Advertisement

ಬಾರೋ ಸಾಧಕರ ಕೇರಿಗೆ: ನಾರ್ಬರ್ಟ್‌ ವೀನರ್‌ ಅಷ್ಟು ಹೊತ್ತು ಯೋಚಿಸಿದ್ದು ಏನು?

03:42 PM Jul 28, 2020 | mahesh |

ನಾರ್ಬರ್ಟ್‌ ವೀನರ್‌ ಅವರ ಬಗ್ಗೆ ಇರುವ ಕಥೆಗಳು ಒಂದೆರಡಲ್ಲ. ಹೆಸರಾಂತ ಗಣಿತಜ್ಞ, ಸೈಬರ್‌ನೆಟಿಕ್ಸ್ ಎಂಬ ಜ್ಞಾನ ಶಾಖೆಯ ಪ್ರವರ್ತಕ, ತತ್ವಜ್ಞಾನಿ ಎಲ್ಲವೂ ಆಗಿದ್ದ ವೀನರ್‌, ಮೆಸಾಚುಸೆಟ್ಸ್ ಇನ್ಸಿಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎಂಐಟಿ)ಯಲ್ಲಿ ಮೂರು ದಶಕಗಳ ಕಾಲ ಗಣಿತ ಪೊ›ಫೆಸರ್‌ ಆಗಿ ಸಹಸ್ರಾರು ವಿದ್ಯಾರ್ಥಿಗಳಿಗೆ ಬೋಧಿಸಿದರು. ಆದರೆ ತನ್ನ ಬೋಧನಾವಿಷಯದ ಹೊರತಾಗಿ, ಹೊರಗಿನ ಎಲ್ಲ ವಿಷಯಗಳಲ್ಲೂ ವೀನರ್‌ ಮಹಾನ್‌ ಮಡೆಯ, ಜಗತ್ತಿನ ಅತಿ ದೊಡ್ಡ ಮರೆಗುಳಿ ಎಂದೇ ಖ್ಯಾತರು. ಅವರು ತಮ್ಮ ಪತ್ನಿಯನ್ನೇ ಗುರುತಿಸಲಿಲ್ಲ; ಮಗಳ ಗುರುತು ಹಿಡಿಯಲಿಲ್ಲ ಎಂದೆಲ್ಲ ಅವರ ಬಗ್ಗೆ ಹತ್ತಾರು ಕಥೆಗಳು ಪ್ರಚಾರದಲ್ಲಿದ್ದವು. ಹೆಚ್ಚಿನವು ನಿಜವೇನಲ್ಲ; ಅವರ ಆಪ್ತರೇ ಸ್ನೇಹದ ಸಲುಗೆಯಲ್ಲಿ ಕಟ್ಟಿ ಹಬ್ಬಿಸಿದ ಕಥೆಗಳು.

Advertisement

ಎಎಐಟಿಯಲ್ಲಿ ಓದುತ್ತಿದ್ದ ಹುಡುಗನೊಬ್ಬನಿಗೆ ವೀನರ್‌ ಬಗ್ಗೆ ಅಪಾರ ಗೌರವ. ಜೀವನದಲ್ಲಿ ಎಂದಾದರೊಮ್ಮೆ ಅವರನ್ನು ಮಾತಾಡಿಸುವ ಭಾಗ್ಯಕ್ಕಾಗಿ ಆತ ಹಂಬಲಿಸುತ್ತಿದ್ದ. ಅದೊಂದು ದಿನ ಅವನು ಪೋಸ್ಟ್ ಆಫಿಸಿಗೆ ಹೋದಾಗ, ಅಲ್ಲಿ ಕಾಣಿಸಿದರು ವೀನರ್‌! ನಿಂತಿದ್ದಾರೆ; ಒಂದು ಕಾಗದವನ್ನು ಮುಂದಿಟ್ಟುಕೊಂಡು ಗಹನವಾಗಿ ಯೋಚಿಸುತ್ತಿದ್ದಾರೆ. ವಿದ್ಯಾರ್ಥಿಗೆ ಅವರನ್ನು ಅಷ್ಟು ಹತ್ತಿರದಲ್ಲಿ ಕಂಡು ರೋಮಾಂಚನವಾಯಿತು. ಆದರೆ ಮಾತಾಡಿಸಿ ಅವರ ಯೋಚನಾಲಹರಿಗೆ ಭಂಗ ತರಬಾರದೆಂದು ದೂರದಲ್ಲೇ ನೋಡುತ್ತ ನಿಂತ.

ವೀನರ್‌ ಒಂದಷ್ಟು ಹೊತ್ತು ಘನವಾಗಿ ಯೋಚಿಸಿದರು. ನಂತರ ತುಸು ಹಿಂದೆ ಸರಿದರು. ತಲೆಯನ್ನು ಹಿಂದಕ್ಕಾನಿಸಿದರು. ಮತ್ತೆ ಮುಂಬಾಗಿದರು. ಪತ್ರ ನೋಡಿದರು. ಯೋಚನೆಯಲ್ಲಿ ಮುಳುಗಿದರು. ನಿಂತಲ್ಲಿಂದ ಆಚೀಚೆ ಒಂದಷ್ಟು ನಡೆದರು. ಮತ್ತೆ ಪತ್ರವನ್ನು ತದೇಕಚಿತ್ತದಿಂದ ನೋಡುತ್ತ ಯೋಚಿಸಿದರು. ಬಹಳ ಹೊತ್ತು ಹೀಗೇ ನಡೆಯಿತು. ಏನೋ ಗಹನವಾದ ಚಿಂತನೆ ನಡೆಯುತ್ತಿದೆ ಎಂಬುದು ಆ ಹುಡುಗನಿಗೆ ಖಚಿತವಾಯಿತು.

ಸ್ವಲ್ಪ ಹೊತ್ತಿನ ನಂತರ ವೀನರ್‌ ಆ ಹುಡುಗನಿದ್ದ ಕಡೆಯೇ ನಡೆದು ಬಂದರು. ಇದರಿಂದ ತುಸು ತಬ್ಬಿಬ್ಟಾದ ಆ ವಿದ್ಯಾರ್ಥಿ ಅವರು ಎದುರು ಬರುತ್ತಲೇ ನಮಸ್ಕಾರ ಪ್ರೊಫೆಸರ್‌ ವೀನರ್‌ ಅವರೇ ಎಂದು ವಂದಿಸಿದ. ನಡೆದುಹೋಗುತ್ತಿದ್ದ ವೀನರ್‌ ತಟ್ಟನೆ ನಿಂತರು. ಅವನತ್ತ ನೋಡಿ ಮುಗುಳ್ನಕ್ಕರು. ಪೆನ್ನನ್ನು ತನ್ನ ಹಣೆಗೆ ಮೆಲ್ಲಗೆ ಬಡಿದುಕೊಂಡು ಹೇಳಿದರು: ಯೆಸ್‌! ಯೆಸ್‌! ವೀನರ್‌! ಥ್ಯಾಂಕ್ಸ್ ಕಣಯ್ಯ ನೆನಪು ಮಾಡಿದ್ದಕ್ಕೆ.

ರೋಹಿತ್‌ ಚಕ್ರತೀರ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next