Advertisement

ಏತ ನೀರಾವರಿಗೆ ಆದ್ಯತೆ: ಸಂಭ್ರಮ

09:09 AM Feb 11, 2019 | Team Udayavani |

ಶಿರಾಳಕೊಪ್ಪ: ನೀರಾವರಿ ಹೋರಾಟದ ಫಲವಾಗಿ ಈ ಬಾರಿಯ ಬಜೆಟ್‌ನಲ್ಲಿ ಶಿಕಾರಿಪುರ ತಾಲೂಕಿಗೆ ಆದ್ಯತೆ ಸಿಕ್ಕಿದೆ ಎಂದು ಮಾಜಿ ಶಾಸಕ ಬಿ.ಎನ್‌. ಮಹಾಲಿಂಗಪ್ಪ ಹೇಳಿದರು. ಪಟ್ಟಣದ ಬಸ್‌ ನಿಲ್ದಾಣದ ವೃತ್ತದಲ್ಲಿ ಶನಿವಾರ ತಾಲೂಕಿನ ಏತ ನೀರಾವರಿ ಯೋಜನೆಗೆ ಬಜೆಟ್‌ನಲ್ಲಿ ಸರ್ಕಾರ ರೂ. 200 ಕೋಟಿ ನೀಡಿರುವ ಹಿನ್ನಲೆಯಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಕಾರ್ಯಕರ್ತರು ನಡೆಸಿದ ಸಂಭ್ರಮಾಚರಣೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

Advertisement

ಇಷ್ಟು ವರ್ಷ ಜನಪ್ರತಿನಿಧಿಯಾಗಿ ಅಧಿಕಾರ ಅನುಭವಿಸಿದ ಬಿ.ಎಸ್‌. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ರಾಘವೇಂದ್ರ ನೀರಾವರಿ ಯೋಜನೆ ಅನುಷ್ಠಾನ ಸಾಧ್ಯವಿಲ್ಲ ಎಂದಿದ್ದರು. ಪ್ರತಿಪಕ್ಷಗಳು ಹೋರಾಟ ಕೈಗೆತ್ತಿಕೊಂಡ ನಂತರ ತರಾತುರಿಯಲ್ಲಿ ನೀರಾವರಿ ಹೋರಾಟ ಮಾಡುವ ನಾಟಕ ಮಾಡಿದ್ದರು. ಈಗ ಕುಮಾರಸ್ವಾಮಿ ಸರ್ಕಾರದ ಕೆಲಸವನ್ನು ಶ್ಲಾಘಿಸುವ ಬದಲು ಸರ್ಕಾರ ಬೀಳಿಸುವ ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಾಲೂಕು ಜೆಡಿಎಸ್‌ ಅಧ್ಯಕ್ಷ ಬಿಳಿಕಿ ನಾಗರಾಜ ಗೌಡ ಮಾತನಾಡಿ, ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹಾಗೂ ಎಚ್.ಟಿ. ಬಳಿಗಾರ್‌ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಸಿದ ಪ್ರತಿಫಲವಾಗಿ ತಾಲೂಕಿನ ರೈತರಿಗೆ ನೀರಾವರಿ ಯೋಜನೆ ಮಂಜೂರಾಗಿದೆ ಎಂದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಜೆ. ಪಕ್ಕೀರಪ್ಪ ಮಾತನಾಡಿ, ಲೋಕಸಭಾ ಉಪ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ನೀರಾವರಿ ಯೋಜನೆ ಜಾರಿಗೆ ಮನವಿ ಮಾಡಲಾಗಿತ್ತು. ಆಗ ಕುಮಾರಸ್ವಾಮಿ ನೀರಾವರಿ ಯೋಜನೆ ಜಾರಿಗೆ ತಂದು ಇಲ್ಲಿಗೆ ಮತ್ತೆ ಬರುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಈಗ ಕೊಟ್ಟ ಮಾತನ್ನು ಈಡೇರಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ತಾಲೂಕು ಜೆಡಿಎಸ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮಕ್ಬೂಲ್‌ ಸಾಬ್‌, ಟೌನ್‌ ಕಾಂಗ್ರೆಸ್‌ ಅಧ್ಯಕ್ಷ ಬಿಲಾಲ್‌, ಟೌನ್‌ ಜೆಡಿಎಸ್‌ ಅಧ್ಯಕ್ಷ ಬೆಲವಂತನಕೊಪ್ಪ ರಾಘವೇಂದ್ರ, ಬ್ಲಾಕ್‌ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಯಾಜ್‌ ಅಹ್ಮದ್‌, ಪಪಂ ಸದಸ್ಯರಾದ ಪಿ.ಜಾಫರ್‌, ಎಂ.ಆರ್‌. ರಾಘವೇಂದ್ರ , ತಡಗಣಿ ರಾಜಣ್ಣ, ಮುದಾಸಿರ್‌, ಕೆಡಿಪಿ ಸದಸ್ಯ ಕೋಡಿಹಳ್ಳಿ ಉಮೇಶ್‌, ಹಿರೇಜಂಬೂರು ಚಂದ್ರಪ್ಪ, ಹಿರೇಜಂಬೂರು ಬಸವರಾಜಪ್ಪ ಇದ್ದರು.

