ಉಂಡ ಅನ್ನ, ಕುಡಿದ ಜ್ಯೂಸ್ ವಾಂತಿಯಾಗಿ ಒಡಲು ಬರಿದಾಗಿತ್ತು. ನೋವಿನಿಂದ ಇಡೀ ರಾತ್ರಿ ಚೀರಿದ್ದೆ. ನೆತ್ತಿಯಿಂದ ಪಾದದ ತನಕವೂ ನೋವಿಲ್ಲದ ತಾಣವಿಲ್ಲ ಅನಿಸಿತ್ತು. ಈ ಯಾತನೆಯ ಮಧ್ಯೆಯೇ ಹೆರಿಗೆಯಾಗಿತ್ತು… ಹೀಗಿದ್ದರೂ, ಫೋನ್‌ನಲ್ಲಿ ಅಪ್ಪ ಹೇಳುತ್ತಿದ್ದರು: “ಸುಖ ಪ್ರಸವ ಆಗಿದೆ. ಏನೂ ಪ್ರಾಬ್ಲಿಂ ಆಗಿಲ್ಲ…’
“ನಾರ್ಮಲ್ ಡೆಲಿವರಿ… ಹೆಣ್ಣು ಮಗು. ಹುಟ್ಟಿದ ಘಳಿಗೆ ಚೆನ್ನಾಗಿದೆ’…
ಮಲಗಿದ ರೂಮಿನ ಕಿಟಕಿಯ ಪಕ್ಕದಲ್ಲಿ ಅಪ್ಪನ ದನಿ. ಹೆರಿಗೆಯಾದ ಸುದ್ದಿಯನ್ನು ಅದಾರಿಗೋ ಫೋನ್ ಮೂಲಕ ತಿಳಿಸುತ್ತಿದ್ದರು. ಮರಳಿ ಮತ್ತಾವ ಸಂಬಂಧಿಕರಿಗೋ ಕರೆ. ಅದೇ ದನಿಯಲ್ಲಿ- “ಇಲ್ಲ ಇಲ್ಲ, ಹೆರಿಗೆ ಕಷ್ಟವಾಗಿಲ್ಲ. ಸಹಜ ಡೆಲಿವರಿ. ಮಗು, ತಾಯಿ ಆರಾಮಾಗಿ¨ªಾರೆ’ ಸಂಭ್ರಮದ ಝಲಕ್ ಇತ್ತು ಅಪ್ಪನ ಮಾತಿನಲ್ಲಿ.
ಆಸ್ಪತ್ರೆಯ ಕೊಠಡಿಯಲ್ಲಿ ಮಲಗಿದ್ದ ನೀತಾಳಿಗೆ ಅಲ್ಲಾಡಲೂ ಆಗದಷ್ಟು ಮೈ ಕೈ ನೋವು. ಜೊತೆಗೆ ಮಂಪರು. ಮುನ್ನಾ ರಾತ್ರಿಯಿಂದ ನಡು ಇರುಳಿನ ತನಕ ಹೆರಿಗೆ ನೋವು ತಡೆಯಲಾಗದೆ ಚೀರಾಡಿದ್ದು ಗಂಟಲಿನ ದನಿಯನ್ನೇ ಉಡುಗಿಸಿದೆ. “ಸಿಸೇರಿಯನ್ ಮಾಡಿ ಬಿಡಿ. ನೋವು ತಡೆಯೋಕಾಗ್ತಿಲ್ಲ’ ಎಂದು ಡಾಕ್ಟರಲ್ಲಿ ಅಂಗಲಾಚಿದರೆ, ಅವರು “ಇಲ್ಲಮ್ಮ, ನೀವು ಆರೋಗ್ಯವಾಗಿದ್ದೀರಿ. ಸಹಜ ಹೆರಿಗೆಯೇ ಆಗುತ್ತದೆ. ಸುಮ್‌ಸುಮ್ನೆ ಸಿಸೇರಿಯನ್ ಅಗತ್ಯವಿಲ್ಲ’ ಎಂದರು. ಕಾಲು ಸೆಳೆತ, ಸೊಂಟದ ಹಿಂದಿನಿಂದ ಹುಟ್ಟಿ ಒಡಲ ಬುಡಕ್ಕೆ ಪಸರಿಸುವ ಅಬ್ಬರದ ನೋವಿಗೆ ಕಂಗಾಲಾದ ನೀತಾ ರಾತ್ರಿಯೆಲ್ಲ ಅನುಭವಿಸಿದ ಯಾತನೆಯನ್ನು ಮರೆಯಲುಂಟೆ? ಹೆತ್ತಮ್ಮ ಪಕ್ಕದಲ್ಲಿದ್ದರು ನಿಜ. ಆದರೆ, ಜೀವವನ್ನೇ ಹಿಂಡಿ, ಹಿಪ್ಪೆ ಮಾಡಿ ಎಸೆಯುವ ಈ ಯಾತನೆಯನ್ನು ತಾನೇ ತಡೆದುಕೊಳ್ಳಬೇಕು. ಉಂಡ ಊಟ, ಕುಡಿದ ಜ್ಯೂಸ್ ವಾಂತಿಯಾಗಿ ಒಡಲು ಖಾಲಿ. ಹೆರಿಗೆ ನೋವು ಸಹಿಸಲೂ ತ್ರಾಣವಿಲ್ಲ. ಅಬ್ಟಾ, ಅದೆಂಥ ಕಷ್ಟ! ಹೀಗೆಲ್ಲ ಇರುತ್ತದೆ ಪ್ರಸವದ ವೇದನೆ ಎಂದು ಮೊದಲೇ ಗೊತ್ತಿದ್ದರೆ ಮಗುವೇ ಬೇಕಿರಲಿಲ್ಲ ಅನ್ನಿಸಿತ್ತು ಆಗ. ದನಿಯೆತ್ತಿ ಅತ್ತಾಗ ಅಮ್ಮ ಹೇಳಿದ್ದೇನು? – “ಇದು ಹೆಣ್ಣು ಜೀವ ಸಹಿಸಲೇಬೇಕಾದ ನೋವು ಮಗಳೇ. ನೀನು ಜನಿಸುವಾಗ ಇದಕ್ಕೂ ಹೆಚ್ಚಿಗೆ ಸಂಕಟ ಅನುಭವಿಸಿದ್ದೆ ನಾನು. ಸ್ವಲ್ಪ ಸಹಿಸಿಕೋ. ಇನ್ನೇನು ಆಗೇ ಬಿಡ್ತು’
ಅಷ್ಟೆಲ್ಲ ಯಾತನೆ, ನೋವು, ಮಾನ, ಮರ್ಯಾದೆ ಎಲ್ಲ ಬದಿಗಿರಿಸಿ ಚೀರಾಟ, ಅಳು ಎಲ್ಲ ಅನುಭವಿಸಿ ದೇಹ ಸೋತು ಸೊಪ್ಪಾದ ಮೇಲೇ ಕಂದನ ಜನ್ಮವಾಗಿದ್ದಲ್ಲವೆ? ತನ್ನ ಪ್ರಾಣವನ್ನೇ ಪಣವಾಗಿಟ್ಟು ಹೆತ್ತದ್ದು ಮುದ್ದಾದ ಹೆಣ್ಣು ಕೂಸನ್ನು. ಕಂದನ ಮೋರೆ ನೋಡಲೂ ಆಗದಷ್ಟು ಆಯಾಸದಲ್ಲಿ ರೆಪ್ಪೆ ಮುಚ್ಚಿಕೊಳ್ಳುತ್ತಿತ್ತು. ಶರೀರವಿಡೀ ಗಾಣಕ್ಕೆ ಕೊಟ್ಟ ಕಬ್ಬು. ನೆತ್ತಿಯಿಂದ ಪಾದದ ತನಕವೂ ನೋವಿಲ್ಲದ ತಾಣವಿಲ್ಲ. “ಸಿಸೇರಿಯನ್ ಆದರೂ ಯಾತನೆ ಇದ್ದೇ ಇದೆ. ತುಂಬ ಎಚ್ಚರವಿರಬೇಕು’ ಎಂದು ಅಮ್ಮ ಹೇಳಿದ್ದು ನಿಜವೇ. ಆಯಾಸದಿಂದ ಮುಚ್ಚಿಕೊಳ್ಳುವ ಕಣ್ಣುಗಳು, ತೆರೆದೇ ಇದ್ದ ಕಿವಿಗೆ ಹಿಗ್ಗಿನಿಂದ ಮೊಮ್ಮಗುವಿನ ಜನನ ವಾರ್ತೆ ಆಪೆ¤àಷ್ಟರಿಗೆ ತಿಳಿಸುವ ತಂದೆಯ ದನಿ ಕಿವಿಗೆ ಬೀಳುತ್ತಿತ್ತು. “ಮಗಳಿಗೆ ತುಂಬಾ ಕಷ್ಟವಾಗಿದೆ; ರಾತ್ರಿಯೆಲ್ಲ ನೋವು ಬರುತ್ತಿತ್ತು. ಅತ್ತತ್ತು ಕಂಗಾಲಾಗಿದ್ದಳು. ಬೆಳಗಿನ ತನಕ ನಿದ್ದೆಯಿಲ್ಲದೆ ಕಳೆದಿದ್ದಾಳೆ’… ಅಪ್ಪ ಅವರಿಗೆಲ್ಲ ಹೀಗೆ ಹೇಳ್ತಾರೆ ಎಂದು ನಿರೀಕ್ಷಿಸಿದ್ದ ಮಗಳಿಗೆ ಅಪ್ಪ ತನ್ನ ದುಃಸ್ಥಿತಿಯ ಬಗ್ಗೆ ಏನೂ ಹೇಳದೆ “ಸುಖ ಪ್ರಸವ’ ಅಂತಲೇ ಹೇಳ್ತಿದ್ದಾರಲ್ಲ ಅನ್ನುವ ಅಸಮಾಧಾನ.
