Advertisement

“ಕೈ’ಜಾತಿ ಗಣತಿ ವರದಿ ಮುಂದೇನು?

06:05 AM Jun 17, 2018 | |

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೈಗೊಂಡ ಜಾತಿ ಗಣತಿ
ವರದಿ ಎಂಬ “ನಿಗಿ ನಿಗಿ ಕೆಂಡ’ವನ್ನು ಸಿಎಂ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಈಗಿನ ಸಮ್ಮಿಶ್ರ ಸರ್ಕಾರ
“ಉಡಿಗೆ’ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದೆ!

Advertisement

ಹೌದು. ಸದ್ಯ ವರದಿ ಸ್ವೀಕರಿಸಿ ಜೇನುಗೂಡಿಗೆ ಕೈ ಹಾಕಿಕೊಳ್ಳುವ ಸಾಹಸ ಬೇಡ ಎಂಬ ಆಲೋಚನೆಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದಂತಿದೆ. ಏಕೆಂದರೆ, ವರದಿ ಸಲ್ಲಿಸಲು ದಿನಾಂಕ ಮತ್ತು ಸಮಯ ಕೊಡಿ ಎಂದು ಹಿಂದುಳಿದ ವರ್ಗಗಳ ಆಯೋಗ ಪತ್ರ ಬರೆದು 3 ವಾರ ಕಳೆದರೂ, ಈವರೆಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ. “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ಯ (ಜಾತಿ ಗಣತಿ) ವರದಿ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿದೆ. 

ಎಸ್ಸಿ, ಎಸ್ಟಿ ವರ್ಗದ 2, ಸಾಮಾನ್ಯ ವರ್ಗದ 8 ಸೇರಿ ಬೇರೆ ಬೇರೆ ವಿಭಾಗಗಳ ಪ್ರತ್ಯೇಕ ಸಂಪುಟಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಅನೇಕ ಪೂರಕ ವರದಿಗಳನ್ನೂ ತಯಾರಿಸಲಾಗಿದೆ.

ಮುದ್ರಣ ಕಾರ್ಯ ಅಂತಿಮ ಹಂತದಲ್ಲಿರುವಾಗ ವರದಿ ಸಲ್ಲಿಕೆಗೆ ಸಮಯ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು.
ಆದರೆ, ಈವರೆಗೆ ಸರ್ಕಾರದಿಂದ ಉತ್ತರ ಬಂದಿಲ್ಲ. ಈಗ ಮುದ್ರಣ ಕಾರ್ಯ ಪೂರ್ಣಗೊಂಡು ವರದಿ ಅಂತಿಮವಾಗಿ
ಸಿದ್ಧಗೊಂಡಿದೆ. ಸರ್ಕಾರ ಸಮಯ ಕೊಟ್ಟರೆ ವರದಿ ಸಲ್ಲಿಸಲಾಗುವುದು ಎಂದು ಆಯೋಗದ ಮೂಲಗಳು
“ಉದಯವಾಣಿ’ಗೆ ತಿಳಿಸಿವೆ.

