ಮೇ ತಿಂಗಳು ಬಂತೆಂದರೆ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ, ಸಂಗೀತ ವಾದ್ಯಗಳು ಮುಂತಾದವುಗಳ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಹಂತದ ಪರೀಕ್ಷೆಗಳು ಆರಂಭ ಆಗಿಬಿಡುತ್ತವೆ. ಇದಕ್ಕೆ ಸಾವಿರಾರು ವಿದ್ಯಾರ್ಥಿಗಳು ವಯಸ್ಸಿನ ಬೇಧವಿಲ್ಲದೆ ಹಾಜರಾಗುತ್ತಾರೆ. ಕೆಲವರು ಸ್ವ ಆಸಕ್ತಿಯಿಂದ ಪರೀಕ್ಷೆ ಎದುರಿಸಿದರೆ ಇನ್ನೂ ಕೆಲವರು ಹೆತ್ತವರ ಕನಸ ನನಸು ಮಾಡ ಹೊರಟವರು. ಯಾರೇ ಆದರೂ ವರ್ಷ ಪೂರ್ತಿ ಈ ಪರೀಕ್ಷೆಗಾಗಿ ತಯಾರಿ ನಡೆಸಬೇಕಾಗುತ್ತದೆ.
ಒಂದೆಡೆ ನಮ್ಮ ಸಂಸ್ಕೃತಿಯ ಸಂಕೇತವಾದ ಸಂಗೀತ, ನೃತ್ಯ ಕಲೆಯನ್ನು ಇಷ್ಟೊಂದು ಜನ ಇಷ್ಟ ಪಟ್ಟು ಕಲಿಯುವುದನ್ನು ಕಂಡು ಹೆಮ್ಮೆ ಅನಿಸಿಬಿಡುತ್ತದೆ. ಆದರೆ ಇನ್ನೊಂದೆಡೆ ಕಲೆಗಳಿಗೆ ಪರೀಕ್ಷೆ ಎಂಬ ಮಾನದಂಡ ಎಷ್ಟರ ಮಟ್ಟಿಗೆ ಸರಿ ಅನ್ನುವ ಯೋಚನೆ ಕೂಡಾ ಮೂಡುತ್ತದೆ.
ಕಲೆಗಳಲ್ಲಿ ಒಬ್ಬ ವಿದ್ಯಾರ್ಥಿಯ ಸಾಧನೆ ಅರಿವಾಗುವುದು ವೇದಿಕೆಯ ಮೇಲೆ ಆತ ನೀಡುವ ಪ್ರದರ್ಶನದ ಮೂಲಕವೇ ಹೊರತು ನಾಲ್ಕು ಗೋಡೆಗಳ ಮಧ್ಯೆ ಇಬ್ಬರು ಪರೀಕ್ಷಕರ ಮುಂದೆ ನಿರೂಪಿಸುವಂಥದ್ದಲ್ಲ. ಕಲೆಯಲ್ಲಿ ವಿದ್ಯಾರ್ಥಿಯ ಪ್ರೌಢಿಮೆ ತಿಳಿಯಲು ಪರೀಕ್ಷೆ ಎಂಬ ಮಾನದಂಡವನ್ನು ಬಳಸುವುದು ಬಹು ದೊಡ್ಡ ತಪ್ಪು.ಏಕೆಂದರೆ ಕಲೆ ಎಂಬುದು ಕಲಿತಷ್ಟೂ ಮುಗಿಯದ ಸಾಗರ ಇದ್ದಂತೆ. ಅದು ಒಂದು
ಸಿಲೆಬಸ್ ಎಂಬ ಚೌಕಟ್ಟು ನೀಡಿ ನಿಗದಿ ಪಡಿಸಿದ ಅಂಕಗಳಿಂದ ಸಾಬೀತುಪಡಿಸಲಾಗದ ಒಂದು ಶ್ರೇಷ್ಠ ವಿಷಯ.
ಕಲೆ ಎನ್ನುವುದು ಕಲಾವಿದರು ಅನುಭವಿಸಿ ಪ್ರದರ್ಶಿಸಬೇಕು, ಆಗ ಮಾತ್ರ ಅದಕ್ಕೊಂದು ನ್ಯಾಯ ಒದಗಿಸಿದಂತಾಗುವುದು. ಆದರೆ ಪರೀಕ್ಷೆಯೆಂಬ ಗುಮ್ಮನ ಎದುರು ಬಂದೊಡನೇ ಅನುಭವಿಸುವುದು ಬಿಡಿಗೊತ್ತಿರುವುದನ್ನೂ ಸರಿಯಾಗಿ ಮಾಡಲಾರದಂತಹ ಸ್ಥಿತಿ ಒದಗಿಬರುವುದನ್ನು ಕಣ್ಣಾರೆ ಕಂಡವರು ನಾವು. ಒಳ್ಳೆಯ ನೃತ್ಯ ಮಾಡುವ ವಿದ್ಯಾರ್ಥಿನಿ ಪರೀಕ್ಷೆಯ ಭೀತಿಯಲ್ಲಿ ಒಳ್ಳೆಯ ಪ್ರದರ್ಶನ ನೀಡಲು ಸಾಧ್ಯವಾಗದಿರಬಹುದು. ಹಾಗೆಂದ ಮಾತ್ರಕ್ಕೆ ಆಕೆ ನೃತ್ಯಗಾತಿಯೇ ಅಲ್ಲ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವೇ?
