Advertisement

ತಲೆ ಹೊಟ್ಟಿನ ಸಮಸ್ಯೆ ಕಾಡುತ್ತಿದೆಯಾ? ಈ ಸಮಸ್ಯೆ ನಿವಾರಣೆಗೆ ಸುಲಭ ಮನೆಮದ್ದು

03:34 PM Mar 17, 2023 | Team Udayavani |

ತಲೆಹೊಟ್ಟಿನ ಸಮಸ್ಯೆಯನ್ನು ಬಹುತೇಕ ಮಂದಿ ಎದುರಿಸುತ್ತಿದ್ದಾರೆ. ಒಮ್ಮೆ ಕೂದಲಿಗೆ ಕೈಯಾಡಿಸಿದರೆ ಗಾಳಿಗೆ ತರಗೆಲೆಗಳು ಹಾರಿ ಹೋಗುವಂತೆ ತಲೆಯಿಂದ ತಲೆಹೊಟ್ಟು ಬರುತ್ತಿರುತ್ತದೆ. ಅಷ್ಟೇ ಅಲ್ಲದೆ, ಅಸಾಧ್ಯ ತುರಿಕೆಯೂ ಉಂಟಾಗುತ್ತದೆ. ತಲೆಹೊಟ್ಟು ಉಂಟಾಗಲು ಮುಖ್ಯ ಕಾರಣವೆಂದರೆ ತಲೆಬುರುಡೆ ಒಣಗುವುದು. ಇದರ ಪರಿಹಾರಕ್ಕೆ ಮಾರುಕಟ್ಟೆಯಲ್ಲಿ ವಿವಿಧ ತೈಲಗಳು, ಡೆನ್‌ರ್ರೆಪ್‌ ಶ್ಯಾಂಪೂಗಳು ಸಿಗುತ್ತವೆ. ಆದರೆ, ಇದರಿಂದ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗದು. ಈ ಕೆಳಗಿನ ಮನೆಮದ್ದು ಪ್ರಯೋಗಿಸಿದರೆ ಈ “ತಲೆಚಿಟ್ಟಿ’ನ ಸಮಸ್ಯೆ ದೂರವಾಗುತ್ತದೆಯೋ ನೋಡಬಹುದು.

Advertisement

ಮೆಂತೆ ಕಾಳು
ಮೆಂತ್ಯೆ ಕಾಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಮೆಂತೆ ಕಾಳಿನಲ್ಲಿ ಇರುವಂತಹ ಫ‌ಂಗಲ್‌ ವಿರೋಧಿ ಗುಣಗಳು ತಲೆಹೊಟ್ಟು ದೂರ ಮಾಡುತ್ತದೆ. ಎರಡರಿಂದ ಮೂರು ಚಮಚ ಮೆಂತ್ಯೆ ಕಾಳುಗಳನ್ನು ತೆಗೆದುಕೊಂಡು ಅದನ್ನು ರಾತ್ರಿ ನೀರಿಗೆ ಹಾಕಿ ನೆನೆಸಿಡಿ. ಮರುದಿನ ಇದನ್ನು ರುಬ್ಬಿಕೊಂಡು ಪೇಸ್ಟ್  ಮಾಡಿ ತಲೆಗೆ ಹಚ್ಚಿಕೊಂಡು ಮರುದಿನ ಶಾಂಪೂವಿನಿಂದ ತೊಳೆದರೆ ಸಮಸ್ಯೆ ಪರಿಹಾರದ  ಜೊತೆಗೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಮೊಸರು
ತಲೆಯನ್ನು ಚೆನ್ನಾಗಿ ತೊಳೆದುಕೊಂಡು ಬಂದು ಒಂದು ಕಪ್‌ ಮೊಸರನ್ನು ತೆಗೆದುಕೊಂಡು ತಲೆಗೆ ಹಚ್ಚಿಕೊಂಡು ಸುಮಾರು 15 ನಿಮಿಷ ಕಾಲ ಹಾಗೆ ಬಿಡಬೇಕು. ಇದರ ಬಳಿಕ ಶಾಂಪೂ ಬಳಸಿ ಕೂದಲು ತೊಳೆದರೆ ತಲೆಹೊಟ್ಟು ನಿವಾರಣೆಯಾಗುತ್ತದೆ. ಮೊಸರು ಪಾರಜೈವಿಕ ಗುಣ ಮತ್ತು ಒಳ್ಳೆಯ ಬ್ಯಾಕ್ಟೀರಿಯಾವನ್ನು ಹೊಂದಿರುವುದರಿಂದ ಕಿಣ್ವದ ಕೋಶಗಳು ಬೆಳವಣಿಗೆಯಾಗುವುದನ್ನು ತಡೆಯುವುದು.

ಲಿಂಬೆ ಮತ್ತು ತೆಂಗಿನೆಣ್ಣೆ
ಎರಡು ಚಮಚ ಉಗುರುಬೆಚ್ಚಗಿನ ತೆಂಗಿನ ಎಣ್ಣೆಗೆ ಅಷ್ಟೇ ಪ್ರಮಾಣದ ಲಿಂಬೆ ರಸವನ್ನು ಬೆರೆಸಿಕೊಂಡು ತಲೆಬುರುಡೆಗೆ ಮಸಾಜ್‌ ಮಾಡಿ 30 ನಿಮಿಷ ಕಾಲ ಹಾಗೇ ಬಿಟ್ಟು ಶಾಂಪೂವಿನಿಂದ ಕೂದಲು ತೊಳೆದರೆ  ತಲೆಹೊಟ್ಟನ್ನು ನಿಯಂತ್ರಿಸಬಹುದು. ತೆಂಗಿನ ಎಣ್ಣೆಯು ನೈಸರ್ಗಿಕವಾಗಿ ಆ್ಯಂಟಿಬ್ಯಾಕ್ಟೀರಿಯಾ ಗುಣವನ್ನು ಹೊಂದಿರುವ ಕಾರಣದಿಂದ ಇದು ತಲೆಬುರುಡೆಗೆ ತೇವಾಂಶ ಒದಗಿಸುವುದು. ವಾರದಲ್ಲಿ ಮೂರು ಸಲ ಒಂದು ತಿಂಗಳ ಕಾಲ ಪ್ರಯೋಗಿಸಬೇಕು.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಫ‌ಂಗಲ್‌ ವಿರೋಧಿ ಗುಣಗಳು ಇರುವ ಕಾರಣದಿಂದ ಇದು ತುರಿಕೆ ಮತ್ತು ಕಿರಿಕಿರಿ ಉಂಟು ಮಾಡುವ ತಲೆಹೊಟ್ಟನ್ನು ದೂರವಿಡುವುದು. ಹಲವಾರು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯವಿರುವ ಬೆಳ್ಳುಳ್ಳಿ ತಲೆಹೊಟ್ಟನ್ನು ದೂರವಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಎರಡು ಎಸಲು ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಜಜ್ಜಿ. ಇದನ್ನು ಜೇನುತುಪ್ಪದ ಜತೆ ಸೇರಿಸಿಕೊಂಡು ಪೇಸ್ಟ್‌ ತಯಾರಿಸಿ ತಲೆಬುರುಡೆಗೆ ಹಚ್ಚಿಕೊಂಡು ಸುಮಾರು 20 ನಿಮಿಷ ಕಾಲ ಹಾಗೇ ಬಿಟ್ಟು  ಶಾಂಪೂವಿನಿಂದ ಕೂದಲನ್ನು ತೊಳೆದರೆ ತಲೆಹೊಟ್ಟು ನಿವಾರಣೆಯಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next