Advertisement

ಜನಿಸಿದ ಮಗು ಏನಾಯ್ತು? ತಿಂಗಳು ಕಳೆದರೂ ಸುಳಿವಿಲ್ಲ..!

03:04 PM Nov 10, 2021 | Team Udayavani |

ಎಚ್‌.ಡಿ.ಕೋಟೆ: ಜನಿಸಿದ ಕೆಲವೇ ಕ್ಷಣದಲ್ಲಿ ನಾಪತ್ತೆಯಾಗಿದ್ದ ಮಗು ಏನಾಗಿದೆ, ಎಲ್ಲಿದೆ ಎಂಬುದು ನಿಗೂಢವಾಗಿದ್ದು, ಈ ಪ್ರಕರಣವು ವಿವಿಧ ತಿರುವು ಪಡೆದುಕೊಳ್ಳುತ್ತಿದೆ. ಈ ಬಗ್ಗೆ ಹೆತ್ತ ತಾಯಿ ತನ್ನ ಮಗುವಿನ ಕುರಿತು ವ್ಯತಿರಿಕ್ತ ಹೇಳಿಕೆ ನೀಡುತ್ತಿದ್ದು, ಒಂದೆಡೆ ಮಗು ಮೃತಪಟ್ಟಿದೆ, ಇಲ್ಲ ಮಗು ಸಂಬಂಧಿಕರ ಮನೆಯಲ್ಲಿ ಇದೆ ಎಂದು ಹೇಳುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ.

Advertisement

ಏನಿದು ಘಟನೆ?: ತಾಲೂಕಿನ ಅಣ್ಣೂರು ಸಮೀಪದ ಹಾಡಿಯೊಂದರ ಮಹಿಳೆ ರಂಜಿತಾ (ಹೆಸರು ಬದಲಿಸಿದೆ) ಹಲವು ವರ್ಷಗಳಿಂದ ಪತಿಯಿಂದ ದೂರವಿದ್ದರು. ಏತನ್ಮಧ್ಯೆ, ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಬಳಿಕ ಮಗುವನ್ನು ಮರೆಮಾಚಿದ್ದರು. ಈ ಬಗ್ಗೆ ಯಾವುದೇ ದೂರು ದಾಖಲಾಗಿರಲಿಲ್ಲ. ಜೊತೆಗೆ ಪೊಲೀಸರು ಹಾಗೂ ಅಧಿಕಾರಿಗಳು ಕೂಡ ಗಮನ ಹರಿಸಿರಲಿಲ್ಲ. ಈ ಮಗುವನ್ನು ಮಾರಾಟ ಮಾಡಿರಬಹುದು ಅಥವಾ ಅನೈತಿಕ ಸಂಬಂಧ ಕಾರಣ ನವಜಾತ ಶಿಶುವನ್ನು ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.

ಈ ಬಗ್ಗೆ “ಉದಯವಾಣಿ’ ಬೆನ್ನತ್ತಿದಾಗ ಹಲವು ತಿರುವುಗಳು ಕಂಡು ಬಂದವು. ತಾಲೂಕಿನ ಅಣ್ಣೂರು ಸಮೀಪದ ಹಾಡಿ ಯೊಂದರ ಮಹಿಳೆ ರಂಜಿತಾ (ಹೆಸರು ಬದಲಿಸಿದೆ) ಕಳೆದ 10 ವರ್ಷಗಳಿಂದ ತನ್ನ ಪತಿಯಿಂದ ದೂರವಿದ್ದರು. ಈ ನಡುವೆ, ತಾನು ಗರ್ಭಿಣಿಯಾ ಗಿರುವ ವಿಚಾರ ಹಾಡಿಯ ಮಂದಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಿಕೊಂಡಿರುವುದು ಅಲ್ಲದೆ ಆರೋಗ್ಯ ಇಲಾಖೆಯಿಂದ ಯಾವುದೇ ಚುಚ್ಚುಮದ್ದು, ಚಿಕಿತ್ಸೆ ಪಡೆದುಕೊಂಡಿರಲಿಲ್ಲ.

