ಉಡುಪಿ: ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳುತ್ತಿರುವ ಪ್ರಮೋದ್ ಮಧ್ವರಾಜ್ ಅವರು ಚುನಾವಣೋತ್ತರದಲ್ಲಿ ಯಾವ ಪಕ್ಷದಲ್ಲಿರುತ್ತಾರೆಂಬುದನ್ನು ಈಗಲೇ ಮತದಾರರಿಗೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿರುವ ಶಾಸಕ ಕೆ. ರಘುಪತಿ ಭಟ್ ಅವರು, ಜಿಲ್ಲೆಯಲ್ಲಿ ಮರಳು ಸಮಸ್ಯೆಗೆ ಇವರೇ ಮೂಲ ಕಾರಣ ಎಂದು ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಬಾರಿ ಶಾಸಕರಾದಾಗ ಸಂಸದೀಯ ಕಾರ್ಯದರ್ಶಿ, ರಾಜ್ಯ ಮಂತ್ರಿ, ಸಂಪುಟ ದರ್ಜೆ ಸಚಿವ ಹುದ್ದೆಯನ್ನು ನೀಡಿದ ಕಾಂಗ್ರೆಸ್‌ಗೆ ಪ್ರಮೋದ್ ಈಗ ಅಧಿಕಾರದ ಆಸೆಯಿಂದ ದ್ರೋಹ ಮಾಡಿದ್ದಾರೆಂದು ನೈಜ ಕಾಂಗ್ರೆಸಿಗರು ಹೇಳುತ್ತಿದ್ದಾರೆ ಎಂದರು.
ಜೆಡಿಎಸ್‌ನವರು ಬೆಂಗಳೂರು ಉತ್ತರ ಕ್ಷೇತ್ರದಿಂದ ಕೃಷ್ಣ ಬೈರೇಗೌಡ, ಬಿಎಲ್ ಶಂಕರ್ ಅವರಿಗೂ ತಮ್ಮ ಚಿಹ್ನೆಯಿಂದ ನಿಲ್ಲಲು ಹೇಳಿದ್ದರು. ಆದರೆ ಅವರಾರೂ ಮಣಿಯಲಿಲ್ಲ. ಇಲ್ಲಿಯೂ ಬೇರೆ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್‌ನವರು ತಮ್ಮ ಚಿಹ್ನೆಯಿಂದ ನಿಲ್ಲಲು ಹೇಳಿದ್ದರು. ಆದರೆ ಪ್ರಮೋದ್ ಮಾತ್ರ ಒಪ್ಪಿದರು. ಈಗ ನೈಜ ಕಾಂಗ್ರೆಸಿಗರಿಗೆ ಮತ ಹಾಕಲಾಗದ ಸ್ಥಿತಿ ಇದೆ. ಹಿಂದೆ ಬಿಜೆಪಿಯವರು ಗೇಟ್ ಹಾಕಿದರು ಎನ್ನುತ್ತಿದ್ದರು. ಈಗ ಹೀಗೆ ಮಾಡಿದ್ದಾರೆ ಎಂದು ಭಟ್ ಲೇವಡಿ ಮಾಡಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆ, ಬಿಹಾರದಲ್ಲಿ ಜೆಡಿಯು ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲವೆ ಎಂದು ಪ್ರಮೋದ್ ಪ್ರಶ್ನಿಸುತ್ತಾರೆ. ಆ ರಾಜ್ಯಗಳಲ್ಲಿ ಆಯಾ ಪಕ್ಷಗಳ ಅಭ್ಯರ್ಥಿಗಳು ಆಯಾ ಚಿಹ್ನೆಯಡಿ ಮಾತ್ರ ಸ್ಪರ್ಧಿಸುತ್ತಾರೆ. ಇಲ್ಲಿ ಎರಡೂ ಪಕ್ಷಗಳ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಎರಡೂ ಪಕ್ಷಗಳು ವಿಲೀನವಾಗಲಿಲ್ಲ. ಎರಡೂ ಪಕ್ಷಗಳ ನೀತಿ ಸಿದ್ಧಾಂತ ಬೇರೆ ಇದೆ. ಚುನಾವಣೆ ಬಳಿಕವೂ ಎರಡೂ ಚಿಹ್ನೆಗಳ ಶಾಲು ಹೊದ್ದು ಇರುತ್ತಾರಾ? ಉಡುಪಿ ಮತದಾರರು ಬುದ್ಧಿ ಇಲ್ಲದವರೆಂದು ಹೇಳಿಕೆ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಪ್ರಮೋದ್ ಸ್ಪಷ್ಟನೆ ಕೊಡಿಸಬೇಕು ಎಂದರು.
ತನ್ನ ಅವಧಿಯಲ್ಲಿ 2,000 ಕೋ.ರೂ. ಅನುದಾನ ತಂದಿದ್ದೇನೆ ಎಂದು ಪ್ರಮೋದ್ ಹೇಳುತ್ತಿದ್ದಾರೆ. ಇದರಲ್ಲಿ ರಾ.ಹೆ. ಕಾಮಗಾರಿ, ಪಡಿತರದ ಅಕ್ಕಿ, ರೈತರ ವಿದ್ಯುತ್ ಇತ್ಯಾದಿಗಳೂ ಸೇರಿವೆ. ಇಂತಹ ಸುಳ್ಳು ಹೇಳಿದವರಿಗೆ ಮತದಾರರು ಒಮ್ಮೆ ಬುದ್ಧಿ ಕಲಿಸಿದ್ದಾರೆಂದರು.
ವೈಮನಸ್ಸು ಇಲ್ಲ
ಪ್ರಶ್ನೆಗೆ ಉತ್ತರಿಸಿದ ಭಟ್ ಅವರು, ಟಿ.ಜೆ.ಅಬ್ರಹಾಂ ಅವರ ಆರೋಪಕ್ಕೂ ತಮಗೂ ಸಂಬಂಧವಿಲ್ಲ. ಅವರು ಬಿಜೆಪಿ ನಾಯಕರ ವಿರುದ್ಧವೂ ಆರೋಪಿಸಿದ್ದರು ಎಂದರು. ಸಂಸದೆ ಜತೆ ಇದ್ದ ವೈಮನಸ್ಸಿನ ಬಗ್ಗೆ ಪ್ರಶ್ನಿಸಿದಾಗ ಸಂಸದೆ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮೊಳಗೆ ಯಾವುದೇ ವೈಮನಸ್ಸು ಇಲ್ಲ ಎಂದರು. ಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ನಾಯಕರಾದ ಮಹೇಶ ಠಾಕೂರ್, ಪೆರ್ಣಂಕಿಲ ಶ್ರೀಶ ನಾಯಕ್, ಉಪೇಂದ್ರ ನಾಯಕ್, ಜಗದೀಶ ಆಚಾರ್ಯ ಉಪಸ್ಥಿತರಿದ್ದರು.