Advertisement

ನಿಜವಾದ ನಿಧಿ ಯಾವುದು?

09:59 AM Jan 31, 2020 | mahesh |

ಎಲ್ಲಾರೂ ಆ ಜಾಗದಲ್ಲಿ ನಿಧಿ ಇರಬಹುದೆಂದು ಮಾತನಾಡಿಕೊಳ್ಳುತ್ತಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ನೀಲೇಶ “ನಮ್ಮೂರಿನ ಹೊಲಗದ್ದೆಗಳಲ್ಲಿ ಹಾಗೂ ಸುತ್ತಮುತ್ತ ನಮ್ಮ ಪೂರ್ವಜರು ತುಂಬಾ ನಿಧಿ ಇಟ್ಟಿರುವುದಾಗಿ ನನಗೆ ಒಮ್ಮೆ ಹೇಳಿದ್ದರು’ ಎಂದುಬಿಟ್ಟ!

Advertisement

ಅದೊಂದು ಮಲೆನಾಡಿನ ಸಣ್ಣ ಊರು. ಊರಿನ ಪಕ್ಕ ಒಂದು ನದಿ ಹರಿಯುತ್ತಿತ್ತು. ಸಮೀಪದಲ್ಲೇ ಊರ ಜನರ ಜಮೀನುಗಳಿದ್ದವು. ಅಲ್ಲಿನ ಜನ ನದಿ ನೀರನ್ನು ಬಳಸಿಕೊಂಡು ಉತ್ತು ಬಿತ್ತು ಬಂಗಾರದಂಥ ಬೆಳೆ ತೆಗೆಯಬಹುದಿತ್ತು. ಆದರೆ, ಊರ ಜನರೆಲ್ಲಾರೂ ಸೋಮಾರಿಗಳಾಗಿದ್ದರು. ಹರಟೆ ಹೊಡೆಯುವುದು, ಮಲಗುವುದು ಬಿಟ್ಟರೆ ಬೇರೆ ಏನೂ ಮಾಡುತ್ತಿರಲಿಲ್ಲ. ಸರಿಯಾಗಿ ನೀರು ಹಾಯಿಸದೆ ಹೊಲಗಳೆಲ್ಲಾ ಒಣಗತೊಡಗಿದ್ದವು. ಊರನ್ನು ಸ್ವತ್ಛ ಮಾಡದೆ ಇದ್ದಿದ್ದರಿಂದ ಅಲ್ಲಲ್ಲಿ ಕಸದ ರಾಶಿ ಬಿದ್ದು ಸಾಂಕ್ರಾಮಿಕ ರೋಗಗಳು ನಿಧಾನವಾಗಿ ಹರಡತೊಡಗಿದ್ದವು. ಹಂದಿಗಳ ಹಾವಳಿ ಜಾಸ್ತಿಯಾಗಿತ್ತು. ಕೂಡಿಟ್ಟ ಹಣವೆಲ್ಲಾ ಔಷಧಕ್ಕೆ ಖರ್ಚಾಗುತ್ತಾ ಬಂದಿತ್ತು. ಆದರೂ ಆ ಊರಿನ ಜನರಿಗೆ ಬುದ್ಧಿ ಬರಲಿಲ್ಲ.