ಇದನ್ನೂ ಓದಿ:- ಬೀದರ ಪ್ರವಾಸೋದ್ಯಮ ಅಭಿವೃದ್ದಿಗೆ ಮನವಿ

ಅಷ್ಟೇ ಏಕೆ ಆಕೆ ಗರ್ಭಿಣಿ ಎನ್ನುವ ವಿಚಾರವೂ ಆಶಾ ಕಾರ್ಯಕರ್ತೆಯರಿಗಾಗಲಿ, ಆರೋಗ್ಯ ಇಲಾಖೆಗೂ ತಿಳಿದಿರಲಿಲ್ಲ. ಈ ಬಗ್ಗೆ ವಿಶ್ವಸನೀಯ ಮೂಲಗಳು ಮಾಹಿತಿ ನೀಡಿದ್ದವು. ರಂಜಿತಾ ಸುಮಾರು ಒಂದೂವರೆ ತಿಂಗಳ ಹಿಂದೆ ಹಾಡಿಯಲ್ಲಿ ಹೆರಿಗೆ ನೋವಿನಿಂದ ಬಳಲು ತ್ತಿದ್ದು, ಹಾಡಿಯ ಮಂದಿಗೆ ತಿಳಿಯದ ಹಾಗೆ ಹಾಡಿಯಿಂದ ಹೊರ ಬಂದು ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಬಳಿಕ ಅಲ್ಲಿಂದ ರಾಜೇಗೌಡನ ಹುಂಡಿ ಹಾಡಿಯ ಸಂಬಂಧಿಕರ ಮನೆಗೆ ತೆರಳಿದ್ದರು. ಆದರೆ ರಂಜಿತಾ ಬಳಿ ತನ್ನ ಮಗು ಇರಲಿಲ್ಲ. ಹೀಗಾಗಿ ಮಗು ಮಾರಾಟವಾಗಿದೆಯೇ ಎಂಬ ಅನುಮಾನ ಮೂಡಿತ್ತು.

Advertisement

ಈ ಬಗ್ಗೆ ಎಚ್‌. ಡಿ.ಕೋಟೆ ಪೊಲೀಸ್‌ ಠಾಣೆ ಪಿಎಸ್‌ಐ ಮತ್ತು ಸಿಪಿಐ ಹಾಗೂ ಸಿಡಿಪಿಒ ಅವರಿಗೆ ಮಾಹಿತಿ ನೀಡಿ ಮಗು ಕಾಣೆಯಾಗಿದ್ದು, ವಿಚಾರಣೆ ನಡೆಸುವಂತೆ ಮೌಖೀಕವಾಗಿ ಮನವಿ ಮಾಡಿಕೊಳ್ಳಲಾಗಿತ್ತು. ಒಂದೂವರೆ ತಿಂಗಳು ಕಳೆದರೂ ರಂಜಿತಾ ಅಥವಾ ಮಗುವಿನ ಯಾವುದೇ ಮಾಹಿತಿ ಇಲಾಖೆಗಳಿಂದ ತಿಳಿಯದೇ ಇದ್ದಾಗ ಮಂಗಳವಾರ ಸಿಡಿಪಿಒ ಅವರಿಗೆ ವಿಷಯ ತಿಳಿದ ಬಳಿಕ ಈ ಬಗ್ಗೆ ಪರಿಶೀಲನೆ ನಡೆಸುವಂತೆ ಅಂಗನವಾಡಿ ಸಿಬ್ಬಂದಿಗೆ ಸೂಚನೆ ನೀಡಿದರು. ಬಳಿಕ ಅಂಗನವಾಡಿ ಕಾರ್ಯಕರ್ತೆಯರಾದ ಸಿ.ಚಂದ್ರಮ್ಮ, ವನಿತಾ ಹಾಗೂ ನಿಸರ್ಗ ಸಂಸ್ಥೆಯ ಮಾರ್ಷಲಿನ್‌ ಅವರ ತಂಡವು ರಂಜಿತಾ ಇದ್ದ ಮನೆಗೆ ಭೇಟಿ ನೀಡಿ, ಮಗುವಿನ ಮಾಹಿತಿ ಕೇಳಿದಾಗ, ಆರಂಭದಲ್ಲಿ ಯಾವುದೇ ಪ್ರತಿಕ್ರಿಯೆ ನೀಡದ ರಂಜಿತಾ, ಬಳಿಕ “ಮಗು ಮೃತಪಟ್ಟಿದ್ದು, ನನ್ನ ಸೋದರ ಮಾವನೇ ಅಂತ್ಯಕ್ರಿಯೆ ನಡೆಸಿದ್ದಾರೆ’ ಎಂದು ತಿಳಿಸಿದ್ದರು.

ಕಾರ್ಯಕರ್ತೆಯರು, ಸತ್ಯ ನುಡಿಯುವಂತೆ ಒತ್ತಾಯಿಸಿದಾಗ, “ಮಗು ಸಂಬಂಧಿಕರ ಮನೆಯಲ್ಲಿ ಇದೆ. ಬುಧವಾರ ಮಗುವನ್ನು ತೋರಿಸುತ್ತೇನೆ’ ಎಂದು ತಾಯಿ ರಂಜಿತಾ ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆ ಈ ಪ್ರಕರಣವು ಗೊಂದಲಮಯ ವಾಗಿದ್ದು, ಇಂದು(ಬುಧವಾರ) ಮಗು ಸಿಗುತ್ತದೆಯೋ, ಮಾರಾಟ ಆಗಿದೆಯೋ, ಇಲ್ಲವೇ ಮೃತಪಟ್ಟಿದೆಯೋ ಎಂಬುದು ತಿಳಿಯಲಿದೆ.

ಎಚ್‌.ಬಿ.ಬಸವರಾಜು

Advertisement

Udayavani is now on Telegram. Click here to join our channel and stay updated with the latest news.

Next