ಕಂದಮ್ಮ ಕಣ್ಮುಚ್ಚಿ ನಿದ್ದೆಗೆ ಜಾರಿದ್ದನ್ನು ನೋಡಿ ನೀತಾ ಅಮ್ಮನಿಗೆ ಕೇಳಿದಳು- “ಅಮ್ಮಾ, ನಂದು ಸುಖಪ್ರಸವವಾ? ನೀ ಹೇಳು. ಹೆರಿಗೆ ನೋವಿಗಿಂತ ಮಿಗಿಲಾದ ನೋವು ಬೇರೆ ಇಲ್ಲ ಅಂತ ಅಜ್ಜಿ ಹೇಳ್ತಿದ್ದರು. ನಾನು ಅದೆಷ್ಟು ನೋವು ತಿಂದೆ ನಿನ್ನೆಯಿಂದ. ಮತ್ಯಾಕೆ ಅಪ್ಪ ಅದೇನೂ ಹೇಳದೆ ಸುಖ ಪ್ರಸವ ಅಂತಾರೆ. ಪ್ರಸವ ಎಲ್ಲಾದರೂ ಸುಖವಾಗಿರುತ್ತಾ, ನೀ ಹೇಳಮ್ಮ?
“ಗಂಡಸಿಗೇನು ಗೊತ್ತು ಗೌರಿ ದುಃಖ ಅಂತ ಗಾದೆ ಕೇಳಿಲ್ವಾ? ಪ್ರಸವ ವೇದನೆ ಅನುಭವಿಸಿದವರಿಗೇ ಗೊತ್ತು ಅದರ ಸಂಕಟ. ಸುಖ ಪ್ರಸವ ಎಲ್ಲಾದರೂ ಇರುತ್ತಾ? ನಾ ಕಂಡಿಲ್ಲ; ಕೇಳಿಲ್ಲ. ನೀನು ಅನುಭವಿಸುವ ಸಂಕಟ ನೋಡ್ತಾ ನೋಡ್ತಾ ನಾನೂ ಅತ್ತುಬಿಟ್ಟೆ ಮಗಳೇ. ಕಂದ ಮಲಗಿರುವಾಗಲೇ ಸ್ವಲ್ಪ ನಿದ್ದೆ ಮಾಡು’ ಅಂತ ಅಮ್ಮ, ನೀತಾಳ ತಲೆ ನೇವರಿಸಿದರು.
ಹೌದಲ್ವಾ, ಪ್ರಸವ ವೇದನೆಯ ಕಲ್ಪನೆ ಕೂಡಾ ಇರದವರು “ಸುಖವಾಗಿ ಹೆರಿಗೆಯಾಯಿತು’ ಅಂತಲೇ ಹೇಳ್ತಾರೆ. ಅಮ್ಮ ಹೇಳಿದ್ದು ನಿಜ. ನೀತಾ ಮಗ್ಗುಲು ಬದಲಾಯಿಸಲೂ ಆಗದ ನೋವಿನಲ್ಲೂ ಮನಸಾರೆ ನಕ್ಕುಬಿಟ್ಟಳು.
ಕೃಷ್ಣವೇಣಿ ಕಿದೂರು