.

Advertisement

2023ರ ಏಕದಿನ ವಿಶ್ವಕಪ್ ಸಂಪೂರ್ಣವಾಗಿ ಭಾರತದಲ್ಲೇ ನಡೆಯಲಿದೆ. ವಿಶ್ವ ಕ್ರಿಕೆಟ್ ನ ಪವರ್ ಹೌಸ್ ಆಗಿರುವ ಭಾರತ ಯಾವುದೇ ಐಸಿಸಿ ಟ್ರೋಫಿ ಗೆಲ್ಲದೆ ಈ ವೇಳೆ ಒಂದು ದಶಕವೇ ಕಳೆದುಹೋಗಿರುತ್ತದೆ. (2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೇ ಕೊನೆ) ತವರಿನಲ್ಲೇ ಕೂಟ ನಡೆಯುವ ಕಾರಣ ಒತ್ತಡವೂ ಒಂದು ತೂಕ ಹೆಚ್ಚೇ ಇರುತ್ತದೆ. ಸದ್ಯ ಕೂಟಕ್ಕೆ ಬಹುತೇಕ ಹತ್ತು ತಿಂಗಳು ಇರುವ ಕಾರಣ ಈಗಾಗಲೇ ತಯಾರಿಯಲ್ಲಿ ತೊಡಗಿದೆ.

ಮುಂದಿನ ವಿಶ್ವಕಪ್ ಗೆ ಭಾರತ ತಂಡ ಹೇಗಿರಬೇಕು ಎನ್ನುವ ಬಗ್ಗೆ ಇಲ್ಲಿದೆ ಒಂದು ವರದಿ.

ಅಗ್ರ ಕ್ರಮಾಂಕ

ರೋಹಿತ್ – ಶಿಖರ್- ವಿರಾಟ್

Advertisement

2013ರಿಂದಲೂ ಈ ಮೂವರು ಭಾರತದ ಬ್ಯಾಟಿಂಗ್ ನ ಬೆನ್ನುಲುಬಾಗಿದ್ದಾರೆಂದರೆ ತಪ್ಪಾಗಲಾರದು. ಈ ಮೂವರು ಪ್ರದರ್ಶನದ ಮೇಲೆಯೇ ತಂಡದ ಪ್ರದರ್ಶನವೂ ನಿರ್ಧರಿತವಾಗುತ್ತದೆ ಎನ್ನಬಹುದು. ನಾಯಕ ರೋಹಿತ್ ಮತ್ತು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡುವುದು ಬಹುತೇಕ ಖಚಿತ. ಆದರೆ ಶಿಖರ್ ಧವನ್ ಸ್ಥಾನ ಮಾತ್ರ ತೂಗುಯ್ಯಾಲೆಯಲ್ಲಿದೆ. ಇತ್ತೀಚಿನ ದಿನಗಳಲ್ಲಿ ಧವನ್ ತಮ್ಮ ಕಳಪೆ ಪ್ರದರ್ಶನದ ಕಾರಣದಿಂದ ಪ್ರಮುಖ ತಂಡದಲ್ಲೂ ಸ್ಥಾನ ಪಡೆಯುತ್ತಿಲ್ಲ. ಈ ನಡುವೆ ಯುವ ಆಟಗಾರರಾದ ಶುಭ್ಮನ್ ಗಿಲ್ ಮತ್ತು ಇಶಾನ್ ಕಿಶನ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಧವನ್ ಸ್ಥಾನಕ್ಕೆ ಭಾರೀ ಪೈಪೋಟಿ ನೀಡುತ್ತಿದ್ದಾರೆ. ವಿಶ್ವಕಪ್ ನಲ್ಲಿ ರೋಹಿತ್ ಜೊತೆ ಗಿಲ್ ಅಥವಾ ಕಿಶನ್ ಇನ್ನಿಂಗ್ಸ್ ಆರಂಭಿಸಿದರೂ ಅಚ್ಚರಿ ಪಡಬೇಕಿಲ್ಲ.

