Advertisement

ಸಾಂಕ್ರಾಮಿಕದ ವಿರುದ್ಧ ಹೇಗಿದೆ ಭಾರತದ ಯುದ್ಧ?

07:09 AM May 13, 2020 | mahesh |

ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಎಪ್ಪತ್ತು ಸಾವಿರದ ಗಡಿ ದಾಟಿದೆ. ಲಾಕ್‌ಡೌನ್‌ ಹೊರತಾಗಿಯೂ ಸೋಂಕಿತರ ಸಂಖ್ಯೆ ಏರುತ್ತಿರುವುದು ಕಳವಳದ ಸಂಗತಿಯೇ. ಇದೇ ವೇಳೆಯಲ್ಲೇ ಭಾರತದಲ್ಲಿ ಸರಾಸರಿ ಮರಣ ಪ್ರಮಾಣ 3.2 ಪ್ರತಿಶತದಷ್ಟು ದಾಖಲಾಗಿದ್ದು, ಯುರೋಪಿಯನ್‌ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆಯೇ. ಆದರೆ ಅಚ್ಚರಿ ಹುಟ್ಟಿಸುತ್ತಿರುವ ಅಂಶವೆಂದರೆ, 8 ಸಾವಿರಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ತಮಿಳುನಾಡಿನಲ್ಲಿ ಮರಣ ಪ್ರಮಾಣ 1 ಪ್ರತಿಶತಕ್ಕಿಂತಲೂ ಕಡಿಮೆಯಿದ್ದರೆ, ಪಶ್ಚಿಮ ಬಂಗಾಲದಲ್ಲಿ 9.57 ಪ್ರತಿಶತ ದಾಖಲಾಗಿದೆ!

Advertisement

ಇನ್ನೊಂದು ವಾರದಲ್ಲಿ ಲಕ್ಷ ಗಡಿ ದಾಟಬಹುದೇ?
ಭಾರತದಲ್ಲಿ ಸೋಂಕು ಪ್ರಮಾಣವು 6.7 ಪ್ರತಿಶತದಷ್ಟಿದ್ದು, ಇದೇ ವೇಗದಲ್ಲೇ ಮುಂದುವರಿದರೆ ಇನ್ನೂ 7 ದಿನಗಳಲ್ಲಿ ದೇಶದಲ್ಲಿ ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಲಾಕ್‌ಡೌನ್‌ ಜಾರಿಗೆ ಬಂದು 8 ವಾರಗಳಾಗಿವೆಯಾದರೂ, ದೇಶದಲ್ಲಿ ಸರಾಸರಿ ಸೋಂಕಿತರ ಬೆಳವಣಿಗೆಯ ದರದಲ್ಲೇನು ಇಳಿಕೆ ಆಗುತ್ತಿಲ್ಲ. ಇನ್ನು ಪ್ರತಿನಿತ್ಯ ಕೊರೊನಾದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ನಮ್ಮಲ್ಲಿ 100ರ ಗಡಿ ದಾಟಿದೆ. ಮೇ5ರಿಂದ ಮೇ 11ರ ವರೆಗೆ ನಿತ್ಯ ಮೃತಪಟ್ಟವರ ಸರಾಸರಿ ಸಂಖ್ಯೆ 120ರಷ್ಟಿದೆ.

ಭಾರತದಲ್ಲಿ ಮರಣ ಪ್ರಮಾಣ ಕಡಿಮೆ
ಇಂದು ಕೋವಿಡ್ ದಿಂದಾಗಿ ವಿಶ್ವಾದ್ಯಂತ 42ಲಕ್ಷಕ್ಕೂ ಅಧಿಕ ಸೋಂಕಿತರಿದ್ದರೆ, 2.87 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 15 ಲಕ್ಷಕ್ಕೂ ಅಧಿಕ ಸೋಂಕಿತರು ಈಗ ಚೇತರಿಸಿಕೊಂಡಿದ್ದಾರೆ. ಮೇ 11ರ ವೇಳೆಗೆ ಕೊರೊನಾದಿಂದಾಗಿ ಜಾಗತಿಕ ಮರಣ ಪ್ರಮಾಣ 7-7.5 ಪ್ರತಿಶತವಿದ್ದರೆ, ಭಾರತದಲ್ಲಿ ಮರಣ ಪ್ರಮಾಣ 3.2 ರಷ್ಟಿದೆ. ಇನ್ನೊಂದೆಡೆ ಭಾರತದಷ್ಟೇ ಸೋಂಕಿತರ ಸಂಖ್ಯೆಯನ್ನು ಹೊಂದಿರುವ ಬೆಲ್ಜಿಯಂನಲ್ಲಿ ಮರಣ ಪ್ರಮಾಣ 16.31 ಪ್ರತಿಶತ ದಾಖಲಾಗಿದೆ! ಫ್ರಾನ್ಸ್‌ನಲ್ಲಿ 14.91 ಪ್ರತಿಶತ, ಬ್ರಿಟನ್‌ನಲ್ಲಿ 14.53 ಪ್ರತಿಶತ, ಇಟಲಿಯಲ್ಲಿ 13.95 ಪ್ರತಿಶತ ಹಾಗೂ ನೆದರ್‌ಲೆಂಡ್ಸ್‌ನಲ್ಲಿ 12.76 ಪ್ರತಿಶತ ಮರಣ ಪ್ರಮಾಣ ದಾಖಲಾಗಿದೆ. ಅಮೆರಿಕದಲ್ಲಿ ಮರಣ ಪ್ರಮಾಣ 5.91 ಪ್ರತಿಶತದಷ್ಟಿದೆ. ಆದರೆ, ಆ ದೇಶದಲ್ಲಿ ಸೋಂಕಿತರ ಸಂಖ್ಯೆ 13 ಲಕ್ಷಕ್ಕೂ ಅಧಿಕವಿದ್ದು, 81 ಸಾವಿರ ಜನ ಮೃತಪಟ್ಟಿದ್ದಾರೆ.

