ಸಮೀರ, ತಂದೆ ತಾಯಿಗೆ ಒಬ್ಬನೇ ಮಗ. ಶುದ್ಧ ಸೋಮಾರಿ. ಯಾವಾಗ ನೋಡಿದರೂ ಟಿ.ವಿ ಮುಂದೆ ಕೂತಿರುತ್ತಿದ್ದ. ವರ್ಷಗಟ್ಟಲೆ ಮಲಗಿಯೇ ಕಳೆಯಬೇಕು ಎಂಬುದು ಆತನ ಜೀವಮಾನದ ಆಸೆ. ಅದನ್ನು ಈಡೇರಿಸಿಕೊಳ್ಳಲು ಇಡೀ ದಿನ ಆತ ಮಲಗಿಯೇ ಕಾಲ ಕಳೆಯುತ್ತಿದ್ದ. ಒಂದು ದಿನ ಎತ್ತಲೋ ನಡೆದು ಹೋಗಿದ್ದ ಆತ ವಾಪಸು ಮನೆಗೆ ಬಂದು, ಮಲಗಿದ. ಅಷ್ಟು ಚೆನ್ನಾದ ನಿದ್ದೆ ಇಷ್ಟರವರೆಗೆ ಮಾಡಿರಲಿಲ್ಲ. ತಾಯಿ ಬಂದು ಎಬ್ಬಿಸಿದಳು. “ದಿನಾಪೂರಾ ಮಲಗಿ ಬದುಕನ್ನು ವ್ಯರ್ಥ ಮಾಡಬೇಡ. ಹೋಗಿ ಕೆಲಸ ಮಾಡು’ ಎಂದು, ಇಲ್ಲಿಯೇ ಇದ್ದರೆ ಈ ಜಗತ್ತು ನನ್ನನ್ನು ಮಲಗಲು ಬಿಡೋದಿಲ್ಲ ಎಂದು ತಿಳಿದ ಸಮೀರ, ಸೀದಾ ಒಂದು ಕಾಡಿನ ನಡುವೆ ಇರುವ ಒಂದು ಬೆಟ್ಟಕ್ಕೆ ಹೋದ.
ಆತನ ಜತೆಗೆ ಮನೆಯಲ್ಲಿ ಸಾಕಿದ್ದ ನಾಯಿಯೂ ಹೋಯಿತು. ಒಂದು ಬಂದೂಕನ್ನೂ ಜತೆಯಲ್ಲಿಟ್ಟುಕೊಂಡು, ಬೆಟ್ಟದ ಮೇಲಿನ ತುತ್ತ ತುದಿಯ ಮರದ ಕೆಳಗೆ ನಿರುಮ್ಮಳನಾಗಿ ಕುಳಿತ. ನನಗೆ ನಿದ್ರಿಸಲು ಇದೇ ಪ್ರಶಸ್ತ ಸ್ಥಳ. ಯಾರೂ ನನ್ನನ್ನು ಎಬ್ಬಿಸಲು ಇಲ್ಲಿಯ ತನಕ ಬರುವುದಿಲ್ಲ ಎಂದು ಖುಷಿಯಿಂದ ಪುನಃ ನಿದ್ರೆಗೆ ಜಾರಿದ.
