Advertisement

ಒಬ್ಬರಾದರೇನು? ಸಾವಿರವಾದರೇನು?

06:01 PM Jun 11, 2022 | Team Udayavani |

ತೀರ್ಥಹಳ್ಳಿ ಬಳಿಯ ಗರ್ತಿಕೆರೆ ರಾಘಣ್ಣನೆಂದರೆ ಸುಗಮ ಸಂಗೀತದಲ್ಲಿ ದೊಡ್ಡ ಹೆಸರು. ರಾಘವೇಂದ್ರ ರಾವ್‌ ಗುಣಗಳಿಂದಾಗಿ ಎಲ್ಲರಿಗೆ “ಅಣ್ಣ’ನಾದರು. ಇವರು ಮೊದಲು ಪ್ರವೇಶಿಸಿದ್ದು ನಾಟಕ ರಂಗವನ್ನು. ಇವರು ಸಂಗೀತ, ಮೇಕಪ್‌ ಇತ್ಯಾದಿಗಳಲ್ಲಿ ಪರಿಣತಿ ಹೊಂದಿದ್ದರಿಂದ ನಾಟಕ ಕಂಪೆನಿಗಳಲ್ಲಿ ಇವರಿಗೆ ಬೇಡಿಕೆ ಕುದುರಿತ್ತು. ಸಂಚಾರಿ ನಾಟಕ ಕಂಪೆನಿಗಳ ಖಯಾಲಿ ಕಡಿಮೆಯಾದ ಬಳಿಕ ಸಂಗೀತವಿದ್ದ ಕಾರಣ ಹರಿದಾಸರಾದರು. ಆರಂಭದಲ್ಲಿ ಸುಬ್ಬಯ್ಯ ದಾಸ (ಸೂರಳಿ ದಾಸರು)ರ ಜತೆ ಹಾರ್ಮೋನಿಯಂ ನುಡಿಸಿದ ಅನುಭವವೂ ಇತ್ತು. ಅವರ ಜತೆ 1953-54ರಲ್ಲಿ ಕುಂದಾಪುರದ ವೆಂಕಟರ ಮಣ ದೇವಸ್ಥಾನದಲ್ಲಿ ಹರಿಕಥೆ ನಡೆಸಿಕೊಟ್ಟಿದ್ದರು.

Advertisement

ಸುಮಾರು 1990ರ ವೇಳೆ ಕೋಟೇಶ್ವರದ ದೇವಸ್ಥಾನವೊಂದರಲ್ಲಿ ಹರಿಕಥೆ ನಡೆಸಿದ್ದರು. ಆಗ ವಸತಿ ಹೂಡಿದ್ದು ಅಂಕದಕಟ್ಟೆ ಬಡಾಕೆರೆಯ ನಾಗರಾಜ ಧನ್ಯರ ಮನೆಯಲ್ಲಿ. ವಾಗ್ವೆ„ಖರಿ, ಹಾಸ್ಯ, ಕತೆ-ಉಪಕತೆಗಳಿಂದ ಹರಿಕಥೆ ಯಶಸ್ವಿಯಾಗಿ ಮುಗಿಯಿತು. ಧನ್ಯರ ಮನೆಗೆ ಮಲಗಲು ಬಂದರು. ಆಗ ಧನ್ಯರ ತಾಯಿ ಲಲಿತಮ್ಮ “ನಿನ್ನ ಹರಿಕಥೆ ಚೆನ್ನಾಗಿತ್ತಂತೆ. ನನಗೆ ವಯಸ್ಸಾದ ಕಾರಣ ಬರಲು ಆಗಲಿಲ್ಲ’ ಎಂದರು. “ನೀವು ಬರಲಾಗದಿದ್ದರೆ ಏನಂತೆ? ಈಗ ಇನ್ನೊಮ್ಮೆ ಹರಿಕಥೆ ಮಾಡ್ತೇನಿ ಬಿಡಿ’ ಎಂದ ರಾಘಣ್ಣ ಅದೇ ಹರಿಕಥೆಯನ್ನು ಹಿರಿಯ ಜೀವಕ್ಕೋಸ್ಕರ ಉಣಬಡಿಸಿದರು.