ಏಕೆ ಕೆಲವು ರಾಜ್ಯಗಳಲ್ಲಿ ಮರಣ ಪ್ರಮಾಣ ಅಧಿಕವಿದೆ?
ಮಹಾರಾಷ್ಟ್ರ, ದಿಲ್ಲಿ ಹಾಗೂ ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದರೂ ಈ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಗುಜರಾತ್‌ಗಿಂತ ಕಡಿಮೆ ಮರಣ ಪ್ರಮಾಣ ದಾಖಲಾಗಿದೆ(ಸೋಂಕಿತರ ಸಂಖ್ಯೆಗೆ ಹೋಲಿಸಿದಾಗ). ಉದಾಹರಣೆಗೆ, ತಮಿಳುನಾಡಲ್ಲಿ ಮರಣ ಪ್ರಮಾಣ 0.67 ಪ್ರತಿಶತವಿದ್ದರೆ, ಪಶ್ಚಿಮ ಬಂಗಾಲದಲ್ಲಿ 9.57 ಪ್ರತಿಶತ ದಾಖಲಾಗಿದೆ. ಮಂಗಳವಾರದ ವೇಳೆಗೆ ತಮಿಳುನಾಡಲ್ಲಿ 8 ಸಾವಿರ ಪ್ರಕರಣಗಳು ದಾಖಲಾಗಿದ್ದು, 53 ಜನ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಪಶ್ಚಿಮ ಬಂಗಾಲದಲ್ಲಿ 2063 ಪ್ರಕರಣಗಳು ಪತ್ತೆಯಾಗಿದ್ದರೆ, ಅವರಲ್ಲಿ ಮೃತಪಟ್ಟದ್ದು 190 ಜನ!

ಕೆಲವು ರಾಜ್ಯಗಳು ಕಡಿಮೆ ಪರೀಕ್ಷೆಗಳು ನಡೆಸುತ್ತಿರುವುದೂ ಈ ರೀತಿಯ ಅಂಕಿಸಂಖ್ಯೆ ಎದುರಾಗಲು ಕಾರಣವಿರಬಹುದು. ಉದಾಹರಣೆಗೆ, ತಮಿಳುನಾಡು ಮತ್ತು ದೆಹಲಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಹೆಚ್ಚು ಪರೀಕ್ಷೆಗಳನ್ನು ನಡೆಸಿದಾಗ, ರೋಗಲಕ್ಷಣ ಕಾಣಿಸಿಕೊಳ್ಳದ (-asymptomatic cases)ಪ್ರಕರಣಗಳೂ ಪತ್ತೆಯಾಗುತ್ತವೆ. ಹೀಗಾಗಿ, ಈ ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗಿಬಿಡುತ್ತದೆ, ಆದರೆ ಮೃತಪಡುವವರ ಪ್ರಮಾಣ ಕಡಿಮೆಯೇ ಇರುತ್ತದೆ. ಇನ್ನೊಂದೆಡೆ ಪಶ್ಚಿಮ ಬಂಗಾಲ, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ಹೆಚ್ಚಿನ ಪರೀಕ್ಷೆಗಳು ನಡೆದಿಲ್ಲ. ಈ ರಾಜ್ಯಗಳಲ್ಲಿ ರೋಗಾವಸ್ಥೆ ಉಲ್ಬಣಿಸಿದ ಮೇಲೆಯೇ ಅನೇಕರನ್ನು ಪರೀಕ್ಷಿಸಲಾಗಿದೆ. ಸಹಜವಾಗಿಯೇ, ರೋಗಾವಸ್ಥೆ ತೀವ್ರವಾದವರು ಮೃತಪಡುವ ಸಾಧ್ಯತೆ ಅಧಿಕವಿರುತ್ತದೆ.

Advertisement

ಭಾರತದಲ್ಲಿ ಮೊದಲ ಪ್ರಕರಣ ಪತ್ತೆಯಾಗಿದ್ದು ಜನವರಿ 30ರಂದು. ಅದಕ್ಕೂ ಮುನ್ನವೇ ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಹಾಗಿದ್ದರೆ, ಆ ದೇಶಗಳ ಸ್ಥಿತಿ ಈಗ ಹೇಗಿದೆ?



Advertisement

Udayavani is now on Telegram. Click here to join our channel and stay updated with the latest news.

Next