ನಿದ್ರೆ ಇನ್ನೇನು ಕಣ್ಣಲ್ಲಿ ಜೋಕಾಲಿ ಆಡುತ್ತಿದೆಯೆನ್ನುವಾಗ, ಕೆಳಗಿಂದ ಯಾರೋ ಏದುಸಿರು ಬಿಡುತ್ತಿರುವುದು ಸಮೀರನಿಗೆ ಕೇಳಿಸಿತು. ಯಾರೆಂದು ನೋಡಿದಾಗ, ಆತನೊಬ್ಬ ಹಣ್ಣುಹಣ್ಣು ಮುದುಕ ಅಂತ ಗೊತ್ತಾಯಿತು. ಆ ವೃದ್ಧನ ಹೆಗಲಲ್ಲಿ ಒಂದು ಕೊಡಪಾನವಿತ್ತು. “ದಯವಿಟ್ಟು ಈ ಕೊಡಪಾನವನ್ನು ಬೆಟ್ಟದ ಮೇಲೆ ಕೊಂಡೊಯ್ಯುವಿರಾ?’ ಅಂತ ಆ ಮುದುಕ ವಿನಂತಿಸಿಕೊಂಡ. “ಥತ್ತೇರಿಕೆ, ಈ ಜನ ದಟ್ಟ ಕಾಡಿನ ನಡುವಿನ ಬೆಟ್ಟಕ್ಕೆ ಬಂದರೂ ನನ್ನ ಬಳಿ ಕೆಲಸ ಮಾಡಿಸಿಕೊಳ್ಳುತ್ತಾರಲ್ಲ’ ಎಂದು ಆತನಿಗೆ ಬಯ್ಯುತ್ತಲೇ, ಸಮೀರ ಕೊಡಪಾನವನ್ನು ಹೊತ್ತು ತಂದು ಬೆಟ್ಟದ ಮೇಲಿಟ್ಟ. ಅದು ಬಹಳ ತೂಕವಿದ್ದ ಕಾರಣ, ಸಮೀರನಿಗೆ ಆಯಾಸವಾಗಿತ್ತು. ಮುದುಕ ಪ್ರತ್ಯುಪಕಾರವಾಗಿ ಕೊಡದಲ್ಲಿದ್ದ, ದ್ರವ ಪದಾರ್ಥವನ್ನು ಕುಡಿಯಲು ಕೊಟ್ಟ. ಸಮೀರ ಚಪ್ಪರಿಸಿ ಕುಡಿದು, ಮತ್ತೆ ನಿದ್ರೆಗೆ ಜಾರಿದ.
ಆದರೆ, ಮತ್ತೆ ಕಣ್ತೆರೆಯುವ ವೇಳೆಗೆ ಅಲ್ಲಿ ಪವಾಡವೇ ಆಗಿಹೋಗಿತ್ತು. ಪಕ್ಕದಲ್ಲಿ ನಾಯಿ ಇರಲಿಲ್ಲ. ಭುಜಕ್ಕೆ ನೇತುಹಾಕಿಕೊಂಡಿದ್ದ ಬಂದೂಕೂ ಅಲ್ಲಿರಲಿಲ್ಲ. ಎಲ್ಲವನ್ನೂ ಆ ಮುದುಕ ಹೊತ್ತೂಯ್ದಿದ್ದ. ಸಮೀರನ ಕೈಗಳು ಕಂಪಿಸಿದವು. ಮುಖದ ಮೇಲೆ ಬೆರಳಿಟ್ಟಾಗ, ಕೆನ್ನೆ ಇಳಿಬಿದ್ದಿದ್ದು ಗೊತ್ತಾಯಿತು. ಗಲ್ಲದ ಕೆಳಗೆ ಉದ್ದನೆ ಗಡ್ಡ ಬೆಳೆದಿದ್ದು ಆತನ ಅರಿವಿಗೆ ಬಂತು. ತೀವ್ರ ದುಃಖೀತನಾಗಿ, ಮೇಲೆದ್ದ. ಅದೂ ಸಾಧ್ಯವಾಗುತ್ತಿಲ್ಲ. ಸೊಂಟ ಹಿಡಿದುಕೊಂಡಿತು. ಜೋಂಪುಗಟ್ಟಿದ್ದ ಕಾಲುಗಳಲ್ಲಿ ಶಕ್ತಿಯೇ ಇರಲಿಲ್ಲ.
ಹಳ್ಳಿಗೆ ಹಿಂತಿರುಗಿ ನೋಡಿದರೆ, ಅಲ್ಲಿ ಊರಿಗೆ ಊರೇ ಬದಲಾಗಿದೆ. ತಾನು ಮೊದಲು ನೋಡಿದ್ದ ಗುಡಿಸಲುಗಳು ಕಾಣಿಸುತ್ತಿಲ್ಲ. ಕಟ್ಟಡಗಳು ಮೇಲೆದ್ದಿವೆ. ರಸ್ತೆಗಳೆಲ್ಲ ಬದಲಾಗಿವೆ. ದಿನವಿಡೀ ತನ್ನೊಂದಿಗೆ ಆಡಿ ನಲಿದಿದ್ದ ಗೆಳೆಯರೆಲ್ಲ ದೊಡ್ಡವರಾಗಿದ್ದಾರೆ.
