Advertisement

Puri Jagannath Temple: ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರದಲ್ಲಿ ಏನಿದೆ?

11:11 PM May 22, 2024 | Team Udayavani |

ಒಡಿಶಾದ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರ ವಿಷಯವು ಈಗ ಚುನಾವಣ ಪ್ರಚಾರದ ಸರಕಾಗಿದೆ. ಸಾಕಷ್ಟು ಚಿನ್ನಾಭರಣ,
ಬೆಳ್ಳಿಯ ಆಭರಣ ಹಾಗೂ ಬೆಲೆ ಬಾಳುವ ವಸ್ತುಗಳ ಸಂಗ್ರಹ ಹೊಂದಿರುವ ರತ್ನ ಭಂಡಾರದ ಕೀ ಕಾಣೆಯಾದುದರ ಕುರಿತಾದ ಮಾಹಿತಿ ಇಲ್ಲಿದೆ.

Advertisement

ಕಚ್ಚಥೀವು ದ್ವೀಪದ ಬಳಿಕ ಒಡಿಶಾದ ಪುರಿ ಜಗನ್ನಾಥ ದೇಗುಲದ “ರತ್ನ ಭಂಡಾರ’ವು ಚುನಾವಣೆ ಪ್ರಚಾರದ ಕೇಂದ್ರ ಬಿಂದುವಾಗಿದೆ. ಲೋಕಸಭೆ ಜತೆಗೆ ಒಡಿಶಾದ ವಿಧಾನಸಭೆಗೂ ಚುನಾವಣೆ ನಡೆಯುತ್ತಿರುವ ಕಾರಣ ಬಿಜೆಪಿ ಮತ್ತು ಸಿಎಂ ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಅದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಪುರಿ ಜಗನ್ನಾಥ ದೇಗುಲದ “ರತ್ನ ಭಂಡಾರ’ ಕೀ ಕಳೆದು ಹೋಗಿರುವ ಪ್ರಕರಣವನ್ನು ಚುನಾವಣ ಪ್ರಚಾರದ ವೇಳೆ ಪ್ರಸ್ತಾವಿಸಿದ್ದಾರೆ. ಪರಿಣಾಮ ರಾಜಕೀಯ ಆರೋಪ ಪ್ರತ್ಯಾರೋಪಗಳು ಸುರಿ ಮಳೆಯಾಗುತ್ತಿವೆ.

ದೇಶದ ಪ್ರಮುಖ ಶ್ರದ್ಧಾ ಕೇಂದ್ರಗಳಲ್ಲಿ ಒಂದಾಗಿರುವ ಪುರಿ ಜಗನ್ನಾಥ ದೇಗುಲದ ರಥಯಾತ್ರೆ ವಿಶ್ವ ಪ್ರಸಿದ್ಧ. ಪೌರಾಣಿಕ ಮತ್ತು ಐತಿಹಾಸಿ ಕವಾಗಿಯೂ ಮಹತ್ವವನ್ನು ಪಡೆದು ಕೊಂಡಿರುವ ಈ ದೇಗುಲವು ದೇಶದ ಶ್ರೀಮಂತ ದೇಗುಲಗಳಲ್ಲಿ ಒಂದಾಗಿದೆ. ರಾಜಾಶ್ರಯದಲ್ಲಿ ಚಿನ್ನಾಭರಣ ಸೇರಿದಂತೆ ಸಾಕಷ್ಟು ಸಂಪತ್ತು ದೇಗುಲಕ್ಕಿದೆ. ಜತೆಗೆ ಭಕ್ತರೂ ಕಾಣಿಕೆ ರೂಪದಲ್ಲಿ ಸಾಕಷ್ಟು ಚಿನ್ನ, ಹಣವನ್ನು ನೀಡುತ್ತಲೇ ಇದ್ದಾರೆ. ಈಗ ಅದೇ ಸಂಪತ್ತಿನ ಕಾವಲು ಕುರಿತು ನಾನಾ ಪ್ರಶ್ನೆಗಳು ಎದ್ದಿವೆ. ರತ್ನ ಭಂಡಾರದ ಕುರಿತು ವಿವಾದ ಹುಟ್ಟಿಕೊಂಡಿದೆ.

