ಮಣಿಪಾಲ: ಕೇರಳ ರಾಜ್ಯದ ಕರಿಪುರ್ ವಿಮಾನ ದುರಂತದ ನಂತರ ದೇಶದೆಲ್ಲೆಡೆ ಟೇಬಲ್ ಟಾಪ್ ರನ್ ವೇ ಗಳ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಹಾಗಾದರೆ ಟೇಬಲ್ ಟಾಪ್ ರನ್ ವೇ ಎಂದರೆ ಏನು? ಇತರ ರನ್ ವೇಗಳಿಗಿಂತ ಹೇಗೆ ಭಿನ್ನ? ನಮ್ಮ ದೇಶದಲ್ಲಿ ಎಷ್ಟು ಟೇಬಲ್ ಟಾಪ್ ರನ್ ವೇಗಳು ಇವೆ? ಯಾಕೆ ಅಪಾಯಕಾರಿ ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ. `
ಗುಡ್ಡದಂತಹ ಭೂಭಾಗದ ಮೇಲೆ ಇರುವ ವಿಮಾನ ನಿಲ್ದಾಣಗಳಲ್ಲಿ ಈ ರೀತಿಯ ರನ್ ವೇ ಮಾಡಬೇಕಾಗುತ್ತದೆ. ರನ್ ವೇ ಅಥವಾ ವಿಮಾನ ಭೂ ಸ್ಪರ್ಷವಾಗಿ ನಿಲ್ದಾಣ ತಲುಪವರೆಗೆ ಇರುವ ವಿಮಾನ ಚಲಿಸಲು ಯೋಗ್ಯವಾದ ರಸ್ತೆಯ ಎರಡೂ ಬದಿ ಇಳಿಜಾರು ಅಥವಾ ಕಂದಕ ರೀತಿ ಇದ್ದರೆ ಅದನ್ನು ಟೇಬಲ್ ಟಾಪ್ ರನ್ ವೇ ಎನ್ನಲಾಗುತ್ತದೆ.
ಭಾರತದಲ್ಲಿ ಎಷ್ಟಿದೆ?
ಈ ರೀತಿಯ ಟೇಬಲ್ ಟಾಪ್ ರನ್ ವೇ ಭಾರತದಲ್ಲಿ ಮೂರು ವಿಮಾನ ನಿಲ್ದಾಣದಲ್ಲಿದೆ. ದಕ್ಷಿಣ ಭಾರತದಲ್ಲೇ ಎರಡು ಇದೆ. ನಮ್ಮ ರಾಜ್ಯದ ಮಂಗಳೂರು ವಿಮಾನ ನಿಲ್ದಾಣ ಮತ್ತು ನಿನ್ನೆ ದುರಂತ ನಡೆದ ಕೋಯಿಕ್ಕೋಡ್ ನ ವಿಮಾನ ನಿಲ್ದಾಣಗಳು ಇದೇ ರೀತಿಯ ರನ್ ವೇ ಹೊಂದಿದೆ. ಇನ್ನೊಂದು ಟೇಬಲ್ ಟಾಪ್ ರನ್ ವೇ ಹೊಂದಿರುವ ವಿಮಾನ ನಿಲ್ದಾಣ ಇರುವುದು ಮಿಜೋರಾಂ ರಾಜ್ಯದ ಲೆಂಗ್ ಪುಯಿ ನಗರದಲ್ಲಿ.’
ಯಾಕೆ ಅಪಾಯಕಾರಿ?
ಇಂತಹ ಟೇಬಲ್ ಟಾಪ್ ರನ್ ವೇಗಳಲ್ಲಿ ವಿಮಾನಗಳನ್ನು ಇಳಿಸಲು ಪೈಲಟ್ ಕೌಶಲ್ಯ ಅತಿ ಅಗತ್ಯ. ನಿರ್ದಿಷ್ಟ ಪ್ರದೇಶದಲ್ಲೇ ವಿಮಾನದ ಚಕ್ರ ಭೂಮಿಗೆ ತಾಗಬೇಕು. ಇಷ್ಟೇ ದೂರಕ್ಕೆ ಹೋಗಿ ವಿಮಾನ ನಿಂತುಕೊಳ್ಳಬೇಕು ಎಂಬ ಲೆಕ್ಕಾಚಾರ ಪೈಲಟ್‌ಗೆ ಇರಬೇಕಾಗುತ್ತದೆ. ವಿಮಾನ ಕೆಳಕ್ಕಿಳಿಯುತ್ತಿದ್ದಂತೆ, ರನ್‌ವೇ ಉದ್ದವನ್ನು ಮನಸ್ಸಿನಲ್ಲೇ ಅಂದಾಜಿಸಿ ನಿರ್ದಿಷ್ಟ ಸ್ಥಳದಲ್ಲಿ ನೆಲ ತಾಗಬೇಕಾಗುತ್ತದೆ.