ಕಲಾವಿದರಿಗೆ ತುಂಬಿದ ಸಭೆ ಒಂದು ಜೋಶ್‌ ಕೊಡುತ್ತದೆ. ಇಲ್ಲಿ ವೃದ್ಧ ತಾಯಿ, ಈಗಾಗಲೇ ಅದೇ ಹರಿಕಥೆಯನ್ನು ಕೇಳಿದ ಮನೆಯ ಸದಸ್ಯರು ಮಾತ್ರ ಇದ್ದರು. ಹರಿಕಥೆ ಮುಗಿದ ಬಳಿಕ “ದೇವಸ್ಥಾನದಲ್ಲಿ ಮಾಡಿದ ಹರಿಕಥೆಗಿಂತ ಇಲ್ಲಿನದೇ ಚೆನ್ನಾಗಿತ್ತು’ ಎಂದು ಮನೆಯವರು ಅಭಿಪ್ರಾಯಪಟ್ಟರು.

ಈಗ ಲಲಿತಮ್ಮನವರೂ ನಾಗರಾಜ ಧನ್ಯರೂ ಇಲ್ಲ. ರಾಘಣ್ಣ ಹರಿಕಥೆ ಮಾಡುವುದನ್ನು ಆರೋಗ್ಯದ ದೃಷ್ಟಿಯಿಂದ ಬಿಟ್ಟು 30 ವರ್ಷ ಕಳೆದಿವೆ. ರಾಘಣ್ಣ ಇತ್ತೀಚಿನ ವರ್ಷಗಳಲ್ಲಿ ಸುಗಮಸಂಗೀತದಲ್ಲಿ ಹೆಚ್ಚು ಪ್ರಸಿದ್ಧರಾದ ಕಾರಣ ಅವರು ಹರಿದಾಸರಾಗಿದ್ದರು ಎಂಬುದೇ ಬಹುಮಂದಿಗೆ ಗೊತ್ತಿಲ್ಲ. “ರಾಘಣ್ಣ ನಮ್ಮ ಮನೆಗೆ ಬರುತ್ತಿದ್ದರು ಎಂಬುದು ಗೊತ್ತಿದೆ. ಮಿಕ್ಕುಳಿದ ವಿಷಯ ನಮಗೆ ಗೊತ್ತಿಲ್ಲ’ ಎನ್ನುತ್ತಾರೆ ನಾಗರಾಜ ಧನ್ಯರ ಸಮೀಪದ ಬಂಧುಗಳಾದ ವಾಸುದೇವ ಧನ್ಯ, ಶ್ರೀಧರ ಧನ್ಯ. 87 ವರ್ಷ ಪ್ರಾಯದ ಹಿರಿಯ ಕಲಾವಿದ ರಾಘಣ್ಣನಿಗೆ ಹಳೆಯ ನೆನಪು ಅಚ್ಚಳಿಯದೆ ಉಳಿದಿದೆ.