ಏನಿದು ರತ್ನ ಭಂಡಾರ?
ಪ್ರಸಿದ್ಧ ತೀರ್ಥಕ್ಷೇತ್ರವಾಗಿರುವ ಒಡಿಶಾದ ಪುರಿ ದೇಗುಲದ ಜಗನ್ನಾಥ, ಬಲಭದ್ರ ಮತ್ತು ಸುಭದ್ರಾ ಮೂರ್ತಿಗಳಿಗೆ ಈ ಹಿಂದಿನ ರಾಜರು, ಭಕ್ತರು ಕಾಣಿಕೆಯಾಗಿ ನೀಡಿರುವ ಆಭರಣ ಗಳು, ರತ್ನ ಮುತ್ತುಗಳು ಸೇರಿ ಬೆಲೆ ಬಾಳುವ ವಸ್ತುಗಳನ್ನು ಸಂಗ್ರಹಿಸಿಡಲಾಗಿರುವ ಸ್ಥಳವೇ ರತ್ನ ಭಂಡಾರ. 12ನೇ ಶತಮಾನದಲ್ಲಿ ಶುರುವಾದ ಪದ್ಧತಿ ಹಾಗೂ ನಿಯಮಗಳ ಪ್ರಕಾರ, ಬಳಸದ ಆಭರಣಗಳನ್ನು ರತ್ನ ಭಂಡಾರದ ಭಿತರ್‌ ಭಂಡಾರ (ಇನ್ನರ್‌ ಚೇಂಬರ್‌)ದಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಈ ಚೇಂಬರ್‌ ಅನ್ನು ಎರಡು ಕೀಲಿಗಳಿಂದ ಲಾಕ್‌ ಮಾಡಲಾಗುತ್ತದೆ. ಈ ಕೀಲಿಗಳನ್ನು ರಾಜ್ಯ ಸರಕಾರದ ವಿಶೇಷ ಅನುಮತಿಯೊಂದಿಗೆ ಮಾತ್ರವೇ ತೆರೆಯಲು ಅವಕಾಶವಿದೆ. ಚೇಂಬರ್‌ ಲಾಕ್‌ ಮಾಡಿದ ಕೀಗಳನ್ನು ದೇಗುಲದ ಆಡಳಿತವು ಸರಕಾರದ ಖಜಾನೆಗೆ ಒಪ್ಪಿಸಬೇಕಾಗುತ್ತದೆ. ಹಾಗೆಯೇ ಉತ್ಸವಗಳಲ್ಲಿ ಬಳಸಲಾಗುವ ಆಭರಣಗಳಿರುವ ಬಾಹರ್‌ ಭಂಡಾರ (ಔಟರ್‌ ಚೇಂಬರ್‌)ವನ್ನೂ 2 ಕೀಲಿಗಳಿಂದ ಲಾಕ್‌ ಮಾಡಲಾಗುತ್ತದೆ. ಈ ಪೈಕಿ ಒಂದು ಕೀಲಿ ಕೈಯನ್ನು ಶ್ರೀ ಜಗನ್ನಾಥ ದೇಗುಲ ಆಡಳಿತ (ಎಸ್‌ಜೆಟಿಎಎ)ದ ಮುಖ್ಯ ಆಡಳಿತಗಾರರ ಬಳಿ ಮತ್ತು ಮತ್ತೂಂದು ದೇಗುಲದ ವ್ಯವಹಾರಗಳನ್ನು ನೋಡಿಕೊಳ್ಳುವ ಪಟ್ಟಜೋಶಿ ಮಹಾಪಾತ್ರ ಬಳಿ ಇರುತ್ತದೆ. ಇನ್ನು ನಿತ್ಯ ಮೂರ್ತಿಗಳ ಅಲಂಕಾರಕ್ಕೆ ಬಳಸಲಾಗುವ ಆಭರಣಗಳನ್ನು ಹೊಂದಿರುವ ಭಂಡಾರ ಮೇಕಪ್‌ನಲ್ಲಿರುತ್ತವೆ.

