Advertisement

ದೊಡ್ಡ ಗಾತ್ರದ ಟಯರ್‌ ಹಾಕಿದ್ರೆ ಏನಾಗುತ್ತೆ?

03:24 PM Aug 03, 2018 | |

ವಾಹನಗಳಿಗೆ ದೊಡ್ಡ ಗಾತ್ರದ ಟಯರ್‌ ಹಾಕುವುದು ಒಂದು ಕ್ರೇಜ್‌. ಲುಕ್‌ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಕಾರು, ಎಸ್‌ಯುವಿಗಳಿಗೆ ದೊಡ್ಡ ಗಾತ್ರದ ಟಯರ್‌ನ್ನು ಹಾಕುವುದನ್ನು ಯುವಕರೇ ಹೆಚ್ಚು ಇಷ್ಟ ಪಡುತ್ತಾರೆ. ಹೀಗೆ ದೊಡ್ಡ ಟಯರ್‌ ಹಾಕಿದ್ರೆ ಏನಾಗುತ್ತೆ? ನೋಡೋಣ ಬನ್ನಿ!

Advertisement

ಉತ್ತಮ ಹ್ಯಾಡ್ಲಿಂಗ್‌
ದೊಡ್ಡ ಟಯರ್‌ ಹಾಕುವುದರಿಂದ ವಾಹನ ಚಾಲನೆ ವೇಳೆ ಉತ್ತಮ ಹ್ಯಾಂಡ್ಲಿಂಗ್‌ ಸಾಧ್ಯವಾಗುತ್ತದೆ. ತಿರುವಿನಲ್ಲಿ ಹೆಚ್ಚು ಗ್ರಿಪ್‌ ಇರುತ್ತದೆ. ವಾಹನ ಹೆಚ್ಚು ಸ್ಥಿರವಾಗಿ ರಸ್ತೆಯಲ್ಲಿ ಸಾಗಲು ದೊಡ್ಡ ಟಯರ್‌ ನೆರವು ನೀಡುತ್ತದೆ. ದೊಡ್ಡ ಟಯರ್‌ಗಳ ಬಟನ್‌ಗಳೂ ದೊಡ್ಡದಿರುವುದರಿಂದ ಸ್ಲಿಪ್‌ ಆಗುವ ಸಮಸ್ಯೆ ಇತ್ಯಾದಿಗಳು ಕಡಿಮೆ.

ಬೆಲೆ ಹೆಚ್ಚು
ದೊಡ್ಡ ಟಯರ್‌ಗಳಿಗೆ ಸಹಜವಾಗಿ ಬೆಲೆ ಹೆಚ್ಚು. ವಾಹನದ ಸೌಂದರ್ಯ ವೃದ್ಧಿಗಾಗಿಯೇ ಹೆಚ್ಚಿನವರು ದೊಡ್ಡ ಟಯರ್‌ ಅನ್ನು ಆರಿಸುತ್ತಾರೆ. ಆದರೆ ಇದಕ್ಕೆ ಹೆಚ್ಚು ಬೆಲೆ ಕೊಡಬೇಕಾದ್ದೂ ಅನಿವಾರ್ಯ. ಕಂಪೆನಿಗಳಿಗೆ ಅನುಸಾರವಾಗಿ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ.

