Advertisement

Germany ಯಲ್ಲಿ ಆರ್ಥಿಕ ಹಿಂಜರಿತ ಭಾರತದ ಮೇಲೇನು ಪರಿಣಾಮ?

12:09 AM May 30, 2023 | Team Udayavani |

ಮೊದಲು ಅಮೆರಿಕ, ಈಗ ಜರ್ಮನಿ. ಪಾಶ್ಚಾತ್ಯ ದೇಶಗಳು ಒಂದೊಂದಾಗಿ ಆರ್ಥಿಕ ಹಿಂಜರಿತದ ಕುಣಿಕೆಗೆ ಕೊರಳೊಡ್ಡುತ್ತಿವೆ. ಜರ್ಮನಿ ಸತತ ಎರಡು ತ್ತೈಮಾಸಿಕಗಳಲ್ಲಿ ನೇತ್ಯಾತ್ಮಕ ಪ್ರಗತಿ ಸಾಧಿಸಿದ್ದು, ಹೀಗಾಗಿ ತಾಂತ್ರಿಕವಾಗಿ ಆರ್ಥಿಕ ಹಿಂಜರಿತಕ್ಕೆ ಬಿದ್ದಿದೆ ಎಂದು ಘೋಷಿಸಲಾಗಿದೆ. ಇದರಿಂದ ಜಗತ್ತಿನ ಮೇಲೆ ಮತ್ತು ಭಾರತದ ಮೇಲಾಗುವ ಪರಿಣಾಮವೇನು?

Advertisement

ಆರ್ಥಿಕ ಹಿಂಜರಿತದ ಸುಳಿಗೆ ಬಿದ್ದಿದ್ದು ಹೇಗೆ?

ಕೊರೊನಾ ಕಾಲ ಬಿಟ್ಟರೆ ಅನಂತರದ ದಿನಗಳಲ್ಲಿ ಜರ್ಮನಿಯ ಆರ್ಥಿಕತೆ ನಿಧಾನಗತಿಯಲ್ಲಿ ಸುಧಾರಣೆಗೊಂಡಿತ್ತು. ಆದರೆ ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣ ಮತ್ತೆ ಪೆಟ್ಟು ನೀಡಿತು. ಹೀಗಾಗಿ ಯುರೋಪ್‌ನ ಅತೀ ದೊಡ್ಡ ಆರ್ಥಿಕತೆ ಮತ್ತು ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆ ಎಂದೇ ಖ್ಯಾತಿ ಪಡೆದಿರುವ ಜರ್ಮನಿ, ಆರ್ಥಿಕ ಹಿಂಜರಿತದ ಸುಳಿಗೆ ಸಿಲುಕಿತು.

ಆರ್ಥಿಕ ಹಿಂಜರಿತ ಘೋಷಣೆ ಹೇಗೆ?

ಜರ್ಮನಿಯಲ್ಲಿ ಕಳೆದ ಎರಡು ತ್ತೈಮಾಸಿಕಗಳಲ್ಲಿ ದೇಶದ ಜಿಡಿಪಿ ದರ ಕನಿಷ್ಠ ಮಟ್ಟದಲ್ಲಿ ಬೆಳವಣಿಗೆಯಾಗಿದೆ. ಅಂದರೆ ಕಳೆದ ವರ್ಷದ ನಾಲ್ಕನೇ ತ್ತೈಮಾಸಿಕದಲ್ಲಿ 0.5ಕ್ಕೆ ಕುಸಿದಿದ್ದ ಜಿಡಿಪಿ ಈ ವರ್ಷದ ಮೊದಲ ತ್ತೈಮಾಸಿಕದಲ್ಲಿ 0.3ಕ್ಕೆ ಕುಸಿದಿದೆ. ಈ ಅಂಕಿ ಅಂಶಗಳು ಜರ್ಮನಿಯನ್ನು ತಾಂತ್ರಿಕವಾಗಿ ಹಿಂಜರಿತಕ್ಕೆ ತಳ್ಳಿದವು. ಸಾಮಾನ್ಯವಾಗಿ ಸತತ ಎರಡು ತ್ತೈಮಾಸಿಕಗಳಲ್ಲಿ ಈ ರೀತಿಯ ಕುಸಿತ ದಾಖಲಾದರೆ  ಅದನ್ನು ಆರ್ಥಿಕ ಹಿಂಜರಿತ ಎಂದು ಕರೆಯಲಾಗುತ್ತದೆ.  ಈ ಬಗ್ಗೆ ಅಲ್ಲಿನ ವಿತ್ತ ಸಚಿವರು ಮಾತನಾಡಿದ್ದು, ಅನಿಲಕ್ಕಾಗಿ ರಷ್ಯಾ ಮೇಲೆ ನಾವು ಹೆಚ್ಚು ಅವಲಂಬಿತವಾಗಿದ್ದೇ ಇದಕ್ಕೆ ಕಾರಣ ಎಂದಿದ್ದಾರೆ. ಹಾಗೆಯೇ ಈ ಹಿಂಜರಿತದಿಂದ ಸದ್ಯದಲ್ಲೇ ಚೇತರಿಸಿ ಕೊಳ್ಳಲಿದ್ದೇವೆ ಎಂದೂ ಹೇಳಿದ್ದಾರೆ.