ಒಬ್ಬ ಒಳ್ಳೆಯ ಹಾಡುಗಾರನಿಗೆ ಪರೀಕ್ಷೆಯ ದಿನ ಆರೋಗ್ಯ ಹದಗೆಟ್ಟು ಹಾಡಲು ಆಗಲಿಲ್ಲ ಎಂಬ ಕಾರಣಕ್ಕೆ ಅವನೊಬ್ಬ ಕೆಟ್ಟ ಹಾಡುಗಾರ ಎನ್ನಲು ಸಾಧ್ಯವೇ? ಆದರೆ ಪರೀಕ್ಷೆಯ ದಿನದಂದು ಅವರು ನೀಡಿದ ಪ್ರದರ್ಶನಕ್ಕೆ ಅಂಕ ನೀಡಿ ಫಸ್ಟ್ ಕ್ಲಾಸ್, ಸೆಕೆಂಡ್ ಕ್ಲಾಸ್ ಎಂದು ಷರಾ ಒತ್ತಿಬಿಡುತ್ತಾರೆ. ಪರೀಕ್ಷಾರ್ಥಿಗಳು ಒಳ್ಳೆಯ ಪ್ರದರ್ಶನ ನೀಡಿದರು ಎಂದೇ ಇಟ್ಟುಕೊಳ್ಳುವ. ಅಲ್ಲಿ ಪರೀಕ್ಷಕರೆಂದು ಕುಳಿತುಕೊಳ್ಳುವವರಾರು? ಅವರಿಗೆ ಕಲೆಯ ಬಗ್ಗೆ ಇರುವ ಅನುಭವಗಳೇನು ಎಂಬುದನ್ನು ಕೂಡಾ ನಾವು ಗಮನಿಸಬೇ ಕಾಗಿ ಬರುತ್ತದೆ. ಜೂನಿಯರ್ ಪರೀಕ್ಷೆಗೆ ಆಗ ತಾನೆ ಸೀನಿಯರ್, ವಿದ್ವತ್ ಪರೀಕ್ಷೆ ಮುಗಿಸಿಕೊಂಡವರು, ಸೀನಿಯರ್ ಪರೀಕ್ಷೆಗೆ ವಿದ್ವತ್ ಹಂತ ಮುಗಿಸಿಕೊಂಡವರು… ಹೀಗೆ ಅಭ್ಯರ್ಥಿಗಳು ಹಾಗೂ ಬೋರ್ಡ್‌ಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಕಳೆದ ಬಾರಿ ಉತ್ತೀರ್ಣರಾದವರೂ ಕೂಡಾ ಪರೀಕ್ಷಕರಾಗಿಬಿಡುತ್ತಾರೆ.
ಹೀಗೆ ಆದರೆ ಮೌಲ್ಯಮಾಪನ ಎನ್ನುವುದು ಮೌಲ್ಯ ಕಳೆದು ಕೊಂಡು ಕೇವಲ ಒಂದು ಔಪಚಾರಿಕತೆಯಾಗಿ ಉಳಿಯುವುದರಲ್ಲಿ ಸಂಶಯವಿಲ್ಲ. ಇತ್ತೀಚಿನ ಪರೀಕ್ಷಕರೂ ಕೂಡಾ ಅದೇ ಸಿಲೆಬಸ್ ಎಂಬ ಚೌಕಟ್ಟಿನ ಜಾnನವನ್ನಷ್ಟೇ ಹೊಂದಿರುತ್ತಾರೆ ಅಂಥವರಿಂದ ಒಬ್ಬ ಕಲಾವಿದನ ಅಳತೆ ಮಾಡಲು ಸಾಧ್ಯವೇ? ಹಾಗೆಂದು ಎಲ್ಲರೂ ಅಲ್ಪಜಾnನಿಗಳೆಂದು ಅರ್ಥವಲ್ಲ.
ಇನ್ನೂ ಕೆಲವೊಂದು ಬಾರಿ ಅಭ್ಯರ್ಥಿಗಳು ಪ್ರಯೋಗ ಭಾಗದಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದರೂ ಥಿಯರಿಯಲ್ಲಿ ಕಡಿಮೆ ಅಂಕ ಪಡೆದರೆ ಕಡಿಮೆ ಶೇಕಡವಾರು ಬರುವ ಪ್ರಮೇಯ ಬರುತ್ತದೆ. ಅಂಥವರಿಗೆ ಕಲಾಸಕ್ತಿಯೇ ಇಲ್ಲವೆಂದಲ್ಲ ಅಥವಾ ಅವರು ಒಳ್ಳೆಯ ನೃತ್ಯಗಾರರೆಂದಲ್ಲ. ಎಲ್ಲರೂ ಎಲ್ಲದರಲ್ಲೂ ಪರಿಪೂರ್ಣತೆ ಗಳಿಸಬೇಕು ಎಂಬ ನಿಯಮವೇನಿಲ್ಲ. ಹಾಗೆಯೇ ಪರೀಕ್ಷೆಯೆ ಬರೆಯದೆ ಅದೆಷ್ಟೋ ಒಳ್ಳೆಯ ಕಲಾವಿದರಿದ್ದಾರೆ. ಅವರೆಲ್ಲ ಪರೀಕ್ಷೆ ಬರೆದು ವಿದ್ವತ್ ಗಳಿಸಲಿಲ್ಲ ಎಂಬ ಕಾರಣಕ್ಕೆ ಅವರನ್ನು ಕಡೆಗಣಿಸುವುದು ಸರಿಯಲ್ಲ. ಆದ್ದರಿಂದ ಕಲೆಗಳಿಗೆ ಪರೀಕ್ಷೆಯೆಂಬ ಮಾನದಂಡವಿಟ್ಟು ಕಲಾವಿದರ ಮಧ್ಯೆ ತುಲನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?
*ದೀಪ್ತಿ ಉಜಿರೆ