ಬದಲಾದ ಸನ್ನಿವೇಶ: ಜನಸಂಖ್ಯೆಗನುಗುಣವಾಗಿ ಪ್ರತಿಯೊಂದು ಜಾತಿ-ಸಮುದಾಯಕ್ಕೆ ಸರ್ಕಾರದ ಸೌಲಭ್ಯಗಳು, ಪ್ರಾತಿನಿಧ್ಯ ಮತ್ತು ಅನುದಾನ ಸಿಗಬೇಕು. ಅದಕ್ಕಾಗಿ ಎಲ್ಲ ಜಾತಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ನಿಖರ ಮಾಹಿತಿ ಇರಬೇಕು ಎಂಬ ಕಾರಣಕ್ಕೆ ಜಾತಿ ಗಣತಿ ಮಾಡಲಾಗುತ್ತಿದೆ. ಆಯೋಗದಿಂದ ವರದಿ ಸಲ್ಲಿಕೆಯಾದ ನಂತರ ಅದನ್ನು ಜಾರಿಗೊಳಿಸಿಯೇ ಸಿದ್ಧ ಎಂದು ಹೇಳುತ್ತಲೇ ಇದ್ದ ಸಿದ್ದರಾಮಯ್ಯ ಕಾಲ ಸಾಗ ಹಾಕಿದರು. ಜಾತಿ ಗಣತಿ ಹೆಸರಲ್ಲಿ ಕಾಂಗ್ರೆಸ್‌ ಸರ್ಕಾರ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ ಎಂದು ಪ್ರತಿಪಕ್ಷಗಳಾಗಿದ್ದ ಬಿಜೆಪಿ ಮತ್ತು ಜೆಡಿಎಸ್‌ ಆರೋಪ ಮಾಡಿದ್ದವು. ಈಗ ಸನ್ನಿವೇಶ ಬದಲಾಗಿದೆ. ಕಾಂಗ್ರೆಸ್‌ಗೆ ಬೇಕಾಗಿದ್ದ, ಜೆಡಿಎಸ್‌ಗೆ ಬೇಡವಾಗಿದ್ದ ಜಾತಿ ಗಣತಿ ವರದಿ ಕತೆ ಮುಂದೇನಾಗುತ್ತೆ ಎಂಬ ಪ್ರಶ್ನೆ ಮೂಡಿದೆ.

Advertisement

3 ವರ್ಷ, 175 ಕೋಟಿ ವೆಚ್ಚ
ಜಾತಿ ಸಮೀಕ್ಷೆ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ತಮ್ಮ ಚೊಚ್ಚಲ ಬಜೆಟ್‌ನಲ್ಲಿ (2013-14) ಪ್ರಕಟಿಸಿದ್ದರು. ಅದರಂತೆ, ಸಮೀಕ್ಷೆಯ ಹೊಣೆಯನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ ವಹಿಸಲಾಗಿತ್ತು. ಸತತ ಒಂದು ವರ್ಷದ ಪೂರ್ವ ಸಿದ್ಧತೆ, ಗಣತಿದಾರರ ತರಬೇತಿ ಬಳಿಕ 2015ರ ಏ.11ರಿಂದ 20 ದಿನಗಳ ಕಾಲ ರಾಜ್ಯವ್ಯಾಪಿ ಸಮೀಕ್ಷೆ ಕೈಗೊಳ್ಳಲಾಗಿತ್ತು. 175 ಕೋಟಿ ರೂ. ವೆಚ್ಚದಲ್ಲಿ ನಡೆದ ಈ ಜಾತಿ ಗಣತಿಗೆ 1.33 ಲಕ್ಷ ಸಿಬ್ಬಂದಿ ಬಳಸಿಕೊಳ್ಳಲಾಗಿತ್ತು. 2016ರ ಜೂನ್‌ನಲ್ಲಿ ವರದಿ ಸಲ್ಲಿಸುವುದಾಗಿ ಆಯೋಗ ಹೇಳಿತ್ತು. ವರದಿ 
ಸಲ್ಲಿಕೆಯಾದ ತಕ್ಷಣ ಅದನ್ನು ಜಾರಿಗೊಳಿಸಲು ಸಿದ್ಧ ಎಂದು ಸರ್ಕಾರ ಹೇಳುತ್ತಲೇ ಬಂದಿತು. ಶೀಘ್ರ ವರದಿ 
ಸಲ್ಲಿಸುವುದಾಗಿ ಹೇಳುತ್ತಲೇ ಇದ್ದ ಆಯೋಗ, 3 ವರ್ಷ ಕಳೆದರೂ ವರದಿ ಸಲ್ಲಿಸಿಲ್ಲ.

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ವರದಿ ಸಲ್ಲಿಸಲು ದಿನಾಂಕ ಮತ್ತು ಸಮಯ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬಂದ ಮೇಲೆ ವರದಿ ಸಲ್ಲಿಸಲಾಗುವುದು. ಅಂತಿಮ ವರದಿಯಂತೂ 
ಆಯೋಗದಲ್ಲಿ ಸಿದ್ಧವಾಗಿದೆ.
– ಎನ್‌.ಪಿ.
ಧರ್ಮರಾಜ್‌, ಆಯೋಗದ ಸದಸ್ಯ

– ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next