Advertisement

ದೇಶದ ಸ್ವಾತಂತ್ರ್ಯಕ್ಕೆ ಸಿದ್ದರಾಮಯ್ಯ‌ ಕೊಡುಗೆ ಏನು?: ಸಾರಾ ಮಹೇಶ್ ವಾಗ್ದಾಳಿ

01:07 PM Aug 12, 2022 | Team Udayavani |

ಮೈಸೂರು: ದೇಶದ ಸ್ವಾತಂತ್ರ್ಯಕ್ಕೆ ನಿಮ್ಮ ಕೊಡುಗೆ ಏನು? ಸ್ವಾತಂತ್ರ್ಯ ಚಳವಳಿಯಲ್ಲಿ ನೀವೇನಾದರು ಭಾಗಿಯಾಗಿದ್ದೀರಾ ?ನಿಮ್ಮ ಕೊಡುಗೆ ಬಗ್ಗೆ ಏನಾದರೂ ಪುಸ್ತಕ ಬರೆದಿದ್ದೀರಾ? ಎಂದು ಶಾಸಕ ಸಾರಾ ಮಹೇಶ್ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.ವಾಗ್ದಾಳಿ

Advertisement

ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕೆ ಜೆಡಿಎಸ್ ಕೊಡುಗೆ ಏನು ಎಂಬ ಸಿದ್ದರಾಮಯ್ಯ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೆಡಿಎಸ್ ನಲ್ಲಿದ್ದಾಗ ಹಣಕಾಸು ಸಚಿವರಾಗಿ ಏಳು ಬಾರಿ ಬಜೆಟ್ ಮಂಡಿಸಿದ್ರೀ, ಡಿಸಿಎಂ ಆಗಿದ್ರೀ. ಮೈಸೂರು ಜಿಲ್ಲೆಗೆ ನಿಮ್ಮ ಕೊಡುಗೆ ಏನು ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೋಟೆಲ್ ನಲ್ಲಿದ್ದುಕೊಂಡು ಆಡಳಿತ ನಡೆಸುತ್ತಿದ್ದರು ಎಂದು ಟೀಕಿಸಿರುವ ಸಚಿವ ಡಾ.ಅಶ್ವತ್ಥ ನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಿಎಂ ಅವರ ಅಧಿಕೃತ ನಿವಾಸ ಖಾಲಿ‌ ಇರಲಿಲ್ಲ.ಹಾಗಾಗಿ ಕುಮಾರಸ್ವಾಮಿ ಮಧ್ಯಾಹ್ನದ ವೇಳೆ ವಿಧಾನಸೌಧಕ್ಕೆ ಸನಿಹದಲ್ಲಿದ್ದ ಖಾಸಗಿ ಹೋಟೆಲ್ ನಲ್ಲಿ ಊಟಕ್ಕೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದರು. ಆಡಳಿತದ ಹಿತ ದೃಷ್ಟಿಯಿಂದ ಕುಮಾರಸ್ವಾಮಿ ಹೋಟೆಲ್ ನಲ್ಲಿ ವಾಸ್ತವ್ಯ ಹೂಡುತ್ತಿದ್ದರು. ಆದರೆ ಇದೇ ವಿಚಾರ ಮುಂದಿಟ್ಟುಕೊಂಡು ಸಚಿವ ಅಶ್ವತ್ಥ ನಾರಾಯಣ್ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಹಾಗಾದರೆ ನಿಮ್ಮ ಪಕ್ಷದ ಮುಖಂಡರುಗಳೇನು ಗುಡಿಸಲಿನಲ್ಲಿ ಇದ್ದಾರಾ ಎಂದು‌ ಪ್ರಶ್ನಿಸಿದರು.

ಒಕ್ಕಲಿಗ ಸಮಾಜದ ದೊಡ್ಡ ಲೀಡರ್ ಆಗಬೇಕೆಂದುಕೊಂಡು ಸಚಿವ ಅಶ್ವತ್ಥ ನಾರಾಯಣ್ ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇದು ಸಾಧ್ಯವಾಗುವುದಿಲ್ಲ.ಕುಮಾರಸ್ವಾಮಿ ಒಕ್ಕಲಿಗ ಸಮುದಾಯ ಮಾತ್ರವಲ್ಲದೇ ಎಲ್ಲಾ ಸಮುದಾಯಗಳಿಗೂ ನಾಯಕರಾಗಿದ್ದಾರೆ.
ಕುಮಾರಸ್ವಾಮಿ ಟೀಕಿಸಿದರೆ ದೊಡ್ಡ ನಾಯಕನಾಗುತ್ತೇನೆಂದು ಸಚಿವ ಅಶ್ವತ್ಥ ನಾರಾಯಣ್ , ಆರ್.ಅಶೋಕ್ ಗೆ ಪರ್ಯಾಯವಾಗಿ ನಾಯಕನಾಗುವ ಭ್ರಮೆಯಲ್ಲಿದ್ದಾರೆ ಎಂದು ಟೀಕಿಸಿದರು.

ಅಶ್ವತ್ಥ ನಾರಾಯಣ ಒಳ್ಳೆಯ ಸ್ನೇಹಿತ. ನಾನೂ ಬಿಜೆಪಿಯಲ್ಲಿ ಇದ್ದವನು. ರಾಜ್ಯ, ರಾಷ್ಟ್ರೀಯ ನಾಯಕರು ಬಂದರೂ ಕಾರ್ಯಕರ್ತನ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ನಮ್ಮದು ಸಮ್ಮಿಶ್ರ ಸರ್ಕಾರ ಇತ್ತು.ಆಗಿನ ಮಾಜಿ ಮುಖ್ಯಮಂತ್ರಿ ಮನೆ ಖಾಲಿ ಮಾಡಿರಲಿಲ್ಲ.ಕುಮಾರಸ್ವಾಮಿ ಅವರ ಮನೆ ಜೆ.ಪಿ.ನಗರದಲ್ಲಿದೆ. ಆದ್ದರಿಂದ ಕುಮಾರಸ್ವಾಮಿ ಹೋಟೆಲ್‌ನಲ್ಲಿದ್ದರು. ನಿಮ್ಮವರು ಗುಡಿಸಲಿನಲ್ಲಿ ಇದ್ರಾ?ನಮ್ಮಲ್ಲೂ ಮಾತನಾಡುವವರು ಇದ್ದಾರೆ ಎಂದರು.