Advertisement

ಜರ್ಮನಿ ಮೇಲೇಕೆ ಹೊಡೆತ?

ಸದ್ಯ ಜಿ7 ರಾಷ್ಟ್ರಗಳಲ್ಲಿ ಜರ್ಮನಿ ಆರ್ಥಿಕವಾಗಿ ಹೆಚ್ಚು ಪೆಟ್ಟು ತಿನ್ನುತ್ತಿದೆ. ತಜ್ಞರ ಪ್ರಕಾರ ಜರ್ಮನಿ, ಭಾರೀ ಪ್ರಮಾಣದ ಹಣದುಬ್ಬರ ಸಮಸ್ಯೆ ಎದುರಿಸುತ್ತಿದೆ. ಇದರಿಂದಾಗಿ ದೇಶದ ಪ್ರಗತಿ ದರದ ಮೇಲೆ ಕೊಡಲಿ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲ, ರಷ್ಯಾದಿಂದ ಇಂಧನ ಸರಬರಾಜು ಸ್ಥಗಿತವಾದ ಮೇಲೆ ಇನ್ನಷ್ಟು ಪೆಟ್ಟು ಬಿದ್ದಿತು.  ಅಂಕಿ ಅಂಶಗಳ ಪ್ರಕಾರ, ಹಣದುಬ್ಬರದಿಂದಾಗಿ ಜರ್ಮನಿಯ ಜನತೆಗೆ ಹೆಚ್ಚಿನ ಹಣ ವೆಚ್ಚ ಮಾಡಲಾಗುತ್ತಿಲ್ಲ. ಅಂದರೆ 2023ರ ಮೊದಲ ತ್ತೈಮಾಸಿಕದಲ್ಲಿ ಕುಟುಂಬಗಳ ವೆಚ್ಚ ಪ್ರಮಾಣ ಶೇ.1.2ರಷ್ಟಕ್ಕೆ ಇಳಿಕೆಯಾಗಿದೆ. ಜತೆಗೆ ಸರಕಾರದ ವೆಚ್ಚ ಕೂಡ ಶೇ.4.9ಕ್ಕೆ ಇಳಿಕೆಯಾಗಿದೆ.  ರಷ್ಯಾದಿಂದ ತೈಲ ಸರಬರಾಜು ನಿಂತ ಮೇಲೆ ಕೇವಲ ಕುಟುಂಬಗಳಿಗಷ್ಟೇ ಅಲ್ಲ, ಕೈಗಾರಿಕೆಗಳ ಮೇಲೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಅಲ್ಲದೆ ಈ ಕೈಗಾರಿಕೆಗಳನ್ನು ನಡೆಸುವವರಿಗೆ ರಷ್ಯಾದ ಇಂಧನಕ್ಕೆ ಪರ್ಯಾಯವಾಗಿ ಬೇರೊಂದು ದೇಶದಿಂದ ಇಂಧನ ಸಿಗುತ್ತಿಲ್ಲ. ಹೀಗಾಗಿ ಉತ್ಪಾದಕತೆ ಮೇಲೂ ಅಡ್ಡಪರಿಣಾಮ ಬೀರಿದೆ.  ಕೆಲವೊಂದು ಕೈಗಾರಿಕೆಗಳಿಗೆ ಜರ್ಮನಿ ಸರಕಾರ, ವಿದ್ಯುತ್‌ ಸಬ್ಸಿಡಿ ನೀಡುತ್ತಿದೆ. ಇದು ಮುಂದಿನ 7 ವರ್ಷಗಳಲ್ಲಿ 32 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಬಹುದು. ಅಲ್ಲದೆ ಈಗಾಗಲೇ ಜರ್ಮನಿಯಲ್ಲಿರುವ ಪರಮಾಣು ರಿಯಾಕ್ಟರ್‌ಗಳನ್ನು ಮುಚ್ಚಲಾಗಿದೆ. 2030ರ ವೇಳೆಗೆ ಕಲ್ಲಿದ್ದಲು ಆಧರಿತ ವಿದ್ಯುತ್‌ ಉತ್ಪಾದನ ಘಟಕಗಳನ್ನು ಮುಚ್ಚುವುದಾಗಿ ಘೋಷಿಸಲಾಗಿದೆ. ಈ ಎಲ್ಲ ನಿರ್ಧಾರಗಳಿಗೆ ಬದಲಾಗಿ, ಪರ್ಯಾಯವಾಗಿ ಇಂಧನ ಹೇಗೆ ಉತ್ಪಾದಿಸುವುದು ಮತ್ತು ಎಲ್ಲಿಂದ ತರಿಸಿಕೊಳ್ಳುವುದು ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಸಮಾಧಾನಕರ ಅಂಶವೆಂದರೆ, ಜರ್ಮನಿ ಸರಕಾರ ಸೋಲಾರ್‌ ವಿದ್ಯುತ್‌ ಉತ್ಪಾದನೆಗೆ ಹೆಚ್ಚಿನ ಮನ್ನಣೆ ನೀಡಿದೆ. ಆದರೆ ಇದು ಬೇಡಿಕೆಗೆ ತಕ್ಕಂತೆ ಪೂರೈಕೆಯಾಗುತ್ತಿಲ್ಲ. ಜತೆಗೆ ಡೀಸೆಲ್‌ ಮತ್ತು ಪೆಟ್ರೋಲ್‌ ವಾಹನಗಳಿಗೆ ಬದಲಾಗಿ ವಿದ್ಯುತ್‌ ಚಾಲಿತ ವಾಹನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಿದ್ದರೂ ನಿರೀಕ್ಷಿತ ಯಶ ಸಿಕ್ಕಿಲ್ಲ.