ಸ್ಪರ್ಧಿಗಳು: ಶುಭ್ಮನ್ ಗಿಲ್, ಇಶಾನ್ ಕಿಶನ್,  ಋತುರಾಜ್ ಗಾಯಕ್ವಾಡ್

ಮಧ್ಯಮ ಕ್ರಮಾಂಕ

ಶ್ರೇಯಸ್ ಅಯ್ಯರ್- ಕೆಎಲ್ ರಾಹುಲ್- ರಿಷಭ್ ಪಂತ್

2011ರ ವಿಶ್ವಕಪ್ ಮುಗಿದ ಬಳಿಕ ಆರಂಭವಾದ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಬಗೆಹರಿದಿಲ್ಲ. ನಾಲ್ಕನೇ ಕ್ರಮಾಂಕಕ್ಕೆ ಪರಿಪೂರ್ಣ ಆಟಗಾರ ಎಂದೇ ಭಾವಿಸಲಾಗಿದ್ದ ಶ್ರೇಯಸ್ ಅಯ್ಯರ್ ಗೆ ಸದ್ಯ ಸರಿಯಾದ ಜಾಗವೇ ಇಲ್ಲ. ಆರಂಭಿಕ- ಮಧ್ಯಮ ಎಂದು ಜಂಪ್ ಮಾಡುತ್ತಿರುವ ಕೆಎಲ್ ರಾಹುಲ್ ಮುಂದಿನ ವಿಶ್ವಕಪ್ ನಲ್ಲಿ ಮಿಡಲ್ ನಲ್ಲೇ ಬ್ಯಾಟ್ ಬೀಸಬಹುದು. ( ಬಾಂಗ್ಲಾ ಸರಣಿಯಲ್ಲಿ ಈ ಸುಳಿವು ನೀಡಲಾಗಿದೆ) ರಾಹುಲ್ ಬಂದರೆ ಅಯ್ಯರ್ ಸ್ಥಾನಕ್ಕೆ ಬಹುತೇಕ ಕುತ್ತು ಬಂದಂತೆ.

ಇನ್ನು ವಿಕೆಟ್ ಕೀಪರ್ ಮತ್ತು ಎಡಗೈ ಬ್ಯಾಟರ್ ಕೋಟಾದಲ್ಲಿ ಆಡುವ ರಿಷಭ್ ಪಂತ್ ಇದೇ ಕಾರಣಕ್ಕೆ ಸ್ಥಾನ ಪಡೆಯುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಂತ್ ಅವರ ಸೀಮಿತ ಓವರ್ ಮಾದರಿಯ ಆಟ ತೀರಾ ಕಳಪೆಯಾಗಿದೆ. ಆದರೆ ತಂಡದ ಕೀಪರ್ ಆಗಿ ಇವರನ್ನೇ ಬ್ಯಾಕ್ ಮಾಡುತ್ತಿರುವ ಕಾರಣ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು. ಒಂದು ವೇಳೆ ಪ್ರದರ್ಶನ ಮಟ್ಟ ಮೇಲೆರದೇ ಹೋದರೆ ರಾಹುಲ್ ಗೆ ಕೀಪಿಂಗ್ ಗ್ಲೌಸ್ ತೊಡಿಸುವ ಬಗ್ಗೆ ದ್ರಾವಿಡ್ ಯೋಚನೆ ಮಾಡಬಹುದು.