ರತ್ನ ಭಂಡಾರದಲ್ಲಿವೆ 2 ಚೇಂಬರ್‌ಗಳು
ರತ್ನ ಭಂಡಾರವು ಭಿತರ್‌ ಭಂಡಾರ್‌(ಇನ್ನರ್‌ ಚೇಂಬರ್‌) ಮತ್ತು ಬಾಹರ್‌ ಭಂಡಾರ (ಔಟರ್‌ ಚೇಂಬರ್‌) ಎಂಬ ಎರಡು ವಿಭಾಗಗಳನ್ನು ಹೊಂದಿದೆ.
1 ಭಿತರ್‌ ಭಂಡಾರ: ಕಳೆದ 38 ವರ್ಷಗಳಿಂದ ಭಿತರ್‌ ಭಂಡಾರವನ್ನು ತೆರೆದೇ ಇಲ್ಲ.
2 ಬಾಹರ್‌ ಭಂಡಾರ: ವಾರ್ಷಿಕ ರಥಯಾತ್ರೆ ಮತ್ತು ಪ್ರಮುಖ ಹಬ್ಬಗಳು ಸೇರಿ ವಿಶೇಷ ಧಾರ್ಮಿಕ ಕ್ರಿಯೆಗಳ ವೇಳೆ ಮೂರ್ತಿಗಳನ್ನು ಅಲಂಕರಿಸ ಲಾಗು ತ್ತದೆ. ಈ ವೇಳೆ ಸೋನಾ ಬೇಷಾ (ಬಂಗಾರದ ವೇಷ)ಕ್ಕಾಗಿ ಭಂಡಾರ ತೆರೆದು ಆಭರಣಗಳನ್ನು ಬಳಸಲಾಗುತ್ತದೆ.

Advertisement

ಭಂಡಾರದಲ್ಲಿ ಚಿನ್ನಾಭರಣ, ಬೆಳ್ಳಿ ವಸ್ತುಗಳು ರಾಶಿ!
1978ರಲ್ಲಿ ಕೈಗೊಳ್ಳಲಾದ ಸಮೀಕ್ಷೆಯ ಪ್ರಕಾರ ರತ್ನ ಭಂಡಾರದಲ್ಲಿ 149 ಕೆ.ಜಿಗೂ ಅಧಿಕ ಬಂಗಾರದ ಆಭರಣಗಳು ಮತ್ತು 258 ಕೆ.ಜಿ.ಗೂ ಅಧಿಕ ಬೆಳ್ಳಿಯ ವಸ್ತುಗಳಿವೆ. ಒಡಿಶಾದ ಅಂದಿನ ಕಾನೂನು ಸಚಿವ ಪ್ರತಾಪ್‌ ಜೆನಾ ಅವರ ಪ್ರಕಾರ, ರತ್ನ ಭಂಡಾರದ ಒಳ ಮತ್ತು ಹೊರ ಕೋಣೆಗಳನ್ನು ತೆಗೆದು 1978 ಮೇ 15ರಿಂದ 1978 ಜುಲೈ 23 ವರೆಗೂ ಎಲ್ಲ ವಸ್ತುಗಳನ್ನು ಎಣಿಕೆ ಮಾಡಿ, ದೇಗುಲ ಆಡಳಿತವು ಪಟ್ಟಿಯನ್ನು ತಯಾರಿಸಿತು. 12,831 ಭರೀ (149 ಕೆ.ಜಿ) ರತ್ನ ಖಚಿತ ಬಂಗಾರದ ಆಭರಣ ಹಾಗೂ 22,153 ಭರೀ (258 ಕೆ.ಜಿ) ಬೆಳ್ಳಿಯ ಆಭರಣಗಳಿದ್ದವು. ಆದರೆ ಈ ಆಭರಣಗಳ ಮೌಲ್ಯ ಎಷ್ಟು ಎಂಬುದರ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳು ಇಲ್ಲ. ಒಡಿಶಾದಲ್ಲಿ 1 ಭರೀ ಎಂದರೆ 11.66 ಗ್ರಾಂ ಎಂದರ್ಥ.