ಇದನ್ನು ಕಂಡು ಊರಿನ ಹಿರಿಯರಿಗೆ ಯೋಚನೆಯಾಯಿತು. ಹೀಗೆಯೇ ಮುಂದುವರಿದರೆ ಹೊಟ್ಟೆಬಟ್ಟೆಗೆ ಏನು ಮಾಡುವುದು? ಹಿರಿಯರೆಲ್ಲರೂ ಸೇರಿ ಜನರಿಗೆ ಬುದ್ಧಿ ಹೇಳಬೇಕೆಂದುಕೊಂಡರು. ಆ ಊರಿನಲ್ಲಿ ನೀಲೇಶ ಎಂಬ ಬಾಲಕನಿದ್ದ. ಅವನು ಜಾಣನಾಗಿದ್ದ. ಊರಿನ ಜನರ ವರ್ತನೆ ಅವನಿಗೂ ಬೇಸರ ತರಿಸಿತ್ತು. ಅವನು “ಕಷ್ಟಪಟ್ಟು ಹೊಲದಲ್ಲಿ ಕೆಲಸ ಮಾಡೋಣ, ಊರನ್ನು ಸ್ವಚ್ಚ ಮಾಡೋಣ ಬನ್ನಿ’ ಎಂದು ಕರೆದರೆ ಗೆಳೆಯರೆಲ್ಲರೂ ಅವನನ್ನು ಗೇಲಿ ಮಾಡುತ್ತಿದ್ದರು.

ನೀಲೇಶ ಒಂದು ನಾಯಿಯನ್ನು ಸಾಕಿದ್ದ. ಅದರ ಹೆಸರು ಮೋತಿ. ಅದು ನೀಲೇಶನಿಗೆ ತುಂಬಾ ವಿಧೇಯವಾಗಿತ್ತು. ನೀಲೇಶ ಪ್ರತಿದಿನ ರಸ್ತೆಗಳಲ್ಲಿ ಕಸ ಗುಡಿಸಲು ಪ್ರಾರಂಭಿಸಿದನು. ಊರ ಹಿರಿಯರೂ ಅವನ ಜೊತೆಗೂಡಿದರು. ಮೋತಿ ನಾಯಿಯೂ ಬಾಯಲ್ಲಿ ಕಸ ಕಡ್ಡಿ ಹೆಕ್ಕಿ ಒಂದೆಡೆ ಎಸೆದು ಗುಡ್ಡೆ ಮಾಡುತ್ತಿತ್ತು. ಒಂದು ದಿನ ಇದ್ದಕಿದ್ದಂತೆ ಸಂಜೆ ಧಾರಾಕಾರವಾದ ಮಳೆ ಸುರಿಯಲಾರಂಭಿಸಿತು. ಊರಿನಲ್ಲಿ ಹಲವು ಮರಗಳು ಬುಡಮೇಲಾದವು. ರಸ್ತೆಯ ತುಂಬಾ ಮರದ ಟೊಂಗೆಗಳು ಮುರಿದು ಬಿದ್ದವು.