ಭಾರತದ ಮೇಲೆ ಪರಿಣಾಮ

ಜರ್ಮನಿಯ ಈ ಆರ್ಥಿಕ ಹಿಂಜರಿತದ ಪರಿಣಾಮ ಭಾರತದ ಮೇಲೂ ಅಡ್ಡ ಪರಿಣಾಮ ಬೀರುವ ಎಲ್ಲ ಲಕ್ಷಣಗಳಿವೆ. ಭಾರತ ಜರ್ಮನಿಯ ಪ್ರಮುಖ ರಫ್ತುದಾರ ದೇಶ. ಆರ್ಥಿಕ ಹಿಂಜರಿತದಿಂದಾಗಿ ರಫ್ತಿಗೆ ಬೇಡಿಕೆ ಕಡಿಮೆಯಾಗುವ ಸಾಧ್ಯತೆಗಳಿವೆ. ಭಾರತ ಪ್ರಮುಖವಾಗಿ ಜರ್ಮನಿಗೆ ಉಡುಪು, ಚಪ್ಪಲಿಗಳು ಮತ್ತು ಚರ್ಮೋತ್ಪನ್ನ ವಸ್ತುಗಳನ್ನು ಕಳುಹಿಸುತ್ತದೆ. ಹಾಗೆಯೇ ಜರ್ಮನಿ ಜತೆಗೆ ಯುರೋಪ್‌ನ ಬೇರೆ ಬೇರೆ ದೇಶಗಳೂ ಹಣದುಬ್ಬರದ ಸುಳಿಗೆ ಸಿಲುಕಿದ್ದು, ಇದೂ ಅಡ್ಡ ಪರಿಣಾಮ ಬೀರಬಹುದು ಎಂಬ ಭೀತಿ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.  2022-23ರ ಅವಧಿಯಲ್ಲಿ ಜರ್ಮನಿಗೆ ಭಾರತ 10.2 ಬಿಲಿಯನ್‌ ಡಾಲರ್‌ ಮೊತ್ತದ ವಸ್ತು ರಫ್ತು ಮಾಡಿತ್ತು. ಆದರೆ ಈಗ ಅದು ಶೇ.20ರಷ್ಟು ಕಡಿಮೆಯಾಗಿದೆ.