ಕಾಣೆಯಾದ ಕೀ ಹುಡುಕಲು ಆಯೋಗ, ಸಮಿತಿ ರಚನೆ
ಕೀಗಳು ಎಲ್ಲಿ?. ಈ ಪ್ರಶ್ನೆಯೇ ಒಡಿಶಾದಲ್ಲೀಗ ಚುನಾವಣ ವಿಷಯ ವಸ್ತುವಾಗಿದೆ. ರತ್ನ ಭಂಡಾರದ ಕೀಗಳು ಕಾಣೆಯಾಗಿ 6 ವರ್ಷಗಳಾದರೂ ಎಲ್ಲಿವೆ ಎಂಬುದು ಈವರೆಗೂ ಪತ್ತೆಯಾಗಿಲ್ಲ. ಇದಕ್ಕಾಗಿ ಆಯೋಗ ಮತ್ತು ಸಮಿತಿಗಳನ್ನೂ ರಚಿಸಲಾಗಿದೆ. ಮೂಲಗಳ ಪ್ರಕಾರ, ಕಳೆದ ಶತಮಾನದಲ್ಲಿ 4 ಬಾರಿ ಮಾತ್ರವೇ ಭಂಡಾರವನ್ನು ತೆರೆಯಲಾಗಿದೆ. 1905, 1926, 1978 ಮತ್ತು 1984ರಲ್ಲಿ ಮಾತ್ರವೇ ಬಾಗಿಲು ತೆರೆಯಲಾಗಿದೆ. 2018 ಎಪ್ರಿಲ್‌ 4ರಂದು ಆಭರಣಗಳ ಎಣಿಕೆಗಾಗಿ ರತ್ನ ಭಂಡಾರ ತೆರೆಯಲು ರಾಜ್ಯ ಸರಕಾರವು ಮುಂದಾಯಿತು. ಆದರೆ ಈ ಪ್ರಯತ್ನ ಕೈಗೂಡಲಿಲ್ಲ. ಹೈಕೋರ್ಟ್‌ ಆದೇಶದ ಪ್ರಕಾರ 16 ಸದಸ್ಯರ ತಂಡವು, ರತ್ನ ಭಂಡಾರದ ಪರಿಸ್ಥಿತಿಯನ್ನು ಅವಲೋಕಿಸಲು ಮುಂದಾಯಿತು. ಕೀಗಳು ಸಿಗದ ಕಾರಣ ಸರ್ಚ್‌ಲೈಟ್‌ಗಳನ್ನು ಬಳಸಿಕೊಂಡು ಕಬ್ಬಿಣದ ಗ್ರಿಲ್‌ನಿಂದ ಹೊರಗಿನಿಂದ ಅದರ ಒಳ ಕೋಣೆಗಳನ್ನು ಪರೀಕ್ಷಿಸಬೇಕಾಯಿತು. ಹಲವು ಕಬ್ಬಿಣದ ಪೆಟ್ಟಿಗೆಗಳು ಮತ್ತು ಬ್ಯಾಂಕ್‌ ಲಾಕರ್‌ಗಳನ್ನು ಎಷ್ಟೇ ಹುಡುಕಿದರೂ ಕೀಗಳು ಸಿಕ್ಕಿಲ್ಲ! ಕೀ ಕಾಣೆಯಾದರ ಬಗ್ಗೆ ಸಾರ್ವಜನಿಕ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಒಡಿಶಾ ಸರಕಾರವು ಒಡಿಶಾ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ರಘುಬೀರ್‌ ದಾಸ್‌ ಅವರ ನೇತೃತ್ವದಲ್ಲಿ ತನಿಖಾ ಆಯೋಗವನ್ನು ರಚಿಸಿತು. ಜತೆಗೆ ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅರ್ಜಿತ್‌ ಪಶಾಯತ್‌ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯು ರತ್ನ ಭಂಡಾರದಲ್ಲಿರುವ ಆಭರಣಗಳು ಸೇರಿದಂತೆ ಬೆಲೆ ಬಾಳುವ ಎಲ್ಲ ವಸ್ತುಗಳನ್ನು ದಾಸ್ತಾನು ಮಾಡಲಿದೆ. ಒಡಿಶಾ ಹೈಕೋರ್ಟ್‌ ಆದೇಶದ ಅನುಸಾರವೇ ಈ ಸಮಿತಿಯನ್ನು ರಚಿಸಲಾಗಿದೆ.

