ದಟ್ಟ ಕಾಡಿನಲ್ಲಿ ಜೋರಾಗಿ ಮಳೆ ಸುರಿಯುತ್ತಿತ್ತು. ಖುಷಿಯಿಂದ ನವಿಲಿಗೆ ಹಾಡುವ ಮನಸ್ಸಾಯಿತು. ಅದರ ಹಾಡು ಕೇಳಿ ಪ್ರಾಣಿಗಳೆಲ್ಲಾ ಬಿದ್ದೂ ಬಿದ್ದು ನಕ್ಕರು. ಇದರಿಂದ ನವಿಲು ಮುಜುಗರ ಅನುಭವಿಸಿತು. ದುಃಖದಿಂದ ಕಂಗಳಲ್ಲಿ ನೀರು ತುಂಬಿಕೊಂಡವು. ತನಗೆ ಕೋಗಿಲೆಯಂಥ ಕಂಠ ಯಾಕಿಲ್ಲ ಎಂದು ದೇವರಲ್ಲಿ ಮೊರೆ ಇಟ್ಟಿತು. ದಿನಾ ನವಿಲು ಮೊರೆಯಿಡುವುದನ್ನು ಕೇಳಿ ಕರಗಿದ ವನದೇವತೆ ಪ್ರತ್ಯಕ್ಷಳಾದಳು.
“ನವಿಲೇ ಯಾಕಿಷ್ಟು ದುಃಖದಲ್ಲಿದ್ದೀಯಾ?’ ಎಂದು ಕೇಳಿದಳು. ನವಿಲು ತಮ್ಮ ಮನದ ದುಃಖವನ್ನು ತೋಡಿಕೊಂಡಿತು. ವನದೇವತೆ ನಿನ್ನ ಪ್ರಶ್ನೆಗೆ ಉತ್ತರ ಶೀಘ್ರದಲ್ಲೇ ಸಿಗುವುದೆಂದು ಹೇಳಿ ಮಾಯವಾದಳು. ವನದೇವತೆಗೂ ತನ್ನ ಸಮಸ್ಯೆಯನ್ನು ಬಗೆಹರಿಸಲಾಗಲಿಲ್ಲ ಎಂದು ನವಿಲು ಇನ್ನಷ್ಟು ದುಃಖೀತವಾಯಿತು. ಒಂದು ದಿನ ಕಾಡಿನಲ್ಲಿ “ಟ್ಯಾಲೆಂಟ್ ಶೋ’ ಕುರಿತು ಡಂಗುರ ಸಾರುತ್ತಿದ್ದರು.
ಪ್ರಾಣಿಗಳೆಲ್ಲಾ ಉತ್ಸಾಹದಿಂದ ಪಾಲ್ಗೊಳ್ಳಲು ಸಿದ್ಧರಾದರು. ಹಾಡು, ಮಿಮಿಕ್ರಿ, ನಾಟಕ ಪ್ರತಿಬಾ ಪ್ರದರ್ಶನಕ್ಕೆ ಪ್ರಾಣಿಗಳೆಲ್ಲಾ ಸನ್ನದ್ಧವಾದವು. ಕೋಗಿಲೆಯಂತೂ ತಾಲೀಮನ್ನು ಆರಂಭಿಸಿಯೇಬಿಟ್ಟಿತು. ಅದು ಹಾಡುವುದನ್ನು ಕೇಳಲೆಂದೇ ಪ್ರಾಣಿಗಲು ಕಿಕ್ಕಿರಿದು ನೆರೆಯುತ್ತಿದ್ದರು. ಅದನ್ನು ಕಂಡು ನವಿಲಿಗೆ ತನ್ನ ಮೇಲೆ ತನಗೇ ಬೇಸರವಾಯಿತು. ಏನಾದರಾಗಲಿ ತಾನು ಕೂಡಾ ಟ್ಯಾಲೆಂಟ್ ಶೋನಲ್ಲಿ ಭಾಗವಹಿಸಲು ನಿರ್ಧರಿಸಿತು.
ಅದನ್ನು ಕೇಳಿ ಪ್ರಾಣಿಗಳು ಅಪಹಾಸ್ಯ ಮಾಡಿದವು. ಮತ್ತೆ ನವಿಲು ಹಾಡುವುದನ್ನು ಕೇಳಿ ಬಿದ್ದೂ ಬಿದ್ದು ನಗಲು ಒಂದು ಅವಕಾಶ ಸಿಕ್ಕಿತೆಂದು ಅವುಗಳೆಲ್ಲಾ ಮಾತಾಡಿಕೊಂಡವು. ಸ್ಪರ್ಧೆಯ ದಿನ ಬಂದೇ ಬಿಟ್ಟಿತು. ಮೊದಲು ಕೋಗಿಲೆ ಹಾಡು ಹೇಳಿತು. ಕಾಡಿನ ವಾಸಿಗಲೆಲ್ಲಾ ತಲೆದೂಗಿದವು. ಮೊದಲನೇ ಬಹುಮಾನ ಅದಕ್ಕೇ ಎಂದು ಎಲ್ಲರೂ ತಿಳಿದರು. ನಂತರ ನವಿಲಿನ ಸರದಿ ಬಂದಿತು.
ನವಿಲು ವೇದಿಕೆ ಮೇಲೆ ಬರುತ್ತಲೇ ಚಿಂಕು ಮೊಲ ಅದರ ಕೈಗೆ ಮೈಕ್ ನೀಡಲು ಮುಂದಾಯಿತು. ಆದರೆ ನವಿಲು ತೆಗೆದುಕೊಳ್ಳಲಿಲ್ಲ. ಪ್ರಾಣಿಗಳಿಗೆಲ್ಲಾ ಆಶ್ಚರ್ಯವಾಯಿತು. ನವಿಲು ಚಿಂಕುವಿಗೆ ಕ್ಯಾಸೆಟ್ ಪ್ಲೇ ಮಾಡಲು ಹೇಳಿತು. ಧ್ವನಿವರ್ಧಕದಲ್ಲಿ ಹಾಡು ಮೊಳಗುತ್ತಿದ್ದಂತೆ ಡ್ಯಾನ್ಸ್ ಮಾಡಲು ಶುರುಮಾಡಿತು.
ಅದರ ಸ್ಟೆಪ್‌ಗ್ಳನ್ನು ಕಂಡು ಪ್ರಾಣಿಗಳು ಮೂಕವಿಸ್ಮಿತರಾದರು. ನವಿಲಿನ ಪ್ರತಿಭೆಯನ್ನು ಎಲ್ಲರೂ ಕೊಂಡಾಡಿದರು. ಆ ದಿನ ಮೊದಲನೇ ಬಹುಮಾನ ನವಿಲಿನ ನೃತ್ಯಕ್ಕೇ ಬಂದಿತು. ಆವಾಗ ನವಿಲಿಗೆ ವನದೇವತೆಯ ಮಾತಿನ ಹಿಂದಿನ ಅರ್ಥ ತಿಳಿಯಿತು. ನಮ್ಮಲ್ಲಿರುವ ಸಾಮರ್ಥ್ಯವನ್ನು ಇನ್ನೊಬ್ಬರಿಗೆ ಯಾವತ್ತೂ ಹೋಲಿಸಬಾರದು ಎಂಬ ಸತ್ಯ ನವಿಲಿಗೆ ಅರ್ಥವಾಗಿತ್ತು.
* ವೇದಾವತಿ ಹೆಚ್. ಎಸ್.