Advertisement

ಸ್ವರ್ಗಕ್ಕೆ ಹೋಗಲು ಏನು ಮಾಡಬೇಕು?

03:50 AM Apr 13, 2017 | Team Udayavani |

ಬುದ್ಧ ಅಹಿಂಸಾ ತತ್ವವನ್ನು ತನ್ನ ಉಪದೇಶಗಳ ಮೂಲಕ ಜನಮನದಲ್ಲಿ ಬೇರೂರಿಸುತ್ತ ಚಕ್ರವರ್ತಿ ಬಿಂಬಸಾರನ ಅರಮನೆಗೆ ಆಗಮಿಸಿದ. ಆಗ ಬಿಂಬಸಾರ ಒಂದು ಯಾಗದ ಸಿದ್ದತೆಯಲ್ಲಿದ್ದ. ಅದಕ್ಕೆ ಬಲಿ ಕೊಡಲು ತಂದ ಹತ್ತಾರು ಆಡುಗಳನ್ನು ಬುದ್ಧನು ಗಮನಿಸಿದ. ಬಿಂಬಸಾರನ ಸನಿಹ ನೇರವಾಗಿ ಹೋಗಿ “ಒಂದು ಪವಿತ್ರ ಕಾರ್ಯ ಮಾಡುವ ಸಂದರ್ಭ ಬಲಿ ಕೊಡುವಂಥ ಪಾಪದ ಕೆಲಸ ಮಾಡುವುದು ಸಾಮ್ರಾಟರಿಗೆ ಧರ್ಮವಲ್ಲ’ ಎಂದು ಕೇಳಿದ. ಅಲ್ಲೇ ಇದ್ದ ಪುರೋಹಿತರು ತಾಳ್ಮೆಗೆಟ್ಟು “ಅಯ್ನಾ, ನಿನಗೆ ಯಜ್ಞದ ಮಹತ್ವ ಗೊತ್ತಿಲ್ಲ. ಆದ್ದರಿಂದ ಅಪ್ರಬುದ್ಧನಂತೆ ಮಾತನಾಡುತ್ತಿದ್ದೀ. ಬಲಿ ಕೊಡುವುದರಿಂದ ನಮ್ಮ ಚಕ್ರವರ್ತಿಗಳು ಮರಣಾನಂತರ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ಹಾಗೆಯೇ ಇದರಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ ಎಲ್ಲರಿಗೂ ಸ್ವರ್ಗ ಸಿಗುತ್ತದೆ.’ ಎಂದು ಹೇಳಿದ.

Advertisement

ಬುದ್ಧ ಮುಗುಳ್ನಕ್ಕು “ನಿಜ. ಯಾಗದ ಮಹತ್ವ ತಿಳಿಯದೆ ಅಜಾnನದಿಂದ ಮಾತನಾಡಿದೆ. ಆದರೆ ನನಗಿನ್ನೂ ಒಂದು ಸಂದೇಹವಿದೆ. ಅದಕ್ಕೂ ಸಮಾಧಾನ ಹೇಳಿಬಿಡಿ. ಎಲ್ಲರ ಸ್ವರ್ಗಪ್ರಾಪ್ತಿಗಾಗಿ ಸಾವನ್ನಪ್ಪುವ ಈ ಆಡುಗಳಿಗೆ ಏನು ಲಾಭವಿದೆ ತಿಳಿಸುವಿರಾ?’ ಎಂದು ಕೇಳಿದ.

“ಅವುಗಳು ಈ ಪುಣ್ಯಕಾರ್ಯಕ್ಕಾಗಿ ದೇಹಾರ್ಪಣೆ ಮಾಡಿದ ಸತಲದಿಂದಾಗಿ ಸ್ವರ್ಗಕ್ಕೆ ಹೋಗುತ್ತವೆ. ಇದರಲ್ಲಿ ಅನುಮಾನವಿಲ್ಲ’ ಪುರೋಹಿತ ಹೇಳಿದ. “ಆದರೂ ನನಗೆ ಸಮಾಧಾನವಾಗಿಲ್ಲ. ಪುರೋಹಿತರೇ, ಅದೋ ಅಲ್ಲಿ ಕುಳಿತಿರುವ ನಿಮ್ಮ ತಂದೆಯೂ ಸ್ವರ್ಗಕ್ಕೆ ಹೋಗಬೇಕೆಂಬ ಆಶೆ ನಿಮಗೆ ಒಂದಿನಿತೂ ಇಲ್ಲವೆ?’ ಬುದ್ಧ ತುಂಟತನದಿಂದ ಪ್ರಶ್ನಿಸಿದ.

“ಏನಿದು ಮಾತು? ತಂದೆಯ ಸದ್ಗತಿಯ ಬಯಕೆ ನನಗೂ ಇದೆ’ ಎಂದನು ಪುರೋಹಿತ ಸಿಟ್ಟಿನಿಂದ. “ಯಾಗದಲ್ಲಿ ಬಲಿಯಾದ ಆಡುಗಳಿಗೂ ಸ್ವರ್ಗ ಸಿಗುವುದು ಖಚಿತವಿರುವಾಗ ಸ್ವರ್ಗಕ್ಕಾಗಿ ಈ ಬಲಿಯಾದರೂ ಯಾಕೆ? ನಿಮ್ಮ ತಂದೆಯನ್ನೇ ಯಾಗಕ್ಕೆ ಅರ್ಪಿಸಿ. ಅವರು ನೇರವಾಗಿ ಸ್ವರ್ಗ ಸೇರುತ್ತಾರೆ. ಆಡುಗಳಿಗೆ ಬದುಕಲು ಅವಕಾಶ ಸಿಗುತ್ತದೆ. ನಿಮಗೂ ಸ್ವರ್ಗ ಬೇಕಿದ್ದರೆ ನೀವೇ ಯಾಗಕ್ಕೆ ಬಲಿಯಾಗಬಹುದು. ನಿಮಗಾಗಿ ಆಡುಗಳನ್ನು ಕತ್ತರಿಸುವ ಅಗತ್ಯವೇನಿದೆ?” ಬುದ್ಧ ಗಂಭೀರವಾಗಿ ಹೇಳಿದ. ಆ ಮಾತಿಗೆ ಏನು ಹೇಳಬೇಕೆಂದೇ ತಿಳಿಯದೆ ಪುರೋತ ತಲೆತಗ್ಗಿಸಿ ನಿಂತ.

ಬಿಂಬಸಾರ ಸತ್ಯವನ್ನು ತಿಳಿದುಕೊಂಡ. ಯಾಗಕ್ಕಾಗಿ ಜೀವಹಿಂಸೆ ಮಾಡುವುದು ಸರಿಯಲ್ಲ. ಪುರೋಹಿತನ ಮಾತು ಕೇಳಿ ತಾನು ಪಾಪ ಮಾಡುತ್ತಲಿದ್ದೇನೆಂಬುದನ್ನು ಅರಿತು ಜೀವಹಿಂಸೆಯನ್ನು ನಿಲ್ಲಿಸಿದ. ರಾಜ್ಯದಲ್ಲಿ ಪ್ರಾಣಿಹಿಂಸೆಯ ವಿರುದ್ಧ ಕಾಯ್ದೆಯನ್ನು ಜಾರಿಗೆ ತಂದ.

Advertisement

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next