Advertisement

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

12:34 PM Oct 16, 2021 | Team Udayavani |

ಜ್ಯೋತಿಷ್ಯ ಶಾಸ್ತ್ರದಲ್ಲಿ ನೂರಾರು ಯೋಗಗಳಿವೆ. ಯೋಗ ಅಂದರೆ ಯುತಿ ಸೇರುವುದು. ಒಂದು ಗ್ರಹ ಮತ್ತೊಂದು ಗ್ರಹದೊಂದಿಗೆ ಸೇರುವುದು. ಒಂದು ಗ್ರಹ ತನ್ನ ಉಚ್ಛ ರಾಶಿಯಲ್ಲಿರುವುದು. ಒಂದಕ್ಕಿಂತ ಹೆಚ್ಚಿನ ಗ್ರಹಗಳೊಂದಿಗೆ ಯುತಿಯಾಗುವುದನ್ನು ಯೋಗ ಎನ್ನಬಹುದು. ಇವುಗಳಲ್ಲಿ ಹೆಚ್ಚಾಗಿ ಕೇಳಿಬರುವ ಒಂದು ಯೋಗ ಎಂದರೆ ಗಜಕೇಸರಿ ಯೋಗ.

Advertisement

ಹೆಸರೇ ಹೇಳುವ ಹಾಗೆ ಆನೆ ಮತ್ತು ಸಿಂಹದ ಹೆಸರಿನಿಂದಲೇ ಕರೆಯಲ್ಪಡುವ ಒಂದು ಮಹಾ ಯೋಗ. ಆನೆಯಂತಹ ದೈತ್ಯ, ಬಲಶಾಲಿಯಾದ ಪ್ರಾಣಿ, ಸಿಂಹದಂತಹ ಧೈರ್ಯ, ಪರಾಕ್ರಮಿಯಾದ ಪ್ರಾಣಿಗಳ ಸಂಯೋಗದೊಂದಿಗೆ ಹೆಸರಿಸಲಾದ ಈ ಯೋಗಕ್ಕೆ ಪಂಚಮಹಾ ಪುರುಷ ಯೋಗಕ್ಕೆ ಸಮನಾದ ಸ್ಥಾನವಿದೆ.

ಹಾಗಾದರೆ ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು ತಿಳಿಯೋಣ. ಗಜಕೇಸರಿ ಯೋಗದಲ್ಲಿ ಒಳಪಡುವ ಎರಡು ಶುಭ ಗ್ರಹಗಳೆಂದರೆ ಅದು ಗುರು ಮತ್ತು ಚಂದ್ರ. ಸಾಮಾನ್ಯವಾಗಿ ಹೇಳುವುದಾದರೆ, ಗುರು, ಚಂದ್ರರು ಒಬ್ಬರಿಗೊಬ್ಬರು ಕೇಂದ್ರದಲ್ಲಿದ್ದರೆ ಈ ಯೋಗವು ಉಂಟಾಗುತ್ತದೆ. ಕೇಂದ್ರ ಸ್ಥಾನಗಳು ಎಂದರೆ 1,4,7 ಮತ್ತು 10ನೇ ಮನೆಗಳು.

ಚಂದ್ರನು ಒಂದು ತಿಂಗಳಲ್ಲಿ 12 ರಾಶಿಯನ್ನು ಕ್ರಮಿಸುತ್ತಾನೆ. ಆಗ 4 ಬಾರಿ ಗುರುವಿನಿಂದ ಕೇಂದ್ರದಲ್ಲಿ ಬರುತ್ತಾನೆ. ಹಾಗಾದರೆ ಒಂದು ತಿಂಗಳಲ್ಲಿ ಹುಟ್ಟಿದ ಸುಮಾರು ಶೇ.25ರಷ್ಟು ಜನರಿಗೆ ಗಜಕೇಸರಿ ಯೋಗ ಜಾತಕದಲ್ಲಿ ಇರುತ್ತದೆ. ಹಾಗಾದರೆ ಈ ಯೋಗದ ಫಲ ಎಲ್ಲರಿಗೂ ಸಿಗುತ್ತದಾ, ಇದು ಅಷ್ಟೊಂದು ಸಾಮಾನ್ಯವಾದ ಯೋಗವಾ…ಈ ಬಗ್ಗೆ ತಿಳಿದುಕೊಳ್ಳೋಣ.

ಮೊದಲೇ ತಿಳಿಸಿರುವ ಪ್ರಕಾರ ಈ ಯೋಗವು ಗುರು ಮತ್ತು ಚಂದ್ರನಿಗೆ ಸಂಬಂಧಪಟ್ಟದ್ದು. ಯಾವುದೇ ಜಾತಕದಲ್ಲಿ ಈ ಯೋಗ ಉಂಟಾದಾಗ ಈ ಕೆಳಗಿನ ಅಂಶಗಳನ್ನು ಪರಿಗಣಿಸಲೇಬೇಕು.