***

Advertisement

1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಬಡ ಸೈನಿಕ ಮಹಾಶಂಕರ ಠಾಕೂರ್‌ರ ಮೊಮ್ಮಗ ಬರೋಡಾದ ಪಂಡಿತ್‌ ಓಂಕಾರನಾಥ ಠಾಕೂರ್‌ (1897-1967) ಪದ್ಮಶ್ರೀ ಪ್ರಶಸ್ತಿ, ಬನಾರಸ್‌ ವಿ.ವಿ., ರಬೀಂದ್ರಭಾರತಿ ವಿ.ವಿ.ಯಿಂದ ಗೌರವ ಡಾಕ್ಟರೇಟ್‌ ಪಡೆದ ಪ್ರಸಿದ್ಧ ಹಿಂದೂಸ್ಥಾನೀ ಸಂಗೀತಕಾರರು. ಒಮ್ಮೆ ಇವರು ಮಹಾರಾಷ್ಟ್ರದ ಕಲ್ಯಾಣ್‌ಗೆ ಸಂಗೀತ ಕಛೇರಿ ನೀಡಲು ಆಗಮಿಸಿದ್ದರು. ಅದು ಟಿಕೆಟ್‌ ಇಟ್ಟ ಕಛೇರಿಯಾಗಿತ್ತು. ಪ್ರಸಿದ್ಧ ಕಲಾವಿದರಾದ ಕಾರಣ ಟಿಕೆಟ್‌ಗಳೆಲ್ಲ ಖಾಲಿಯಾಗಿದ್ದವು. ಇಬ್ಬರು ತರುಣ ವಿದ್ಯಾರ್ಥಿಗಳೂ ಟಿಕೆಟ್‌ ಖರೀದಿಸಲು ಬಂದರು. ಅವರಿಗೆ ಇಷ್ಟು ಹಣ ಕೊಡುವಷ್ಟು ಅನುಕೂಲವಿರಲಿಲ್ಲ. ಹೊರಗೆ ನಿಂತಿರುವಾಗ ಓಂಕಾರನಾಥಜೀ ಬಂದರು. “ನಾವು ವಿದ್ಯಾರ್ಥಿಗಳು. ಇಷ್ಟು ಮೊತ್ತದ ಟಿಕೆಟ್‌ ಖರೀದಿಸಲು ಆಗುತ್ತಿಲ್ಲ. ಏನಾದರೂ ಮಾಡಿ ನಮ್ಮನ್ನು ಒಳಗೆ ಕರೆದೊಯ್ಯಬೇಕು’ ಎಂದು ಅಲವತ್ತುಕೊಂಡರು. “ಈ ಬೇಡಿಕೆಯನ್ನು ಈಡೇರಿಸಲು ಸಾಧ್ಯವಿಲ್ಲ. ನಾಳೆ ಬೆಳಗ್ಗೆ ನಾನು ವಸತಿ ಹೂಡಿದ ಸ್ಥಳಕ್ಕೆ ಬನ್ನಿ’ ಎಂದು ಓಂಕಾರನಾಥರು ಹೇಳಿದರು. ವಿದ್ಯಾರ್ಥಿಗಳು ಹತಾಶೆಗೊಂಡರಾದರೂ ಮಾತನಾಡಿಸಬಹುದಲ್ಲ ಎಂದುಕೊಂಡು ಮರುದಿನ ಅವರ ಕೋಣೆಗೆ ಹೋದರು. ತಮ್ಮ ಸಹವಾದ್ಯಗಾರರನ್ನು ಕರೆಸಿ ಈ ವಿದ್ಯಾರ್ಥಿಗಳಿಗೋಸ್ಕರವೇ ಓಂಕಾರನಾಥರು ಹಾಡಿದರು. ಅಲ್ಲಿ ನೆರೆದವರಿಗೆಲ್ಲ ಪ್ರಸಿದ್ಧ ಕಲಾವಿದನ ಸರಳತೆ ನೋಡಿ ಅಚ್ಚರಿಯಾಯಿತು.

***

ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಸುದೀರ್ಘ‌ಕಾಲ ಪ್ರಾಧ್ಯಾಪಕರಾಗಿದ್ದ ಪ್ರೊ| ಗುರು ವೆಂಕಟಾಚಾರ್ಯರು ಮಂತ್ರಾಲಯ ಮಠದ ಉತ್ತರಾಧಿಕಾರಿಯಾಗಿ ಸುವಿದ್ಯೇಂದ್ರ ತೀರ್ಥಶ್ರೀಪಾದರೆಂದು ನಿಯುಕ್ತಿಗೊಂಡು ಈಗ ಮಠದ ಜವಾಬ್ದಾರಿಯಿಂದ ಹೊರಬಂದು ಸ್ವತಂತ್ರ ಸನ್ಯಾಸಿಯಾಗಿದ್ದಾರೆ. ಸ್ವಾಮೀಜಿ ಎಂಬ ವಿಶೇಷಣ ಹೊಂದುವ ಮೊದಲೇ ಶ್ರೀಮದ್ಭಾಗವತ ಸಪ್ತಾಹ ಪ್ರವಚನದಲ್ಲಿ ಪ್ರಸಿದ್ಧರಾದ ಇವರು ಇದುವರೆಗೆ 2,000ಕ್ಕೂ ಮಿಕ್ಕಿ ಸಪ್ತಾಹ ಪ್ರವಚನ