ಊರಿನ ತುಂಬ ಎಲ್ಲೆಂದರಲ್ಲಿ ಕಸ ತುಂಬಿತು. ಜನರು ಮರದ ಟೊಂಗೆಯನ್ನು ದಾಟಿಕೊಂಡು ಹೋಗುತ್ತಿದ್ದರೇ ವಿನಾ ಅದನ್ನು ಎತ್ತಿ ಹಾಕಲಿಲ್ಲ! ಎಂದಿನಂತೆ ನೀಲೇಶನೇ ಮೋತಿಯ ಜೊತೆಗೂಡಿ ಸ್ವತ್ಛ ಮಾಡಲು ಮುಂದಾದನು. ಕಸ ಸ್ವತ್ಛ ಮಾಡುತ್ತಿರುವಾಗ ಮೋತಿ ಮಣ್ಣಿನಲ್ಲಿ ಎನನ್ನೋ ನೋಡಿ ಕುಂಯ್‌ ಕುಂಯ್‌ ಎನ್ನುತ್ತಿತ್ತು. ನೀಲೇಶ ಅದರಡಿಯ ಮಣ್ಣನ್ನು ಕೆದಕಿದಾಗ ನಾಲ್ಕೈದು ಚಿನ್ನದ ನಾಣ್ಯಗಳು ಸಿಕ್ಕವು. ಹಿಂದಿನ ದಿನ ಸುರಿದ ಭಾರಿ ಮಳೆಗೆ ಅವು ಮಣ್ಣಿನಿಂದ ಮೇಲೆ ಬಂದಿದ್ದವು! ಸುದ್ದಿ ಬಾಯಿಂದ ಬಾಯಿಗೆ ಹರಡಿ ಊರಿನ ಮಂದಿಯೆಲ್ಲಾ ಅಲ್ಲಿಗೆ ಜಮಾಯಿಸಿದರು. ಎಲ್ಲಾರೂ ಆ ಜಾಗದಲ್ಲಿ ನಿಧಿ ಇರಬಹುದೆಂದು ಮಾತನಾಡಿಕೊಳ್ಳುತ್ತಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ನೀಲೇಶ “ನಮ್ಮೂರಿನ ಹೊಲಗ¨ªೆಗಳಲ್ಲಿ ಹಾಗೂ ಸುತ್ತಮುತ್ತ ನಮ್ಮ ಪೂರ್ವಜರು ತುಂಬಾ ನಿಧಿ ಇಟ್ಟಿರುವುದಾಗಿ ನನಗೆ ಒಮ್ಮೆ ಹೇಳಿದ್ದರು’ ಎಂದುಬಿಟ್ಟನು. ಅಷ್ಟು ಹೇಳಿದ್ದೇ ತಡ ಸೋಮಾರಿ ಜನರೆಲ್ಲಾ ಗುದ್ದಲಿ ಪಿಕಾಸಿಗಳನ್ನು ಹಿಡಿದು ತಂತಮ್ಮ ಹೊಲಗಳಿಗೆ ನಡೆದರು. ಹೊಲವನ್ನು ಸ್ವತ್ಛ ಮಾಡಿ ಅಗೆದರು. ಆದರೆ ಒಬ್ಬರಿಗೂ ನಿಧಿ ಸಿಗಲಿಲ್ಲ! ಎಲ್ಲರೂ ನೀಲೇಶನನ್ನು ಬೈಯ್ಯಲಾರಂಭಿಸಿದರು.

Advertisement

ಊರಿನ ಹಿರಿಯರು “ಹೇಗೂ ಜಮೀನನ್ನು ಅಗೆದು ಹಸನು ಮಾಡಿದ್ದೀರಿ. ಹದವಾದ ಮಳೆಯೂ ಆಗಿದೆ. ಈಗ ಬಿತ್ತನೆ ಮಾಡಿ, ನಿಮಗೆ ಒಳ್ಳೆ ಬೆಳೆ ಬರುತ್ತದೆ’ ಎಂದರು. ಇನ್ನೇನು ಮಾಡುವುದು ಅರ್ಧ ಕೆಲಸ ಆಗಿಬಿಟ್ಟಿದೆ, ಇನ್ನರ್ಧವನ್ನೂ ಪೂರ್ತಿ ಮಾಡಿಬಿಡೋಣವೆಂದು ಮುಂದಿನ ಕಾರ್ಯ ಮಾಡಿದರು. ಇದಾದ ಸ್ವಲ್ಪ ಸಮಯದಲ್ಲೇ ಒಳ್ಳೆಯ ಬೆಳೆಯೂ ಬಂದಿತು. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಸಿಕ್ಕಿತು. ಊರ ಮಂದಿಯ ಬಳಿ ತುಂಬಾ ಕಾಸು ಓಡಾಡಿತು. ಅವರೆಲ್ಲರಿಗೂ ನಿಜವಾದ ನಿಧಿ ತಮ್ಮ ಹೊಲಗಳೇ ಎಂಬುದು ಅರ್ಥವಾಗಿತ್ತು. ಅವರು ನೀಲೇಶನ ಕೆಲಸವನ್ನು ಮೆಚ್ಚಿಕೊಂಡರು. ಅಂದಿನಿಂದ ಊರ ಜನರೆಲ್ಲಾ ಸೋಮಾರಿತನ ಬಿಟ್ಟುಬಿಟ್ಟರು.

– ಪ್ರಕಾಶ್‌ ಕೆ. ನಾಡಿಗ್‌

Advertisement

Udayavani is now on Telegram. Click here to join our channel and stay updated with the latest news.

Next