Advertisement

ಯಡಿಯೂರಪ್ಪರಿಂದ ಜನರ ದಿಕ್ಕು ತಪ್ಪಿಸುವ ಕೆಲಸ
ಶಿರಾಳಕೊಪ್ಪ:
ಯಡಿಯೂರಪ್ಪ ಮತ್ತು ಅವರ ಮಗ ರಾಘವೇಂದ್ರ ತಾಲೂಕಿನ ನೀರಾವರಿ ಯೋಜನೆಗೆ ಹಣ ಮಂಜೂರು ನಾವು ಮಾಡಿಸಿಕೊಂಡು ಬಂದಿದ್ದೇವೆ ಎಂದು ತಾಲೂಕಿನ ಜನತೆಯ ಮುಂದೆ ಸುಳ್ಳು ಹೇಳಿ ಜನತೆಯ ದಿಕ್ಕು ತಪ್ಪಿಸುವ ಕೆಲಸ ಮಾಡುತಿದ್ದಾರೆ. ಧೈರ್ಯವಿದ್ದರೆ ಜನತೆಯ ಮುಂದೆ ಸತ್ಯ ಹೇಳಲಿ ಎಂದು ಜೆಡಿಎಸ್‌ ಮುಖಂಡ ಎಚ್.ಟಿ. ಬಳಿಗಾರ್‌ ಸವಾಲು ಹಾಕಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಳಗುಂದ, ಉಡುಗಣಿ ಹೋಬಳಿ ರೈತರಿಗೆ ನೀರಾವರಿ ಯೋಜನೆ ಮಾಡುತ್ತೇನೆ ಎಂದು ಭರವಸೆ ನೀಡುತ್ತಾ ಬಂದ ಇವರು 40 ವರ್ಷದ ಹಿಂದೆ ಶಾಸಕರಾದಾಗ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶಿವಮೊಗ್ಗ, ಶಿಕಾರಿಪುರ, ರಾಣೆಬೆನ್ನೂರು ರೈಲ್ವೆ ಯೋಜನೆಗೆ ರೂ. 950 ಕೋಟಿ ವೆಚ್ಚಕ್ಕೆ ಕೇವಲ 10 ಲಕ್ಷ ಮಂಜೂರು ಮಾಡಿಸಿರುವ ಸಂಸದರು, ರೂ. 850 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ರೂ. 200 ಕೋಟಿ ಮಂಜೂರು ಮಾಡಿರುವ ಜೆಡಿಎಸ್‌, ಕಾಂಗ್ರೆಸ್‌ ಪಕ್ಷದ ನಾಯಕರ ಬಗ್ಗೆ ಟೀಕೆ ಮಾಡುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು. ಏತ ನೀರಾವರಿ ಯೋಜನೆಯ ಹೋರಾಟ ಹಿರೇಜಂಬೂರು ಗ್ರಾಮಸ್ಥರು, ರೈತ ಸಂಘ ಹಾಗೂ ಹಸಿರು ಸೇನೆ, ಸುವರ್ಣ ಕರ್ನಾಟಕ ಸಂಘದ ನೇತೃತ್ವದಲ್ಲಿ ಉಗ್ರರೂಪ ಪಡೆಯಿತು. ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕಳೆದ 8 ತಿಂಗಳಿನಿಂದ ಶಿಕಾರಿಪುರ ತಾಲೂಕು ಎಲ್ಲಿದೆ ಎನ್ನುವುದೇ ಮರೆತು ಹೋಗಿದೆ. ಅವರು ಸಂಪೂರ್ಣ ಆಪರೇಶನ್‌ ಕಮಲದಲ್ಲಿಯೇ ಮುಳುಗಿ ಹೋಗಿದ್ದಾರೆ. ಇನ್ನು ನೀರಾವರಿ ಯೋಜನೆ ಬಗ್ಗೆ ಯೋಚನೆ ಮಾಡಲು ಸಮಯ ಇರಬೇಕಲ್ಲ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next