ಯಾರೂ ತನ್ನನ್ನು ಗುರುತಿಸಿ, ಮಾತಾಡಿಸದ ಕಾರಣ, ಸೀದಾ ತಾನು ಓದಿದ ಶಾಲೆಗೆ ಹೋದ. ಅಲ್ಲೂ ಮೇಷ್ಟ್ರುಗಳೆಲ್ಲ ಬದಲಾಗಿದ್ದರು. “ನಾನು ಸಮೀರ ಅಂತ, ಇಲ್ಲಿಯೇ ತಾನು ಓದಿದ್ದು’ ಎಂದು ಆತ ನೂರು ಸಲ ಹೇಳಿದರೂ, ಅಲ್ಲಿ ಯಾರೂ ನಂಬಲಿಲ್ಲ.
“ಓಹ್, ಆ ಮದುಕಪ್ಪ ನನಗೆ ಮಾಂತ್ರಿಕ ಜಲ ಕೊಟ್ಟು, ಯಾಮಾರಿಸಿದ್ದಾನೆ. ನಾನು ಸೋಮಾರಿಯಾಗಿ ಮಲಗಬಾರದಿತ್ತು’ ಎಂದು ಮರುಕಪಡುತ್ತಾ, ಸಾಗುತ್ತಿರುವಾಗ ಒಬ್ಬಳು ಮುದುಕಿ ಸಿಕ್ಕಳು. “ಅಜ್ಜಿ, ಈ ಊರಿನಲ್ಲಿ ಯಾರಾದರೂ ಸಮೀರ ಅಂತ ಇದ್ದರಾ?’ ಕೇಳಿದ. “ಹೂnಂ, ಇದ್ದ. ಅವನು ನನ್ನ ಮಗನೇ ಆಗಿದ್ದ. ಇಪ್ಪತ್ತೂಂದು ವರ್ಷದ ಕೆಳಗೆ ಕಾಡಿಗೆ, ನಿದ್ರೆಗೆ ಹೋದವನು ಬಂದೇ ಇಲ್ಲ.’ ಎಂದಳು. “ಅಮ್ಮಾ… ಆ ಸಮೀರ ನಾನೇ… ಆ ಸಮೀರ ನಾನೇ…’ ಎಂದು ಕೂಗಿ ಹೇಳಿದ.
ಇದ್ಯಾಕೆ ಇವನು ಈ ಥರ ಆಡುತ್ತಿದ್ದಾನೆ ಎಂದು ಅಚ್ಚರಿಪಟ್ಟು, ತಾಯಿ ಆತನನ್ನು ಈಗ ನಿಜವಾಗಿ ಎಬ್ಬಿಸಿದಳು! ಈ ಹಿಂದೆ ಆತನನ್ನು ಎಬ್ಬಿಸಿದ್ದು, ಕನಸಿನಲ್ಲಿ ಬಂದ ತಾಯಿ ಆಗಿದ್ದಳು! ತೀವ್ರ ದಣಿದಿದ್ದರಿಂದ, ಆತನಿಗೆ ವಿಚಿತ್ರ ನಿದ್ರೆ ಆವರಿಸಿತ್ತು. ತಾನು ಕಂಡ ಈ ಕನಸೇ, ಎಲ್ಲಾದರೂ, ನಿಜವಾಗಿ, ತಾನು ಮುದುಕನಾದರೆ ಗತಿಯೇನು ಎಂದು ಭಾವಿಸಿದ ಸಮೀರ, ಆ ಕ್ಷಣವೇ ಸೋಮಾರಿತನವನ್ನು ಕೈಬಿಟ್ಟ.
– ಸೌಭಾಗ್ಯ