ಚಾಲನೆ ಸುಖಕರವಲ್ಲ!
ದೊಡ್ಡ ಟಯರ್‌ ನಿಂದ ಚಾಲನೆ ಹೆಚ್ಚು ಸುಖಕರವಾಗಿ ಇರಲಾರದು. ಸಣ್ಣ ಹಂಪ್ಸ್‌ಗಳಲ್ಲಿ ಎತ್ತಿ ಹಾಕಿದಂತೆ ಭಾಸವಾಗಬಹುದು. ಕಾರಣ ನಿರ್ದಿಷ್ಟ ಟಯರ್‌ ಗಾತ್ರಕ್ಕೆ ಅನುಗುಣವಾಗಿ ವಾಹನಗಳಲ್ಲಿ ಶಾಕ್‌ ಅಬ್ಸಾರ್ಬರ್‌ಗಳು ಇರುತ್ತವೆ. ದೊಡ್ಡ ಗಾತ್ರದ ಟಯರ್‌ಗಳಿಗೆ ಪೂರಕವಾಗಿ ಇದು ಪ್ರತಿಕ್ರಿಯಿಸದೇ ಇರುವುದರಿಂದ ಸಮಸ್ಯೆಯಾಗಲು ಸಾಧ್ಯವಿದೆ. ಜತೆಗೆ ಸ್ಟೀರಿಂಗ್‌ ಹೆಚ್ಚು ಭಾರವಿದ್ದಂತೆ ಗಟ್ಟಿಯಾದಂತೆ ಭಾಸವಾಗಬಹುದು. ದೊಡ್ಡ ಟಯರ್‌ ತಿರುಗಿಸಲು ಹೆಚ್ಚಿನ ಬಲಪ್ರಯೋಗ ಅಗತ್ಯವಿರುವುದರಿಂದ ಹೀಗಾಗುತ್ತದೆ.

ಬೇಗನೆ ಸವೆತ
ದೊಡ್ಡ ಟಯರ್‌ನ ಮೇಲೆ ಹೆಚ್ಚಿನ ಒತ್ತಡ, ಶಾಕ್‌ ಅಬ್ಸಾರ್ಬರ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡದೇ ಇರುವುದರಿಂದ ನಿರ್ದಿಷ್ಟ ಗಾತ್ರಕ್ಕಿಂತ ದೊಡ್ಡ ಟಯರ್‌ ಅಳವಡಿಸಿದರೆ ಬೇಗನೆ ಸವೆಯುವ ಸಾಧ್ಯತೆ ಇದೆ. ಜತೆಗೆ ಟಯರ್‌ಗಳು ವಾಹನದ ಬಾಡಿಗೆ ತಾಗಿ ಸವೆತ, ಮಡ್‌ಗಾರ್ಡ್‌ಗೆ ತಾಗುವ ಸಮಸ್ಯೆಗಳು ಉದ್ಭವಾಗಬಹುದು.

Advertisement

ಸ್ಪೀಡೋ ಮೀಟರ್‌ ಮಾಪನ ಬದಲು
ದೊಡ್ಡ ಗಾತ್ರದ ಟಯರ್‌ ಹಾಕಿದ್ದರೆ ವಾಹನದ ಸ್ಪೀಡೋ ಮೀಟರ್‌ ಮಾಪನದಲ್ಲೂ ವ್ಯತ್ಯಾಸವಾಗುತ್ತದೆ. ಉದಾ 16 ಇಂಚಿನ ಬದಲಿಗೆ 19 ಇಂಚಿನ ಟಯರ್‌ ಹಾಕುವುದರಿಂದ ಅದರ ವ್ಯಾಸದಲ್ಲಿ ಬದಲಾವಣೆಯಾಗಿ ಸ್ಪೀಡೋ ಮೀಟರ್‌ ಮಾಪನ ಬದಲಾಗುತ್ತದೆ. ಹೀಗೆ ಬದಲಾವಣೆಯಿಂದ ಸುಮಾರು ಶೇ.10ರಷ್ಟು ನೈಜ ಮಾಪನದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇರುತ್ತದೆ. ಅರ್ಥಾತ್‌ ಕಾರು 60 ಕಿ.ಮೀ. ವೇಗದಲ್ಲಿ ಹೋಗುತ್ತಿದೆ ಎಂದು ಸ್ಪೀಡೋ ಮೀಟರ್‌ ತೋರಿಸಿದರೆ ನೈಜ ವೇಗ 65 ಕಿ.ಮೀ.ಯಲ್ಲಿರಬಹುದು. 

 ಈಶ

Advertisement

Udayavani is now on Telegram. Click here to join our channel and stay updated with the latest news.

Next