ಸ್ಪರ್ಧಿಗಳು; ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ದಿನೇಶ್ ಕಾರ್ತಿಕ್

ಆಲ್ ರೌಂಡರ್

ಹಾರ್ದಿಕ್ ಪಾಂಡ್ಯ- ರವೀಂದ್ರ ಜಡೇಜಾ

ಪಾಂಡ್ಯ ಮತ್ತು ಜಡೇಜಾ ಇಬ್ಬರೂ ವಿಶ್ವಕಪ್ ವೇಳೆ ಫಿಟ್ ಇದ್ದರೆ ಅದು ತಂಡಕ್ಕೆ ಅತೀ ದೊಡ್ಡ ಪ್ಲಸ್. ಇವರಿಬ್ಬರೂ ಬೌಲಿಂಗ್ ಮಾಡಿದರೆ ತಂಡಕ್ಕೆ ಅದು ಹೆಚ್ಚಿನ ಅವಕಾಶ ಸಿಗುತ್ತದೆ. ಪಾಂಡ್ಯ ಮತ್ತು ಜಡೇಜಾ ಇಬ್ಬರೂ ವಿಶ್ವಕಪ್ ತಂಡದಲ್ಲಿ ಆಡುವುದು ಬಹುತೇಕ ಖಚಿತ. ಬೌಲಿಂಗ್ ಆಯ್ಕೆಯ ಜೊತೆ ಇಬ್ಬರೂ ಸ್ಪೋಟಕ ಬ್ಯಾಟರ್ ಗಳಾದ ಕಾರಣ ಉತ್ತಮ ಫಿನಿಶರ್ ಗಳಾಗಿ ಕೆಲಸಕ್ಕೆ  ಬರುತ್ತಾರೆ.  ಆದರೆ ಇವರಿಬ್ಬರೂ ಏಕಕಾಲಕ್ಕೆ ಫಿಟ್ ಇದ್ದು ತಂಡಕ್ಕೆ ಲಭ್ಯರಿರುವವುದು ಬಹು ಅಪರೂಪ.

ಸ್ಪರ್ಧೆಗಳು: ಅಕ್ಸರ್ ಪಟೇಲ್, ದೀಪಕ್ ಹೂಡಾ.

ಬೌಲರ್ ಗಳು

ಜಸ್ಪ್ರೀತ್ ಬುಮ್ರಾ- ಮೊಹಮ್ಮದ್ ಶಮಿ- ಯುಜಿ ಚಾಹಲ್- ಅರ್ಶದೀಪ್

ಪಂದ್ಯ ಗೆಲ್ಲಲು ಬ್ಯಾಟರ್ ಬೇಕು,ಆದರೆ ಟೂರ್ನಮೆಂಟ್ ಗೆಲ್ಲಲು ಉತ್ತಮ ಬೌಲರ್ ಬೇಕು ಎಂಬ ಮಾತಿದೆ. ಅದರಂತೆ ವಿಶ್ವಕಪ್ ಗೆಲ್ಲಬೇಕಾದರೆ ಭಾರತ ತಂಡವು ಉತ್ತಮ ಬೌಲಿಂಗ್ ಪಡೆ ಕಟ್ಟುವುದು ಬಹು ಮುಖ್ಯ. ವೇಗಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಸ್ಪಿನ್ನರ್ ಯುಜಿ ಚಾಹಲ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಇವರೊಂದಿಗೆ ಮೂರನೇ ವೇಗಿಯಾಗಿ ಅರ್ಶದೀಪ್ ಅಥವಾ ಉಮ್ರಾನ್ ಮಲಿಕ್ ಸ್ಥಾನ ಪಡೆಯಬಹುದು. ಅಂದಹಾಗೆ ಅನುಭವಿ ಭುವನೇಶ್ವರ್ ಕುಮಾರ್ ಕೂಡಾ ಸ್ಪರ್ಧೆಯಲ್ಲಿದ್ದಾರೆ. ಮತ್ತೋರ್ವ ಸ್ಪಿನ್ನರ್ ರೂಪದಲ್ಲಿ ಕುಲದೀಪ್ ಯಾದವ್ ಅಥವಾ ಅಶ್ವಿನ್ ಬರಬಹುದು.

ಸ್ಪರ್ಧಿಗಳು: ಕುಲದೀಪ್ ಯಾದವ್, ಪ್ರಸಿಧ್ ಕೃಷ್ಣ, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್.

Advertisement

Udayavani is now on Telegram. Click here to join our channel and stay updated with the latest news.

Next