ಸಾಮಾನ್ಯವಾಗಿ ಇಂತಹ ರನ್ ವೇ ಗಳಲ್ಲಿ ನುರಿತ ಪೈಲೆಟ್ ಗಳೇ ಕೆಲಸ ನಿರ್ವಹಿಸುತ್ತಾರೆ. ಒಂದು ವೇಳೆ ವಿಮಾನ ರನ್ ವೇ ಯಲ್ಲಿ ಸ್ಕಿಡ್ ಆಗಿ ಮುಂದೆ ಹೋದರೆ ಅಥವಾ ರನ್ ನಿಂದ ನೆಲಕ್ಕೆ ಹೋದರೆ ಸಾಮಾನ್ಯ ವಿಮಾನ ನಿಲ್ದಾಣಗಳಲ್ಲಿ ಮಣ್ಣಿನಲ್ಲಿ ಸಿಲುಕುವ ಸಾಧ್ಯತೆ ಹೆಚ್ಚು. ಇದರಿಂದ ಅಪಾಯ ಕಡಿಮೆ. ಆದರೆ ಟೇಬಲ್ ಟಾಪ್ ರನ್ ವೇಗಳಲ್ಲಿ ಇಂತಹ ಅನಾಹುತ ನಡೆದರೆ, ರನ್ ವೇ ಇಕ್ಕೆಲಗಳಲ್ಲಿ ಕಂದಕವಿರುವ ಕಾರಣ ವಿಮಾನ ಕೆಳಕ್ಕೆ ಬೀಳುತ್ತದೆ. ಆಗ ಅಗ್ನಿಸ್ಪರ್ಷವಾಗಿ ದೊಡ್ಡಮಟ್ಟದ ಅನಾಹುತ ಸಂಭವಿಸುತ್ತದೆ.
2010ರಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಇದೇ ರೀತಿಯ ಅನಾಹುತ ನಡೆದಿತ್ತು. ಕಂದಕಕ್ಕೆ ಉರುಳಿ ಬಿದ್ದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡು 152 ಮಂದಿ ಸಾವನ್ನಪ್ಪಿದ್ದರು. ಕೇರಳ ದುರಂತದಲ್ಲಿ ಅಗ್ನಿ ಸ್ಪರ್ಷವಾಗದ ಕಾರಣ ದೊಡ್ಡ ದುರಂತ ತಪ್ಪಿದೆ.
ಕಾರ್ಯಾಚರಣೆಯೂ ಕಷ್ಟ:
ಇಂತಹ ವಿಮಾನ ನಿಲ್ದಾಣಗಳಲ್ಲಿ ದುರಂತ ನಡೆದು ವಿಮಾನ ಕಂದಕ್ಕೆ ಉರುಳಿದರೆ ಆ ಸಮಯದಲ್ಲಿ ತುರ್ತು ಕಾರ್ಯಾಚರಣೆ ನಡೆಸುವುದು ಕೂಡ ಕಷ್ಟ. ರನ್ ವೇ ಕೆಳಗೆ ಕಂದಕಗಳು ಗುಡ್ಡ ಪ್ರದೇಶಗಳಾದ ಕಾರಣ ಇಲ್ಲಿಗೆ ರಸ್ತೆ ವ್ಯವಸ್ಥೆ ಇರುವುದಿಲ್ಲ. ಹೀಗಾದಾಗ ದುರಂತ ನಡೆದ ತಕ್ಷಣ ಅಗ್ನಿಶಾಮಕ ದಳ ವಾಹನಗಳು, ಆ್ಯಂಬುಲೆನ್ಸ್ ಗಳು ಹೋಗುವುದು ಕಷ್ಟ.