Advertisement
ಸಿದ್ಧಾರ್ಥ್ ನಾಪತ್ತೆಯಾದ ಸಂಗತಿ ಸೋಮವಾರ ರಾತ್ರಿ ಪೊಲೀಸರಿಗೆ ತಿಳಿಯುತ್ತಿದ್ದಂತೆ, ಹಿರಿಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಮತ್ತು ಅಗ್ನಿ ಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿದ್ದರು. ಪ್ರಾರಂಭದಲ್ಲಿ ಅಪರಿಚಿತ ವ್ಯಕ್ತಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾರೆ ಎನ್ನಲಾಗಿತ್ತು. ಅನಂತರ ಹಾರಿದ ವ್ಯಕ್ತಿ ಒಬ್ಬರು ಅಧಿಕಾರಿ ಎಂದು ಹೇಳಲಾಯಿತು. ಸ್ವಲ್ಪವೇ ಹೊತ್ತಿನ ಬಳಿಕ ಗಣ್ಯ ವ್ಯಕ್ತಿಯೊಬ್ಬರು ಹಾರಿರುವ ಸಾಧ್ಯತೆಯಿದೆ ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು.
ಸಿದ್ಧಾರ್ಥ್ ಆಯತಪ್ಪಿ ಬಿದ್ದಿರುವ ಅನುಮಾನದ ಹಿನ್ನೆಲೆಯಲ್ಲಿ ನದಿಯಲ್ಲಿ ಹುಡುಕಾಟ ನಡೆಸಲು ಇಬ್ಬರು ಮುಳುಗು ತಜ್ಞರನ್ನು ತಡರಾತ್ರಿಯೇ ಕರೆಸಲಾಗಿತ್ತು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಕೂಡ ಆಗಮಿಸಿ ಪೊಲೀಸರಿಂದ ವಿವರಣೆ ಪಡೆದರು. ಆದರೆ ತಡರಾತ್ರಿ ಸುಮಾರು 2 ಗಂಟೆಯಾಗಿದ್ದರಿಂದ ಮತ್ತು ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದ ಕಾರಣ ಹುಡುಕಾಟವನ್ನು ಮಂಗಳವಾರ ಮುಂಜಾನೆ ಪುನರಾರಂಭಿಸಲು ಪೊಲೀಸರು ಮತ್ತು ಅಗ್ನಿಶಾಮಕದವರು ತೀರ್ಮಾನಿಸಿದರು. ಸೇತುವೆ ಬಳಿ ನೆರೆದಿದ್ದ ಸಾರ್ವಜನಿಕರು ಮತ್ತು ವಾಹನಗಳನ್ನು ತೆರವುಗೊಳಿಸುವಂತೆ ಸೂಚಿಸಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ನಿರ್ಗಮಿಸಿದರು.