  • ಗುರು ನೀಚ ರಾಶಿಯಾದ ಮಕರದಲ್ಲಿರಬಾರದು
  • ಶತ್ರು ಕ್ಷೇತ್ರವಾದ ವೃಷಭ ಮತ್ತು ತುಲಾ ರಾಶಿಯಲ್ಲಿರಬಾರದು.
  • ಗುರು, ಶತ್ರುವಾದ ಶುಕ್ರ ಮತ್ತು ರಾಹು,ಕೇತುವಿನೊಂದಿಗೆ ಯುತಿಯಾಗಬಾರದು.
  • ಚಂದ್ರ ನೀಚ ರಾಶಿಯಾದ ವೃಶ್ಚಿಕದಲ್ಲಿರಬಾರದು.
  • ಶುಕ್ಲ ಪಕ್ಷದ ಚಂದ್ರನು ಬಲಶಾಲಿ.
  • ಚಂದ್ರನು, ಶನಿ ರಾಹು-ಕೇತುಗಳೊಂದಿಗೆ ಯುತಿಯಾಗಬಾರದು
Advertisement

ಮೇಲಿನ ಅಂಶಗಳಲ್ಲದೆ, ಲಗ್ನವೂ ಹೆಚ್ಚಿನ ಮಹತ್ವವನ್ನು ಪಡೆದಿದೆ.

ಉದಾಹರಣೆಗೆ:

  1. ಕರ್ಕಾಟಕ ರಾಶಿಯಲ್ಲಿ ಗುರು, ಚಂದ್ರರ ಯುತಿಯು ಅತ್ಯಂತ ಶ್ರೇಷ್ಠವಾದದ್ದು, ಅತೀ ಹೆಚ್ಚು ಶುಭ ಫಲಗಳನ್ನು, ಗುರುದಶಾ, ಚಂದ್ರ ಭುಕ್ತಿ, ಚಂದ್ರದಶಾ ಗುರು ಭುಕ್ತಿಗಳಲ್ಲಿ ಜಾತಕನು ಅನುಭವಿಸುತ್ತಾನೆ. ಈ ರಾಶಿಯಲ್ಲಿ ಚಂದ್ರ ಸ್ವಕ್ಷೇತ್ರದಲ್ಲೂ ಗುರು ಉಚ್ಛ ಕ್ಷೇತ್ರದಲ್ಲೂ ಇರುತ್ತಾನೆ. ಆದರೆ ಇಲ್ಲಿ ಗುರು ಶತ್ರುಸ್ಥಾನ ಮತ್ತು ಭಾಗ್ಯ ಸ್ಥಾನದ ಅಧಿಪತಿಗಳು, ಜೀವನದಲ್ಲಿ ಅಪಾರವಾದ ಸಂಪತ್ತು ಅದರೊಂದಿಗೆ ಶತ್ರುಗಳನ್ನು ಎದುರಿಸಬೇಕಾಗುತ್ತದೆ.
  2. ಮೀನ ಲಗ್ನದಲ್ಲಿ ಗುರು, ಚಂದ್ರರ ಯುತಿ ಉತ್ತಮ ಫಲವನ್ನು ಜಾತಕದ ವ್ಯಕ್ತಿ ಅನುಭವಿಸುತ್ತಾನೆ. ಗುರು, ಲಗ್ನ , ದಶಮಾಧಿಪತಿ, ಚಂದ್ರ ಪಂಚಮಾಧಿಪತಿ,
  3. ಧನುರಾಶಿಯಲ್ಲಿ ಗುರು ಚಂದ್ರರ ಯುತಿ ಮಧ್ಯ ಫಲವನ್ನು ಅನುಭವಿಸುತ್ತಾನೆ. ಇಲ್ಲಿ ಗುರು ಲಗ್ನಾಧಿಪತಿ, ಸುಖ ಸ್ಥಾನಾಧಿಪತಿ, ಆದರೆ ಚಂದ್ರ ಅಷ್ಟಮ ಸ್ಥಾನದ ಅಧಿಪತಿ. ನವಾಂಶ ಕುಂಡಲಿಯಲ್ಲೂ ಗಜಕೇಸರಿ ಯೋಗ ಉಂಟಾದರೆ ಜಾತಕದ ವ್ಯಕ್ತಿ ಅತ್ಯಂತ ಅಪರೂಪದ ಭಾಗ್ಯವನ್ನು ಹೊಂದುತ್ತಾನೆ. ಕರ್ಕಾಟಕ ರಾಶಿಯಲ್ಲಿ ಗುರು, ಚಂದ್ರರ ಯುತಿಯು 12 ವರ್ಷಕ್ಕೆ ಒಮ್ಮೆ ಉಂಟಾಗುತ್ತದೆ.

ರವೀಂದ್ರ.ಎ. ಜ್ಯೋತಿಷ್ಯ ವಿಶಾರದ

ಬಿಎಸ್ಸಿ, ಎಲ್ ಎಲ್ ಬಿ

ಜ್ಯೋತಿಷ್ಯ ವಿಶ್ಲೇಷಕರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next