ಇಂಗ್ಲೆಂಡ್‌ಗೆ ಭೀತಿ ಇದೆಯೇ?

ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳುವ ಪ್ರಕಾರ, ಈ ವರ್ಷ ಇಂಗ್ಲೆಂಡ್‌ಗೆ ಆರ್ಥಿಕ ಹಿಂಜರಿತದ ಭೀತಿ ಇಲ್ಲ. ಇದರ ಅಪಾಯದಿಂದ ಸ್ವಲ್ಪದರಲ್ಲಿ ಇಂಗ್ಲೆಂಡ್‌ ಪಾರಾಗಿದೆ. ಆದರೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹೇಳುವ ಪ್ರಕಾರ, ಇಂಗ್ಲೆಂಡ್‌ ಇನ್ನೂ ಹಿಂಜರಿತದ ಭೀತಿಯಿಂದ ಹೊರಬಂದಿಲ್ಲ. 2024ರಲ್ಲಿ ಇಂಗ್ಲೆಂಡ್‌ಗೆ ಹಿಂಜರಿತದ ಭೀತಿ ಎದುರಾಗಬಹುದು ಎಂದಿದ್ದಾರೆ.  ಹೆಚ್ಚುತ್ತಿರುವ ಹಣದುಬ್ಬರ ಮತ್ತು ಬ್ಯಾಂಕ್‌ಗಳ ಬಡ್ಡಿದರ ಹೆಚ್ಚಳದಿಂದಾಗಿ ಮುಂದಿನ ವರ್ಷದಲ್ಲಿ ಹಿಂಜರಿತ ಕಾಡಬಹುದು. ಈಗಿನಿಂದಲೇ ಎಚ್ಚರಿಕೆಯಿಂದ ಇರುವುದು ಒಳಿತು ಎಂದು ಹೇಳಿದ್ದಾರೆ.

ಅಮೆರಿಕದಲ್ಲೇನಾಗುತ್ತಿದೆ?

ಅಮೆರಿಕದಲ್ಲಿನ ಸ್ಥಿತಿಯೂ ಬಿಗಡಾಯಿಸಿದೆ. ಈಗಾಗಲೇ ಮೂರು ಬ್ಯಾಂಕ್‌ಗಳು ನಷ್ಟ ಅನುಭವಿಸಿದ್ದು, ಸಾಕಷ್ಟು ಹಾನಿಯನ್ನೂ ಉಂಟು ಮಾಡಿವೆ. ಈಗ ಅಮೆರಿಕದ ಡೆಟ್‌ ಡಿಫಾಲ್ಟ್ ಕೂಡ ತಲೆನೋವಾಗಿ ಪರಿಣಮಿಸಿದೆ. ಇದೇ ಕಾರಣದಿಂದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಆಸ್ಟ್ರೇಲಿಯಾ ಪ್ರವಾಸವನ್ನೇ ರದ್ದು ಮಾಡಿದ್ದರು.  ಮೂಡಿ ಹೇಳುವ ಪ್ರಕಾರ, ಅಮೆರಿಕದ ಜಿಡಿಪಿ ಇಡೀ ವರ್ಷ ಕುಸಿತದ ಹಾದಿಯಲ್ಲಿರಲಿದೆ. ಇದರಿಂದಾಗಿ ದೀರ್ಘಾವಧಿ ಪ್ರಗತಿ ಮೇಲೆ ಪೆಟ್ಟು ಬೀಳಲಿದೆ.  ಹಾಗಾದರೆ ಏನಿದು ಡೆಟ್‌ ಡಿಫಾಲ್ಟ್? ಮಾಡಲಾಗಿರುವ ಸಾಲವನ್ನು ಹಿಂದಿರುಗಿಸಲಾಗದೇ ಇರುವ ಸ್ಥಿತಿಗೆ ಹೀಗೆಂದು ಕರೆಯಲಾಗುತ್ತದೆ. ಅಮೆರಿಕದ ಸರಕಾರವು ಮಾಡಿರುವ ಸಾಲವನ್ನು ತೀರಿಸಲಾಗದ ಸ್ಥಿತಿಗೆ ಬಂದಿದೆ. ಇದನ್ನು ಸರಿದೂಗಿಸಿಕೊಳ್ಳದೇ ಇದ್ದರೆ, ಅಮೆರಿಕಕ್ಕೂ ಆರ್ಥಿಕ ಹಿಂಜರಿತದ ಮುಷ್ಟಿಗೆ ಬೀಳಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next