Advertisement
ಅದಾದ ಮೇಲೆ “ಜವ’ ಎಂಬ ಚಿತ್ರದಲ್ಲಿ ಅವರು ಮತ್ತೆ ಬಣ್ಣ ಹಚ್ಚಿದ್ದಾರೆ. ಇಷ್ಟಕ್ಕೂ ದಿಲೀಪ್ ಎಲ್ಲಿ ಮಾಯವಾಗಿದ್ದರು? ಯಾಕೆ ನಟನೆ ಮಾಡ್ತಿಲ್ಲ? ಎಂಬ ಪ್ರಶ್ನೆಗಳನ್ನು ಅವರ ಮುಂದಿಟ್ಟರೆ … “ನೋಡಿದೋರೆಲ್ಲಾ ಅದನ್ನೇ ಕೇಳ್ತಾರೆ. ಎಲ್ಲಿ ಹೊರಟು ಹೋಗಿರುತ್ತೀಯ ಅಂತ. ಎಲ್ಲೂ ಹೋಗಿಲ್ಲ. ಪವನ್ ಸಹ ಕೇಳಿದ್ರು. ಯಾಕೆ ನಟಿಸಲ್ಲ ಅಂತ. ನಿಜ ಹೇಳಬೇಕೂಂದ್ರೆ, ಯಾರೂ ಕರೆಯಲ್ಲ. ಅದನ್ನೇ ಹೇಳಿದೆ.
Related Articles
Advertisement
ಅದೇ ಕಾರಣಕ್ಕೆ, ನನ್ನ ಕೆಲಸವೇನಿದೆ ಅದನ್ನ 100 ಪರ್ಸೆಂಟ್ ಕೊಡ್ತೀನಿ. ಮಿಕ್ಕಂತೆ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂಬ ಉತ್ತರ ಅವರಿಂದ ಬರುತ್ತದೆ. “ಯೂ ಟರ್ನ್’ ನಂತರದ ಗ್ಯಾಪ್‌ನಲ್ಲಿ ಅವರೇನು ಮಾಡುತ್ತಿದ್ದರು ಎಂಬ ಪ್ರಶ್ನೆ ಬರಬಹುದು. ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಕಲರ್ಸ್ ಚಾನಲ್‌ನ ಫಿಕ್ಷನ್ ಹೆಡ್ ಆಗಿ ಕೆಲಸ ಮಾಡುತ್ತಿದ್ದರು. “ಅಲ್ಲೊಂದಿಷ್ಟು ವರ್ಷ ಕೆಲಸ ಮಾಡಿದ ಮೇಲೆ, ಒಂದು ಹಂತದಲ್ಲಿ ಬೇರೆ ಏನಾದರೂ ಮಾಡಬೇಕು ಅಂತನಿಸಿತಂತೆ.
ಸರಿ, ತಮ್ಮದೇ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ಮೈಲ್‌ಸ್ಟೋನ್ ಕ್ರಿಯೇಷನ್ಸ್ ಎಂಬ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿ “ಜಸ್ಟ್ ಮಾತ್ ಮಾತಲ್ಲಿ’ ಎಂಬ ಧಾರಾವಾಹಿಯನ್ನು ನಿರ್ಮಿಸುವುದರ ಜೊತೆಗೆ, “ಮಜಾಭಾರತ’ ಎಂಬ ಹಾಸ್ಯಮಯ ಕಾರ್ಯಕ್ರಮವನ್ನು ನಿರ್ಮಿಸಿ-ನಿರ್ದೇಶಿಸಿದ್ದಾರೆ. ಈಗ ಧೃತಿ ಕ್ರಿಯೇಷನ್ಸ್ ಎಂಬ ಸಂಸ್ಥೆಯಡಿ ಅವರು “ವಿದ್ಯಾ ವಿನಾಯಕ’ ಎಂಬ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಅದರ ಜೊತೆಜೊತೆಗೆ, ಈಗ ಅಭಿನಯ ಮುಂದುವರೆಯುತ್ತಿದೆ. ಕಿರುತೆರೆ ಯಾವತ್ತೂ ತನ್ನನ್ನು ಸಾಕಿದೆ ಎಂದು ನೆನಪಿಸಿಕೊಳ್ಳುತ್ತಾರೆ ದಿಲೀಪ್. “ನಾನು ಅಥವಾ ನಮ್ಮಂತವರು ಇದ್ದೀವಿ ಅಂದರೆ ಅದಕ್ಕೆ ಕಾರಣ ಟಿವಿ. ಅದು ಯಾವತ್ತೂ ನನ್ನನ್ನ ಸಾಕಿದೆ. ಈಗಲೂ ಅಷ್ಟೇ. ಅಭಿನಯಿಸುವುದಕ್ಕೆ ಕರೆಯಲು ಫೋನ್ ಬರುತ್ತಲೇ ಇರುತ್ತದೆ’ ಎನ್ನುವ ದಿಲೀಪ್, ನಟನೆಯ ಜೊತೆಗೆ ಡಬ್ಬಿಂಗ್ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದವರು.
ಹಲವು ಹೀರೋಗಳಿಗೆ ಧ್ವನಿ ಕೊಟ್ಟವರು. ಆದರೆ, ಈಗ ಅದರಿಂದಲೂ ದೂರವಾಗಿದ್ದಾರಂತೆ. “ಜನ ನನ್ನ ಧ್ವನಿಯನ್ನ ಇಷ್ಟಪಡುತ್ತಾರೆ. ಅದೇ ಕಾರಣಕ್ಕೆ ನನಗೆ ಡಬ್ಬಿಂಗ್ ಮಾಡುವುದಕ್ಕೆ ಅವಕಾಶ ಸಿಕ್ಕಿತು. ಆದಿ ಲೋಕೇಶ್ (ಜೋಗಿ), ಧ್ರುವ ಶರ್ಮಾ (ಸ್ನೇಹಾಂಜಲಿ), ಚೇತನ್ (ಆ ದಿನಗಳು ಮತ್ತು ಮೈನಾ) ಮುಂತಾದವರಿಗೆ ಡಬ್ಬಿಂಗ್ ಮಾಡಿದೆ. ಒಂದು ಹಂತದಲ್ಲಿ ನಿಲ್ಲಿಸಿಬಿಟ್ಟೆ.
ಎಲ್ಲಿ ನನ್ನನ್ನ ಡಬ್ಬಿಂಗ್ ಆರ್ಟಿಸ್ಟ್ ಆಗಿ ಮಾಡಿಬಿಡುತ್ತಾರೋ ಎಂಬ ಭಯದಿಂದ ಡಬ್ಬಿಂಗ್ ನಿಲ್ಲಿಸಿದೆ. ಅಷ್ಟೇ ಅಲ್ಲ, ಯಾರೋ ಒಬ್ಬ ನಟ ಕೆಟ್ಟದಾಗಿ ಅಭಿನಯಿಸುತ್ತಿದ್ದಾನೆ ಅಂತನಿಸಿದಾಗ ಡಬ್ಬಿಂಗ್ ಮಾಡೋದು ಕಷ್ಟ. ಹಾಗಾಗಿ ಬೇಡ ಅಂತ ದೂರವಾದೆ. ತುಂಬಾ ಬಲವಂತ ಮಾಡಿದರು. ಆದರೆ, ನನಗೇ ಇಷ್ಟವಿಲ್ಲ’ ಎನ್ನುತ್ತಾರೆ ದಿಲೀಪ್ ರಾಜ್.