1984ರಲ್ಲಿ ಬಾಗಿಲು ತೆರೆದಿದ್ದೇ ಕೊನೆ!
ದಾಖಲೆಗಳ ಪ್ರಕಾರ, 1978ರಲ್ಲಿ ರತ್ನ ಭಂಡಾರ ಬಾಗಿಲು ತೆರೆದ ಆಭರಣಗಳನ್ನು ಲೆಕ್ಕ ಹಾಕಲಾಗಿತ್ತು. ಅದಾದ ಬಳಿಕ 1984 ಜುಲೈಯಲ್ಲಿ ಕೂಡ ರತ್ನ ಭಂಡಾರ ತೆರೆಯಲಾಗಿತ್ತು. ಅದಾದ ಬಳಿಕ ಯಾವಾಗ ಮತ್ತೆ ತೆರೆಯಲಾಗಿತ್ತು ಎಂಬ ಬಗ್ಗೆ ಯಾವುದೇ ದಾಖಲೆಗಳಿಲ್ಲ.

ಎಲ್ಲಿದೆ ಜಗನ್ನಾಥ ದೇಗುಲ?
ಒಡಿಶಾದ ಪೂರ್ವ ಕರಾವಳಿಯ ಪುರಿ ಎಂಬಲ್ಲಿ ಜಗನ್ನಾಥ ದೇಗುಲವಿದೆ. ಬೆಂಗಳೂರಿನಿಂದ 1,436 ಕಿ.ಮೀ. ದೂರದಲ್ಲಿದೆ.

ತಮಿಳುನಾಡಿಗೆ ಕೀ ಹೋಗಿವೆ
ನಮ್ಮ ಮನೆ ಕೀ ಕಳೆದರೆ ನಾವು ಜಗನ್ನಾಥನ ಮೊರೆ ಹೋಗುತ್ತವೆ. ಆದರೆ ಜಗನ್ನಾಥ ದೇಗುಲದ ರತ್ನ ಭಂಡಾರದ ಕೀ ಕಳೆದು 6 ವರ್ಷವಾಯಿತು. ಇನ್ನೂ ಸಿಕ್ಕಿಲ್ಲ. ಈ ಕುರಿತು ತನಿಖಾ ಆಯೋಗದ ವರದಿಯನ್ನು ಹತ್ತಿಕ್ಕಲಾಗುತ್ತಿದೆ. ಈ ಕೀಗಳು ತಮಿಳುನಾಡಿಗೆ ಹೋಗಿವೆ.
– ನರೇಂದ್ರ ಮೋದಿ, ಪ್ರಧಾನಿ

ಮೋದಿ ಹುಡುಕಿಕೊಡಲಿ
ರತ್ನ ಭಂಡಾರದ ಕೀಗಳ ಬಗ್ಗೆ ಅಷ್ಟೊಂದು ಮಾಹಿತಿ ಇದ್ದರೆ ಪ್ರಧಾನಿ ಮೋದಿಯೇ ಅವುಗಳನ್ನು ಹುಡುಕಿ ಕೊಡಲಿ. ಪ್ರಧಾನಿ ಕೈಕೆಳಗೆ ಎಷ್ಟೊಂದು ಅಧಿಕಾರಿಗಳಿದ್ದಾರೆ. ಕೀ ಬಗ್ಗೆ ಅವರಿಗೆ ಗೊತ್ತಿರಬೇಕು. ಹಾಗೆಯೇ ಒಡಿಶಾದ ಜನರಿಗೂ ಈ ಕುರಿತು ಮಾಹಿತಿ ನೀಡಲಿ.
– ವಿ.ಕೆ. ಪಾಂಡಿಯನ್‌, ಬಿಜೆಡಿ ನಾಯಕ

ನಮ್ಮ ಮೇಲೇಕೆ ದ್ವೇಷ?
ರತ್ನ ಭಂಡಾರದ ಕೀಲಿ ಕೈ ವಿಚಾರವನ್ನಿಟ್ಟು ಕೊಂಡು ಓಟಿಗಾಗಿ ಮೋದಿ ತಮಿಳುನಾಡು ಜನರನ್ನು ದೂಷಿಸುತ್ತಿ ದ್ದಾರೆ. ದೇಗುಲದ ಸಂಪತ್ತು ಕದ್ದ ಕಳ್ಳರು ಎಂದು ಪ್ರಧಾನಿ ತಮಿಳರನ್ನು ಅವಮಾನಿಸಬಹುದೇ? ನಮ್ಮ ಮೇಲೆ ಅವರಿಗೆ ಯಾಕಿಷ್ಟು ದ್ವೇಷ?
– ಎಂಕೆ ಸ್ಟಾಲಿನ್‌, ತಮಿಳುನಾಡು ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next