Advertisement

ದೇವೇಗೌಡರು ಇತಿಮಿತಿಯಲ್ಲಿ ಮಾತನಾಡಿ ಎಂದು ಹೇಳಿದ್ದಾರೆ.  ಆರ್.ಅಶೋಕ್ ಅವರನ್ನು ಓವರ್ ಟೇಕ್ ಮಾಡಿ ಒಕ್ಕಲಿಗ ಸಮಾಜದ ಲೀಡರ್ ಎಂದು ತೋರಿಸಿಕೊಳ್ಳಲು ಹೊರಟಿದ್ದೀರಾ ? ಮೈತ್ರಿ ಸರ್ಕಾರ ಬೀಳಲು ಕಾಂಗ್ರೆಸ್ ನಾಯಕರು ಎಷ್ಟು ಕಾರಣವೋ ನೀವು ಅಷ್ಟೇ ಮುಖ್ಯ.  ರಾಜಕಾರಣದಲ್ಲಿ ನೂರಕ್ಕೆ ನೂರು ಯಾರೂ ಸರಿ ಇಲ್ಲ. ನನ್ನನ್ನೂ ಸೇರಿದಂತೆ ಯಾರೂ ಸರಿಯಿಲ್ಲ.ಕುಮಾರಸ್ವಾಮಿ ಏನು, ನೀನೇನು ಅನ್ನೋದು ರಾಜ್ಯದ ಜನಕ್ಕೆ ಗೊತ್ತಿದೆ.  ಎರಡೂ ರಾಷ್ಟ್ರೀಯ ಪಕ್ಷದವರು ಪ್ರಾದೇಶಿಕ ಪಕ್ಷ ಇರಬಾರದು ಎಂದು ಏನೇನು ಮಾಡಿದ್ದೀರಿ ಅನ್ನೋದು ನಮಗೂ ಗೊತ್ತಿದೆ ಎಂದರು.

ಮನೆಗಳು ಕುಸಿದರೂ ಎಷ್ಟು ಜನಕ್ಕೆ ಪರಿಹಾರ ಸಿಕ್ಕಿದೆ.100 ಕೋಟಿ ರೂಪಾಯಿ ಸಾಲ ಮನ್ನಾ ಅನುದಾನ ಬಿಡುಗಡೆ ಆಗಿದ್ದರೂ ರೈತರಿಗೆ ಹಣ ತಲುಪಿಲ್ಲ. ನಾವು ಇದೆಲ್ಲವನ್ನೂ ಮಾತನಾಡುತ್ತಿದ್ದೀವಾ ?ಉನ್ನತ ಶಿಕ್ಷಣ ಸಚಿವರಾಗಿ ಇದೇನಾ ನಿಮ್ಮ ಸಂಸ್ಕಾರ ?ಟೀಕೆ ಮಾಡಬೇಡಿ ಎಂದು ಹೇಳಲ್ಲ. ಟೀಕೆ, ಭಾಷೆ ಮಾದರಿಯಾಗಿರಬೇಕು ಎಂದರು.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದ ಹಲವು ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿ, ಆರೋಪದ ತನಿಖೆಯ ಭಾಗವಾಗಿ ಕೆಲವು ದಾಖಲೆಗಳನ್ನು ಕೇಳಿದ್ದಾರೆ. ಆ.19 ರಂದು ಬೆಳಗ್ಗೆ 11.30ಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಸಲ್ಲಿಸುತ್ತೇನೆ.ತಾವೇ ತಪ್ಪು ಮಾಡಿ ಮೈಸೂರು ಜನರನ್ನು ಅನಗತ್ಯವಾಗಿ ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ ಈ ಪ್ರಕರಣವೇ ಉದಾಹರಣೆಯಾಗಿದೆ. ಸತ್ಯ ಮೇವ ಜಯತೇ ಎನ್ನುವ ಮಾತು ಈಗ ನಿಜವಾಗಿದೆ. ಇಷ್ಟೊತ್ತಿಗಾಗಲೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯನ್ನು ಸಸ್ಪೆಂಡ್ ಮಾಡಬೇಕಾಗಿತ್ತು. ಈಗಲಾದರೂ ತನಿಖೆ ಚುರುಕುಗೊಂಡಿರುವುದು ಸಂತೋಷ‌ ಎಂದರು.

ಎಸಿಬಿ ರದ್ದುಗೊಳಿಸಿ ಲೋಕಾಯುಕ್ಕೆ ಮಾನ್ಯತೆ ನೀಡಿರುವ ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ.ಲೋಕಾಯುಕ್ತಕ್ಕೆ ಕೇವಲ ಮಾನ್ಯತೆ ಕೊಟ್ಟಿರುವುದು ಪೂರ್ಣ ಸಮಾಧಾನ ತಂದಿಲ್ಲ. ಲೋಕಾಯುಕ್ತಕ್ಕೆ ಪರಿಣಾಮಕಾರಿ ಆಗಿರುವ ಅಧಿಕಾರಿಗಳನ್ನು ನೇಮಕ ಮಾಡುವ ಅಗತ್ಯವಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next