ನಡೆಸಿದ್ದಾರೆ. ಬೆಂಗಳೂರು ಹನುಮಂತನಗರದಲ್ಲಿ ಇಬ್ಬರೇ ಕುಳಿತುಕೊಳ್ಳಬಹುದಾದ ಮನೆ ಹೊಂದಿದ ಒಬ್ಬರು ಬಡ ಶಿಕ್ಷಕಿ, “ನೀವೇ ಬಂದು ಸಪ್ತಾಹವನ್ನು ನಡೆಸಿಕೊಡಬೇಕು. ನನ್ನಲ್ಲಿರುವುದು 500 ರೂ. ಮಾತ್ರ’ ಎಂದು ಅತ್ತು ಹೇಳಿದಾಗ ಒಬ್ಬಳಿಗಾಗಿ ಒಂದು ವಾರ ಪ್ರವಚನ ನಡೆಸಿಕೊಟ್ಟರು. ಹೈದರಾಬಾದ್‌ನಲ್ಲಿ ಗುಂಡಾಚಾರ್‌ ಎಂಬ ಬಡವರೊಬ್ಬರು 100 ರೂ. ನೀಡಿ ಸಪ್ತಾಹವನ್ನು ನಡೆಸಲು ಮನವಿ ಮಾಡಿದರು. ಆ ಮನೆಯಲ್ಲಿದ್ದ ಮೂವರು ಮಾತ್ರ ಶ್ರೋತೃವರ್ಗ. ಸಾವಿರಾರು ಜನರು ಸೇರುವಾಗ ಹೇಗೆ ಪ್ರವಚನ ನಡೆಸುತ್ತಿದ್ದರೋ ಅದೇ ಓಘದಲ್ಲಿ ನಡೆಯಿತು. ಚಾಮರಾಜಪೇಟೆಯಲ್ಲಿ ಶ್ರೀಮಂತರೊಬ್ಬರು ಹತ್ತು ದಿನಗಳ ಕಾಲ ಶ್ರೀನಿವಾಸ ಕಲ್ಯಾಣವನ್ನು ನಡೆಸಿ 25 ರೂ. ಸಂಭಾವನೆ ನೀಡಿದ್ದರು. ಸಮಾಜದ ಇನ್ನೊಂದು ಮುಖವಿದು.

***

ಸಾವಿರಾರು ಜನರನ್ನು ಆಕರ್ಷಿಸುವ ಎಲ್ಲ ಪ್ರಸಿದ್ಧ ಕಲಾವಿದರೂ ಪ್ರವಚನಕಾರರೂ ಧಾರ್ಮಿಕ ನಾಯಕರೂ ಸಂಪನ್ಮೂಲ ವ್ಯಕ್ತಿಗಳೂ ಮಾತ್ರವೇಕೆ, ಎಲ್ಲ ಬಗೆಯ ಸುಪ್ರಸಿದ್ಧರೂ ಆರಂಭದಲ್ಲಿ ಆ ಹಂತದಲ್ಲಿರುವುದಿಲ್ಲ. ಹಂತಕ್ಕೆ ಏರುತ್ತಿರುವಾಗಲೇ (ಏರಬೇಕೆಂತಲೇ) “ಎಷ್ಟು ಜನರಾಗುತ್ತಾರೆ? ಯಾರ್ಯಾರು ವೇದಿಕೆಯನ್ನು ಹಂಚಿಕೊಳ್ಳುತ್ತಾರೆ? ಶ್ರೋತೃವರ್ಗದ ಕ್ವಾಲಿಟಿ ಏನು? ಪುರುಸೊತ್ತು ಇಲ್ಲ, ಮತ್ತೆ ನೋಡೋಣ’ ಎಂಬಿತ್ಯಾದಿ ಹೇಳಿ ಅಂತಸ್ತನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಾರೆ. ಪ್ರಸಿದ್ಧಿಯ ಹಂತದಲ್ಲಿರುವಾಗಲೇ ಸರಳತೆಯನ್ನು ತೋರಿಸುವವರು ಸ್ಮರಣೀಯರಾಗಿರುತ್ತಾರೆ, ದೈವತ್ವದ ಸಿದ್ಧಿಯೂ ಅದೇ ಸ್ಥಿತಿಯಲ್ಲಿರಬಹುದಾದ ಕಾರಣವೇ ಸ್ಮರಣೀಯರೆನಿಸುವುದೋ ಏನೋ. ಇವರಿಗೆ ತಾವು ಹಿಂದೆ ಇದ್ದ ಸ್ಮತಿ-ಸ್ಥಿತಿಯ ಬಗೆಗೆ ಸರಿಯಾದ ತಿಳಿವಳಿಕೆ ಇರುತ್ತದೆ. ತಾವು ಯಾವ ಹಂತದಿಂದ ಈ ದೊಡ್ಡ ಹಂತಕ್ಕೆ ಬಂದಿದ್ದೇವೆಂಬ ಎಚ್ಚರ ಕಲಾವಿದರಿಗೆ ಮಾತ್ರವಲ್ಲ ಎಲ್ಲರಿಗೂ ಇರಲೇಬೇಕು. ಬೆಳೆಯುವಾಗ ಎಲ್ಲರೂ ದುರ್ಬಲರೇ…! ಸಮಾಜದಿಂದ ಸಹಕಾರವೆಂಬ ಸವಲತ್ತು ಪಡೆದೇ ದೊಡ್ಡವರಾಗುವುದು ಎಂಬ ಅರಿವು ಮುಖ್ಯ.

*ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next